ತಲೆಯನ್ನು 180 ಡಿಗ್ರಿ ಹಿಂದೆ ತಿರುಗಿಸಬಲ್ಲ ಬಾಲಕ
ಪಾಕಿಸ್ತಾನದ 14 ವರ್ಷದ ಬಾಲಕನೊಬ್ಬ ಈಗ ‘ಗೂಬೆ ಮಾನವ’ನೆಂದೇ ಹೆಸರುಪಡೆದಿದ್ದಾನೆ. ಅದಕ್ಕೆ ಕಾರಣವೂ ಇದೆ. ಯಾಕೆಂದರೆ ಆತ ತನ್ನ ತಲೆಯನ್ನು ಸಂಪೂರ್ಣವಾಗಿ ಹಿಂದಕ್ಕೆ, ಅಂದರೆ 180 ಡಿಗ್ರಿವರೆಗೆ ತಿರುಗಿಸಬಲ್ಲವನಾಗಿದ್ದಾನೆ. ಹೌದು. ಮುಹಮ್ಮದ್ ಸಮೀರ್‌ನ ಈ ಕಸರತ್ತು ಕಂಡವರು ಹೀಗೂ ಉಂಟೆ ಎಂದು ನಿಬ್ಬೆರಗಾಗಿ ಹೋಗುತ್ತಾರೆ. ಅಂದಹಾಗೆ ಸಮೀರ್ ತನ್ನ ಕೈಗಳನ್ನು ಉಪಯೋಗಿಸಿಕೊಂಡು ತಲೆಯನ್ನು ಭುಜದ ಹಿಂದಕ್ಕೆ ತಿರುಗಿಸುತ್ತಾನೆ. ತನ್ನ ತಲೆಯನ್ನು ನೇರವಾಗಿ ಹಿಂದಕ್ಕೆ ತಿರುಗಿಸಬಲ್ಲ ಮುಹಮ್ಮದ್ ಸಮೀರ್‌ನ ಈ ಅಸಾಧಾರಣ ಸಾಮರ್ಥ್ಯ ಆತನಿಗೆ ಈಗ ಖ್ಯಾತಿಯನ್ನು ತಂದುಕೊಟ್ಟಿದೆ. ತೀರಾ ಇತ್ತೀಚೆಗೆ ಹಾಲಿವುಡ್‌ನ ಚಿತ್ರವೊಂದರಲ್ಲಿ ನಟಿಸಲು ಅತನಿಗೆ ಅವಕಾಶ ದೊರೆತಿದೆ.
ತಲೆಯನ್ನು ಯಂತ್ರಮಾನವನಂತೆ ತಿರುಗಿಸಬಲ್ಲ ಸಾಮರ್ಥ್ಯವನ್ನು ಪಡೆಯಲು ಈ ಬಾಲಕ ಎಳೆಯವಯಸ್ಸಿನಿಂದಲೇ ತುಂಬಾ ಶ್ರಮ ಪಟ್ಟಿದ್ದಾನಂತೆ. ಸಮೀರ್ 6-7 ವರ್ಷದವನಿದ್ದಾಗ, ಹಾಲಿವುಡ್‌ನ ಹಾರರ್ ಚಿತ್ರವೊಂದನ್ನು ವೀಕ್ಷಿಸಿದ್ದ. ಆದರಲ್ಲಿ ಪಾತ್ರವೊಂದು ತನ್ನ ತಲೆಯನ್ನು ಸಂಪೂರ್ಣವಾಗಿ ಹಿಂದಕ್ಕೆ ತಿರುಗಿಸುವುದನ್ನು ಕಂಡು ಪ್ರಭಾವಿತನಾದ ಸಮೀರ್ ಆವಾಗಿನಿಂದಲೇ ಹಾಗೆ ಮಾಡಲು ಅಭ್ಯಾಸ ನಡೆಸತೊಡಗಿದ್ದ. ಕೆಲವೇ ತಿಂಗಳುಗಳೊಳಗೆ ಆತನಿಗೆ ತಲೆಯನ್ನು ಸಂಪೂರ್ಣವಾಗಿ ಹಿಂದಕ್ಕೆ ತಿರುಗಿಸುವ ಕಲೆ ಸಿದ್ಧಿಸಿತ್ತು.
ಮೊದಮೊದಲು ಹಾಗೆ ಮಾಡುತಿದ್ದುದಕ್ಕಾಗಿ ಸಮೀರ್‌ನ ತಾಯಿ ಆತನಿಗೆ ಥಳಿಸಿ, ಬುದ್ಧಿಹೇಳುತ್ತಿದ್ದರು. ಆದರೆ ತದನಂತರ ಇದೊಂದು ಆತನಿಗೆ ದೊರೆತ ಅಪರೂಪದ ಸಾಮರ್ಥ್ಯವೆಂಬುದನ್ನು ಆಕೆ ಮನಗಂಡರು.
ತನ್ನ ತಂದೆ ಅಸ್ವಸ್ಥರಾದ ಬಳಿಕ ಕುಟುಂಬವನ್ನು ನಿರ್ವಹಿಸಲು ಸಮೀರ್ ಶಾಲಾಶಿಕ್ಷಣ ಕೈಬಿಟ್ಟು ವೃತ್ತಿಪರ ನೃತ್ಯತಂಡವೊಂದರಲ್ಲಿ ಸೇರಿಕೊಂಡಿದ್ದಾನೆ. ಕರಾಚಿಯಲ್ಲಿ ತನ್ನ ಪ್ರತೀ ನೃತ್ಯಪ್ರದರ್ಶನದಲ್ಲಿ ಸಮೀರ್ 800ರೂ. ಸಂಪಾದಿಸುತ್ತಾನೆ. ನನ್ನ ಕುಟುಂಬಕ್ಕೆ ನಾನೀಗ ಆಧಾರವಾಗಬೇಕಿದೆ. ನನ್ನ ನಾಲ್ವರು ಸಹೋದರಿಯರು ಶಿಕ್ಷಣವನ್ನು ತೊರೆಯುವುದು ನನಗೆ ಬೇಕಿಲ್ಲವೆಂದು ಸಮೀರ್ ಹೇಳುತ್ತಾನೆ.