ಹೋರಾಟದ ಕಂದರಗಳನ್ನು ಬೆಸೆದ ಸೇತುವೆ

Update: 2018-01-23 18:28 GMT

ನಮಗೆ ಮಾಜಿ ನಕ್ಸಲೈಟ್ ಕೊಂಡಪಲ್ಲಿ ಸೀತಾರಾಮಯ್ಯ ಗೊತ್ತು. ಅವರ ರೋಚಕ ಬದುಕನ್ನು ಬೇರೆ ಬೇರೆ ಸಂದರ್ಭಗಳಲ್ಲಿ ನಮ್ಮದಾಗಿಸಿಕೊಂಡಿದ್ದೇವೆ. ಇದೇ ಸಂದರ್ಭದಲ್ಲಿ, ಸೀತಾರಾಮಯ್ಯರಷ್ಟೇ ಅಥವಾ ಅವರಿಗಿಂತಲೂ ಹೆಚ್ಚು ಆತ್ಮಶಕ್ತಿಯನ್ನು ಹೊಂದಿದ್ದ ಒಂದು ಜೀವವನ್ನು ನಾವು ನೆನಪಿಸಿಕೊಳ್ಳಲೇ ಬೇಕು. ಅವರೇ ಸೀತಾರಾಮಯ್ಯ ಅವರ ಪತ್ನಿ ಕೊಂಡಪಲ್ಲಿ ಕೋಟೇಶ್ವರಮ್ಮ. ಹೋರಾಟಗಳ ನಾಡಾದ ಆಂಧ್ರದಲ್ಲಿ ಮಹಿಳೆ ಯರು ಆ ಹೋರಾಟಗಳಿಗೆ ಸರ್ವ ಶಕ್ತಿಯನ್ನು ಒದಗಿಸಿದವರು. ತಮ್ಮ ಒಳಗಿನ ನೋವು ದುಮ್ಮಾನ ಗಳನ್ನು ಹೊರಜಗತ್ತಿಗೆ ತೋರಿಸಿಕೊಡದೆ ವಿವಿಧ ಸಂಘಟನೆಗಳಿಗೆ ತಾಯಿಯಾದವರು. ಅಂಥವರಲ್ಲಿ ಕೋಟೇಶ್ವರಮ್ಮ ಒಬ್ಬರು. ಅವರು ತೆಲುಗಿನಲ್ಲಿ ಬರೆದ ಆತ್ಮಕಥನವೇ ‘ಒಂಟಿ ಸೇತುವೆ’. ಸ. ರಘುನಾಥ ಅವರು ಇದನ್ನು ಕನ್ನಡಕ್ಕಿಳಿಸಿದ್ದಾರೆ. ತನ್ನ ಸಮಾಜವನ್ನು, ಅದರೊಳಗಿನ ಹುಳುಕುಗಳನ್ನು ಹೆಣ್ಣು ನೋಡುವ ದೃಷ್ಟಿಯೇ ಬೇರೆಯಾದುದು. ಗಂಡು ಕಂಡದ್ದಕ್ಕಿಂತ ಹೆಚ್ಚಿನ ಸೂಕ್ಷ್ಮಗಳನ್ನು ಅವಳು ಗುರುತಿಸಬಲ್ಲಳು. ಮಗುವಿನ ಒಳಗಿನ ನೋವು ದುಮ್ಮಾನಗಳನ್ನು ತಾಯಿ ಅರ್ಥ ಮಾಡಿಕೊಂಡಷ್ಟು ತಂದೆ ಅರ್ಥ ಮಾಡಿಕೊಳ್ಳುವುದು ಕಷ್ಟ. ಹತ್ತು ವರ್ಷವಿರುವಾಗ, ಗಾಂಧೀಜಿಗೆ ತನ್ನ ಆಭರಣಗಳನ್ನು ತೆಗೆದುಕೊಟ್ಟು ಮನೆಯವರಿಂದ ಬೈಸಿಕೊಂಡ ದಿನಗಳಿಂದಲೇ ಹೋರಾಟದ ತೊದಲು ಹೆಜ್ಜೆಗಳನ್ನು ಅವರು ಇಡತೊಡಗಿದರು. ತೀರಾ ಎಳವೆಯಲ್ಲಿಯೇ ವಿವಾಹವಾಗಿ, ಗಂಡ ಕ್ಷಯರೋಗದಿಂದ ತೀರಿ ಹೋಗಿರುವುದು ಆಕೆಗೆ ಬೇರೆಯವರಿಂದಲೇ ಗೊತ್ತಾಗುತ್ತದೆ. ಬಾಲ ವಿಧವೆಯಾಗಿ ಆಕೆ ಸಮಾಜದಿಂದ ಸಾಕಷ್ಟು ತುಚ್ಛೀಕಾರವನ್ನು ಎದುರಿಸಬೇಕಾಗುತ್ತದೆ. ಆದರೆ ತಂದೆ, ತಾಯಿಯ ಬೆಂಬಲದಿಂದ ಆಕೆ ಎಲ್ಲ ಸವಾಲುಗಳನ್ನು ಎದುರಿಸಿದರು. ಕೊಂಡಪಲ್ಲಿ ಸೀತಾರಾಮಯ್ಯರ ಜೊತೆಗೆ ಅವರ ಮರುಮದುವೆಯೇ ಸಮಾಜದಲ್ಲಿ ಒಂದು ದೊಡ್ಡ ಕ್ರಾಂತಿಯಾಗಿತ್ತು. ಇದಾದ ಬಳಿಕ ಅವರ ಹೋರಾಟದ ಬದುಕು ಹೊಸ ಮಗ್ಗುಲನ್ನು ಪಡೆಯಿತು. ಅಸ್ಪಶ್ಯತೆಯ ವಿರುದ್ಧ ಹೋರಾಟ, ಪ್ರಜಾಶಕ್ತಿ ಪತ್ರಿಕೆ, ಮಹಿಳಾ ಸಂಘಟನೆ, ತೆಲಂಗಾಣ ಹೋರಾಟ ಹೀಗೆ ಆಂಧ್ರದ ಕ್ರಾಂತಿಕಾರಿ ದಿನಗಳ ನೆನಪುಗಳನ್ನು ಹೃದಯ ಮುಟ್ಟುವಂತೆ ಕೋಟೇಶ್ವರಮ್ಮ ತೆರೆದಿಡುತ್ತಾರೆ. ಕಮ್ಯುನಿಸ್ಟ್ ಪಕ್ಷ ಭಿನ್ನಾಭಿಪ್ರಾಯಗಳಿಂದ ಒಡೆದು ಹೋದ ಮೇಲೆಯೂ ಅದು ಒಂದಾಗುವ ಕನಸನ್ನು ಕಾಣುವ ಆಶಾಜೀವಿ ಕೋಟೇಶ್ವರಮ್ಮ. ತನ್ನ ಮಗನನ್ನು ಕಳೆದು ಕೊಂಡಾಗಲೂ, ಹಾಗೆ ಮಗಳು, ಅಳಿಯ ತನ್ನ ಕಣ್ಣೆದುರಿಗೆ ಮರಣಹೊಂದಿದಾಗಲೂ ಪಕ್ಷದ ಹಿತದೃಷ್ಟಿಯಿಂದ ಆ ನೋವನ್ನು ನುಂಗಿಕೊಂಡವರು. ಗಂಡ ಕೊಂಡಪಲ್ಲಿ ಸೀತಾರಾಮಯ್ಯ ತೊರೆದು ಹೋಗಿ 38 ವರ್ಷಗಳ ಆನಂತರ ಹಿಂದಿರುಗಿದಾಗ ಆತನನ್ನು ಸಹಿಸಿಕೊಂಡವರು. ಹೋರಾಟದ ಅಗ್ನಿಕುಂಡವನ್ನು ದಾಟುವಾಗ ಒಬ್ಬ ಮಹಿಳೆಗೆ ಎದುರಾಗುವ ಸವಾಲುಗಳನ್ನು ಅವರ ಈ ಆತ್ಮಕತೆಯಲ್ಲಿ ನಾವು ಕಾಣಬಹುದಾಗಿದೆ. ನವಕರ್ನಾಟಕ ಪ್ರಕಾಶನ ಹೊರತಂದಿರುವ ಈ ಕೃತಿಯ ಮುಖಬೆಲೆ 90 ರೂಪಾಯಿ.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News