ಮುಸ್ಲಿಮರು, ದಲಿತರ ನಂತರ ಈಗ ಮಕ್ಕಳನ್ನು ಟಾರ್ಗೆಟ್ ಮಾಡಲಾಗುತ್ತಿದೆ

Update: 2018-01-25 10:44 GMT

ಹೊಸದಿಲ್ಲಿ,ಜ.25 : ಗುರ್ಗಾಂವ್ ನಗರದಲ್ಲಿ 'ಪದ್ಮಾವತ್' ವಿರುದ್ಧ ಪ್ರತಿಭಟಿಸುತ್ತಿದ್ದ ಗುಂಪೊಂದು ಶಾಲಾ ಮಕ್ಕಳ ಬಸ್ಸೊಂದರ ಮೇಲೆ ದಾಳಿ ನಡೆಸಿದ ಘಟನೆಯ ಬಗ್ಗೆ ತಿಳಿದು ತಮಗೆ ರಾತ್ರಿಯಿಡೀ ನಿದ್ದೆ ಬಂದಿಲ್ಲ ಎಂದು ಹೇಳಿಕೊಂಡಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, "ಮುಸ್ಲಿಮರನ್ನು ಹತ್ಯೆಗೈದ ಹಾಗೂ ದಲಿತರನ್ನು ಸುಟ್ಟ ಕೆಲ ಶಕ್ತಿಗಳು ಈಗ ನಮ್ಮ ಮಕ್ಕಳ ಹಿಂದೆ ಬಿದ್ದಿವೆ,'' ಎಂದಿದ್ದಾರೆ.

ರಾಷ್ಟ್ರ ರಾಜಧಾನಿಯಿಂದ ಕೆಲವೇ ಕಿಲೋಮೀಟರ್ ದೂರದ ಪ್ರದೇಶದಲ್ಲಿ ಗಣರಾಜ್ಯೋತ್ಸವಕ್ಕಿಂತ ಕೆಲವೇ ದಿನಗಳ  ಹಿಂದೆ  ನಡೆದ ಈ ಘಟನೆ  ಇಡೀ ದೇಶಕ್ಕೆ ನಾಚಿಕೆಗೇಡು ಎಂದು ಕೇಜ್ರಿವಾಲ್ ಬಣ್ಣಿಸಿದ್ದಾರೆ.

"ನಾವು ಇನ್ನೂ ಮೌನದಿಂದಿರಲು ಸಾಧ್ಯವಿಲ್ಲ, ಅವರು ಮುಸ್ಲಿಮರನ್ನು ಕೊಂದರು, ದಲಿತರನ್ನು ಜೀವಂತ ಸುಟ್ಟರು ಹಾಗೂ ಹಲ್ಲೆಗೈದರು.  ಇಂದು ಅವರು ನಮ್ಮ ಮಕ್ಕಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಹಾಗೂ ನಮ್ಮ ಮನೆಗಳೊಳಗೆ ನುಗ್ಗಲು ಆರಂಭಿಸಿದ್ದಾರೆ.  ಇನ್ನು ಮೌನದಿಂದಿರಬೇಡಿ, ದನಿಯೆತ್ತಿ,'' ಎಂದು ಕೇಜ್ರಿವಾಲ್ ಅವರು ಗಣರಾಜ್ಯೋತ್ಸವ ದಿನದ ಮುನ್ನಾದಿನ ನಡೆದ ಸಮಾರಂಭವೊಂದರಲ್ಲಿ ಮಾತನಾಡುತ್ತಾ ಹೇಳಿದರು.

"ಇದು ರಾಮ, ಕೃಷ್ಣ, ಗೌತಮ ಬುದ್ಧ, ಮಹಾವೀರ, ಗುರು ನಾನಕ್, ಕಬೀರ್, ಮೀರಾ ಹಾಗೂ ಪ್ರವಾದಿ ಮುಹಮ್ಮದ್ ಮತ್ತು ಏಸು ಕ್ರಿಸ್ತನ ಅನುಯಾಯಿಗಳ ನಾಡು.  ಮಕ್ಕಳ ಮೇಲೆ ಕಲ್ಲೆಸೆದವರು ಹಿಂದುಗಳೇ, ಮುಸಲ್ಮಾನರೇ ಅಥವಾ ಕ್ರೈಸ್ತರೇ ಎಂದು ನಾನು ಕೇಳಬಯಸುತ್ತೇನೆ. ಯಾವ ಧರ್ಮ ಮಕ್ಕಳ ವಿರುದ್ಧ ಹಿಂಸೆ ನಡೆಸಬೇಕೆಂದು ಹೇಳುತ್ತದೆ?'' ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.

"ದೇಶದ ಜನರಿಗೆ ಶಾಂತಿ ಹಾಗೂ ಪ್ರೀತಿಯ ಅಗತ್ಯವಿದೆ. ಕೇಂದ್ರದ ಅಧಿಕಾರಸ್ಥರಿಗೆ ನಮ್ಮನ್ನು ಬಿಟ್ಟು ಬಿಡಿ ಎಂದು ಕೇಳಿಕೊಳ್ಳುತ್ತೇನೆ. ಶ್ರೀ ರಾಮನು ರಾವಣನಿಗೆ ನೀಡಿದ ಶಿಕ್ಷೆಗಿಂತಲೂ ಕಠೋರ ಶಿಕ್ಷೆಯನ್ನು ದಾಳಿಕೋರರಿಗೆ ನೀಡಬೇಕು'' ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News