ರಾಷ್ಟ್ರಪತಿಯಿಂದ ಗಣರಾಜ್ಯೋತ್ಸವ ಭಾಷಣ

Update: 2018-01-25 15:36 GMT

ಹೊಸದಿಲ್ಲಿ, ಜ.25: ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯ ದೃಷ್ಟಿಕೋನದ ಬಗ್ಗೆ ಭಿನ್ನಾಭಿಪ್ರಾಯ ಹೊಂದಬಹದು. ಆದರೆ ಅದಕ್ಕಾಗಿ ವ್ಯಕ್ತಿಯ ಘನತೆಯನ್ನು ಅಪಹಾಸ್ಯ ಮಾಡಬಾರದು ಎಂದು ರಾಷ್ಟ್ರಪತಿಗಳಾದ ರಾಮ್ ನಾಥ್ ಕೋವಿಂದ್ ಗುರುವಾರ ತಿಳಿಸಿದ್ದಾರೆ.

ತಮ್ಮ ಪ್ರಥಮ ಗಣರಾಜ್ಯೋತ್ಸವ ಭಾಷಣವನ್ನು ಮಾಡಿದ ಅವರ ಈ ಹೇಳಿಕೆ ಸದ್ಯ ಬಾಲಿವುಡ್ ಸಿನೆಮಾ ಪದ್ಮಾವತ್ ಬಗ್ಗೆ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ ಮಹತ್ವವನ್ನು ಪಡೆದುಕೊಂಡಿದೆ. ಸಂಸ್ಥೆಗಳು ಯಾವಾಗಲೂ ಶಿಸ್ತು ಮತ್ತು ನೈತಿಕತೆಯನ್ನು ಪಾಲಿಸಬೇಕು. ಸಂಸ್ಥೆಗಳು ಇತರ ಸಂಸ್ಥೆಗಳೊಂದಿಗೂ ತಮ್ಮ ಸಂಬಂಧವನ್ನು ಉತ್ತಮಗೊಳಿಸಬೇಕು ಎಂದು ಅವರು ಹೇಳಿದರು. ಬಡತನದ ಶಾಪದಿಂದ ಅತ್ಯಂತ ಕಡಿಮೆ ಅವಧಿಯಲ್ಲಿ ಮುಕ್ತಿ ಹೊಂದುವುದು ನಮ್ಮ ಪವಿತ್ರ ಹೊಣೆಗಾರಿಕೆಯಾಗಿದೆ. ನಾವು ನಗರದಲ್ಲೇ ಇರಲಿ ಅಥವಾ ಹಳ್ಳಿಯಲ್ಲೇ ಇರಲಿ ಪ್ರಜ್ಞಾವಂತ ಸಮಾಜದಿಂದ ಮಾತ್ರ ಪ್ರಜ್ಞಾವಂತ ದೇಶವನ್ನು ನಿರ್ಮಿಸಲು ಸಾಧ್ಯ. ನಾವು ಪಕ್ಕದ ಮನೆಯ ವ್ಯಕ್ತಿಯ ಖಾಸಗಿತನ ಮತ್ತು ಹಕ್ಕುಗಳನ್ನು ಗೌರವಿಸಬೇಕಾಗಿದೆ ಎಂದು ರಾಷ್ಟ್ರಪತಿಗಳು ತಿಳಿಸಿದರು. ಪ್ರಜ್ಞಾವಂತ ಸಮಾಜದಲ್ಲಿ ಒಂದು ಹಬ್ಬವನ್ನು ಆಚರಿಸುವಾಗ, ಪ್ರತಿಭಟನೆ ನಡೆಸುವಾಗ ಅಥವಾ ಇನ್ಯಾವುದೇ ಸಂದರ್ಭದಲ್ಲಿ ಪಕ್ಕದ ಮನೆಯವರಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ. ಅಲ್ಲಿ ಒಬ್ಬ ವ್ಯಕ್ತಿಗೆ, ಐತಿಹಾಸಿಕ ವಿಷಯಗಳ ಬಗ್ಗೆ ಇರುವ ದೃಷ್ಟಿಕೋನದ ಬಗ್ಗೆ ಇನ್ನೊರ್ವ ವ್ಯಕ್ತಿಗೆ ಭಿನ್ನಾಭಿಪ್ರಾಯವಿದ್ದರೂ ಅದನ್ನು ವ್ಯಕ್ತಪಡಿಸುವ ಅಧಿಕಾರ ಅವನಿಗಿರುತ್ತದೆ. ಆದರೆ ಅದಕ್ಕಾಗಿ ಆ ವ್ಯಕ್ತಿಯನ್ನು ಅಪಹಾಸ್ಯಮಾಡುವ ಅಥವಾ ಆತನ ಖಾಸಗಿ ವಿಷಯದ ಬಗ್ಗೆ ಮಾತನಾಡುವ ಅವಶ್ಯಕತೆ ಬೀಳುವುದಿಲ್ಲ ಎಂದು ರಾಷ್ಟ್ರಪತಿಗಳು ತಿಳಿಸಿದರು.

ಮಹಾತ್ಮಾ ಗಾಂಧಿ ನೇತೃತ್ವದಲ್ಲಿ ದೇಶಕ್ಕಾಗಿ ಸ್ವಾತಂತ್ರವನ್ನು ತಂದುಕೊಡುವಲ್ಲಿ ಮತ್ತು ಆನಂತರ ದೇಶದ ಸಂವಿಧಾನದ ರಚನೆಯಲ್ಲಿ ಭಾಗಿಯಾಗಿದ್ದ ಜನರನ್ನು ರಾಷ್ಟ್ರಪತಿಗಳು ಈ ವೇಳೆ ಸ್ಮರಿಸಿದರು.

ಇಂದು ನಾವು ಸಾಕಷ್ಟನ್ನು ಸಾಧಿಸಿದ್ದೇವೆ. ಆದರೆ ಸಾಧಿಸುವುದು ಇನ್ನೂ ಬಹಳಷ್ಟಿದೆ. ಈ ಬಗ್ಗೆ ನಾವು ನಮಗೆ ಗಣರಾಜ್ಯವನ್ನು ನೀಡಿದ ಮಹನೀಯರಿಂದ ಸ್ಪೂರ್ತಿಯನ್ನು ಪಡೆದು ಮುನ್ನಡೆಯಬೇಕಿದೆ. ಮೂಲಭೂತ ಸೌಕರ್ಯಗಳನ್ನು ಒದಗಿಸದ ಮತ್ತು ದೇಶದ ಬಡವರೂ ಘನತೆಯಿಂದ ಜೀವನ ಸಾಗಿಸುವಂತೆ ಮಾಡದ ಹೊರತು ಈ ದೇಶವನ್ನು ತೃಪ್ತಿಪಡಿಸಲು ಸಾಧ್ಯವಿಲ್ಲ ಎಂದು ರಾಷ್ಟ್ರಪತಿಗಳು ವಿವರಿಸಿದರು.

 ದೇಶದ ಶೇ.60ಕ್ಕೂ ಅಧಿಕ ನಾಗರಿಕರು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಅವರು ಈ ದೇಶದ ಭವಿಷ್ಯವಾಗಿದ್ದಾರೆ ಎಂದು ವಿವರಿಸಿದ ರಾಷ್ಟ್ರಪತಿಗಳು, ಯುವಕರಿಗೆ ಉತ್ತಮ ಶಿಕ್ಷಣ ಒದಗಿಸಲು ಸರಕಾರವು ವಿವಿಧ ಯೋಜನೆಗಳನ್ನು ರೂಪಿಸಿದೆ. ಅವುಗಳ ಸದುಪಯೋಗವನ್ನು ಯುವಜನತೆ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು. ನಾವು ಸಾಕ್ಷರತೆಯನ್ನು ಹರಡುವಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿದ್ದೇವೆ. ಇದೀಗ ನಾವು ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಣೆಗೊಳಸುವ, ಪರಿಷ್ಕರಿಸುವ ಮತ್ತು ವಿಸ್ತರಿಸುವ ಕಾರ್ಯವನ್ನು ಮಾಡಿ 21ನೇ ಶತಮಾನಕ್ಕೆ ಪ್ರಸ್ತುತವಾಗುವಂತೆ ಮಾಡಬೇಕಿದೆ ಎಂದು ಅವರು ನುಡಿದರು.

ಮಕ್ಕಳು ಸಂಶೋಧನಾ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದ ರಾಷ್ಟ್ರಪತಿಗಳು, ಶಾಲೆಗಳು ಮಕ್ಕಳಿಗೆ ಕೇವಲ ಜ್ಞಾಪಿಸಲು ಮತ್ತು ಪುನಃ ಉಚ್ಚರಿಸಲು ಮಾತ್ರ ಹೇಳಿಕೊಡುವುದಲ್ಲ. ಬದಲಿಗೆ ಅವರು ಯೋಚಿಸುವಂತೆ ಮತ್ತು ಯೋಜಿಸುವಂತೆ ಪ್ರೇರೇಪಿಸಬೇಕು ಎಂದು ತಿಳಿಸಿದರು.

ದೇಶದಲ್ಲಿರುವ ಮಕ್ಕಳ ಅಪೌಷ್ಠಿಕತೆಯು ತುರ್ತಾಗಿ ನಿಬಾಯಿಸಬೇಕಾದ ದೊಡ್ಡ ಸಮಸ್ಯೆಯಾಗಿದೆ. ಈ ಬಗ್ಗೆ ಹಲವು ಯೋಜನೆಗಳನ್ನು ರೂಪಿಸಲಾಗಿದ್ದರೂ ಈ ನಿಟ್ಟಿನಲ್ಲಿ ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಅಗತ್ಯವಿದೆ. ಇದು ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ಮತ್ತು ದೇಶದ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಮುಖ್ಯವಾಗಿದೆ. ನಾವು ಮಾನವ ಬಂಡವಾಳದಲ್ಲಿ ಹೂಡಿಕೆಯನ್ನು ಮಾಡಲೇಬೇಕು ಎಂದು ರಾಷ್ಟ್ರಪತಿಗಳು ವಿವರಿಸಿದರು.

ದೇಶದ ಉಳ್ಳವರು ಸಮಾಜದ ಬಡವರ್ಗದ ಜನರಿಗೆ ನೆರವಾಗುವ ಮೂಲಕ ದೇಶ ಕಟ್ಟುವ ಕೆಲಸಕ್ಕೆ ಮುಂದಾಗಬೇಕು. ನಮ್ಮದು ಇಡೀ ಜಗತ್ತೇ ಒಂದು ಕುಟುಂಬ ಎಂದು ಸಾರುವ ದೇಶ. ಇಂದಿನ ಭಯೋತ್ಪಾದನೆ ಮತ್ತು ವ್ಯಸ್ಥ ಜೀವನ ಶೈಲಿಯಲ್ಲಿ ಈ ಮಾತು ಅಪ್ರಸ್ತುತ ಎಂದು ಅನಿಸಬಹುದು. ಆದರೆ ಹಲವು ಸಾವಿರ ವರ್ಷಗಳಿಂದಲೂ ಭಾರತ ಇದೇ ಆದರ್ಶದಿಂದ ಸ್ಫೂರ್ತಿಯನ್ನು ಪಡೆದುಕೊಂಡಿದೆ ಮತ್ತು ನಮ್ಮ ಸಾಂವಿಧಾನಿಕ ವೌಲ್ಯಗಳ ಪ್ರತಿ ಹಂತದಲ್ಲೂ ಈ ಆದರ್ಶವನ್ನು ಗ್ರಹಿಸಬಹುದಾಗಿದೆ ಎಂದು ರಾಷ್ಟ್ರಪತಿಗಳು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News