ಅಷಿಯಾನ್ ರಾಷ್ಟ್ರಗಳ ನಾಯಕರು ಭಾಗಿ, ಭಾರತೀಯ ಸೇನೆಯ ಶಕ್ತಿ ಪ್ರದರ್ಶನ

Update: 2018-01-26 12:10 GMT

ಹೊಸದಿಲ್ಲಿ, ಜ.26: ಇಡೀ ವಿಶ್ವದ ಗಮನ ಸೆಳೆದಿರುವ ಭಾರತದ 69ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆಯಲ್ಲಿ  ಅಷಿಯಾನ್ ರಾಷ್ಟ್ರಗಳ 10 ನಾಯಕರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಎಲ್ಲ ವಿಶ್ವ ನಾಯಕರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಗಣರಾಜ್ಯೋತ್ಸವ ಪರೇಡ್‌ನ್ನು ವೀಕ್ಷಿಸಿದರು.

 ಪ್ರಧಾನಿ ಮೋದಿ ಹುತಾತ್ಮರಿಗೆ ಪುಷ್ಪ ಗೌರವ ಸಲ್ಲಿಸಿದ ಬಳಿಕ ಇಂಡಿಯಾ ಗೇಟ್‌ನ ಅಮರ್ ಜವಾನ್ ಜ್ಯೋತಿ ಬಳಿಯಿಂದ ಪರೇಡ್ ಕಾರ್ಯಕ್ರಮ ಆರಂಭವಾಯಿತು. ಪಥ ಸಂಚಲನದಲ್ಲಿ  ಅಷಿಯಾನ್ ರಾಷ್ಟ್ರಗಳ ಧ್ವಜಗಳನ್ನು ಹಿಡಿದ ಯೋಧರು ರಾಜ್‌ಪಥ್‌ನಲ್ಲಿ ಸಾಗಿದ್ದು ವಿಶೇಷವಾಗಿತ್ತು.

ಪಥ ಸಂಚಲನದಲ್ಲಿ ಪ್ರಮುಖವಾಗಿ ಭಾರತೀಯ ಸೇನೆಯ ಶಕ್ತಿ ಪ್ರದರ್ಶನ ನಡೆಸಲಾಯಿತು. ಭಾರತದ ಯಶಸ್ವಿ ಕ್ಷಿಪಣಿ ‘ಬ್ರಹ್ಮೋಸ್’ ಪಥ ಸಂಚಲನದಲ್ಲಿ ಸಾಗಿತು. ಭಾರತೀಯ ಸೇನೆಯ ಅತ್ಯಂತ ಶಕ್ತಿಶಾಲಿ ಹಾಗೂ ಸ್ವದೇಶಿ ನಿರ್ಮಿತ ರಾಡಾರ್ ವ್ಯವಸ್ಥೆ ‘ಸ್ವಾತಿ’ ತನ್ನ ಪ್ರದರ್ಶನ ತೋರಿತು. 27ನೇ ವಾಯು ಸೇನಾ ರೆಜಿಮೆಂಟ್‌ನ ಸ್ವದೇಶಿ ನಿರ್ಮಿತ ‘ಆಕಾಶ್’ ಕ್ಷಿಪಣಿಯನ್ನು ಪ್ರದರ್ಶನ ಮಾಡಲಾಯಿತು.

ಭಾರತದ ಎಂ-17 ವಿ5 ಹೆಲಿಕಾಪ್ಟರ್ ಆಕಾಶದಲ್ಲಿ ಆಸಿಯಾನ್ ನಾಯಕರಿಗೆ ಧ್ವಜವಂದನೆ ಸಲ್ಲಿಸಿತು.

ಇದೇ ವೇಳೆ ಭಾರತೀಯ ಸೇನೆಯ ಮಹಿಳಾ ಕಮಾಂಡೋಗಳ ಮೋಟಾರ್ ಬೈಕ್ ಸಾಹಸ ಪ್ರದರ್ಶನ ಪ್ರೇಕ್ಷಕರ ಗಮನ ಸೆಳೆಯಿತು. ಒಂದೇ ಬೈಕಿನಲ್ಲ್ಲಿ ಹಲವು ಮಹಿಳಾ ಯೋಧರು ವಿವಿಧ ಭಂಗಿಯಲ್ಲಿ ಕುಳಿತು ಸಾಹಸ ಪ್ರದರ್ಶಿಸಿದರು. ಸೀಮಾ ಭವಾನಿ ತಂಡದ 13 ಮಹಿಳಾ ಯೋಧರು ಈ ಬೈಕ್ ಸಾಹಸ ಪ್ರದರ್ಶಿಸಿದರು. ಬಿಎಸ್‌ಎಫ್ ಯೋಧರ ಒಂಟೆ ಹಾಗೂ ಕುದುರೆಗಳ ಪಥ ಸಂಚಲನ ಗಮನ ಸೆಳೆಯಿತು.

ಸ್ತಬ್ದ ಚಿತ್ರಗಳ ಪ್ರದರ್ಶನದಲ್ಲಿ ಪ್ರಮುಖವಾಗಿ ಕರ್ನಾಟಕದ ಅರಣ್ಯ ಸಂಪತ್ತನ್ನು ಬಿಂಬಿಸುವ ಟ್ಯಾಬ್ಲೊ, ಶಿವಾಜಿ ಕುರಿತ ಮಹಾರಾಷ್ಟ್ರದ ಟ್ಯಾಬ್ಲೊ, ಅಸ್ಸಾಂ ಸಾಂಸ್ಕೃತಿಕ ಸಂಪ್ರದಾಯ ಬಿಂಬಿಸುವ ಟ್ಯಾಬ್ಲೊ ಸೇರಿ ಒಟ್ಟು 23 ಸ್ತಬ್ದಚಿತ್ರಗಳು ಗಮನ ಸೆಳೆದವು.

ನೂರು ಅಡಿ ಎತ್ತರದ ವೇದಿಕೆಯಲ್ಲಿ ಗುಂಡು ನಿರೋಧಕ ಗಾಜಿನ ಒಳಗೆ ಕುಳಿತಿದ್ದ ವಿಶ್ವನಾಯಕರು ಭಾರತದ ಮಿಲಿಟರಿ ಸಾಮರ್ಥ್ಯಕ್ಕೆ ಸಾಕ್ಷಿಯಾದರು. ಅವರ ಉಪಸ್ಥಿತಿ ಭಾರತವು ‘ಪೂರ್ವದತ್ತ ನೋಡು’ ನೀತಿಯಿಂದ ‘ಪೂರ್ವದಂತೆ ನಡೆ’ ನೀತಿಯತ್ತ ಹೊರಳುತ್ತಿರುವುದರ ಸಂಕೇತವಾಗಿದೆ ಎಂದು ಮಾಧ್ಯಮಗಳು ಬಣ್ಣಿಸಿವೆ. 

ಆರಂಭದಲ್ಲಿ ಆಸಿಯಾನ್ ದೇಶಗಳ ಜೊತೆ ಭಾರತದ ಆಳವಾದ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಸಂಬಂಧವನ್ನು ಪ್ರತಿನಿಧಿಸುವ ಟ್ಯಾಬ್ಲೋಗಳು ರಾಜಪಥದಲ್ಲಿ ಚಲಿಸಿದವು. ಇವುಗಳ ನಂತರ ಹದಿನಾಲ್ಕು ರಾಜ್ಯಗಳ ಮತ್ತು ಕೇಂದ್ರಾಡಳಿತಗಳ, ಒಂಬತ್ತು ಸಚಿವಾಲಯಗಳ, ಇಲಾಖೆಗಳ ಮತ್ತು ಅರೆಸೇನಾಪಡೆಗಳ ಟ್ಯಾಬ್ಲೊಗಳನ್ನು ಪ್ರದರ್ಶಿಸಲಾಯಿತು.

ತಮ್ಮ ಸಚಿವಾಲಯದ ಟ್ಯಾಬ್ಲೊಗಳು ಬರುತ್ತಿದ್ದಂತೆ ಸಚಿವರು ಎದ್ದುನಿಂತು ಚಪ್ಪಾಳೆ ಬಾರಿಸಿ ಹುರಿದುಂಬಿಸುವುದು ಕಂಡುಬಂತು. ಪ್ರಧಾನಿ ಮೋದಿಯ ಗುಜರಾತ್‌ನಿಂದ ಆಗಮಿಸಿದ್ದ ಸಾಬರ್ಮತಿ ಆಶ್ರಮ ಮತ್ತು ಗಾಂಧಿಯ ಶತಮಾನೋತ್ಸವವನ್ನು ಆಚರಿಸುವ ಟ್ಯಾಬ್ಲೊ ಆಗಮಿಸಿದಾಗ ಎಲ್ಲರೂ ಎದ್ದುನಿಂತು ಚಪ್ಪಾಳೆ ಬಾರಿಸಿದರು. ಗಡಿ ಭದ್ರತಾ ಪಡೆಯ ಮಹಿಳಾ ತಂಡವು ಬೈಕ್ ಮೇಲೇರಿ ಸಾಹಸವನ್ನು ಪ್ರದರ್ಶಿಸಿದ್ದು ಇಡೀ ಕಾರ್ಯಕ್ರಮದ ಅತ್ಯಂತ ರೋಮಾಂಚನ ಕ್ಷಣಗಳಲ್ಲಿ ಒಂದಾಗಿತ್ತು. ಸೇನೆಯ ಟಿ-90 ಟ್ಯಾಂಕ್, ಬ್ರಹ್ಮೋಸ್ ಕ್ಷಿಪಣಿ ವ್ಯವಸ್ಥೆ ಮತ್ತು ಆಕಾಶ್ ಶಸ್ತ್ರ ವ್ಯವಸ್ಥೆಯುವಾಯು ಸೇನಾಪಡೆಯಿಂದ ಪ್ರದರ್ಶಿಸಲ್ಪಟ್ಟವು.

ವಾಯುಪಡೆಯ ಟ್ಯಾಬ್ಲೊಗಳಲ್ಲಿ ಮನೆಯಲ್ಲಿ ನಿರ್ಮಿತ ತೇಜಸ್ ಯುದ್ದ ವಿಮಾನಗಳು, ರುದ್ರ ಹೆಲಿಕಾಪ್ಟರ್, ಅರುದ್ರ ರಾಡರ್ ಮತ್ತು ಆಕಾಶ್ ಕ್ಷಿಪಣಿ ವ್ಯವಸ್ಥೆಗಳನ್ನು ಪ್ರದರ್ಶಿಸಲಾಯಿತು. ಸಿ-130ಜೆ ಸೂಪರ್ ಹರ್ಕ್ಯೂಲ್ಸ್, ಸಿ-17 ಗ್ಲೋಬ್‌ಮಾಸ್ಟರ್, ಸು-30 ಎಂಕೆಐ ಮತ್ತು ಎಲ್ಸಿಎ ತೇಜಸ್ ಗಳೊಂದಿಗೆ ವಾಯುಪಡೆ ನಡೆಸಿದ ವಾಯು ಪ್ರದರ್ಶನ ಅಭೂತಪೂರ್ವವಾಗಿ ಮೂಡಿಬಂದಿತು.

18 ಮಕ್ಕಳಿಗೆ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಪೈಕಿ ಮೂರು ಮಕ್ಕಳಿಗೆ ಮರಣೋತ್ತರವಾಗಿ ಪ್ರಶಸ್ತಿಯನ್ನು ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News