ಸಂವಿಧಾನದ ಆಶಯದಂತೆ ದೇಶದ ಬಹು ಸಂಸ್ಕೃತಿಯನ್ನು ಗೌರವಿಸೋಣ: ಕಾಗೋಡು ತಿಮ್ಮಪ್ಪ

Update: 2018-01-26 16:47 GMT

ಶಿವಮೊಗ್ಗ, ಜ. 26: ದೇಶದ ಸಂವಿಧಾನದ ಆಶಯದಂತೆ ನಾಡಿನ ಬಹುಸಂಸ್ಕೃತಿಯನ್ನು ಪ್ರತಿಯೊಬ್ಬರು ಗೌರವಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಅವರು ಹೇಳಿದರು.

ಅವರು ಶುಕ್ರವಾರ ಶಿವಮೊಗ್ಗ ಪೊಲೀಸ್ ಪರೇಡ್ ಮೈದಾನದಲ್ಲಿ 69ನೇ ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದರು.

ಅಂಬೇಡ್ಕರ್ ಅವರು ರೂಪಿಸಿರುವ ದೇಶದ ಸಂವಿಧಾನದ ಎದುರು ಪ್ರತಿಯೊಬ್ಬರೂ ಸಮಾನರು. ಸರ್ವರಿಗೂ ಸಮಬಾಳು, ಸಮಪಾಲು ತತ್ವದ ಮೇಲೆ ಸಂವಿಧಾನ ನಿಂತಿದೆ. ಸಂವಿಧಾನದ ಆಶಯದಂತೆ ದೇಶದ ಬಹುಸಂಸ್ಕೃತಿಯನ್ನು ಗೌರವಿಸುವ, ಪರಸ್ಪರರ ಧಾರ್ಮಿಕ ಆಚರಣೆಗಳಿಗೆ ಮನ್ನಣೆ ನೀಡುವ ಮನೋಭಾವವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕಿದೆ. ದೇಶದ ಐಕ್ಯತೆಯ ಮೂಲವಾಗಿರುವ ಸಂವಿಧಾನದ ಆಶಯಗಳ ವಿರುದ್ಧ ಅಪಸ್ವರ ಎತ್ತಲು ಪ್ರಜ್ಞಾವಂತ ನಾಗರಿಕರು ಅವಕಾಶ ನೀಡಬಾರದು. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಪ್ರಯತ್ನಿಸುವ ಶಕ್ತಿಗಳ ವಿರುದ್ಧ ಎಲ್ಲರೂ ಜಾಗರೂಕರಾಗಿರಬೇಕು ಎಂದು ಅವರು ಎಚ್ಚರಿಕೆ ನೀಡಿದರು.

ಹಲವು ಭಾಷೆ, ಧರ್ಮ, ಪ್ರಾಂತ್ಯ, ಬಹು ಸಂಸ್ಕೃತಿಗಳಿಂದ ಕೂಡಿರುವ ನಮ್ಮ ದೇಶ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದೆ. ಬಹುಸಂಸ್ಕೃತಿಯೇ ದೇಶದ ಶಕ್ತಿ. ಐಕ್ಯತೆ, ಸಮಗ್ರತೆ ಕಾಪಾಡಿಕೊಳ್ಳುವ ಮೂಲಕ ಸದೃಢ ರಾಷ್ಟ್ರವಾಗಿ ನಮ್ಮ ದೇಶ ಬೆಳೆದು ನಿಂತಿದೆ. ನೆಲ, ಜಲ, ಗಡಿ, ಭಾಷೆಯ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಂಡು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ವರ್ಷದಿಂದ ವರ್ಷಕ್ಕೆ ಬಲಿಷ್ಟವಾಗುತ್ತಿದೆ ಎಂದರು.

ಕಳೆದ ನಾಲ್ಕುವರೆ ವರ್ಷಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ನಮ್ಮ ಸರ್ಕಾರ ಸಂವಿಧಾನದ ಆಶಯಗಳಿಗೆ ಬದ್ಧವಾಗಿ ಆಡಳಿತ ನೀಡಿದೆ. ಪ್ರತಿಯೊಬ್ಬರಿಗೂ ಆಹಾರ ಭದ್ರತೆ, ಶಿಕ್ಷಣ, ಆರೋಗ್ಯ ಸೇವೆ ಒದಗಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗಿದೆ. ಪ್ರತಿಯೊಬ್ಬರಿಗೂ ಭೂಮಿ ಹಾಗೂ ಸೂರು ಒದಗಿಸಬೇಕೆಂಬುದು ಸರ್ಕಾರದ ಆಶಯ. ಇದಕ್ಕೆ ಪೂರಕವಾಗಿ ಕಾಯ್ದೆ ರಚಿಸಿ ನಮ್ಮ ಜಿಲ್ಲೆಯಲ್ಲಿ ಸಾವಿರಾರು ಮಂದಿಗೆ 94ಸಿ ಮತ್ತು 94ಸಿಸಿ ಅಡಿಯಲ್ಲಿ ಹಕ್ಕುಪತ್ರ ಒದಗಿಸಲು ಸಾಧ್ಯವಾಗಿರುವುದು ಧನ್ಯತಾ ಭಾವ ಮೂಡಿಸಿದೆ ಎಂದು ಅವರು ಹೇಳಿದರು.

ಸವೋತ್ತಮ ಪ್ರಶಸ್ತಿ: ಉತ್ತಮವಾಗಿ ಸೇವೆ ಸಲ್ಲಿಸಿದ ಸರ್ಕಾರಿ ಅಧಿಕಾರಿ, ನೌಕರರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಿದರು. ಕೆ. ಚನ್ನಬಸಪ್ಪ ಅಪರ ಜಿಲ್ಲಾಧಿಕಾರಿ, ಡಾ.ಕೆ.ಪಿ. ಅಚ್ಯುತ್ ತಾಲೂಕು ಆರೋಗ್ಯಾಧಿಕಾರಿ ಸಾಗರ, ಲಕ್ಷ್ಮಣ ಅಧೀಕ್ಷಕರು ಜಿಲ್ಲಾ ಪಂಚಾಯತ್ ಶಿವಮೊಗ್ಗ, ನೀಲಪ್ಪ ಬುಟ್ಟಣ್ಣನವರ್ ಪಿಡಿಒ ತಲ್ಲೂರು ಗ್ರಾಮ ಪಂಚಾಯತ್ ಸೊರಬ, ಶೋಭಾ ಲಕ್ಷ್ಮಿ ಜುಡಿಶಿಯಲ್ ಹೆಡ್ ಮುನ್ಷಿ ಜಿಲ್ಲಾಧಿಕಾರಿ ಕಚೇರಿ ಮತ್ತು ರಾಮಚಂದ್ರ ರಾಜ್ಯ ಲೆಕ್ಕ ಪತ್ರ ಇಲಾಖೆ ಇವರಿಗೆ ಪ್ರಶಸ್ತಿ ನೀಡಲಾಯಿತು.

ಗಮನ ಸೆಳೆದ ಪರೇಡ್, ಸಾಂಸ್ಕೃತಿಕ ಕಾರ್ಯಕ್ರಮಗಳು: ವಿವಿಧ ತುಕಡಿಗಳ ಪರೇಡ್ ಕಾರ್ಯಕ್ರಮ ಹಾಗೂ ಶಾಲಾ ವಿದ್ಯಾರ್ಥಿಗಳ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮೆಚ್ಚುಗೆಗೆ ಪಾತ್ರವಾದವು.

ಜಿಲ್ಲಾಧಿಕಾರಿ ಡಾ.ಆರ್.ಲೋಕೇಶ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅಭಿನವ ಖರೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಕೇಶ್ ಕುಮಾರ್, ಶಾಸಕ ಕೆ.ಬಿ.ಪ್ರಸನ್ನಕುಮಾರ್, ವಿಧಾನಪರಿಷತ್ ಸದಸ್ಯ ಆರ್.ಪ್ರಸನ್ನ ಕುಮಾರ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್, ಉಪಾಧ್ಯಕ್ಷೆ ವೇದಾ ವಿಜಯಕುಮಾರ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News