ರೈತರ ಗೋಳು: ಪರಿಹಾರ ಏನು?

Update: 2018-01-27 06:06 GMT

ತಾವು ಬೆಳೆದ ಬೆಳೆಗೆ ಲಾಭದಾಯಕವಲ್ಲದ ಬೆಲೆಗಳು ರೈತರನ್ನು ಬೇಸಾಯದಿಂದ ದೂರ ತಳ್ಳುತ್ತದೆೆ. ನೀರಿನ ಕೊರತೆ, ಗಿಡಗಳಿಗೆ ಬರುವ ರೋಗಗಳು, ಮಣ್ಣಿನ ಲವಣತ್ವ ಮತ್ತು ಹಿಡುವಳಿಗಳನ್ನು/ಬೇಸಾಯದ ಜಮೀನನ್ನು ರಿಯಲ್ ಎಸ್ಟೇಟ್ ಆಗಿ ಮಾಡುವ ಪ್ರಲೋಭನೆಗಳು ರೈತರನ್ನು ಬೇಸಾಯ ತೊರೆಯುವಂತೆ ಮಾಡುತ್ತವಾದರೂ, ತಾವು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತಂದು, ನಿರೀಕ್ಷಿತ ಬೆಲೆ ಸಿಗದಾಗ ಆಗುವ ಹತಾಶೆ ಇತರ ಎಲ್ಲ ಕಾರಣಗಳನ್ನು ಮೀರಿ ನಿಲ್ಲುತ್ತದೆ.

ಈ ದಿನಗಳಲ್ಲಿ ಕಿಲೊ ಒಂದರ 5ರೂ.ಗೆ ಮಾರಾಟವಾಗುವ ರಕ್ತ ಕೆಂಪು ಟೊಮೆಟೊಗಳಿಂದ ಕರ್ನಾಟಕದ ತರಕಾರಿ ಮಾರುಕಟ್ಟೆಗಳು ತುಂಬಿ ತುಳುಕುತ್ತಿವೆ. ಚಿಲ್ಲರೆ ಮಾರಾಟಗಾರರು ರಖಂ ಮಾರಾಟಗಾರರಿಗೆ ಕಿಲೊ 1ಕ್ಕೆ 2ರೂ. ಗೆ ನೀಡಿರಬಹುದು. ರಖಂ ಮಾರಾಟಗಾರರು ರೈತರಿಗೆ ಒಂದು ಕಿಲೊ ಟೊಮೆಟೊಗೆ 1ರೂ. ನೀಡಿರಬಹುದು. ಆದರೆ ಗೃಹಿಣಿಯರು ಕಿಲೊ ಒಂದಕ್ಕೆ 50ರೂ. ನೀಡುತ್ತಾ ಕಣ್ಣೀರು ಸುರಿಸುತ್ತಾರೆ. ಆದರೆ ಇಷ್ಟೆಲ್ಲ ಹಣ ಟೊಮೆಟೊ ಬೆಳೆಯುವ ರೈತರಿಗೆ ಸಿಗುತ್ತದೆ ಎಂದು ತಿಳಿದರೆ ತಪ್ಪಾದೀತು. ದಾಸ್ತಾನುಗಾರರು ಬಹಳ ಹಿಂದೆ, ಪ್ರಾಯಶಃ ಕಿಲೊ 1ಕ್ಕೆ 5ರೂ. ನೀಡಿ ಕೊಂಡುಕೊಂಡ ಟೊಮೆಟೊಗಳಿವು. ಲಾಭ ಕೊಳ್ಳೆಹೊಡೆಯುವವರು ದಾಸ್ತಾನುಗಾರರು.

ದೇಶದ ಇತರ ಕಡೆಗಳಲ್ಲಿ ಬಟಾಟೆ ಸುದ್ದಿಯಲ್ಲಿದೆ. ಕಿಲೊ 1ಕ್ಕೆ 1ರೂ. ಗೂ ಕೊಂಡುಕೊಳ್ಳುವವರಿಲ್ಲದೆ ರೈತರು ತಾವು ಬೆಳೆದ ಬಟಾಟೆಯನ್ನು ಮಾರುಕಟ್ಟೆಯಲ್ಲೇ ಕೊಳೆಯಲು ಬಿಟ್ಟಿದ್ದಾರೆ. ಉತ್ಪಾದನೆಗಳು ಮತ್ತು ಬೆಲೆಗಳಲ್ಲಿ ಇಂತಹ ಏರುಪೇರು ರಾಷ್ಟ್ರಾದಾದ್ಯಂತ ಮಾಮೂಲಿ ಕತೆಯಾಗಿದೆ. ಅಂತಿಮವಾಗಿ ಸರಕುಗಳು ಯಾವ ಬೆಲೆಗೆ ಮಾರಾಟವಾಗುತ್ತವೋ, ಅದರಲ್ಲಿ ರೈತರಿಗೆ ಸಿಗುವ ಪಾಲು ಯಾವತ್ತೂ ಶೇ. 5ರಿಂದ ಶೇ.10ಕ್ಕಿಂತ ಹೆಚ್ಚು ಇರುವುದಿಲ್ಲ.


 ಮಹಾರಾಷ್ಟ್ರ, ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‌ಗಡ ಮತ್ತು ಕರ್ನಾಟಕ ಸೇರಿದಂತೆ ರೈತರ ಆತ್ಮಹತ್ಯೆಯ ಪ್ರಮುಖ ತಾಣಗಳೆಂದು ಐದು ರಾಜ್ಯಗಳನ್ನು ಪರಿಗಣಿಸಲಾಗಿದೆ. 2014ರಲ್ಲಿ ಈ ಐದು ರಾಜ್ಯಗಳಲ್ಲಿ, ದೇಶದಲ್ಲಿ ಘಟಿಸಿದ ಒಟ್ಟು 5,056 ರೈತರ ಆತ್ಮಹತ್ಯೆಗಳ ಪೈಕಿ, ಶೇ. 90 ಆತ್ಮಹತ್ಯೆಗಳು ಸಂಭವಿಸಿದ್ದವು. ಕರ್ನಾಟಕ ಇನ್‌ಸ್ಟಿಟ್ಯೂಟ್ ಫಾರ್ ಸೋಶಿಯಲ್ ಆ್ಯಂಡ್ ಇಕನಾಮಿಕ್ ಚೇಂಜ್ (ಐಎಸ್‌ಇಸಿ)ಯ ಡಾ. ಎ. ವಿ ಮಂಜುನಾಥ ಮತ್ತು ಡಾ. ಕೆ. ವಿ. ರಾಮಪ್ಪ ನಡೆಸಿದ ಒಂದು ಅಧ್ಯಯನದ ಪ್ರಕಾರ, 2015ರ ಜುಲೈ ಮತ್ತು 2016ರ ಜೂನ್ ನಡುವೆ ದಿನವೊಂದರಲ್ಲಿ ನಾಲ್ವರು ರೈತರು ಆತ್ಮಹತ್ಯೆಗೈದಿದ್ದರು. ಈ ಅವಧಿಯಲ್ಲಿ ಸಂಭವಿಸಿದ 1,490 ರೈತರ ಆತ್ಮಹತ್ಯೆಗಳಲ್ಲಿ ಶೇ. 80 ಆತ್ಮಹತ್ಯೆಗಳು ಮಧ್ಯಮ ಪ್ರಮಾಣದ ಮತ್ತು ಚಿಕ್ಕ ರೈತರು ಗೈದ ಆತ್ಮಹತ್ಯೆಗಳಾಗಿದ್ದವು. ಟೊಮೆಟೊ ಬೆಳೆಯುವ ರೈತರ ಗತಿಯೇ ತೊಗರಿ ಮತ್ತು ಮೆಕ್ಕೆಜೋಳ ಬೆಳೆಯುವವರ ಗತಿಯಾಗಿದೆ. 2017ರಲ್ಲಿ ಮಾರುಕಟ್ಟೆಗೆ ಬಂದ ತೊಗರಿಬೇಳೆ 2016ಕ್ಕಿಂತ ಶೇ. 33 ಕಡಿಮೆಯಾಗಿದ್ದರೂ ಕೂಡ, 2016ರಲ್ಲಿ ಇದೇ ಸಮಯದಲ್ಲಿದ್ದ ತೊಗರಿ ಬೆಲೆಗಿಂತ ಈ ಬಾರಿ ಶೇ. 50 ಕಡಿಮೆ ಇದೆ. ನೋಟು ಅಪವೌಲ್ಯ ಮತ್ತು ಬಳಿಕ ಬಂದ ಜಿಎಸ್‌ಟಿಯಿಂದಾಗಿ ನಗದಿನ ಕೊರತೆಯಾಗಿ ಮಾರುಕಟ್ಟೆಯಲ್ಲಿ ಭಾರೀ ಪ್ರಮಾಣದ ತೊಗರಿ ಮಾರಾಟವಾಗದೆ ರಾಶಿಯಾಗಿ ಬಿದ್ದಿರಬೇಕಾಯಿತು ಎನ್ನಲಾಗಿದೆ. ವಾರ್ಷಿಕ, ಕರ್ನಾಟಕವು ಸುಮಾರು ಏಳು ಲಕ್ಷ ಟನ್ ತೊಗರಿ ಹಾಗೂ ಹಾಗೂ ಎಂಟು ಲಕ್ಷ ಟನ್ ಮೆಕ್ಕೆ ಜೋಳ ಬೆಳೆಯುತ್ತದೆ. ಮೆಕ್ಕೆಜೋಳದ ಬೆಳೆ ಕ್ವಿಂಟಾಲ್‌ಗೆ ರೂ. 1,350ರಿಂದ ರೂ. 1,000ಕ್ಕೆ ಇಳಿದಿದೆ. ಕಡಲೆ, ಜೋಳ, ಸೋಯಾಬೀನ್ ಅಥವಾ ಸೂರ್ಯಕಾಂತಿ ಬೀಜ ಬೆಳೆಯುವ ರೈತರು ಕೂಡ ಆಗಾಗ ಸಂಘರ್ಷವನ್ನು ಅನುಭವಿಸಿದ್ದಾರೆ. ತಾವು ಬೆಳೆದ ಬೆಳೆಗೆ ಲಾಭದಾಯಕವಲ್ಲದ ಬೆಲೆಗಳು ರೈತರನ್ನು ಬೇಸಾಯದಿಂದ ದೂರ ತಳ್ಳುತ್ತದೆೆ. ನೀರಿನ ಕೊರತೆ, ಗಿಡಗಳಿಗೆ ಬರುವ ರೋಗಗಳು, ಮಣ್ಣಿನ ಲವಣತ್ವ ಮತ್ತು ಹಿಡುವಳಿಗಳನ್ನು/ಬೇಸಾಯದ ಜಮೀನನ್ನು ರಿಯಲ್ ಎಸ್ಟೇಟ್ ಆಗಿ ಮಾಡುವ ಪ್ರಲೋಭನೆಗಳು ರೈತರನ್ನು ಬೇಸಾಯ ತೊರೆಯುವಂತೆ ಮಾಡುತ್ತವಾದರೂ, ತಾವು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತಂದು, ನಿರೀಕ್ಷಿತ ಬೆಲೆ ಸಿಗದಾಗ ಆಗುವ ಹತಾಶೆ ಇತರ ಎಲ್ಲ ಕಾರಣಗಳನ್ನು ಮೀರಿ ನಿಲ್ಲುತ್ತದೆ. ಕಳೆದ ಒಂದು ದಶಕದಲ್ಲಿ ಸುಮಾರು 21 ಲಕ್ಷ ಹೆಕ್ಟೇರ್ ಅಥವಾ ಕೃಷಿ ಭೂಮಿಯ ಸುಮಾರು ಶೇ. 16 ಜಮೀನು ಒಣಗಿ ಹೋಗಿದೆ. ಪರಿಣಾಮವಾಗಿ, ರಾಜ್ಯದ ಜಿಡಿಪಿಗೆ 8,000 ಕೋಟಿ ರೂ. ನಷ್ಟವಾಗಿದೆ. ಒಟ್ಟು ನಷ್ಟ ವಾಣಿಜ್ಯ ಬೆಳೆಗಳಲ್ಲಿ ಶೇ. 7ರಿಂದ ತೈಲಬೀಜಗಳಲ್ಲಿ ಶೇ. 32ರವರೆಗೆ ಇರಬಹುದು.


ಹಾಗಾದರೆ ನಾವು ಕೇಳಬೇಕಾದ ಮುಖ್ಯ ಪ್ರಶ್ನೆ: ರೈತರ ಬೆವರು ಮತ್ತು ದುಡಿಮೆಗೆ ಅವರಿಗೆ ದೊರಕುವ ಪ್ರತಿಫಲವನ್ನು ಕೇವಲ ಮಾರುಕಟ್ಟೆಯೊಂದೇ ನಿರ್ಧರಿಸಬೇಕೇ? ಮೂಲ ಆಹಾರೋತ್ಪನ್ನಗಳನ್ನು ಬೆಳೆಯುವ ರೈತರ ಆದಾಯವನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೆಚ್ಚಿಸುವುದಕ್ಕೆ ಮುಖ್ಯ ಆದ್ಯತೆ ನೀಡಬೇಕೆಂಬುದನ್ನು ನಾವು ಪುನಃ ಹೇಳಬೇಕಾಗಿಲ್ಲ. 1970ರ ಆದಿಯಲ್ಲೇ ಕೃಷಿ ಸುಧಾರಣೆಗಳಿಗೆ ನಾಂದಿ ಹಾಡಿದ ಒಂದು ರಾಜ್ಯವಾಗಿರುವ ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ: ಉತ್ಪನ್ನವನ್ನು ಹೆಚ್ಚಿಸುವುದು ಮತ್ತು ಅದು ಹೆಚ್ಚುವರಿಯಾಗಿ ದೊರಕುವಾಗ, ರೈತರಿಗೆ ಸಿಗಬೇಕಾದ ಲಾಭಾಂಶ ಸಿಗುವ ಹಾಗೆ ನೋಡಿಕೊಳ್ಳುವುದು ಇದು ಸಾಧ್ಯವಾಗಬೇಕಾದರೆ ತಂಡ (ಗ್ರೂಪ್) ಬೇಸಾಯ ಮತ್ತು ಕೃಷಿಯ ಯಾಂತ್ರೀಕರಣಕ್ಕೆ ಬೃಹತ್ ಪ್ರಮಾಣದ ಜಮೀನು ಬೇಕಾಗುವುದರಿಂದ, ಹಿಡುವಳಿಗಳ ಕ್ರೋಡೀಕರಣ ಅಗತ್ಯ. ಟ್ರಾಕ್ಟರ್‌ಗಳು, ಕಟಾವು ಯಂತ್ರಗಳು, ಕೊಳವೆ ಬಾವಿಗಳು ನಮ್ಮ ರೈತರ ಸಮಸ್ಯೆಗಳನ್ನು ನೀಗಿಸುವ ಯಾಂತ್ರೀಕೃತ ಬೇಸಾಯದ ಅವಿಭಾಜ್ಯ ಅಂಗಗಳಾಗಿವೆ. ಇವುಗಳ ಬಳಕೆ ಸಾಧ್ಯವಾಗಬೇಕಾದರೆ ಬೃಹತ್ ವಿಸ್ತಾರದ ಕೃಷಿ ಭೂಮಿಯ ಅಗತ್ಯವಿದೆ. ಅಮುಲ್ ಅಥವಾ ಕೆಎಮ್‌ಎಫ್ ಹೈನೋದ್ಯಮಕ್ಕೆ ಏನನ್ನು ಮಾಡಿದವೋ, ಅದನ್ನು ಬೇಸಾಯ ರಂಗದಲ್ಲೂ ಮಾಡಬಹುದು ಮತ್ತು ಮಾಡುವುದು ಸಾಧ್ಯವಾಗಬೇಕು ಕೂಡ. ಅನಿಶ್ಚಿತತೆ ಮತ್ತು ಅಪಾಯಗಳನ್ನು ಅಪರೂಪಕ್ಕೊಮ್ಮೆ ಸಂಭವಿಸಿದವುಗಳೆಂದು ಪರಿಗಣಿಸದೆ, ಅವು ನಮ್ಮ ರೈತರ ದೈನಂದಿನ ದುಡಿಮೆಯ ನಿಯಮಗಳಾಗಿವೆ ಎಂದು ತಿಳಿದು ನಾವು ಕಾರ್ಯಪ್ರವೃತ್ತರಾಗಬೇಕಿದೆ. ಸುಧಾರಣೆಯ ದ್ವಿತೀಯ ತಲೆಮಾರನ್ನು ಅನುಷ್ಠಾನಗೊಳಿಸುವಲ್ಲಿ ಆಗಿರುವ ವಿಳಂಬದಿಂದಾಗಿಯೇ ರೈತರ ಇಂದಿನ ಸ್ಥಿತಿ ಹದಗೆಟ್ಟಿದೆ. ಗ್ರಾಹಕರು ನೀಡುವ ಹಣದಲ್ಲಿ ಕನಿಷ್ಠ ಪಕ್ಷ ಶೇ. 50 ಆದರೂ ರೈತರಿಗೆ ಸಿಗುವಂತೆ ನೋಡಿಕೊಳ್ಳುವ ರೀತಿಯಲ್ಲಿ ಸರಕಾರ ಸುಧಾರಣೆಗಳಿಗೆ ಮುಂದಾಗಬೇಕಿದೆ. ಐಎಸ್‌ಇಸಿ ಮತ್ತು ಸ್ವಾಮಿನಾಥನ್ ಸಮಿತಿ (2007)ಯ ವರದಿಗಳೆರಡು ಕೂಡ ಇದನ್ನೇ ಹೇಳುತ್ತವೆ. ಅವು ಹೇಳುವ ರೀತಿ ಮಾತ್ರ ಬೇರೆ ಬೇರೆ ಇರಬಹುದು. ಬೇಸಾಯದ ವೆಚ್ಚದ ಮೇಲೆ ರೈತರಿಗೆ ಶೇ.50 ಲಾಭಾಂಶ ದೊರಕುವಂತೆ ಎಮ್‌ಎಸ್‌ಪಿಯನ್ನು ನಿಗದಿಪಡಿಸಬೇಕೆಂದು ಸ್ವಾಮಿನಾಥನ್ ಸಮಿತಿ ಹೇಳಿದೆ. ಕಾನೂನಿನ ಮಟ್ಟದಲ್ಲಿ, ಎಮ್‌ಎಸ್‌ಪಿಗಿಂತ ಕಡಿಮೆ ಬೆಲೆಗೆ ಉತ್ಪನ್ನಗಳನ್ನು ಕೊಂಡುಕೊಳ್ಳುವುದನ್ನು ಒಂದು ಅಪರಾಧವೆಂದು ಪರಿಗಣಿಸಿ ಕ್ರಮ ತೆಗೆದುಕೊಳ್ಳಬೇಕು.

Writer - ಎಂ. ಎ. ಸಿರಾಜ್

contributor

Editor - ಎಂ. ಎ. ಸಿರಾಜ್

contributor

Similar News

ಜಗದಗಲ
ಜಗ ದಗಲ