ಮಾಗಬೇಕಾದ ಕವಿತೆಗಳು
ಗೇಯತೆಯ ಸೊಬಗು, ಅಲಂಕಾರದ ಕೌಶಲ್ಯ ಇವುಗಳ ಮೂಲಕ ‘ದೇವಕಿ ಸುತ’ರ ಕವನ ‘ಆತುರ-ಗುನುಗುವ ಗೀತೆಗಳು’ ಗಮನ ಸೆಳೆಯುತ್ತದೆ. ಖ್ಯಾತ ಕವಿ ಸುಬ್ರಾಯ ಚೊಕ್ಕಾಡಿಯವರು ಈ ಕೃತಿಗೆ ಮುನ್ನುಡಿಯನ್ನು ಬರೆಯುತ್ತಾ, ‘‘ಇಲ್ಲಿರುವುದು ಹರೆಯದ ಹಾಡುಗಳು, ಯುವ ಮನಸ್ಸುಗಳ, ಕನಸುಗಳ, ಕಲ್ಪನೆಗಳು ಚೇತೋಹಾರಿ ಗುನುಗುಗಳು’ ’ಎಂದು ಬಣ್ಣಿಸುತ್ತಾರೆ. ಇಲ್ಲಿನ ಹಲವಾರು ಕವಿತೆಗಳು ಯುವ ಮನಸ್ಸಿನ ವಿವಿಧ ಪದರುಗಳನ್ನು ನವಿರಾಗಿ ಅನಾವರಣಗೊಳಿಸುತ್ತವೆ. ಪ್ರೀತಿಯನ್ನು ಅದರ ವಾಸ್ತವ ನೆಲೆಯಲ್ಲಿ ಇಲ್ಲಿರುವ ಕವಿತೆಗಳು ಕಾಣುತ್ತವೆ ಮತ್ತು ಹೆಚ್ಚಿನ ಕವಿತೆಗಳು ಆ ನೆಲೆಯಲ್ಲೇ ಹುಟ್ಟಿಕೊಂಡಿವೆ. 50ಕ್ಕೂ ಅಧಿಕ ಕವಿತೆಗಳು ಇಲ್ಲಿವೆ. ಹೆಚ್ಚಿನವುಗಳು ಯೌವನ, ಪ್ರೀತಿ, ಪ್ರೇಮದ ಸುತ್ತಲೇ ಸುತ್ತುತ್ತವೆ. ನವೋದಯದ ರೊಮ್ಯಾಂಟಿಕ್ ಭಾವ ಇಡೀ ಕವಿತೆಗಳನ್ನು ಆಕರ್ಷವಾಗಿಸಿದೆ. ಹಾಗೆಯೇ ಆ ಕಾಲಘಟ್ಟದ ಪ್ರಾಥಮಿಕ ಹಂತದ ಮಾದರಿಗಳೂ ಬಹಳಷ್ಟಿವೆ. ಅವರ ಕವಿತೆಯ ಮೂಲ ಗುಣವೇ ‘‘ನಸು ನಗೆಯ ಲಜ್ಜೆಯಲಿ/ಮೊಗ್ಗರಳಿ ಕಂಡಂತೆ/ಬಿರಿದರಳಿ ಗುನುಗುವುದು...’’. ‘‘ಮರೆಯಲಾಗದ ನೆನಪು ಮಾತಲ್ಲ ಪ್ರಚ್ಛನ್ನ/ಮದಿರೆಯಾಯಿತು ಸ್ನೇಹ ನಿಷೆಗೂ ಉಷೆಗೂ...’’ ಎಂದು ಬರೆಯುವ ಕವಿ, ‘‘ನಿನ್ನ ನಗೆ ನೊರೆಹಾಲು ಮಾತು ಮಾದಕ ಜೇನು /ನೀನು ಹಾಡಿದ ಹಾಡು ನನ್ನ ಕನಸು’ ಎಂದು ಸಿಹಿ ಸಾಲುಗಳನ್ನು ಬರೆಯುತ್ತಾರೆ. ‘‘ನೀನೆ ಕೊಳಲು ನಾನೆ ಬೆರಳು, ತುಟಿಗಳಾಟ ಕಲ್ಪನೆ/ನಗೆಯು ನಾನು ನಿನ್ನ ತುಟಿಗೆ, ನೋಟದಾಟ ವೇದನೆ’’ ಹೀಗೆ ಲೀಲಾಜಾಲವಾಗಿ ಪದಗಳನ್ನು ಜೋಡಿಸುತ್ತಾ, ಪ್ರಾಸಗಳನ್ನು ಅನುರಣಿಸುತ್ತಾ ತನ್ನ ಮನದ ಮಾತುಗಳನ್ನು ಹಂಚಿಕೊಳ್ಳುತ್ತಾರೆ. ಈ ಮೂಲಕ ಅವರು ಪ್ರೇಮವನ್ನು, ಸ್ನೇಹವನ್ನು, ವಾತ್ಸಲ್ಯವನ್ನು ತೋಡಿಕೊಳ್ಳುತ್ತಾರೆ. ಆದರೆ ಕಾವ್ಯದ ಉದ್ದೇಶ ಇದಷ್ಟೇ ಅಲ್ಲ. ಅದು ಪದಗಳಾಚೆಗೆ ನಮ್ಮನ್ನು ಒಯ್ಯಬೇಕು. ಕವಿತೆ ಮುಗಿದ ಬಳಿಕವೂ ಅದು ನಮ್ಮನ್ನು ಕಾಡಬೇಕು. ಈ ನಿಟ್ಟಿನಲ್ಲಿ ಬರೇ ಪದಗಳ ನಡುವೆ ಆಟ ಆಡುವುದನ್ನು ನಿಲ್ಲಿಸಿ ಕವಿ, ತನ್ನ ವಾಸ್ತವ ಬದುಕನ್ನು ಕವಿತೆಯ ಸಾಲುಗಳ ಮೂಲಕ ತೋಡಿಕೊಳ್ಳಬೇಕು. ಲಯವೆನ್ನುವುದು ಕವಿತೆಯ ಸಾಲುಗಳಲ್ಲಷ್ಟೇ ಇದ್ದರೆ ಕವಿತೆಯಾಗುವುದಿಲ್ಲ. ಆ ಕವಿಯ ಧ್ವನಿಯಲ್ಲೂ ನಮಗೆ ಕಾಣಬೇಕು. ಅದು ಬದುಕಿನ ಬೇರೆ ಬೇರೆ ಮಗ್ಗುಲನ್ನು ನಮಗೆ ಪರಿಚಯಿಸುವಂತಿರಬೇಕು. ಈ ನಿಟ್ಟಿನಲ್ಲಿ ಕವಿ ಇನ್ನಷ್ಟು ಬೆಳೆಯಬೇಕಾಗಿದೆ. ಬದುಕುತ್ತಾ, ಬರೆಯುತ್ತಾ ಅದು ಅವರಿಗೆ ಸಾಧ್ಯವಾಗಬಹುದು. ರಾಜರ್ಷಿ ಪ್ರಕಾಶನ, ಬೆಂಗಳೂರು ಈ ಕೃತಿಯನ್ನು ಪ್ರಕಟಿಸಿದೆ. ಕೃತಿಯ ಮುಖಬೆಲೆ 120 ರೂಪಾಯಿ.