ಭೂಮಿ-ವಸತಿ ಸಮಸ್ಯೆಗಳ ಪರಿಹಾರಕ್ಕೆ ಉನ್ನತ ಮಟ್ಟದ ಸಮಿತಿ ರಚನೆ: ಮುಖ್ಯಮಂತ್ರಿ ಭರವಸೆ

Update: 2018-01-27 15:42 GMT

ಬೆಂಗಳೂರು, ಜ. 27: ಭೂಮಿ ಮತ್ತು ವಸತಿ ಸಮಸ್ಯೆಗಳ ಸಮಗ್ರ ಪರಿಹಾರ ಸೂತ್ರ ರೂಪಿಸಲು ರಾಜ್ಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಹಾಗೂ ಅಭಿವೃದ್ಧಿ ಆಯುಕ್ತ ಡಿ.ವಿ.ಪ್ರಸಾದ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಶನಿವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಅಧ್ಯಕ್ಷತೆಯಲ್ಲಿ, ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಉಪಸ್ಥಿತಿಯಲ್ಲಿ ನಡೆದ ಸಮಿತಿ ಪದಾಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮೇಲ್ಕಂಡ ತೀರ್ಮಾನ ಕೈಗೊಳ್ಳಲಾಗಿದೆ.

ಭೂಮಿ ಮತ್ತು ವಸತಿ ಸಮಸ್ಯೆಗಳ ಪರಿಹಾರ ಸಂಬಂಧ ರಚನೆಯಾಗಿರುವ ಸಮಿತಿ ಪ್ರತಿ ತಿಂಗಳು ಸಭೆ ಸೇರಿ ಬೇಡಿಕೆಗಳ ಬಗ್ಗೆ ಪರಿಶೀಲನೆ ನಡೆಸಲಿದೆ. ವಸತಿ, ಕಂದಾಯ, ಅರಣ್ಯ, ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಮಿತಿಯಲ್ಲಿ ಇರಲಿದ್ದಾರೆ ಎಂದು ತಿಳಿಸಲಾಗಿದೆ.

ಸತ್ಯಾಗ್ರಹ ವಾಪಸ್: ಭೂಮಿ ಮತ್ತು ವಸತಿ ಹಕ್ಕಿನ ಸಮಸ್ಯೆ ಇತ್ಯರ್ಥಕ್ಕೆ ರಾಜ್ಯ ಸರಕಾರ ಖಚಿತ ಭರವಸೆ ನೀಡಿದ ಹಿನ್ನೆಲೆಯಲ್ಲಿ ಜ.10ರಿಂದ ಇಲ್ಲಿನ ಗಾಂಧಿ ಭವನದ ಬಳಿಕ ವಲ್ಲಭನಿಕೇತನದಲ್ಲಿ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹವನ್ನು ಹಿಂಪಡೆಯಲಾಗಿದೆ ಎಂದು ಮುಖಂಡರು ತಿಳಿಸಿದ್ದಾರೆ.

ಸಭೆಯಲ್ಲಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ವಸತಿ ಸಚಿವ ಎ.ಕೃಷ್ಣಪ್ಪ, ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ನೂರ್ ಶ್ರೀಧರ್, ಸಿರಿಮನೆ ನಾಗರಾಜ್, ಬೋರಯ್ಯ, ಕುಮಾರ್ ಸಮತಳ ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News