ಕನ್ನಡದ ಮೊದಲ ದಲಿತ ಕಥೆಗಾರ ಜಿ.ವೆಂಕಟಯ್ಯ

Update: 2018-01-27 17:34 GMT

ಕೋಮು ಸೌಹಾರ್ದ ಕುರಿತು ಮಾತನಾಡುತ್ತಿರುವ ಈ ಸಂದರ್ಭದಲ್ಲಿ ವೆಂಕಟಯ್ಯ ನವರ ‘ಬಾಬಯ್ಯನ ಜಲ್ದಿ’ ಎಂಬ ಕಥೆ ಗಮನ ಸೆಳೆಯುತ್ತದೆ. ಹಿಂದೂ ಮುಸ್ಲಿಮರು ಬೆರೆತು ಆಚರಿಸುತ್ತಿದ್ದ ಮುಹರ್ರಂ ಕೊನೆಯ ದಿನದ ದೃಶ್ಯವನ್ನು ಕಥೆಯಾಗಿಸಿದ್ದರು. ರಂಗರಾಯರ ಮಗಳು ವಾಸಂತಿಯ ಮದುವೆಯ ವಿವರಗಳನ್ನು ‘ಮಗಳ ಮಾಂಗಲ್ಯ’ ದಲ್ಲಿ ನೀಡಿದರು. ವೈದಿಕ ಮನೆತನದ ಹೆಣ್ಣಿನ ವೈವಾಹಿಕ ಸಮಸ್ಯೆಗಳನ್ನು ವಿವರಿಸುವುದು ಇವರ ಉದ್ದೇಶವಾಗಿದ್ದರೂ ಸಮಾಜದ ಹಲವು ಸಂಗತಿಗಳನ್ನ್ನು ಅದರೊಂದಿಗೆ ಜೋಡಣೆಗೊಳಿಸುವ ಕ್ರಿಯೆಯಲ್ಲೂ ಕಥಾಕೌಶಲವನ್ನು ವ್ಯಕ್ತಪಡಿಸಿದ್ದಾರೆ.

ನವೋದಯ ಲೇಖಕರಾದ ಪಂಜೆ, ಮಾಸ್ತಿ, ಆನಂದ, ಎ.ಆರ್.ಕೃ, ಅಶ್ವತ್ಥ ಮೊದ ಲಾದವರು ಪ್ರಗತಿಶೀಲ ಲೇಖಕರಾದ ತರಾಸು, ಚದುರಂಗ, ಕಟ್ಟೀಮನಿ, ನಿರಂಜನ, ಮುಂತಾದವರು ಸಾಹಿತ್ಯ ರಚನೆ ಮಾಡುತ್ತಿರುವ ಸಂದರ್ಭದಲ್ಲಿಯೇ ಕನ್ನಡದ ಮೊದಲ ತಲೆಮಾರಿನ ದಲಿತ ಬರಹಗಾರರಾದ ಜಿ.ವೆಂಕಟಯ್ಯ ಅವರು ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದರು. ಇವರು ಹುಟ್ಟಿದ್ದು 1916 ಎಪ್ರಿಲ್ 10ರಂದು ಮಂಡ್ಯ ಜಿಲ್ಲೆ, ಮದ್ದೂರು ತಾಲೂಕು, ಹೆಮ್ಮನಹಳ್ಳಿಯಲ್ಲಿ. ತಂದೆ ಗಿರಿಯಯ್ಯ, ತಾಯಿ ಸಿದ್ದಮ್ಮ. ಆರು ಮಂದಿ ಮಕ್ಕಳಲ್ಲಿ ವೆಂಕಟಯ್ಯ ಮೊದಲನೆಯವರು. ಉಳಿದವರಲ್ಲಿ ಮೂವರು ಗಂಡು, ಇಬ್ಬರು ಹೆಣ್ಣುಮಕ್ಕಳು. ವೆಂಕಟಯ್ಯನವರಿಗೆ ನಾಲ್ವರು ಮಕ್ಕಳು.

ಇವರ ಅಕ್ಷರಾಭ್ಯಾಸ ಆರಂಭವಾದದ್ದು ಕೂಲಿ ಮಠದಲ್ಲಿ. ಶಿಕ್ಷಣವನ್ನು ಮುಂದುವರಿಸಲೇಬೇಕೆಂಬ ಬಯಕೆಯಿಂದ ಬೆಂಗಳೂರಿನ ಕೋಟೆ ಹೈಸ್ಕೂಲಿನಲ್ಲಿ ಅಧ್ಯಯನ ಮಾಡಿ ಇಂಟರ್‌ಮೀಡಿಯಟ್ ತರಗತಿಗೆ ಪ್ರವೇಶಿಸಿದರು. ಅಲ್ಲಿ ಕುವೆಂಪು, ಡಿ.ಎಲ್.ಎನ್, ತೀನಂಶ್ರೀ- ಇವರುಗಳ ಮಾರ್ಗದರ್ಶನ ದೊರೆ ಯಿತು. ನಂತರ ಗುಮಾಸ್ತರಾದರು. ಹೆಡ್ ಮುನ್ಷಿ ಯಾಗಿ ಲೆಕ್ಕ ತನಿಖಾಧಿಕಾರಿಯಾಗಿ ಸರಕಾರಿ ಸೇವೆ ಯಲ್ಲಿ ಮುಂದುವರಿದರು. ಇದರ ನಡುವೆಯೇ ಸಾಹಿತ್ಯ ರಚನೆಯತ್ತ ಒಲವು ತೋರಿದರು. ವೆಂಕಟಯ್ಯನವರು ಬರೆದ ಪುಸ್ತಕಗಳು ಹತ್ತು: ಅವುಗಳಲ್ಲಿ ಒಂದು ಕಥಾ ಸಂಗ್ರಹ ‘ಮಗಳ ಮಾಂಗಲ್ಯ’ (1957), ಮೂರು ಕಾದಂಬರಿ ಗಳು (ಮುರಿದ ಮದುವೆ 1951, ನೊಂದ ಜೀವ 1955, ಚಂದನದ ಕೊರಡು 1965), ಎರಡು ಜೀವನ ಚರಿತ್ರೆಗಳು (ಬುದ್ಧದೇವ 1954, ಶ್ರೀ ಶಾರದಾಮಣಿದೇವಿ 1959), ಮೂರು ಪ್ರವಾಸ ಕಥನಗಳು (ಚಿನ್ನದಗಿರಿ ಯಾತ್ರೆ 1952, ಬನದ ಸೆರಗು 1962, ನಿಸರ್ಗದ ಮಡಿಲು 1967), ಒಂದು ಮಕ್ಕಳ ಸಾಹಿತ್ಯ (ಬುದ್ಧದೇವ). ಮಕ್ಕಳಿಗಾಗಿ ಬರೆದ ‘ಬುದ್ಧದೇವ’ ಒಂದು ಸಣ್ಣ ಕೃತಿ. 1961ರಲ್ಲಿ ಕೇಂದ್ರ ಸರಕಾರದ ಶಿಕ್ಷಣ ಇಲಾಖೆಯ ಸ್ಪರ್ಧೆಯಲ್ಲಿ ಬಹುಮಾನ ಪಡೆಯಿತು. 1965ರಲ್ಲಿ ಇದರ ಇಂಗ್ಲಿಷ್ ಆವೃತ್ತಿ ಪ್ರಕಟ ವಾಯಿತು. ‘‘ಟಿ.ಎಸ್.ವೆಂಕಣ್ಣಯ್ಯನವರ ನಂತರದ ಆಧುನಿಕ ಕನ್ನಡದಲ್ಲಿ ಜಿ.ವೆಂಕಟ ಯ್ಯನವರಿಗಿಂತಲೂ ಮೊದಲು ಬುದ್ಧನ ಜೀವನವನ್ನ ಕುರಿತ ಕೃತಿಗಳ ರಚನೆಯಾಗಿ ರಲಿಲ್ಲವೆಂಬುದನ್ನು ನೆನಪಿಡಬೇಕು. ಬಹುಶಃ ಜಿ.ವೆಂಕಟಯ್ಯನವರ ನಂತರವೇ ಬಿ.ಪುಟ್ಟಸ್ವಾಮಯ್ಯನವರು, ಜಿ.ಪಿ.ರಾಜರತ್ನಂ ಹಾಗೂ ಗೋವಿಂದ ಪೈ ಅವರು ಬುದ್ಧನನ್ನು ಕುರಿತಂತೆ ತಂತಮ್ಮ ಕೃತಿಗಳ ರಚನೆ ಮಾಡಿರುವಂತೆ ತೋರುತ್ತದೆ’’ (ಮ.ನ.ಜವರಯ್ಯ).

1934ರಲ್ಲಿ ಮಹಾತ್ಮ ಗಾಂಧೀಜಿಯವರು ಸೋಮನ ಹಳ್ಳಿಗೆ ಬಂದಿದ್ದಾಗ ವೆಂಕಟಯ್ಯನವರಿಗೆ ಗಾಂಧೀಜಿಯ ವರನ್ನು ಭೇಟಿಮಾಡುವ ಅವಕಾಶ ದೊರೆತಿತ್ತು. ಹರಿಜನರಬಗೆಗೆ ಅವರು ಮಾಡಿದ ಭಾಷಣವನ್ನು ಕೇಳಿಸಿಕೊಂಡಿ ದ್ದರು. ಅಂದಿನಿಂದ ಹರಿಜನ ಸಮುದಾಯದ ಬೆಳವಣಿಗೆಗೆಶ್ರಮಿಸಲು ಸಂಕಲ್ಪ ಮಾಡಿದರು. ಬಿಳಿಯ ಜುಬ್ಬ, ತುಂಡು ಪಂಚೆಯನ್ನ ಧರಿಸಿ ಸ್ವದೇಶಿ ಸಂಸ್ಕೃತಿಯ ಸಂಕೇತವಾದರು. ಹರಿಜ ನೋದ್ಧಾರಕ್ಕಾಗಿ ಸದಾ ಕಂಕಣಬದ್ಧರಾಗಿದ್ದ ಆರ್.ಗೋಪಾಲಸ್ವಾಮಿ ಅಯ್ಯರ್ ಅವರ ಮಾರ್ಗದರ್ಶನವೂ ಇವರಿಗೆ ದೊರೆತಿತ್ತು. ಹಾಗಾಗಿ ವೆಂಕಟಯ್ಯ ನಿಷ್ಠಾವಂತ ಸಮಾಜ ಸೇವಕರಾಗಿದ್ದರು. ಬಡತನ, ಅನಾರೋಗ್ಯದ ನಡುವೆಯೂ ಬರವಣಿಗೆ ಯನ್ನು ಮುಂದುವರಿಸಿದರು. ತಾವು ಬರೆದದ್ದನ್ನು ಪ್ರಕಟಿಸಲೆಂದೇ ‘ಲಕ್ಷ್ಮೀಸ್ಮಾರಕ ಗ್ರಂಥ ಮಾಲೆ’ ಎಂಬ ಹೆಸರಿನ ಪ್ರಕಾಶನವನ್ನು ಆರಂಭಿಸಿದರು. ಇವರ ಸಾಹಿತ್ಯ ಸೇವೆ ಯನ್ನು ಗಮನಿಸಿದ ಅಂದಿನ ಕರ್ನಾಟಕ ಸರಕಾರ ಮಾಸಾಶನವನ್ನು ಮಂಜೂರು ಮಾಡಿತ್ತು. 1976ರಲ್ಲಿ ರಾಜ್ಯ ಸಾಹಿತ್ಯ ಅಕಾಡಮಿ ಜಿ.ವೆಂಕಟಯ್ಯ ಅವರನ್ನು ಗೌರವಿಸುವುದರ ಮೂಲಕ ತನ್ನ ಘನತೆಯನ್ನು ಹೆಚ್ಚಿಸಿಕೊಂಡಿತು.

ಕೋಮು ಸೌಹಾರ್ದ ಕುರಿತು ಮಾತನಾಡುತ್ತಿರುವ ಈ ಸಂದರ್ಭದಲ್ಲಿ ವೆಂಕಟಯ್ಯ ನವರ ‘ಬಾಬಯ್ಯನ ಜಲ್ದಿ’ ಎಂಬ ಕಥೆ ಗಮನ ಸೆಳೆಯುತ್ತದೆ. ಹಿಂದೂ ಮುಸ್ಲಿಮರು ಬೆರೆತು ಆಚರಿಸುತ್ತಿದ್ದ ಮುಹರ್ರಂ ಕೊನೆಯ ದಿನದ ದೃಶ್ಯವನ್ನು ಕಥೆಯಾಗಿಸಿದ್ದರು. ರಂಗರಾಯರ ಮಗಳು ವಾಸಂತಿಯ ಮದುವೆಯ ವಿವರಗಳನ್ನು ‘ಮಗಳ ಮಾಂಗಲ್ಯ’ ದಲ್ಲಿ ನೀಡಿದರು. ವೈದಿಕ ಮನೆತನದ ಹೆಣ್ಣಿನ ವೈವಾಹಿಕ ಸಮಸ್ಯೆಗಳನ್ನು ವಿವರಿಸುವುದುಇವರ ಉದ್ದೇಶವಾಗಿದ್ದರೂ ಸಮಾಜದ ಹಲವು ಸಂಗತಿಗಳನ್ನ್ನು ಅದರೊಂದಿಗೆ ಜೋಡಣೆಗೊಳಿಸುವ ಕ್ರಿಯೆಯಲ್ಲೂ ಕಥಾಕೌಶಲವನ್ನು ವ್ಯಕ್ತಪಡಿಸಿದ್ದಾರೆ.

1955ರಲ್ಲಿ ಮಹಾರಾಷ್ಟ್ರದಲ್ಲಿ ದಲಿತ ಪ್ಯಾಂಥರ್ ಚಳವಳಿ ಪ್ರಾರಂಭವಾಗಿತ್ತು. ಸಾಮಾಜಿಕ ರಾಜಕೀಯ ಪ್ರಜ್ಞೆಯ ದಲಿತವರ್ಗದ ಹಲವರು ಮರಾಠಿ ಭಾಷೆಯಲ್ಲಿ ಬರೆಯತೊಡಗಿದ್ದರು. ಅದೇ ಕಾಲಘಟ್ಟದಲ್ಲಿ ಮೈಸೂರಿನಂತಹ ವಾತಾವರಣದಲ್ಲಿ ವೆಂಕಟಯ್ಯ ಹರಿಜನರ ಸಮಸ್ಯೆಗಳ ಕುರಿತಾದ ಚಿಂತನೆಯಲ್ಲಿ ತೊಡಗಿದ್ದರು. ಅದರ ಫಲವಾಗಿ ಮೂಡಿ ಬಂದದ್ದೇ ‘ನೊಂದ ಜೀವ’ ಕಾದಂಬರಿ. ಹೆಸರಾಂತ ಕಥೆಗಾರ ಆನಂದರು ಈ ಜೀವನ ಚಿತ್ರ ಹೊರಬರುವಂತೆ ಪ್ರೊ. ಎಂ.ಎಸ್.ಚಂದ್ರಶೇಖರ್ ಮುಖಪುಟ ರಚಿಸಿದ್ದಾರೆ. ನವ್ಯಕಾವ್ಯ ಪ್ರವತರ್ಕರಾದ ಎಂ.ಜಿ. ಅಡಿಗರು ಸಲಹೆಗಳನ್ನ್ನು ನೀಡಿದ್ದಾರೆ. 210 ಪುಟಗಳ ಈ ಕೃತಿ ಹರಿಜನ ಕುಟುಂಬವೊಂದರ ಬದುಕಿನ ಏರಿಳಿತಗಳನ್ನು ಕುರಿತದ್ದು. ಮದುವೆಯ ವಿಚಾರದಿಂದ ಆರಂಭವಾಗುವ ಇದರಲ್ಲಿ ಶ್ರೀಮಂತರ ದಾಹ, ಅಸ್ಪಶ್ಯತಾ ಸಮಸ್ಯೆ, ಕೂಲಿಕಾರರ ಸಮಸ್ಯೆ, ಕಲೆ, ನಂಬಿಕೆ, ಆಚರಣೆ, ಸಂಪ್ರದಾಯಗಳನ್ನು ಅತ್ಯಂತ ಸಹಜವಾಗಿ ಚಿತ್ರಿಸುತ್ತ ಬಂದಿರುವುದು ಗಮನಾರ್ಹ ಅಂಶವಾಗಿದೆ.

ಈ ಕೃತಿ ರಚನೆಯಾದಾಗ ‘ದಲಿತ’ ಪದದ ಬಳಕೆ ಇರಲಿಲ್ಲ. ಇದರಲ್ಲಿ ಅದಕ್ಕೆ ಸಂವಾದಿಯಾದ ‘ಪಂಚಮ’ ಪದ ಬಳಕೆಯಾಗಿರುವುದುಂಟು.

ಕನ್ನಡದಲ್ಲಿ ದಲಿತ ಸಾಹಿತ್ಯದ ಚರ್ಚೆಯೇ ಆರಂಭವಾಗದಿದ್ದ ದಿನಗಳಲ್ಲಿ ದಲಿತರ ಬದುಕನ್ನು ಅದೇ ವರ್ಗದಿಂದ ಬಂದವರು ನಿರೂಪಿಸಲು ಪ್ರಯತ್ನಿಸಿದ್ದು ವಿಶೇಷ ಸಂಗತಿ. ‘ಮುರಿದ ಮದುವೆ’ ಕಾದಂಬರಿ ತಂದೆಯಾದವನ ಸ್ವಾರ್ಥದ ಕಿಚ್ಚಿಗೆ ಸಿಲುಕಿ ದುರಂತದ ಎಲ್ಲೆಯನ್ನು ಮುಟ್ಟುತ್ತಿದ್ದ ಚೆಲುಮೊಬ್ಬಳ ಜೀವನಚಿತ್ರವನ್ನು ಒಳಗೊಂಡದ್ದು. 50-60ರ ದಶಕದ ಗ್ರಾಮೀಣ ಸಂಸ್ಕೃತಿಯ ಹಿನ್ನೆಲೆಯ ಕೌಟುಂಬಿಕ ಚಿತ್ರಣ ನೀಡುವಲ್ಲಿ ಕಾದಂಬರಿ ಯಶಸ್ಸನ್ನು ಕಂಡಿದೆ. 183 ಪುಟಗಳ ಕೃತಿ ಮೊದಲು ಪ್ರಕಟವಾದದ್ದು 1951ರಲ್ಲಿ. 1952ರಲ್ಲಿ ತ.ವೆಂ.ಸ್ಮಾರಕ ಗ್ರಂಥಮಾಲೆಯಿಂದ ಪ್ರಕಟವಾಯಿತು. ‘ತಮ್ಮ ವಿದ್ಯಾಗುರು ಶ್ರೀ ಟಿ.ಎಸ್.ವೆಂಕಣಯ್ಯನವರನ್ನು ಸ್ಮರಿಸಿ ಆ ಸ್ಮಾರಕ ಮಾಲೆಯಲ್ಲಿ ಇಂತಹ ಉತ್ತಮ ಪುಸ್ತಕ ಪ್ರಕಟಿಸಿರುವುದು ಲೇಖಕರ ಗುರುಭಕ್ತಿಗೆ ಸಾಕ್ಷಿ’ ಎಂಬುದಾಗಿ ಅಂದಿನ ‘ತಾಯಿನಾಡು’ ಪತ್ರಿಕೆ ಪ್ರಕಟಿಸಿತು. ‘ಇಂಥ ಅಮೂಲ್ಯ ಕಾದಂಬರಿಯನ್ನು ಶಾಲೆಗಳ ಗ್ರಂಥಭಂಡಾರಗಳಿಗೆ ಸ್ವೀಕರಿಸಬೇಕು’ ಎಂಬ ಸರಕಾರದ ಒಕ್ಕಣೆಯೂ ಈ ಗ್ರಂಥದ ಬೆನ್ನುಡಿಯಲ್ಲಿದೆ.

ಮೈಸೂರಿನ ಜಯನಗರದಲ್ಲಿನ ತಾವು ವಾಸವಿದ್ದ ಮನೆಗೆ ‘ಬನದ ಸೆರಗು’ ಎಂದೇ ನಾಮಕರಣ ಮಾಡಿದ್ದರು. 1974ರ ವೇಳೆಗಾಗಲೇ ‘ಬನದ ಸೆರಗು’ ನಾಲ್ಕು ಮುದ್ರಣಗಳನ್ನು ಕಂಡಿತ್ತು. 1974-75ರ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ಪಿಯುಸಿ ತರಗತಿಗೆ ಪಠ್ಯಪುಸ್ತಕವೂ ಆಗಿತ್ತು. ಕೃತಿಯ ಆರಂಭದಲ್ಲಿ ಅದರ ಆಶಯ ಮತ್ತು ಉದ್ದೇಶ ವನ್ನು ವ್ಯಕ್ತಪಡಿಸಿರುವುದು ಹೀಗೆ: ‘‘ಈ ಕೃತಿ ರಚನೆಯಲ್ಲಿ ಕಾಡಿನಲ್ಲಿ ವಾಸಿಸುವ ಸೋಲಿಗರ ಜೀವನ ಚಿತ್ರವನ್ನು ರೈತವರ್ಗದ ಜನರ ಸೌಜನ್ಯತೆಯನ್ನು ನಾನು ಕಂಡಂತೆ ಚಿತ್ರಿಸಿದ್ದೇನೆ. ನಿಸರ್ಗದೊಡನೆ ಹೋರಾಡುವ ಅವರ ಬದುಕು ಒಂದು ಕಲಾಮಯ, ಅಲ್ಲಿ ವಾಸಿಸುವ ಗಂಡಿಗೂ ಹೆಣ್ಣಿಗೂ ಗಂಡು ಗುಂಡಿಗೆ’’. ಈ ಕೃತಿಯನ್ನು ಕುರಿತು ಪ್ರೊ. ಡಿ.ಎಲ್.ನರಸಿಂಹಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಹೀಗೆ ವ್ಯಕ್ತಪಡಿಸಿದ್ದಾರೆ:

 ‘‘ನಿಮ್ಮ ಕಥನ ಶೈಲಿ ತುಂಬ ಮೆಚ್ಚಿಗೆಯಾಗಿದೆ. ಭಾಷೆಯನ್ನು ಬಳಸುವು ದರಲ್ಲಿ ಒಂದು ಹೊಸತನವಿದೆ. ಸಮಾಜದ ಆಡುಮಾತಿನ ನುಡಿಗಟ್ಟುಗಳು ನಿಮ್ಮ ಶೈಲಿಗೆ ಹೊಸ ಮೆರುಗನ್ನು ಕೊಟ್ಟಿವೆ. ನೀವು ಗ್ರಾಂಥಿಕ ಶೈಲಿಯನ್ನು ಹಿಂಬದಿಗಿಟ್ಟು ಕೊಂಡು ನಿಮ್ಮ ಮಾತಿನ ದೇಸೀ ನುಡಿಗಟ್ಟುಗಳನ್ನು ಮುಂದಕ್ಕೆ ತಂದು ಬರೆಯುವ ಪ್ರಯತ್ನವನ್ನು ಮಾಡಿದ್ದೀರಿ. ಇದು ನನಗೆ ಪೂರ್ಣ ಹರ್ಷದಾಯಕ, ನಿಮ್ಮ ಮಾತಿಗೆ ನೀವು ಗ್ರಂಥಸ್ಥತೆಯನ್ನು ಉಂಟುಮಾಡುವುದರಿಂದ ಕನ್ನಡದ ಕಸುವು ಹೆಚ್ಚುತ್ತದೆ, ವೈವಿಧ್ಯತೆ ಬರುತ್ತದೆ, ಭಾಷೆ ಬೆಳೆಯುತ್ತದೆ. ಸಂಪಳ, ಮಾಮರಕು, ಬೆಂಟು, ಹುನ್ನಾರಿ, ಅಗಲು, ಭಾವಣಿಸು- ಈ ಮುಂತಾದ ಶಬ್ದ ಗಳು ನಿಮ್ಮ ಮಾತಿನಲ್ಲಿರಬೇಕು, ಎಷ್ಟು ಸೊಗಸಾದ ಶಬ್ದಗಳು. ಅವುಗಳನ್ನು ಮಾತಿನ ಮಟ್ಟದಿಂದ ಗ್ರಂಥಸ್ಥ ಗದ್ದುಗೆಗೆ ಏರಿಸಿರುವುದು ನಿಮ್ಮ ವೈಶಿಷ್ಟ್ಯ. Jim Corry Belt, Anderson –. ಮುಂತಾದವರು ಬರೆದಿರುವ ಇಂಗ್ಲಿಷಿನಲ್ಲಿರು ವ ಪುಸ್ತಕಗಳನ್ನು ಓದಬೇಕು. ನಿಮ್ಮ ಬರವಣಿಗೆ ನನಗೆ ಅವರ ಬರವಣಿಗೆಯನ್ನು ನೆನಪಿಗೆ ತರುತ್ತದೆ, ಅಷ್ಟು ಚೆನ್ನಾಗಿದೆ ನಿಮ್ಮ ಪುಸ್ತಕ’’. ಬನದ ಸೆರಗು ಕೃತಿಯ ಮುಂದುವರಿದ ರೂಪವೇ ‘ನಿಸರ್ಗದ ಮಡಿಲು’. ಜೀವ ಸಂಕುಲವನ್ನು ನಾಶಮಾಡುವುದಕ್ಕಿಂತ ಅವುಗಳ ಬದುಕನ್ನ ತಿಳಿಯುವುದರಲ್ಲಿ, ಅವುಗಳನ್ನು ದಯೆ ಯಿಂದ ಕಾಣುವುದರಲ್ಲಿ ಆನಂದವಿದೆ ಎಂಬುದು ಕೃತಿಯ ಆಶಯವಾಗಿದೆ.

ಪ್ರವಾಸ ಕಥನವನ್ನು ಬರೆಯುವಾಗ ವೆಂಕಟಯ್ಯ ನವರು ಕ್ರಮಬದ್ಧತೆಯನ್ನು ಮೀರುವುದೇ ಇಲ್ಲ. ಅದರ ಉದ್ದೇಶ, ಪ್ರೇರಣೆ, ಆಶಯಗಳು ಗಮನದಲ್ಲಿರುತ್ತದೆ. ‘ಚಿನ್ನದಗಿರಿ ಯಾತ್ರೆ’ ಕೃತಿಯಲ್ಲಿ ಸಹಜವಾಗಿ ಬಂದು ಹೋಗುವ ಮಾತಿನ ಸರಣಿಯಲ್ಲಿ ತಿರುಪತಿ ಯಾತ್ರೆಯ ವಿವರಗಳು ದಾಖಲಾಗುತ್ತವೆ. ಅಲೋಪತಿಯನ್ನು ಆಯುರ್ವೇದ ದೊಂದಿಗೆ ಹೋಲಿಸುತ್ತ ಪುರಾತನ ಪ್ರಸಿದ್ಧಿಯಾದ ಭಾರತದ ವೈದ್ಯಕೀಯ ಪದ್ಧತಿಯ ಮಹತ್ವವನ್ನು ಕುರಿತ ಚರ್ಚೆ ಮುಂದುವರಿಯುತ್ತದೆ. ಪಾಶ್ಚಿಮಾತ್ಯ ವೈದ್ಯಕೀಯ ಪದ್ಧತಿಗೆ ಮಾರು ಹೋಗುತ್ತಿರುವ ಜನರ ಬಗೆಗೆ ಆಶ್ಚರ್ಯ ವ್ಯಕ್ತವಾಗುತ್ತದೆ. ಹೀಗೆ ಒಂದು ಪರಿಸರದ ಶಿಕ್ಷಣವನ್ನು ಇನ್ನೊಂದು ಪರಿಸರದ ಶಿಕ್ಷಣದೊಂದಿಗೆ ಹೋಲಿಸುವಾಗ ಎಷ್ಟೋ ಸಮಕಾಲೀನ ಸಂಗತಿಗಳು ಹಾದುಹೋಗುತ್ತವೆ:

‘‘ಮೈಸೂರು ಸಂಸ್ಥಾನದಲ್ಲಿ ಗೋಪಾಲಸ್ವಾಮಿ ಅಯ್ಯರ್ ರವರು 1922ನೇ ಇಸವಿಯಲ್ಲೇ ಹರಿಜನರ ಸೇವೆಗೆ ತಮ್ಮ ಬಾಳನ್ನು ಮೀಸಲಾಗಿಟ್ಟರು. ತಮ್ಮ ಜ್ಞಾನಜ್ಯೋತಿಯನ್ನು ಹರಿಜನರ ಗುಡಿಸಲುಗಳಿಗೆ ಹೊತ್ತುತಂದರು. ಅಜ್ಞಾನದಿಂದ ಮುಸುಕಿದ್ದ ಅವರ ಕಣ್ಣುಗಳನ್ನು ತೆರೆದು ಜ್ಞಾನಬೀರಿದ ಆ ಮಹಾನುಭಾವ ಮಹಾತ್ಮಾ ಗಾಂಧೀಜಿಯವರು ಇಡೀ ಭಾರತದಲ್ಲೆಲ್ಲ ಈ ಕಾರ್ಯಕ್ಕೆ ಕೈಹಾಕಿದರು. ಸೇವಾಬುದ್ಧಿ, ಸಂಸ್ಕಾರದ ವಾಸನೆ ಹೃದಯಪರಿವರ್ತನೆಯಾಗಬೇಕು. ಮನಸ್ಸು ಶುದ್ಧಿಯಾಗಬೇಕು, ಆತ್ಮಶಕ್ತಿ ಬಲವಾಗಬೇಕು. ಸ್ವಾರ್ಥತೆಯ ಕತ್ತಲನ್ನು ಜ್ಞಾನಜ್ಯೋತಿಯಿಂದ ನಾಶಮಾಡಬೇಕು. ಆಗ ಮನುಷ್ಯ ನಿಷ್ಕಳಂಕ ಪ್ರೇಮಮಯ ಸೇವೆಗೆ ಕೈಹಾಕಲು ಅರ್ಹನಾಗುತ್ತಾನೆ’’. ಹೀಗೆ ಮುಂದುವರಿಯುವ ಅವರ ಬರವಣಿಗೆಯಲ್ಲಿ ಎಷ್ಟೋ ಸಂಗತಿಗಳು ನಮ್ಮ ಪರಂಪರೆಯನ್ನು ನೆನಪು ಮಾಡಿಕೊಡುತ್ತವೆ: ‘‘ಕೋಣಗಳು ಕೆಸರುಗದ್ದೆಯಲ್ಲಿ ಎಷ್ಟು ಚುರುಕಿನಿಂದ ನೇಗಿಲನ್ನು ಎಳೆದಾವು? ಇಂತಹ ವ್ಯವಸಾಯ ಕ್ರಮದಲ್ಲಿ ಎಷ್ಟು ಹೆಚ್ಚು ಆಹಾರ ಬೆಳೆಯಬಹುದು? ಇಂತಹ ರೈತರೇ ಇದ್ದರೆ ಎ್ಟಟಡಿ ಞಟ್ಟಛಿ ್ಛಟಟ ಗೆ ಬದಲು ಘೆಟ ಞಟ್ಟಛಿ ್ಛಟಟ ಆಗುತ್ತದೆ. ಸಾವಿರಾರು ಎಕರೆ ಭೂಮಿ ಬೆಳೆ ಇಲ್ಲದೆ ಹಾಸಿತ್ತು. ಸರಕಾರದವರೇ ಯಂತ್ರದಿಂದ ಬಾವಿಗಳನ್ನು ತೆಗೆಸಿ ಅಲ್ಲಲ್ಲಿ ವ್ಯವಸಾಯ ಕೇಂದ್ರಗಳನ್ನು ಮಾಡಬಹುದಾಗಿತ್ತು ಇದರಿಂದ ಬಡವರಿಗೆ ಕೂಲಿಯೂ ದೊರೆಯುತ್ತಿತ್ತು, ಆಹಾರವನ್ನು ದೇಶಕ್ಕೆ ಒದಗಿಸಬಹುದಿತ್ತು. ತಾಳೆಗರಿಗಳಿಂದ ಕಟ್ಟಿದ್ದ ಬುಗುರಿ ಆಕಾರದ ಹರಿಜನರ ಗುಡಿಸಲುಗಳೇ ಆಗಾಗ್ಗೆ ಕಣ್ಣಿಗೆ ಬೀಳುತ್ತಿದ್ದವು’’. ವೆಂಕಟಯ್ಯನವರು ಕಾಲ್ಪನಿಕ ಪ್ರಪಂಚದಲ್ಲಿ ವಿಹರಿಸುವವರಲ್ಲವೆಂಬುದಕ್ಕೆ ಈ ಸಾಲುಗಳು ಸಾಕ್ಷಿಯಾಗಿವೆ.

      ಜಿ.ವೆಂಕಟಯ್ಯ ಬರೆದ ಕೃತಿಗಳು

ಇಷ್ಟಾದರೂ ವೆಂಕಟಯ್ಯನವರನ್ನು ಕನ್ನಡ ವಿಮರ್ಶಾಲೋಕ ಅಷ್ಟಾಗಿ ಗಮನಿಸಲಿಲ್ಲ. ಆದರೂ ಬರಗೂರು ರಾಮಚಂದ್ರಪ್ಪನವರ ಅಧ್ಯಕ್ಷಾವಧಿಯಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿ ‘ಮರೆಯಲಾಗದ ಬರಹಗಾರರು’ ಮಾಲೆಯ ದೆಸೆಯಿಂದ ಇಂತಹ ಅಪೂರ್ವ ಲೇಖಕರು ಮತ್ತೆ ಅವಗಾಹನೆಗೆ ಬರುವಂತಾಯಿತು. ಹೊಸತಲೆಮಾರಿನವರಿಗೆ ಇಂತಹ ಹಿರಿಯರ ಬದುಕು ಬರಹಗಳು ಆದರ್ಶವಾಗಬೇಕಾಗಿದೆ. ಆದ್ದರಿಂದ ಅಗತ್ಯವಾಗಿ ಅವರ ಕೃತಿಗಳು ಮರುಮುದ್ರಣಗೊಂಡು ಓದುಗರಿಗೆ ದೊರಕುವಂತಾಗಬೇಕು.

ಚಿತ್ರಗಳು: ವೀರೇಶ್ ನೆಗರ್ಲೆ

Writer - ಡಾ. ಜಿ.ಆರ್.ತಿಪ್ಪೇಸ್ವಾಮಿ

contributor

Editor - ಡಾ. ಜಿ.ಆರ್.ತಿಪ್ಪೇಸ್ವಾಮಿ

contributor

Similar News