ಜನಾರ್ದನ ಪೂಜಾರಿ ವಿರುದ್ಧ ಮಧು ಬಂಗಾರಪ್ಪ ವಾಗ್ದಾಳಿ

Update: 2018-01-28 08:57 GMT

ಶಿವಮೊಗ್ಗ, ಜ.28: ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಅವರ ಆತ್ಮಕಥೆ 'ಸಾಲಮೇಳದ ಸಂಗ್ರಾಮ' ಪುಸ್ತಕದ ವಿರುದ್ಧ ಮಾಜಿ ಮುಖ್ಯಮಂತ್ರಿ ದಿ.ಬಂಗಾರಪ್ಪರ ಪುತ್ರ ಮಧು ಬಂಗಾರಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಇಂದಿಲ್ಲಿ ಸುದ್ದಿಗೋಷ್ಠಿ ನಡೆಸಿದ ಮಧು ಬಂಗಾರಪ್ಪ ಅವರು ಜನಾರ್ದನ ಪೂಜಾರಿ ತನ್ನ ತಂದೆ ಎಸ್.ಬಂಗಾರಪ್ಪರ ತೇಜೋವಧೆ ಮಾಡಿದ್ದಾರೆಂದು ಆರೋಪಿಸಿದರು.
ಜನಾರ್ದನ ಪೂಜಾರಿ, ತಮ್ಮ ಪುಸ್ತಕದಲ್ಲಿ ಪ್ರಸ್ತಾಪಿಸಿರುವ ಕೆಲವಾರು ಅಂಶಗಳು ಸುಳ್ಳುಗಳ ಕಂತೆಗಳಾಗಿವೆ. ಆಟೋ ಬಯೋಗ್ರಫಿ ಎಂಬುದು, ಮತ್ತೊಬ್ಬರಿಗೆ ಮಾದರಿಯಾಗಿರಬೇಕೇ ವಿನಃ, ಮತ್ತೊಬ್ಬರ ತೇಜೋವಧೆ ಮಾಡುವಂತಾಗಿರಬಾರದು. ಈ ಬಗ್ಗೆ ಕನಿಷ್ಠ ಜ್ಞಾನ ಕೂಡ ಇಲ್ಲದ ಪೂಜಾರಿಯವರಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗಿದೆ. ಅದರಲ್ಲೂ, ಇಂದಿರಾ ಗಾಂಧಿಯವರನ್ನು ಎಸ್.ಬಂಗಾರಪ್ಪ ಹೊಡೆಯು ಮುಂದಾಗಿದ್ದರು ಎಂಬುದು ಸುಳ್ಳಿನಿಂದ ಕೂಡಿದ್ದಾಗಿದ್ದು, ಇದರಿಂದ ಪೂಜಾರಿಯವರ ಮನಸ್ಥಿತಿ ಹೇಗಿದೆ ಎಂದು ತಿಳಿಯುತ್ತಿದೆ. ಜನಾರ್ದನ ಪೂಜಾರಿಗೆ, ವಯಸ್ಸಾಗಿದ್ದು, ಅರಳು-ಮರಳು ಇರಬೇಕು ಎಂದು ಟೀಕಿಸಿದರು.

ಜನಾರ್ದನ ಪೂಜಾರಿಗೆ ಬಂಗಾರಪ್ಪರನ್ನು ಭ್ರಷ್ಟಾಚಾರಿ ಎಂದು ಕರೆಯುವ ಹಕ್ಕು ಕೊಟ್ಟಿದ್ದು ಯಾರು ಎಂದು ಪ್ರಶ್ನಿಸಿದ ಮಧು, ಬಂಗಾರಪ್ಪ, ತನ್ನ ತಂದೆ  ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಯುತ್ತಿದ್ದಂತೆಯೇ ಕಾಂಗ್ರೆಸ್ ನವರೇ ಅವರ ವಿರುದ್ಧ ಮೂರು ಕೇಸ್ ಗಳನ್ನು ಹಾಕಿದರು. ಆದರೆ ಆ ಮೂರು ಪ್ರಕರಣಗಳು ನ್ಯಾಯಾಲಯದಲ್ಲಿ ಖುಲಾಸೆಗೊಂಡಿವೆ. ಆದರೂ ಅವರನ್ನು ಭ್ರಷ್ಟಾಚಾರಿ ಎಂದು ಪೂಜಾರಿ ಹೇಳಿರುವುದು, ನ್ಯಾಯಾಂಗ ನಿಂದನೆಯಾಗಿದೆ. ಜನಾರ್ದನ ಪೂಜಾರಿ ವಿರುದ್ಧ ಶೀಘ್ರದಲ್ಲೇ ಪ್ರಕರಣ ದಾಖಲಿಸಲಾಗುವುದೆಂದು ತಿಳಿಸಿದರು. 

ಬಂಗಾರಪ್ಪ ಓರ್ವ ವಿಭಿನ್ನ ರಾಜಕಾರಣಿಯಾಗಿದ್ದರು. ಹಲ್ಲೆ ನಡೆಸಲು ಮುಂದಾಗಿದ್ದರೆ ಬಂಗಾರಪ್ಪರನ್ನು ರಾಜೀವ್ ಗಾಂಧಿ ಮುಖ್ಯಮಂತ್ರಿ ಮಾಡುತ್ತಿರಲಿಲ್ಲ. ಪೂಜಾರಿರವರು ತಮ್ನ ಪುಸ್ತಕದ ಪ್ರಚಾರಕ್ಕೆ ಪ್ರಮುಖ ರಾಜಕಾರಣಿಗಳನ್ನು ಹೀಯಾಳಿಸಿದ್ದಾರೆ ಎಂದ ಮಧು ಬಂಗಾರಪ್ಪ, ಕರಾವಳಿ ಭಾಗದಲ್ಲಿ ಉಂಟಾಗಿರುವ ಕೋಮುಗಲಭೆಗಳನ್ನು ಹತ್ತಿಕ್ಕುವಂತಹ ಯಾವುದೇ ಪ್ರಯತ್ನವನ್ನು ಪೂಜಾರಿ ಮಾಡಿಲ್ಲ. ಅವರು ಬರೆದಿರುವುದು ಅವರ ಆತ್ಮ ಚರಿತ್ರೆಯಲ್ಲ. ಅದು ಅವರ ಪಾಪದ ಕೊಡ. ಪಾಪದ ಕೊಡದ ಪುಸ್ತಕವನ್ನು ಅವರ ತಲೆ ಮೇಲೆ ಹೂತ್ತು ತಿರುಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News