ಬೆಚ್ಚಿ ಬೀಳಿಸುವ ಸಂಘಪರಿವಾರದ ಮೋಸಗಳು!

Update: 2018-01-28 18:45 GMT

‘‘ಸಂಚುಗಾರ ಸಂಘಪರಿವಾರ-ಸಂಘಪರಿವಾರದ ಸಂಚಿನ ಇತಿಹಾಸ’ ತಮಿಳು ಲೇಖಕ ವಿಡುದಲೈ ರಾಜೇಂದ್ರನ್ ಅವರು ಬರೆದಿರುವ ಕೃತಿ. ಕಲೈ ಸೆಲ್ವಿ ಅಗಸ್ತ್ಯ ಈ ಕೃತಿಯನ್ನು ಕನ್ನಡಕ್ಕಿಳಿಸಿದ್ದಾರೆ. ಸಂಘಪರಿವಾರವೆನ್ನುವುದು ತಕ್ಷಣದ ಅಗತ್ಯಕ್ಕಾಗಿ ನಿನ್ನೆ ಮೊನ್ನೆ ರೂಪುಗೊಂಡ ಸಂಸ್ಥೆಯಲ್ಲ. ಅದಕ್ಕೊಂದು ಸುದೀರ್ಘ ಇತಿಹಾಸವಿದೆ ಮತ್ತು ಆ ಇತಿಹಾಸವನ್ನು ನಾವು ಅರಿತು ಕೊಳ್ಳದೇ ವರ್ತಮಾನದಲ್ಲಿ ಅದು ಒಡ್ಡುತ್ತಿರುವ ಸವಾಲನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಅದನ್ನು ಎದುರಿಸುವುದು ಕಷ್ಟ. ಸಂಘಪರಿವಾರ ಎನ್ನುವುದು ಒಂದು ಸಂಚು. ಅದು ಮುಸ್ಲಿಮ್, ಕ್ರೈಸ್ತರ ವಿರೋಧಿಯಂತೆ ಮೇಲುನೋಟಕ್ಕೆ ನಟಿಸುತ್ತದೆಯಾದರೂ, ಸ್ವಾತಂತ್ರೋತ್ತರ ಭಾರತದ ಸಂದರ್ಭದಲ್ಲಿ ವೈದಿಕ ಶಾಹಿ ಎದುರಿಸಬಹುದಾದ ಸವಾಲುಗಳನ್ನು ಮೊದಲೇ ಊಹಿಸಿ ಸ್ವಾತಂತ್ರಪೂರ್ವದಲ್ಲಿ ಮಾಡಿಕೊಂಡ ಸಿದ್ಧತೆಯಾಗಿದೆ. ಸುಳ್ಳು, ಮೋಸ, ಭ್ರಮೆಗಳ ತಳಹದಿಯ ಮೇಲೆ ಸಂಘಪರಿವಾರ ತನ್ನ ಮಹಲನ್ನು ಕಟ್ಟಿಕೊಂಡಿದೆ. ಈ ಕೃತಿಯಲ್ಲಿ ಸಂಘಪರಿವಾರದ ಇತಿಹಾಸ ಮತ್ತು ಅದು ಭಾರತದಲ್ಲಿ ಹಂತಹಂತವಾಗಿ ಹೇಗೆ ಬೆಳೆಯಿತು ಎನ್ನುವುದನ್ನು ವಿಶ್ಲೇಷಿಸಲಾಗಿದೆ.
ಸಂಘಪರಿವಾರದ ಹಿನ್ನೆಲೆ, ಇತಿಹಾಸ, ಸ್ವಾತಂತ್ರ ಹೋರಾಟದ ಕಾಲದಿಂದ ಹಿಡಿದು ಈವರೆಗೆ ಅದು ನಡೆಸಿದ ರಹಸ್ಯ ಕಾರ್ಯಾಚರಣೆಗಳು ಮತ್ತು ರಾಜಕೀಯ ಕುಟಿಲತೆಗಳ ಬಗ್ಗೆ ಆಧಾರಸಹಿತವಾಗಿ ಈ ಕೃತಿ ತೆರೆದಿಡುತ್ತದೆ. ದೇಶದಲ್ಲೀಗ ಅತ್ಯಂತ ಬಲವಾಗಿ ಬೇರು ಬಿಡುತ್ತಿರುವ ಕೋಮುವಾದವು ರಾಷ್ಟ್ರವಾದದ ಮುಸುಕು ಧರಿಸಿ ಹೇಗೆ ವ್ಯವಹರಿಸುತ್ತಿದೆ ಎನ್ನುವುದನ್ನು ಸವಿವರವಾಗಿ ಕೃತಿಯಲ್ಲಿ ಮಂಡಿಸಲಾಗಿದೆ. ಮೂಲ ಲೇಖಕರು ಹೇಳುವಂತೆ ‘‘ಚುನಾವಣಾ ರಾಜಕೀಯವನ್ನು ಒಂದು ಅವಕಾಶವನ್ನಾಗಿಸಿಕೊಂಡು ತಮಿಳುನಾಡಿನಲ್ಲಿ ಬಿಜೆಪಿ ಬೇರೂರಿದ್ದರ ಜೊತೆಗೆ ಸಂಘಪರಿವಾರವನ್ನೂ ಬಿಜೆಪಿ ಬೆಳೆಸುತ್ತಿದೆ. ಇಂತಹ ಸನ್ನಿವೇಶದಲ್ಲಿ ಸಂಘಪರಿವಾರದ ಚರಿತ್ರೆಯನ್ನು ಯುವ ಸಮುದಾಯಕ್ಕೆ ತಿಳಿಸಿಕೊಡುವ ಉದ್ದೇಶದಿಂದ ‘ಒಟ್ರುಮೈ’ ಪಾಕ್ಷಿಕದಲ್ಲಿ ಬರೆದ ಅಂಕಣಗಳ ಸಂಗ್ರಹ ಇದು’’. ಇಲ್ಲಿ ಒಟ್ಟು 16 ಲೇಖನಗಳಿವೆ. ದಕ್ಷಿಣ ಭಾರತದಲ್ಲಿ ಸಂಘಪರಿವಾರದ ಇತಿಹಾಸವನ್ನು ಹೇಳುವ ‘ದ್ರಾವಿಡ ನಾಡಿನಲ್ಲಿ ಆರೆಸ್ಸೆಸ್ ಕರಿನೆರಳು’ ಲೇಖನದಿಂದ ಹಿಡಿದು ಗೋಡ್ಸೆ ಆರೆಸ್ಸೆಸ್ ಸದಸ್ಯನೇ ಎನ್ನುವುದನ್ನು ಚರ್ಚಿಸುವವರೆಗೆ ಸಂಘಪರಿವಾರ ಮೇಲ್ಮೈ ಮತ್ತು ಒಳಮೈಯನ್ನು ಮುಟ್ಟುವ ಮಹತ್ವದ ಲೇಖನಗಳಿವೆ. ಹಿಂದೂರಾಷ್ಟ್ರ ಮತ್ತು ಹಿಂದೂ ಮಹಾಸಭಾಗಿರುವ ಸಂಬಂಧ, ತಳಸಮುದಾಯವನ್ನು ಬೇರೆ ಬೇರೆ ಮುಖವಾಡಗಳಲ್ಲಿ ವಂಚಿಸಿದ ಇತಿಹಾಸವನ್ನು ಹೇಳುವ ರಾಜಾಜಿ ಮತ್ತು ಮೂಕಾಜಿ, ಸಂಘಪರಿವಾರ ಪ್ರತಿಪಾದಿಸುವ ರಾಮಾಯಣ ಮತ್ತು ಈ ನೆಲದಲ್ಲಿರುವ ವೈವಿಧ್ಯ ರಾಮಾಯಣದ ಬಗ್ಗೆ, ಆಯೋಧ್ಯೆಯಲ್ಲಿ ಸಂಘಪರಿವಾರ ಮಾಡಿದ ಮೋಸ, ಶಿವಸೇನೆಯ ಹುಟ್ಟು ಮತ್ತು ಬೆಳವಣಿಗೆ, ಯಹೂದ್ಯರು ಮತ್ತು ಬ್ರಾಹ್ಮಣರ ನಡುವೆ ಇರುವ ಸಾಮ್ಯತೆ, ಶಂಕರಾಚಾರ್ಯರ ಒಳ ಮುಖ ಹೀಗೆ ತಳಸ್ತರದ ಜನರು ಬೆಚ್ಚಿ ಬೀಳುವಂತಹ ಸಂಘಪರಿವಾರದ ನಿಜವಾದ ಮುಖವನ್ನು ಇಲ್ಲಿ ತೆರೆದಿಡಲಾಗಿದೆ.
300 ಪುಟಗಳ ಈ ಕೃತಿಯ ಮುಖಬೆಲೆ 300 ರೂಪಾಯಿ. ಸಿರಿವರ ಪ್ರಕಾಶನ, ಬೆಂಗೂರು ಈ ಕೃತಿಯನ್ನು ಹೊರತಂದಿದೆ.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News