ಹನೂರು: ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ

Update: 2018-01-29 12:40 GMT

ಹನೂರು,ಜ.29: ರಾಜ್ಯದ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳವಾದ ಮಲೆಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಾಠದ ಆವರಣದಲ್ಲಿ ಮಹದೇವ ಸ್ವಾಮೀಜಿ ಅವರ 24ನೇ ವರ್ಷದ ಸಂಸ್ಮರಣೆ ಅಂಗವಾಗಿ ಸೋಮವಾರ ಅಯೋಜಿಸಿದ್ದ ಉಚಿತ ಸಾಮೂಹಿಕ ವಿವಾಹದಲ್ಲಿ 44 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಸಾಮೂಹಿಕ ಮಹೋತ್ಸವದ ಹಿನ್ನಲೆ ಪ್ರಾತಃಕಾಲ 5 ಗಂಟೆಗೆ ಸಾಲೂರು ಮಠದಲ್ಲಿ ಕನಕಪುರ ಶ್ರೀ ದೇಗುಲ ಮಠಾಧ್ಯಕ್ಷ ಮುಮ್ಮಡಿ ನಿರ್ವಾಣ ಮಹಾಸ್ವಾಮೀಜಿ ಅವರಿಗೆ ದಿವ್ಯ ಪಾದಪೂಜೆಯನ್ನು ನೆರವೇರಿಸಲಾಯಿತಲ್ಲದೇ, ಬೆಳಗ್ಗೆ 6ಕ್ಕೆ ಷಟ್‍ಸ್ಥಳ ಧ್ವಜರೋಹಣವನ್ನು ಸೋಮಳ್ಳಿ ಶಿಲಾಮಠಾಧ್ಯಕ್ಷ ಸಿದ್ದಮಲ್ಲ ಸ್ವಾಮೀಜಿ ಅವರು ನೇರವೇರಿಸಿದರು. ಬಳಿಕ ಬೆಳಗ್ಗೆ 9.45 ರಿಂದ 10.15 ರವರೆಗೆ ಸಲ್ಲುವ ಮೀನಾ ಶುಭ ಲಗ್ನದಲ್ಲಿ ಸಾಲೂರು ಬೃಹನ್ಮಠಾಧ್ಯಕ್ಷ ಗುರುಸ್ವಾಮೀಜಿ ಅವರ ಅಧ್ಯಕ್ಷತೆಯಲ್ಲಿ ಆಶೀರ್ವಚನ ನೀಡುವುದರ ಮೂಲಕ ವಿಧಿ ವಿಧಾನಗಳೊಂದಿಗೆ ಸಾಮೂಹಿಕ ವಿವಾಹವು ನಡೆಯಿತು. ಸಾಮೂಹಿಕ ವಿವಾಹದಲ್ಲಿ ವಧುವಿಗೆ ಚಿನ್ನದ ತಾಳಿ, ಕಾಲ್ಚೈನ್ ಕಾಲುಂಗುರ, ಸೀರೆ, ರವಿಕೆ ಮತ್ತು ವರನಿಗೆ ಪಂಚೆ, ಷರ್ಟ್, ಟವಲ್ ನೀಡಲಾಗಿತ್ತು. ಮಠದ ವತಿಯಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು. 

ಧಾರ್ಮಿಕ ಸಭೆ: ಸಾಮೂಹಿಕ ವಿವಾಹದ ಬಳಿಕ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಮುಮ್ಮಡಿ ನಿರ್ವಾಣ ಮಹಾಸ್ವಾಮೀಜಿ ಮಾತನಾಡಿ, ಸಾಲೂರು ಮಠಕ್ಕೆ 600 ವರ್ಷಗಳ ಇತಿಹಾಸವಿದ್ದು, ಇಲ್ಲಿ ಹಲವು ಮಠಾಧೀಶರು ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ. ಮಠದ ವತಿಯಿಂದ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸೇವೆಯನ್ನು ನೀಡುತ್ತಾ ಬಂದಿದೆ. ಇದರಿಂದ ಮಠಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯ ದಿನೇ ದಿನೇ ಹೆಚ್ಚುತ್ತಿದೆ. ಅಲ್ಲದೇ ಹಲವು ವರ್ಷಗಳಿಂದ ಮಹದೇಸ್ವಾಮೀಜಿ ಅವರ ಸಂಸ್ಮರಣೆಯ ಹಿನ್ನಲೆಯಲ್ಲಿ ಉಚಿತ ಸಾಮೂಹಿಕ ವಿವಾಹವನ್ನು ಆಯೋಜಿಸಲಾಗುತ್ತಿದೆ. ಇಲ್ಲಿ ವಿವಾಹವಾದರು ಇಲ್ಲಿನ ಮಹಿಮೆಯಿಂದ ಶಾಂತಿ, ಸೌಹಾರ್ದತೆ ಹಾಗೂ ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದಾರೆ. ಆಗಾಗಿ ಪ್ರತಿಯೊಬ್ಬರೂ ಪರಸ್ಪರ ಹೊಂದಾಣಿಕೆಯಿಂದ ಜೀವನವನ್ನು ನಡೆಸಬೇಕು ಎಂದು ತಿಳಿಸಿದರು. 

ಬಳಿಕ ನವ ವಧುಗಳಿಗೆ ಬೃಹನ್ಮಠಾಧ್ಯಕ್ಷ ಗುರುಸ್ವಾಮಿಜೀ ಶುಭ ಹಾರೈಸಿ ಮಾತನಾಡಿ, ಮಹದೇಶ್ವರಬೆಟ್ಟದ ಬೃಹನ್ಮಠದಲ್ಲಿ ಹಲವಾರು ವರ್ಷಗಳಿಂದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದರಿಂದ ಬಡವರಿಗೆ ಹೆಚ್ಚಿನ ಅನುಕೂಲವಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಜನರು ವಿಲಾಸಿ ಬದುಕಿನಿಂದ ಹೆಚ್ಚು ಹಣವನ್ನು ಖರ್ಚು ಮಾಡಿಕೊಂಡು ವಿವಾಹ ಮಾಡಿಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಆದುದರಿಂದ ಪ್ರತಿಯೊಬ್ಬರೂ ಸರಳ ವಿವಾಹವಾಗುವುದರ ಮೂಲಕ ಬದುಕನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು. ಹೊಸ ಬಾಳಿಗೆ ಕಾಲಿಟ್ಟಿರುವ ವಧುವವರು ಅನ್ಯೋನ್ಯವಾಗಿ ಜೀವನ ನಡೆಸುವುದರ ಮೂಲಕ ಬದುಕಿನಲ್ಲಿ ನೆಮ್ಮದಿ ಕಾಣಬೇಕು ಎಂದು ಆಶಿಸಿದರು.

ಇದೇ ವೇಳೆ ಕನಕಪುರ ಶ್ರೀದೇಗುಲ ಮಠಾಧ್ಯಕ್ಷ ಮುಮ್ಮಡಿ ನಿರ್ವಾಣ ಮಹಾಸ್ವಾಮೀಜಿ ಹಾಗೂ ಸಾಲೂರು ಬೃಹನ್ಮಾಠಾಧ್ಯಕ್ಷ ಗುರುಸ್ವಾಮಿಜೀ ಅವರಿಗೆ ಗುರುವಂದನಾ ಕಾರ್ಯಕ್ರಮ ನೆರವೇರಿಸಲಾಯಿತು. ಬಳಿಕ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ನಡೆಯಿತು. 

ಈ ಸಂದರ್ಭದಲ್ಲಿ ಮಠದ ಸಾಲು ಗೋಪುರ, 2ನೇ ಪ್ರವೇಶ ದ್ವಾರ ಹಾಗೂ ಧ್ಯಾನ ಮಂದಿರ ಹಾಗೂ ಶಾಲಾ ಕೊಠಡಿಯನ್ನು ಸ್ವಾಮೀಜಿಗಳು ಉದ್ಘಾಟಿಸಿದರು. 

ಸಾಲೂರು ಬೃಹನ್ಮಾಠಾಧ್ಯಕ್ಷ ಮಹದೇವಸ್ವಾಮಿಜೀ, ಮೇದಿನ ಮಠದ ಶಿವಲಿಂಗಸ್ವಾಮೀಜಿ, ಕುದೇರು ಮಠದ ಗುರುಶಾಂತಸ್ವಾಮೀಜಿ, ತಾಪಂ ಅಧ್ಯಕ್ಷ ಆರ್. ರಾಜು, ಕೃಷಿ ವಿಜ್ಞಾನಿ ನಿರಂಜನ್‍ಮೂರ್ತಿ, ಸಂಪನ್ಮೂಲ ಶಿಕ್ಷಕ ಶಿವಣ್ಣ ಇಂದ್ವಾಡಿ ಹಾಗೂ ಇನ್ನಿತರರರು ಹಾಜರಿದ್ದರು .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News