ಮೈಸೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಧರಣಿ

Update: 2018-01-29 17:40 GMT

ಮೈಸೂರು,ಜ.29: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯೂ ಸೇರಿದಂತೆ ಇತರ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹೊರಗುತ್ತಿಗೆ ನೌಕರರ ಕುರಿತು ವಿವಿಧ ಮಾಹಿತಿಗಳನ್ನು ಸಂಗ್ರಹಿಸಲು ಎಲ್ಲಾ ಜಿಲ್ಲಾಗಳಲ್ಲಿಯೂ ಸರ್ವೆ ನಡೆಸಬೇಕು ಎಂದು ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘ ಒತ್ತಾಯಿಸಿದೆ.

ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದ ಸದಸ್ಯರು ಸೋಮವಾರ ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಗಾಂಧೀ ವೃತ್ತದ, ಅರಸು ರಸ್ತೆ, ಮೆಟ್ರೋಪೋಲ್ ವೃತ್ತದ ಮೂಲಕ ಜಿಲ್ಲಾಧಿಕಾರಿಗಳ ಕಛೇರಿಯವರೆಗೆ ಮೆರವಣಿಗೆಯ ಮೂಲಕ ತೆರಳಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು. 

ಹಿಂದುಳಿದ ವರ್ಗಗಳ ಮತ್ತು ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೇಲ್ ಗಳಲ್ಲಿ 15ರಿಂದ 20ವರ್ಷ ಸೇವೆ ಸಲ್ಲಿಸಿದವರಿಗೆ ರಾಜ್ಯ ಸರ್ಕಾರ ನಿರುದ್ಯೋಗ ಭಾಗ್ಯ ಕಲ್ಪಿಸಲು ಹೊರಟಿರುವುದು ಖಂಡನೀಯ. ಇಲಾಖೆಯಲ್ಲಿ ಈಗಾಗಲೇ ಸೇವೆ ಸಲ್ಲಿಸುತ್ತಿರುವ ನೌಕರರು 1985ರಿಂದ 2014ರವರೆಗೆ ಇಲಾಖೆಯಲ್ಲಿ ಜಾರಿಯಲ್ಲಿದ್ದ ನಿಯಮಗಳನ್ವಯ ಖಾಯಂಗೆ ಅರ್ಹರಾಗಿರುವುದರಿಂದ ಅವರು ಸಲ್ಲಿಸುತ್ತಿರುವ ಹುದ್ದೆಗಳಲ್ಲೇ ಸೇವೆಯನ್ನು ಖಾಯಂಗೊಳಿಸಬೇಕು. ಸೇವೆಯಲ್ಲಿರುವ ನೌಕರರನ್ನು ಖಾಯಂಗೊಳಿಸದಿದ್ದಲ್ಲಿ ಸಮಾನ ಕೆಲಸಕ್ಕೆ ಸಮಾನವೇತನ ಕಾಯ್ದೆಯಂತೆ ಖಾಯಂ ನೌಕರರಷ್ಟೇ ವೇತನ ಮತ್ತಿತರ ಸೌಕರ್ಯಗಳನ್ನು ನೀಡಿ ನಿವೃತ್ತಿಯ ವಯಸ್ಸಿನವರೆಗೆ ಈಗ ಇರುವ ಹುದ್ದೆಗಳಲ್ಲಿಯೇ ಮುಂದುವರಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾಕಾರ್ಯದರ್ಶಿ ಮುದ್ದುಕೃಷ್ಣ ಎನ್, ಜಿಲ್ಲಾಧ್ಯಕ್ಷ ಯಶೋಧರ ವಿ.ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News