ದೇಶದಲ್ಲಿ ಶೇ.97.75 ಆದಾಯ ತೆರಿಗೆಯಿದ್ದ ಕಾಲದ ಬಗ್ಗೆ ನಿಮಗೆ ಗೊತ್ತೇ?

Update: 2018-01-31 11:27 GMT

ಕೇಂದ್ರ ಸರಕಾರದ 2018-19ನೇ ಸಾಲಿನ ಮುಂಗಡಪತ್ರವನ್ನು ವಿತ್ತಸಚಿವ ಅರುಣ್ ಜೇಟ್ಲಿಯವರು ನಾಳೆ, ಗುರುವಾರ ಸಂಸತ್ತಿನಲ್ಲಿ ಮಂಡಿಸಲಿದ್ದಾರೆ. ಜನರಲ್ಲಿ ಹಲವಾರು ನಿರೀಕ್ಷೆಗಳು ಗರಿಗೆದರಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರುವ ಮುನ್ನ ಹೋದಲ್ಲಿ ಬಂದಲ್ಲಿ ಹೇಳಿಕೊಂಡಿದ್ದ 'ಅಚ್ಛೇ ದಿನ್ ' ನಮ್ಮ ಪಾಲಿಗೆ ಇಂದೂ ಬಂದೇ ಇಲ್ಲ. ಮುಂದಿನ ಸಾರ್ವತ್ರಿಕ ಚುನಾವಣೆಗೆ ಮುನ್ನ ಕೊನೆಯ ಪೂರ್ಣ ಪ್ರಮಾಣದ ಈ ಬಜೆಟ್ ತನ್ನ ಬಹುಪ್ರಚಾರಿತ 'ಅಚ್ಛೇ ದಿನ್'ಗಳನ್ನು ಪ್ರಜೆಗಳಿಗೆ ನೀಡಲು ಮೋದಿಯವರಿಗೆ ಕೊನೆಯ ಅವಕಾಶವಾಗಿದೆ. ಹಲವು ನಿರೀಕ್ಷೆಗಳ ಜೊತೆಗೆ ಜೇಟ್ಲಿಯವರು ಆದಾಯ ತೆರಿಗೆ ಮಿತಿಯನ್ನು ಹೆಚ್ಚಿಸಬಹುದು ಎಂಬ ಆಸೆಯೂ ಜನರಲ್ಲಿ ಮನೆಮಾಡಿದೆ. ಸ್ವತಂತ್ರ ಭಾರತದಲ್ಲಿ ಈ ಆದಾಯ ತೆರಿಗೆ ಬೆಳೆದು ಬಂದ ಸಂಕ್ಷಿಪ್ತ ಇತಿಹಾಸವಿಲ್ಲಿದೆ.

ಬಹುಶಃ ನೀವು ನಂಬಲಿಕ್ಕಿಲ್ಲ. ನಮ್ಮ ದೇಶದಲ್ಲಿ ಗರಿಷ್ಠ ಆದಾಯ ತೆರಿಗೆ ಪ್ರಮಾಣ ಶೇ.97.75ರಷ್ಟು ಮತ್ತು 11 ಆದಾಯ ಹಂತಗಳು ಇದ್ದ ಕಾಲವೂ ಒಂದಿತ್ತು. ಅಲ್ಲಿಂದೀಚೆಗೆ ಆದಾಯ ತೆರಿಗೆ ಗರಿಷ್ಠ ಪ್ರಮಾಣ ಶೇ.30ಕ್ಕೆ ಮತ್ತು ಆದಾಯ ಹಂತಗಳು ಕೇವಲ ಮೂರಕ್ಕೆ ಇಳಿದಿವೆ.

1949-50: ಸ್ವತಂತ್ರ ಭಾರತದಲ್ಲಿ ಈ ವರ್ಷ ಮೊದಲ ಬಾರಿಗೆ ಆದಾಯ ತೆರಿಗೆ ದರಗಳನ್ನು ಪರಿಷ್ಕರಿಸಲಾಗಿತ್ತು. ಆಗಿನ ವಿತ್ತಸಚಿವ ಜಾನ್ ಮಥಾಯಿ ಅವರು ಮೊದಲ ಹಂತದಲ್ಲಿ ವಾರ್ಷಿಕ 10,000 ರೂ.ವರೆಗಿನ ಆದಾಯದ ಮೇಲಿನ ತೆರಿಗೆಯನ್ನು ಒಂದು ಆಣೆಯಿಂದ ಒಂಭತ್ತು ಪೈಗಳಿಗೆ ಮತ್ತು ಎರಡನೇ ಹಂತದ ಆದಾಯದ ಮೇಲೆ ಎರಡು ಆಣೆಗಳಿಂದ ಒಂದು ಆಣೆ ಒಂಭತ್ತು ಪೈಗಳಿಗೆ ಇಳಿಸಿದ್ದರು. (ಆಣೆ ಆಗ ಭಾರತ ಮತ್ತು ಪಾಕಿಸ್ತಾನದಲ್ಲಿ ಚಲಾವಣೆಯಲ್ಲಿದ್ದ ಕರೆನ್ಸಿಯಾಗಿತ್ತು. 16 ಆಣೆಗಳು ಸೇರಿದರೆ ಒಂದು ರೂಪಾಯಿ ಆಗುತ್ತಿತ್ತು. ಪ್ರತಿ ಆಣೆಯನ್ನು ನಾಲ್ಕು ಪೈಸೆಗಳನ್ನಾಗಿ ಮತ್ತು ಪ್ರತಿ ಪೈಸೆಯನ್ನು ಮೂರು ಪೈಗಳಾಗಿ ವಿಭಜಿಸಲಾಗಿತ್ತು. ಹೀಗೆ ಒಂದು ರೂಪಾಯಿ ಎಂದರೆ 64 ಪೈಸೆಗಳು ಅಥವಾ 192 ಪೈಗಳಾಗಿತ್ತು.

1974-75: ಅಂದಿನ ವಿತ್ತಸಚಿವ ವೈ.ಬಿ.ಚವಾಣ್ ಅವರು ಅಧಿಕ ಆದಾಯ ದುಡಿಯುತ್ತಿದ್ದವರ ಕಣ್ಣಲ್ಲಿ ನೀರು ತರಿಸುತ್ತಿದ್ದ ಶೇ.97.75ರಷ್ಟಿದ್ದ ಗರಿಷ್ಠ ತೆರಿಗೆಯನ್ನು ಶೇ.75ಕ್ಕೆ ತಗ್ಗಿಸಿದ್ದರು. ವೈಯಕ್ತಿಕ ಆದಾಯದ ಎಲ್ಲ ಹಂತಗಳಲ್ಲಿ ತೆರಿಗೆ ಪ್ರಮಾಣವನ್ನು ಕಡಿಮೆ ಮಾಡಲಾಗಿತ್ತು. ವಾರ್ಷಿಕ 6,000 ರೂ.ವರೆಗಿನ ಆದಾಯಕ್ಕೆ ಸಂಪೂರ್ಣ ತೆರಿಗೆ ವಿನಾಯಿತಿಯನ್ನು ನೀಡಲಾಗಿತ್ತು. 70,000 ರೂ.ಗೂ ಹೆಚ್ಚಿನ ಆದಾಯಕ್ಕೆ ಶೇ.70 ತೆರಿಗೆ ದರವನ್ನು ನಿಗದಿಗೊಳಿಸಲಾಗಿತ್ತು ಮತ್ತು ಎಲ್ಲ ಆದಾಯ ವರ್ಗಗಳಿಗೂ ಸರ್‌ಚಾರ್ಜ್‌ನ್ನು ಶೇ.10ರ ಸಮಾನದರಕ್ಕೆ ತಗ್ಗಿಸಲಾಗಿತ್ತು. ಅತ್ಯಂತ ಹೆಚ್ಚಿನ ಸ್ತರದ ಆದಾಯ ಹೊಂದಿರುವವರು ತೆರಿಗೆ ಮತ್ತು ಸರ್‌ಚಾರ್ಜ್ ಸೇರಿ ತಮ್ಮ ಆದಾಯದ ಶೇ.77ರಷ್ಟನ್ನು ಸರಕಾರಕ್ಕೆ ಕಕ್ಕಬೇಕಿತ್ತು. ಸಂಪತ್ತು ತೆರಿಗೆಯನ್ನೂ ಹೆಚ್ಚಿಸಲಾಗಿತ್ತು.

1985-86: ಇದು ಆದಾಯ ತೆರಿಗೆಯ ಸ್ವರೂಪದಲ್ಲಿ ಬೃಹತ್ ಬದಲಾವಣೆಗಳನ್ನು ಕಂಡ ವರ್ಷವಾಗಿತ್ತು. ಆಗಿನ ವಿತ್ತಸಚಿವ ವಿಶ್ವನಾಥ ಪ್ರತಾಪ ಸಿಂಗ್ ಅವರು ಆದಾಯ ಹಂತಗಳನ್ನು ಎಂಟರಿಂದ ನಾಲ್ಕಕ್ಕೆ ತಗ್ಗಿಸುವ ಮೂಲಕ ತೆರಿಗೆ ಸ್ವರೂಪವನ್ನು ಪರಿಷ್ಕರಿಸಿದ್ದರು. ಗರಿಷ್ಠ ಆದಾಯ ತೆರಿಗೆ ದರ ಶೇ.61.875ರಿಂದ ಶೇ.50ಕ್ಕೆ ಇಳಿಸಲ್ಪಟ್ಟಿತ್ತು. ವಾರ್ಷಿಕ 18,000 ರೂ.ಗಿಂತ ಕಡಿಮೆ ಆದಾಯಕ್ಕೆ ತೆರಿಗೆಯಿಂಂದ ಸಂಪೂರ್ಣ ವಿನಾಯಿತಿ ನೀಡಲಾಗಿತ್ತು. 18,001 ರಿಂದ 25,000 ರೂ.ವರೆಗೆ ಆದಾಯದ ಮೇಲೆ ಶೇ.25, 25,001ರಿಂದ 50,000 ರೂ.ವರೆಗಿನ ಆದಾಯದ ಮೆಲೆ ಶೇ.30 ಮತ್ತು 50,001ರಿಂದ ಒಂದು ಲಕ್ಷ ರೂ.ವರೆಗಿನ ಆದಾಯದ ಮೇಲೆ ಶೇ.40ರಷ್ಟು ತೆರಿಗೆಯನ್ನು ವಿಧಸಲಾಗಿತ್ತು. ವಾರ್ಷಿಕ ಒಂದು ಲಕ್ಷ ರೂ.ಗೂ ಹೆಚ್ಚಿನ ಆದಾಯವಿದ್ದವರು ಶೇ.50ರಷ್ಟು ತೆರಿಗೆಯನ್ನು ಪಾವತಿಸಬೇಕಿತ್ತು.

1992-93: ಇದು ನಾವಿಂದು ಕಾಣುತ್ತಿರುವ ಆದಾಯ ತೆರಿಗೆ ಸ್ವರೂಪಕ್ಕೆ ಬುನಾದಿ ಹಾಕಿದ್ದ ವರ್ಷವಾಗಿತ್ತು. ಆಗಿನ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರ ಸಂಪೂರ್ಣ ಬೆಂಬಲವನ್ನು ಪಡೆದಿದ್ದ ವಿತ್ತಸಚಿವ ಮನಮೋಹನ ಸಿಂಗ್ ಅವರು ತೆರಿಗೆಗೆ ಅರ್ಹ ಆದಾಯ ಸ್ತರಗಳ ಸಂಖ್ಯೆಯನ್ನು ಮೂರಕ್ಕೆ ತಗ್ಗಿಸಿದ್ದರು. ಆರಂಭಿಕ ತೆರಿಗೆ ದರ ಶೇ.20 30,000 ರೂ.ನಿಂದ 50,000 ರೂ.ವರೆಗಿನ ಆದಾಯಕ್ಕೆ ಅನ್ವಯವಾಗುತ್ತಿತ್ತು. 50,001ರಿಂದ ಒಂದು ಲಕ್ಷ ರೂ.ವರೆಗಿನ ಆದಾಯಕ್ಕೆ ಶೇ.30 ರಷ್ಟು ಮತ್ತು ಒಂದು ಲಕ್ಷಕ್ಕೂ ಹೆಚ್ಚಿನ ಆದಾಯದ ಮೇಲೆ ಶೇ.40ರ ಗರಿಷ್ಠ ತೆರಿಗೆ ದರವನ್ನು ವಿಧಿಸಲಾಗಿತ್ತು.

1994-95: ಎರಡು ವರ್ಷಗಳ ಬಳಿಕ ಮನಮೋಹನ ಸಿಂಗ್ ಅವರು ತೆರಿಗೆ ಸ್ತರಗಳಲ್ಲಿ ಹೊಂದಾಣಿಕೆ ಮಾಡಿದ್ದರು, ಆದರೆ ತೆರಿಗೆ ದರಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವ ಗೋಜಿಗೆ ಹೋಗಿರಲಿಲ್ಲ. ತೆರಿಗೆ ವಿನಾಯಿತಿಗೆ ಅರ್ಹ ಆದಾಯವನ್ನು ವಾರ್ಷಿಕ 30,000 ರೂ.ಗಳಿಂದ 35,000 ರೂ.ಗೆ ಹೆಚ್ಚಿಸಿದ್ದ ಅವರು ತೆರಿಗೆಗೆ ಅರ್ಹ ಮೊದಲ ಆದಾಯ ಸ್ತರವನ್ನು 35,000 ರೂ.ನಿಂದ 60,000 ರೂ.ವರೆಗೆ ನಿಗದಿಗೊಳಿಸಿದ್ದರು ಮತ್ತು ಅದೇ ಶೇ.20ರ ತೆರಿಗೆ ದರವನ್ನು ಕಾಯ್ದುಕೊಂಡಿದ್ದರು. 60,001 ರೂ,ನಿಂದ 1.20 ಲ.ರೂ.ವರೆಗಿನ ಎರಡನೇ ಆದಾಯ ಸ್ತರದವರು ಹಳೆಯ ಶೇ30ರಷ್ಟೇ ತೆರಿಗೆಯನ್ನು ಪಾವತಿಸಬೇಕಿತ್ತು. 1.2 ಲ.ರೂ.ಗೂ ಹೆಚ್ಚಿನ ಆದಾಯ ಮೂರನೇ ಸ್ತರವಾಗಿದ್ದು, ಶೇ.40ರ ಗರಿಷ್ಠ ತೆರಿಗೆಯಲ್ಲಿ ಬದಲಾವಣೆಯಾಗಿರಲಿಲ್ಲ.

ಅಲ್ಲಿಂದೀಚೆಗೆ ಆದಾಯ ತೆರಿಗೆ ಸ್ವರೂಪ ಬದಲಾಗುತ್ತಲೇ ಬಂದಿದೆ. 2017-18ನೇ ಸಾಲಿನ ಮುಂಗಡಪತ್ರದಲ್ಲಿ ವಿತ್ತಸಚಿವ ಅರುಣ್ ಜೇಟ್ಲಿ ಅವರು ವೈಯಕ್ತಿಕ ತೆರಿಗೆದಾರರ ವಾರ್ಷಿಕ 2.5 ಲ.ರೂ.ಗಳಿಂದ 5 ಲ.ರೂ.ವರೆಗಿನ ಆದಾಯದ ಮೇಲಿನ ತೆರಿಗೆಯನ್ನು ಶೇ.10ರಿಂದ ಶೇ.5ಕ್ಕೆ ಇಳಿಸಿದ್ದರು. ಜೊತೆಗೆ ಆದಾಯ ತೆರಿಗೆ ಕಾಯ್ದೆಯ ಕಲಂ 87 ಎ ಅಡಿ ಈ ಮೊದಲು 5 ಲ.ರೂ.ವರೆಗಿನ ಆದಾಯದವರಿಗೆ ನೀಡಲಾಗಿದ್ದ ತೆರಿಗೆ ರಿಯಾಯಿತಿಯನ್ನು 2.5 ಲ.ರೂ.ಗಳಿಂದ 3.5 ಲ.ರೂ.ವರೆಗೆ ಆದಾಯ ಹೊಂದಿದವರಿಗೆ 5,000 ರೂ.ಗಳಿಂದ 2,500 ರೂ.ಗೆ ತಗ್ಗಿಸಿದ್ದರು. ಹೀಗಾಗಿ ಮೂರು ಲಕ್ಷ ರೂ.ವರೆಗೆ ಆದಾಯ ಹೊಂದಿದವರಿಗೆ ಯಾವುದೇ ತೆರಿಗೆ ಹೊರೆಯಿರಲಿಲ್ಲ ಮತ್ತು ಮೂರು ಲ.ರೂ.ನಿಂದ 3.5 ಲ.ರೂ. ಆದಾಯ ವರ್ಗದವರಿಗೆ ತೆರಿಗೆ ಪ್ರಮಾಣ 2,500 ರೂ.ಗಳಾಗಿದ್ದವು.

ನಾಳೆ ಏನಾಗಲಿದೆ?

ಸರಕುಗಳು ಮತ್ತು ಸೇವಾ ತೆರಿಗೆ(ಜಿಎಸ್‌ಟಿ)ಯು ಪರೋಕ್ಷ ತೆರಿಗೆಗಳ ಚಿತ್ರಣವನ್ನು ಬದಲಿಸಿರುವಂತೆ ನೇರ ತೆರಿಗೆ ವ್ಯವಸ್ಥೆಯಲ್ಲಿಯೂ ಇಂತಹುದೇ ಸುಧಾರಣೆಯನ್ನು ನಿರೀಕ್ಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News