ತುಮಕೂರು : ಫೆ.06ರಂದು ಅಂಗವಿಕಲರ ಅಹೋರಾತ್ರಿ ಧರಣಿ

Update: 2018-01-31 11:44 GMT

ತುಮಕೂರು,ಜ.31:ಅಂಗವಿಕಲರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಫೆಬ್ರವರಿ 6 ರಂದು ಅಹೋರಾತ್ರಿ ಧರಣಿಯನ್ನು ಹಮ್ಮಿಕೊಂಡಿರುವುದಾಗಿ ಜಿಲ್ಲಾ ಅಂಗವಿಕಲರ ಕಲ್ಯಾಣ ವೇದಿಕೆ ಅಧ್ಯಕ್ಷ ಸಿ.ಗಂಗರಾಜು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಅಂಗವಿಕಲರು ಇಂದು ಶೋಚನೀಯ ಸ್ಥಿತಿಯಲ್ಲಿದ್ದು. ಇದುವರೆಗೂ ಆಡಳಿತ ನಡೆಸಿದ ಎಲ್ಲಾ ರಾಜಕೀಯ ಪಕ್ಷಗಳು ಓಟ್ ಬ್ಯಾಂಕ್‍ಗಾಗಿ ಮಾತ್ರ ಅಂಗವಿಕಲರನ್ನು ಬಳಸಿಕೊಳ್ಳುತ್ತಿದ್ದು, ಸವಲತ್ತು ನೀಡುವಲ್ಲಿ ಇದುವರೆಗೂ ಸಮಪರ್ಕವಾಗಿ ಕೆಲಸ ಮಾಡಿಲ್ಲ. ಸದರಿ ಸರಕಾರಕ್ಕೂ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.ಈ ಹಿನ್ನೆಲೆಯಲ್ಲಿ ಸರಕಾರದ ಗಮನ ಸೆಳೆಯಲು ಫೆಬ್ರವರಿ 6 ರ ಬೆಳಗ್ಗೆ 9 ಗಂಟೆಯಿಂದ ಅಹೋರಾತ್ರಿ ಧರಣಿಯನ್ನು ನಗರದ ಟೌನ್‍ಹಾಲ್ ಮುಂಭಾಗದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ಸರಕಾರ ಅಂಗವಿಕಲರ ಕಲ್ಯಾಣಕ್ಕಾಗಿ ಶೇ.3 ರ ಅನುದಾನವನ್ನು ಮೀಸಲಿಟ್ಟಿದೆ.ಅನುದಾನದ ಬಹುಪಾಲು ತ್ರಿಚಕ್ರ ವಾಹನ, ಸಾಧನ ಸಲಕರಣೆ ಹೆಸರಿನಲ್ಲಿ ಶಾಸಕರ ಹಿಂಬಾಲಕರ ಪಾಲಾಗುತ್ತಿದ್ದು, ಅನುದಾನ ಸಂಪೂರ್ಣ ಬಳಕೆಯಾಗಿಲ್ಲ. ಎಸ್‍ಇಪಿ, ಟಿಎಸ್‍ಪಿ ರೀತಿಯಲ್ಲಿ ಅಂಗವಿಕಲರ ಅನುದಾನ ಬಳಕೆ ಮಾಡದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳವ ನಿಟ್ಟಿನಲ್ಲಿ ಕಾನೂನು ರೂಪಿಸಬೇಕು.ಅನುದಾನದ ಸಂಪೂರ್ಣ ಬಳಕೆಗೆ ಪ್ರತ್ಯೇಕ ನಿಗಮ ರಚಿಸಬೇಕು ಎಂಬುದು ಅಂಗವಿಕಲರ ಕಲ್ಯಾಣ ವೇದಿಕೆಯ ಆಗ್ರಹವಾಗಿದೆ.ಈ ನಿಟ್ಟಿನಲ್ಲಿ ಸರಕಾರ ಕ್ರಮಕೈಗೊಳ್ಳಬೇಕು.ಫೆಬ್ರವರಿ ನಡೆಯುವ ಬಜೆಟ್ ಅಧಿವೇಶನದಲ್ಲಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿ ಅಹೋರಾತ್ರಿ ಧರಣಿ ನಡೆಸುವುದಾಗಿ ತಿಳಿಸಿದರು.

ರಾಜ್ಯದ ಪ್ರತಿ ಗ್ರಾಮ ಪಂಚಾಯತ್ ನಲ್ಲಿ ಅಂಗವಿಕಲರ ಕಲ್ಯಾಣಕ್ಕಾಗಿ ದುಡಿಯುತ್ತಿರುವ ಎಂಆರ್‍ಡಬ್ಲ್ಯೂ, ವಿಆರ್‍ಡಬ್ಲ್ಯೂ ಮತ್ತು ಯುಆರ್‍ಡಬ್ಲ್ಯೂ ಕನಿಷ್ಠ ವೇತನ ನೀಡುತ್ತಿಲ್ಲ. ಅವರು ಗೌರವಯುತ ಜೀನವನ ನಡೆಸಲು ಅನುಕೂಲವಾಗುವಂತೆ ಸರಕಾರವೇ ನಿಗದಿ ಪಡಿಸಿರುವ ಕನಿಷ್ಠ ವೇತನ ನೀಡಬೇಕು.ಇದರಿಂದ 6 ಸಾವಿರ ಜನ ಅಂಗವಿಕಲರಿಗೆ ಅನುಕೂಲವಾಗಲಿದೆ ಎಂದರು.

ಸರಕಾರದ ಅಂಕಿ ಅಂಶಗಳ ಅನ್ವಯ ಒಟ್ಟಾರೇ ಜನಸಂಖ್ಯೆಯ ಶೇ.5ರಷ್ಟು ಅಂಗವಿಕಲರು ಇದ್ದಾರೆ ಎಂದು ಧೃಡೀಕರಿಸಿದೆ. ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‍ನಲ್ಲಿ ಅನುದಾನ ಮೀಸಲಿಟ್ಟರೆ ಸುಮಾರು 1 ಸಾವಿರ ಕೋಟಿ ರೂ ಆಗಲಿದೆ. ಇಷ್ಟೋಂದು ಬೃಹತ್ ಮೊತ್ತದ ಹಣ ಖರ್ಚು ಮಾಡಲು ಅಧಿಕಾರಿಗಳು ಮೀನಾಮೇಷ ಏಣಿಸುವ ಸಾಧ್ಯತೆಯಿದ್ದು, ಈ ಹಿನ್ನೆಲೆಯಲ್ಲಿ ಅಂಗವಿಕಲರ ಅಧಿನಿಯಮ 1995 ಅಡಿಯಲ್ಲಿ ಸಮರ್ಥ ಅಂಗವಿಕಲ ಐಎಎಸ್ ಅಧಿಕಾರಿಯನ್ನ ನೇಮಕ ಮಾಡಬೇಕು ಎಂಬುದು ನಮ್ಮ ಒತ್ತಾಯವಾಗಿದೆ.2013ರ ನಂತರ ಇದುವರಗೂ ಅಧಿನಿಯಮಕ್ಕೆ ಅಧ್ಯಕ್ಷರ ನೇಮಕವಾಗಿಲ್ಲ, ಇದೂ ಸಹ ಅಂಗವಿಕಲರಿಗೆ ಸೌಲಭ್ಯ ದೊರೆಯದಿರಲು ಹಾಗೂ ಅನುದಾನ ಬಳಕೆಯಾಗದಿರಲೂ ಕಾರಣವಾಗಿದೆ.ಈ ಮೇಲಿನ ಎಲ್ಲಾ ಬೇಡಿಕೆಗಳನ್ನು ಬಜೆಟ್ ಅಧಿವೇಶನದಲ್ಲಿ ಘೋಷಣೆ ಮಾಡುವುದರ ಜೊತೆಗೆ ಜಾರಿಗೊಳಿಸಬೇಕು ಎಂಬುದು ನಮ್ಮ ಆಗ್ರಹ ಎಂದರು.
ಸುದ್ದಿಗೋಷ್ಟಿಯಲ್ಲಿ ಇನಾಯತ್ ಖಾನ್,ಲಕ್ಷ್ಮೀಕಾಂತ್,ಕೆ.ಎಂ.ಪ್ರಕಾಶ್,ಮಹಾಲಿಂಗಪ್ಪ,ನಾಗರಾಜು,ಕೃಷ್ಣಮೂರ್ತಿ, ಉಮಾಪತಿ, ನರಸಿಂಹಮೂರ್ತಿ, ಕೃಷ್ಣಮೂರ್ತಿ, ಈರಣ್ಣ, ರಾಮಕೃಷ್ಣ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News