6ನೆ ವೇತನ ಆಯೋಗದ ವರದಿಯಿಂದ ಅನುಕೂಲವಿಲ್ಲ : ರಾಜ್ಯ ಸರಕಾರಿ ನೌಕರರ ಒಕ್ಕೂಟ ಖಂಡನೆ

Update: 2018-01-31 15:40 GMT

ಬೆಂಗಳೂರು, ಜ.31: ರಾಜ್ಯ ಸರಕಾರ 6ನೆ ವೇತನ ಆಯೋಗದಿಂದ ರಾಜ್ಯ ಸರಕಾರಿ ನೌಕರರಿಗೆ ಯಾವುದೆ ರೀತಿಯ ಅನುಕೂಲವಿಲ್ಲ. ಹೀಗಾಗಿ 6ನೆ ವೇತನ ಆಯೋಗದ ವರದಿಯನ್ನು ಅಖಿಲ ಕರ್ನಾಟಕ ರಾಜ್ಯ ಸರಕಾರಿ ನೌಕರರ ಒಕ್ಕೂಟ ಖಂಡಿಸುತ್ತದೆ ಎಂದು ಅಧ್ಯಕ್ಷ ಮಹದೇವಯ್ಯ ಮಠಪತಿ ತಿಳಿಸಿದರು.

ರಾಜ್ಯ ಸರಕಾರ 6ನೆ ವೇತನ ಆಯೋಗವನ್ನು ರಚಿಸಿದಾಗ ಸರಕಾರಿ ನೌಕರರು ಅಪಾರ ನಿರೀಕ್ಷೆ ಹೊಂದಿದ್ದರು. ಆದರೆ, ಪ್ರಸ್ತುತ ಸಲ್ಲಿಕೆಯಾಗಿರುವ ರಾಜ್ಯ 6ನೆ ವೇತನ ಆಯೋಗದ ವರದಿಯು ಅವಾಸ್ತವಿಕತೆಯಿಂದ ಕೂಡಿದ್ದು, ರಾಜ್ಯ ಸರಕಾರಿ ನೌಕರರ ಸಂಕಷ್ಟಗಳನ್ನು ಈಡೇರಿಸಲು ಸಂಪೂರ್ಣ ವಿಫಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕೇಂದ್ರ ಮತ್ತು ರಾಜ್ಯ ಸರಕಾರಿ ನೌಕರರ ನಡುವಿನ ವೇತನದ ವ್ಯತ್ಯಾಸವು ಶೇ.67ರಷ್ಟಿದ್ದು, ಪ್ರಸ್ತುತ ಆಯೋಗವು ಮಾಡಿರುವ ಕನಿಷ್ಠ ಶಿಫಾರಸಿನಿಂದ ಈ ವೇತನ ವ್ಯತ್ಯಾಸ ಮತ್ತಷ್ಟು ದೊಡ್ಡದಾಗುತ್ತಾ ಹೋಗುತ್ತದೆ. ಅಲ್ಲದೆ, ಮನೆ ಬಾಡಿಗೆ ಭತ್ತೆಯನ್ನು ಶೇ.6ರಷ್ಟು ಕಡಿತಗೊಳಿಸಿರುವುದರಿಂದ ವಾಸ್ತವ ಏರಿಕೆಯು ಶೇ.30ರಷ್ಟು ಬದಲಿಗೆ ಕೇವಲ ಶೇ.24 ಮಾತ್ರ ಆಗಿದೆ. ಇದು ರಾಜ್ಯ ಸರಕಾರಿ ನೌಕರರಿಗೆ ಮಾಡಿದ ಅನ್ಯಾಯವೆಂದು ಅವರು ಖಂಡಿಸಿದರು.

ಕೇಂದ್ರ ಸರಕಾರಿ ನೌಕರರ ಕನಿಷ್ಠ ವೇತನ 18ಸಾವಿರ ರೂ. ಇದ್ದು, ಗರಿಷ್ಠ ವೇತನ 2.50ಸಾವಿರ ಆಗಿದೆ. ಇದರೊಂದಿಗೆ ಕನಿಷ್ಠ ಶೇ.10ರಷ್ಟು ತುಟ್ಟಿಭತ್ತೆಯನ್ನು ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರಿ ಒಕ್ಕೂಟವು ಕನಿಷ್ಠ ವೇತನವನ್ನು 21ಸಾವಿರ ರೂ.ಗೆ ನಿಗದಿಗೊಳಿಸಬೇಕೆಂದು ಆಗ್ರಹಿಸಿತ್ತು. ಆದರೆ, ಪ್ರಸ್ತುತ ವರದಿಯು ನೀಡಿರುವ ಪ್ರಕಾರ, ರಾಜ್ಯ ನೌಕರರ ಕನಿಷ್ಠ ವೇತನ 17ಸಾವಿರ ರೂ. ಮತ್ತು ಗರಿಷ್ಠ ವೇತನ 1.5 ಲಕ್ಷ ಆಗಿದೆ ಎಂದು ಅವರು ತಿಳಿಸಿದರು.

6ನೆ ವೇತನ ಆಯೋಗದಿಂದ ರಾಜ್ಯ ಸರಕಾರಿ ನೌಕರರಿಗೆ ಆಗಿರುವ ಅನ್ಯಾಯವನ್ನು ಖಂಡಿಸಿ, ಕೇಂದ್ರ ಸರಕಾರಿ ನೌಕರರಿಗೆ ನೀಡುವ ಸರಿಸಮಾನವಾದ ವೇತನವನ್ನು ರಾಜ್ಯ ನೌಕರರಿಗೂ ನೀಡಬೇಕೆಂದು ಆಗ್ರಹಿಸಲು ‘ಜಂಟಿ ಕ್ರಿಯಾ ಸಮಿತಿ’ ರಚಿಸಲಾಗಿದೆ. ಪ್ರಸ್ತುತ 6ನೆ ವೇತನ ಆಯೋಗ ನೀಡಿರುವ ಅವೈಜ್ಞಾನಿಕವಾದ ವರದಿಯನ್ನು ವಿರೋಧಿಸಿ ಶೀಘ್ರವೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News