‘ಸರ್ ಮಿರ್ಝಾ ಎಂ.ಇಸ್ಮಾಯೀಲ್: ಎ ಗ್ರೇಟ್ ಅಡ್ಮಿನಿಸ್ಟ್ರೇಟರ್’

Update: 2018-01-31 18:42 GMT

ಮಿರ್ಝಾ ಇಸ್ಮಾಯೀಲ್ ಅವರ ಆತ್ಮಚರಿತ್ರೆ

ಮೈಸೂರಿನ ದಿವಾಣರಾಗಿದ್ದ ಸರ್ ಮಿರ್ಝಾ ಇಸ್ಮಾಯೀಲ್ ಅವರ ಜೀವನ ಚರಿತ್ರೆ, ‘ಸರ್ ಮಿರ್ಝಾ ಎಂ. ಇಸ್ಮಾಯೀಲ್: ಎ ಗ್ರೇಟ್ ಅಡ್ಮಿನಿಸ್ಟ್ರೇಟರ್’ ಮಂಗಳೂರು ಮತ್ತು ಗೋವಾ ವಿಶ್ವವಿದ್ಯಾನಿಲಯಗಳ ಮಾಜಿ ಉಪಕುಲಪತಿಗಳಾದ ಪ್ರೊ. ಬಿ. ಶೇಕ್ ಅಲಿ ಬರೆದಿರುವ ಹೊಸ ಪುಸ್ತಕ. 322 ಪುಟಗಳ ಆತ್ಮಚರಿತ್ರೆಯಲ್ಲಿ, 1926ರಿಂದ 1941ರವರೆಗೆ ಮೈಸೂರು ರಾಜ್ಯದ ಆಳ್ವಿಕೆ ನಡೆಸಿದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಸಂಸ್ಥಾನದ ದಿವಾನರಾಗಿ ಸೇವೆ ಸಲ್ಲಿಸಿದ್ದ ಸರ್ ಮಿರ್ಝಾ ಇಸ್ಮಾಯೀಲ್ ಅವರ ಜೀವನ ಮತ್ತು ಸಾಧನೆಗಳ ಬಗ್ಗೆ ಮಾಹಿತಿಯನ್ನು ಹೊಂದಿದೆ. ಈ ಪುಸ್ತಕವನ್ನು ಶ್ರೀರಂಗಪಟ್ಟಣದ ದಾರುಲ್ ಉಮೂರ್ ಸಂಶೋಧನಾ ಕೇಂದ್ರವು ಮುದ್ರಿಸಿದ್ದು ಇಂಡಿಯಾ ಬಿಲ್ಡರ್ಸ್ ಮುಖ್ಯಸ್ಥ ಝಿಯಾವುಲ್ಲಾ ಶರೀಫ್ ಬಿಡುಗಡೆ ಮಾಡಿದ್ದಾರೆ. ಈ ಬಗ್ಗೆ ಮೈಸೂರಿನಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಪ್ರೊ. ಶೇಕ್ ಅಲಿಯವರು, ಈ ಪುಸ್ತಕದಲ್ಲಿ ಸರ್ ಮಿರ್ಝಾ ಇಸ್ಮಾಯೀಲ್ ಅವರ ಭಾಷಣಗಳಿಂದ ಆಯ್ದ ಭಾಗಗಳನ್ನು ನೀಡಿರುವುದಾಗಿ ತಿಳಿಸಿದ್ದಾರೆ. ಮಿರ್ಝಾ ಇಸ್ಮಾಯೀಲ್ ಅವರು ಮಹಾರಾಜ ಕೃಷ್ಣರಾಜ ಒಡೆಯರ್ ಅವರ ಆಪ್ತ ಮತ್ತು ನಂಬಿಕೆಯ ಜೊತೆಗಾರನಾಗಿದ್ದರು ಮತ್ತು ಹಿಂದಿನ ಮೈಸೂರು ರಾಜ್ಯದಲ್ಲಿ ಹಲವು ಕೈಗಾರಿಕಾ ಯೋಜನೆಗಳನ್ನು ರೂಪಿಸಿದ್ದರು ಎಂದು ಅವರು ತಿಳಿಸಿದ್ದಾರೆ. ಈ ಪುಸ್ತಕದಲ್ಲಿ ಉಲ್ಲೇಖಿಸಲಾಗಿರುವ ಹೆಚ್ಚಿನ ಮಾಹಿತಿಗಳನ್ನು ಪಡೆಯಲು ಬಳಸಲಾಗಿರುವ ಪುಸ್ತಕಗಳು ಮೈಸೂರು ವಿಶ್ವವಿದ್ಯಾನಿಲಯದ ಗ್ರಂಥಾಲಯದಲ್ಲಿ ಇವೆ ಎಂದು ಪ್ರೊಫೆಸರ್ ತಿಳಿಸಿದ್ದಾರೆ. ಸ್ಟೀಲ್, ಸಿಮೆಂಟ್, ಸಕ್ಕರೆ, ಪೇಪರ್, ರಾಸಾಯನಿಕ ಮತ್ತು ಗೊಬ್ಬರ, ವಿಮಾನ, ಗಾಜು, ಪೋರ್ಸಿಲಿನ್, ಕೃಷಿ ಉಪಕರಣಗಳು, ರೇಷ್ಮೆ, ವಿದ್ಯುತ್ ಬಲ್ಬ್ ಹಾಗೂ ಕಬ್ಬಿಣದ ಪೈಪುಗಳು ಸೇರಿದಂತೆ ಕಾಫಿ ಶೇಖರಣೆ ಮತ್ತು ಜಲವಿದ್ಯುತ್ ಕೇಂದ್ರಗಳು ಹೀಗೆ ಹಲವು ಉತ್ಪಾದನಾ ಘಟಕಗಳನ್ನು ಸ್ಥಾಪಿಸುವಲ್ಲಿ ಮಿರ್ಝಾ ಇಸ್ಮಾಯೀಲ್ ಅವರ ಪಾತ್ರ ಪ್ರಮುಖವಾಗಿದೆ ಎಂದು ಶೇಕ್ ಅಲಿಯವರು ತಿಳಿಸಿದ್ದಾರೆ.

‘‘1938ರ ಆಗಸ್ಟ್ 5ರಂದು ಮಿರ್ಝಾ ಇಸ್ಮಾಯೀಲ್ ಅವರು ಆಲ್ ಇಂಡಿಯಾ ರೇಡಿಯೊದಲ್ಲಿ ಭಾಷಣ ಮಾಡುವ ವೇಳೆ ನುಡಿದ ಆ ಮಾತುಗಳು ಈಗಲೂ ನನ್ನ ಕಿವಿಗಳಲ್ಲಿ ಗುನುಗುನಿಸುತ್ತಿವೆ’’ ಎಂದು ಪ್ರೊ. ಶೇಕ್ ಅಲಿಯವರು ಹೇಳುತ್ತಾರೆ. ‘‘ಈ ಕಾರ್ಖಾನೆಗಳಲ್ಲಿ ಉತ್ಪಾದನೆಯಾಗುವ ವಸ್ತುಗಳ ಬಗ್ಗೆ ನಮಗೆ ಹೆಮ್ಮೆಯಿದೆ. ನಮ್ಮನ್ನು ಸಂಕುಚಿತ ಮನೋಭಾವದವರು ಎಂದು ಕರೆಯುವ ಅಪಾಯವಿದ್ದರೂ, ಎಲ್ಲಾ ನೈಜ ಮೈಸೂರಿಗರ ಮುಂದೆ, ಅವರು ತಮ್ಮನ್ನು ಮೈಸೂರು ಸಾಬೂನಿನಿಂದ ತೊಳೆದುಕೊಳ್ಳಬೇಕು, ಮೈಸೂರು ಟವೆಲ್‌ನಿಂದ ಒರೆಸಬೇಕು, ಮೈಸೂರು ಆಹಾರವನ್ನು ಸೇವಿಸಬೇಕು, ಮೈಸೂರು ಸಕ್ಕರೆ ಬೆರೆಸಿದ ಮೈಸೂರು ಕಾಫಿಯನ್ನು ಕುಡಿಯಬೇಕು, ತಮ್ಮ ಮನೆಗಳನ್ನು ಮೈಸೂರು ಪೀಠೋಪಕರಣಗಳಿಂದ ಅಲಂಕರಿಸಬೇಕು, ಮೈಸೂರು ದೀಪಗಳಿಂದ ಬೆಳಗಿಸಬೇಕು ಮತ್ತು ಮೈಸೂರು ಪೇಪರ್‌ನಲ್ಲಿ ಪತ್ರಗಳನ್ನು ಬರೆಯಬೇಕು ಎನ್ನುವ ಪರಿಕಲ್ಪನೆ ಮೂಡುವಂತೆ ಮಾಡಲು ನಾವು ಬಯಸುತ್ತೇವೆ’’ ಎಂದು ಇಸ್ಮಾಯೀಲ್ ಹೇಳಿದ್ದರು.

1896ರಿಂದ 1902ರ ಮಧ್ಯೆ ಮೈಸೂರಿನಲ್ಲಿ ಮಹಾರಾಜರ ವಿಶೇಷ ತರಗತಿಯಲ್ಲಿ ಕೃಷ್ಣರಾಜ ಒಡೆಯರ್ ಅವರ ಸಹಪಾಠಿಯಾಗಿದ್ದ ಮಿರ್ಝಾ ಇಸ್ಮಾಯೀಲ್ ಅವರು ಎಸ್.ಎಂ ಫ್ರೇಝರ್ ಅವರಿಂದ ಶಿಕ್ಷಣವನ್ನು ಪಡೆದುಕೊಂಡ ಬಗ್ಗೆ ಸುದೀರ್ಘ ಮಾಹಿತಿಯನ್ನು ಪುಸ್ತಕದಲ್ಲಿ ವಿವರಿಸಲಾಗಿದೆ. ಭವಿಷ್ಯದ ಮಹಾರಾಜರ ಜೊತೆಗಿನ ಈ ಆಪ್ತತೆ ಮಿರ್ಝಾ ಇಸ್ಮಾಯೀಲ್ ಅವರಿಗೆ ಮುಂದೆ ಅವರು ಹದಿನೈದು ವರ್ಷಗಳ ಕಾಲ ಮೈಸೂರಿನ ದಿವಾನರಾಗಿ ರಾಜ್ಯದ ಮೇಲುಸ್ತುವಾರಿ ನೋಡಿಕೊಳ್ಳಲೂ ನೆರವಾಯಿತು. ಭಾರತವು ಸ್ವಾತಂತ್ರ ಸಂಗ್ರಾಮದಲ್ಲಿ ಮುಳುಗಿದ್ದ ಕಾರಣ ಈ ಅವಧಿಯು ರಾಜಕೀಯ ಗೊಂದಲಗಳೊಂದಿಗೆ ರಾಷ್ಟ್ರೀಯ, ಕೋಮು ಮತ್ತು ವಸಾಹತು ಹಿತಾಸಕ್ತಿಗಳ ನಿರಂತರ ಸಂರ್ಘರ್ಷಕ್ಕೆ ಸಾಕ್ಷಿಯಾಗಿತ್ತು. ಮೈಸೂರಿನ ದಿವಾನ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಮಿರ್ಝಾ ಇಸ್ಮಾಯೀಲ್ ಅವರು ಜೈಪುರದ ದಿವಾನರಾಗಿ ನೇಮಕಗೊಂಡರು ಮತ್ತು ಒಂದು ವರ್ಷಕ್ಕೂ ಕಡಿಮೆ ಅವಧಿಗೆ ನಿಝಾಮರ ಆಡಳಿತವಿದ್ದ ಹೈದರಾಬಾದ್‌ನಲ್ಲೂ ದಿವಾನ ಸ್ಥಾನವನ್ನು ಅಲಂಕರಿಸಿದ್ದರು. ಕಟ್ಟರ್ ರಾಷ್ಟ್ರೀಯವಾದಿಯಾಗಿದ್ದ ಮಿರ್ಝಾ ಇಸ್ಮಾಯೀಲ್ ಅವರು ಭಾರತವು ಧರ್ಮದ ಆಧಾರದಲ್ಲಿ ವಿಭಜನೆಯಾಗಬಾರದು ಎಂದು ಬಯಸಿದ್ದರು. ಸ್ಥಳೀಯವಾಗಿ ಕಾಂಗ್ರೆಸ್ಸಿಗರ ಜೊತೆ ಉತ್ತಮ ಸಂಬಂಧ ಹೊಂದಿರದಿದ್ದರೂ ಮಿರ್ಝಾ ಇಸ್ಮಾಯೀಲ್ ಅವರು ಕಾಂಗ್ರೆಸ್ ಉನ್ನತ ನಾಯಕರು ಮತ್ತು ರಾಷ್ಟ್ರೀಯವಾದಿ ಹೋರಾಟಗಾರರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು. 90ರ ಹರೆಯದ ಇತಿಹಾಸತಜ್ಞ, ಮೈಸೂರು ನಿವಾಸಿ ಪ್ರೊ. ಶೇಕ್ ಅಲಿಯವರು ಬರೆದಿರುವ 55ನೇ ಪುಸ್ತಕ ಇದಾಗಿದೆ. ಸದ್ಯ ಅವರು ಕರ್ನಾಟಕದ ಸಮಗ್ರ ಇತಿಹಾಸವನ್ನು ಬರೆಯುವ ಕಾರ್ಯದಲ್ಲಿ ವ್ಯಸ್ತವಾಗಿದ್ದಾರೆ. ಈ ಪುಸ್ತಕ ಕೂಡಾ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಸರ್ ಮಿರ್ಝಾ ಎಂ. ಇಸ್ಮಾಯೀಲ್: ಎ ಗ್ರೇಟ್ ಅಡ್ಮಿನಿಸ್ಟ್ರೇಟರ್ ಪುಸ್ತಕದ ಬೆಲೆ 400 ರೂ. ಆಗಿದೆ. ನಾಲೇಡ್ಜ್ ಸೊಸೈಟಿ ಪಬ್ಲಿಕೇಶನ್ಸ್, ಸಂ. 59, 7ನೇ ಮುಖ್ಯ, 3ನೇ ಅಡ್ಡ ರಸ್ತೆ, ಸರಸ್ವತಿಪುರಂ, ಮೈಸೂರು-570009 ಇಲ್ಲಿ ಲಭ್ಯವಿದೆ. ದೂ: 0821-2543439.

Writer - ಎಂ.ಎ.ಸಿರಾಜ್

contributor

Editor - ಎಂ.ಎ.ಸಿರಾಜ್

contributor

Similar News

ಜಗದಗಲ
ಜಗ ದಗಲ