ಶರಣರ ರಕ್ಷಣೆಯಲ್ಲಿ ಮಡಿವಾಳ ಮಾಚಿದೇವರ ಪಾತ್ರ ಮಹತ್ವದ್ದು: ಯಡಿಯೂರು ಮಡಲಗಿರಿ

Update: 2018-02-01 16:38 GMT

ಮಂಡ್ಯ, ಫೆ.1: 12ನೆ ಶತಮಾನದ ಕಲ್ಯಾಣ ಕ್ರಾಂತಿಯಲ್ಲಿ ಶರಣರ ವಚನಗಳು ಮತ್ತು ಶರಣರನ್ನು ಸಂರಕ್ಷಣೆ ಮಾಡುವಲ್ಲಿ ವೀರ ಮಡಿವಾಳ ಮಾಚಿದೇವರ ಪಾತ್ರ ಮಹತ್ವದ್ದು ಎಂದು ಸುವರ್ಣ ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಯಡಿಯೂರು ಮೂಡಲಗಿರಿ ಅಭಿಪ್ರಾಯಪಟ್ಟಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಗುರುವಾರ ನಡೆದ ಮಡಿವಾಳ ಮಾಚಿದೇವ ಜಯಂತ್ಯೋತ್ಸವ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು.  

ಕಲ್ಯಾಣ ಕ್ರಾಂತಿಯ ಅಂತಿಮ ಘಟ್ಟದಲ್ಲಿ  ಶರಣರು ಮತ್ತು ವಚನಗಳ ಉಳಿವಿಗೆ ಕುತ್ತು ಬಂದಂತಹ ಸಂದರ್ಭದಲ್ಲಿ ಮಡಿವಾಳ ಮಾಚಿದೇವರು ಅವರನ್ನೆಲ್ಲಾ ರಕ್ಷಣೆ ಮಾಡುವ ಮೂಲಕ ಇಂದಿಗೂ ವಚನ ಸಾಹಿತ್ಯವನ್ನು ಮತ್ತು ಶರಣ ಪರಂಪರೆಯನ್ನು ಜೀವಂತವಾಗಿಡುವಲ್ಲಿ ಸಹಕಾರಿಯಾಗಿದ್ದಾರೆ ಎಂದು ಅವರು ಹೇಳಿದರು.

ಬಸವಣ್ಣರ ಆಡಳಿತ 12ನೆ ಶತಮಾನದಲ್ಲಿ ಇಡೀ ರಾಜ್ಯ ನಿಜಕ್ಕೂ ಕಲ್ಯಾಣ ರಾಜ್ಯವಾಗಿತ್ತು. ಅಂದು ಮಹಾಮಂತ್ರಿಯಾಗಿದ್ದ ಬಸವಣ್ಣನೇ ಸಾಮಾನ್ಯ ಶರಣ ಮಾಚಿದೇವರ ಮನೆಗೆ ಬರುತ್ತಾರೆ. ಅಂತಹ ದಿನಗಳು ಇದ್ದವು. ಆದರೆ, ಈಗ ಅಂತಹ ದಿನಗಳು ಕನಸಿಗೂ ಸಿಗದಂತಾಗಿದೆ ಎಂದು ಅವರು ವಿಷಾದಿಸಿದರು.

ಡಿ.ದೇವರಾಜ ಅರಸು ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಮಾತನಾಡಿ, ಮಡಿವಾಳರ ಕುಲದೇವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ನಾಡಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ನಾಯಕರನ್ನಾಗಿ ಹೊರಹೊಮ್ಮಿಸುವ ಪ್ರಯತ್ನವನ್ನು ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಜಿಪಂ ಉಪ ಕಾರ್ಯದರ್ಶಿ ಪ್ರೇಮ್‍ಕುಮಾರ್, ನಗರಸಭಾಧ್ಯಕ್ಷ ಹೊಸಹಳ್ಳಿ ಬೋರೇಗೌಡ ಮಾತನಾಡಿದರು. ಉಪವಿಭಾಗಾಧಿಕಾರಿ ರಾಜೇಶ್ ಸಮಾರಂಭ ಉದ್ಘಾಟಿಸಿದರು. ಎಎಸ್ಪಿ ಲಾವಣ್ಯ, ನಗರಸಭಾ ಸದಸ್ಯ ಮಹೇಶ, ಮಡಿವಾಳ ಸಮುದಾಯದ ಮುಖಂಡರಾದ ಜಯರಾಂ, ಗುರುರಾಜ್, ಎಂ.ಎನ್.ರವಿ, ಮಲ್ಲೇಶ್, ಗೊರವಾಲೆ ಚಂದ್ರಶೇಖರ್, ಗೋವಿಂದಯ್ಯ, ಸಿ. ಸಿದ್ದಶೆಟ್ಟಿ, ಪುಟ್ಟಸ್ವಾಮಿ, ಎಚ್.ಎಸ್. ಹನುಮಂತಯ್ಯ, ಚಿಕ್ಕವೀರಶೆಟ್ಟಿ, ಗಿರಿಯಪ್ಪ, ಸೋಮಶೇಖರ್, ರಮೇಶ್, ವಿವಿಧ ಸಮುದಾಯಗಳ ಮುಖಂಡರಾದ ಅಮ್ಜದ್‍ಪಾಷ, ಆಂಜನಪ್ಪ, ಎಂ. ಕೃಷ್ಣ, ಶ್ರೀನಿವಾಸ್ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು. 

ಇದಕ್ಕೂ ಮುನ್ನ ನಗರದ ಜಿಲ್ಲಾಧಿಕಾರಿಗಳ ಕಚೇರಿಯಿಂದ ಕಲಾಮಂದಿರದವರೆಗೆ ಮಾಚಿದೇವರ ಭಾವಚಿತ್ರವನ್ನು ವಿವಿಧ ಜಾನಪದ ಕಲಾತಂಡಗಳೊಂದಿಗೆ ವೇದಿಕೆ ಕರೆತರಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News