ಬಾಗೇಪಲ್ಲಿ: ಹಳೆಗನ್ನಡ ಕಾವ್ಯ ರಸಗ್ರಹಣ ಕಾರ್ಯಕ್ರಮ

Update: 2018-02-02 11:43 GMT

ಬಾಗೇಪಲ್ಲಿ, ಫೆ.02: ವಿದ್ಯಾರ್ಥಿಗಳು ಯಾವುದೇ ಐಚ್ಛಿಕ ವಿಷಯ ತೆಗೆದುಕೊಂಡರೂ ಮೊದಲ ಪ್ರಾಧಾನ್ಯತೆ ಕನ್ನಡ ವಿಷಯಕ್ಕೆ ಇರಲಿ ಎಂದು ಬೆಂಗಳೂರು ವಿಶ್ವವಿದ್ಯಾನಿಲಯದ ಸ್ನಾತ್ತಕೋತ್ತರ ಕೇಂದ್ರದ ಪ್ರಾಧ್ಯಾಪಕ ಪ್ರೋ.ಡಾ.ದಳವಾಯಿ ರಾಜಪ್ಪ ತಿಳಿಸಿದರು

ಪಟ್ಟಣದ ನ್ಯಾಷನಲ್ ಕಾಲೇಜಿನ ಸಭಾಂಗಣದಲ್ಲಿ ಕನ್ನಡ ವಿಭಾಗದಿಂದ ಏರ್ಪಡಿಸಿದ್ದ ಹಳಗನ್ನಡ ಕಾವ್ಯ ರಸಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಳೆಗನ್ನಡ ಕಾವ್ಯಗಳಲ್ಲಿ ಕೇವಲ ಸಾಹಿತ್ಯವನ್ನಷ್ಟೇ ತುಂಬಿರುತ್ತೆದೆ ಎಂದು ನಾವು ಅಂದುಕೊಳ್ಳುವುದು ಸರಿಯಲ್ಲ. ಈ ಕಾವ್ಯವು  ದೊಡ್ಡ ವೃಕ್ಷವಾದರೆ ಅದರ ಕೊಂಬೆಗಳಾಗಿ ವಿಜ್ಞಾನ, ಇತಿಹಾಸ, ತತ್ವಜ್ಞಾನ, ಸಮಾಜ ವಿಜ್ಞಾನ, ಕಲೆ ಸಾಹಿತ್ಯ,ಸಂಸ್ಕೃತಿ ಇವೆಲ್ಲವೂ ಇರುತ್ತದೆ ಎಂದರು.

ಯಾರು ಹಳೆಗನ್ನಡ ಸಾಹಿತ್ಯವನ್ನು ನಿರ್ಲಕ್ಷ್ಯ ಮಾಡುತ್ತಾರೋ ಅವರು ಭವಿಷ್ಯದ ಸಮಾಜವನ್ನು ಕಟ್ಟಲಾರರು. ಏಕೆಂದರೆ ಇತಿಹಾಸವನ್ನು ತಿಳಿಯದವನು ಇತಿಹಾಸ ಸೃಷ್ಟಿಸಲಾರ. ಹಾಗಾಗಿ ಸಾಹಿತ್ಯದ ಬೇರುಗಳಲ್ಲಿ ಸಮಾನತೆ, ತಾಳ್ಮೆ, ಕೋಮು ಸೌಹಾರ್ದತೆ, ಪರಸ್ಪರರನ್ನು ಅರ್ಥಮಾಡಿಕೊಳ್ಳುವ ರೀತಿಯ ಜೊತೆಗೆ ಉತ್ತಮ ಮಾನವೀಯ ಮೌಲ್ಯಗಳಿಗೆ ಪೂರಕವಾದ ಅಂಶಗಳು ಇದರಲ್ಲಿ ಅಡಗಿರುತ್ತೆ ಎಂದ ಅವರು, ವಿಜ್ಞಾನ ವಿಷಯದಿಂದ ಬಂದವರು, ಗಣಿತ ಶಾಸ್ತ್ರದಿಂದ ಬಂದವರಲ್ಲಿ ಅನೇಕ ಸಾಹಿತಿಗಳಿದ್ದಾರೆ. ನಮ್ಮ ಕನ್ನಡ ಪರಂಪರೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕನ್ನಡ ಭಾಷೆಯ ಶಾಸ್ತ್ರೀಯ ಸ್ಥಾನಮಾನಕ್ಕಾಗಿ ಸಾಹಿತಿಗಳಿಂದ, ಕವಿಗಳಿಂದ, ಸಂಘಟಣೆಗಳಿಂದ ಹೋರಾಟಗಳು ನಡೆದಿವೆ. ಕನ್ನಡ ಭಾಷೆಗೆ ಇಡೀ ಜಗತ್ತಿನಲ್ಲಿಯೇ ಉನ್ನತ ಸ್ಥಾನಮಾನವಿದೆ. ಇಂತಹ ಭಾಷೆಗೆ ನಿರ್ಲಕ್ಷ್ಯ ಮನೋಭಾವ ಬೇಡ. ನೀವು ಯಾವುದೇ ವಿಷಯ ತೆಗೆದುಕೊಂಡರೂ ಮೊದಲು ಕನ್ನಡವನ್ನು ಪ್ರೀತಿಸಿ ಬೆಳೆಸಿ. ನಾನು ಹಲವಾರು ವಿಷಯಗಳನ್ನು ಅಧ್ಯಯನ ಮಾಡಿದರೂ, ಕನ್ನಡವನ್ನು ಹೆಚ್ಚು ಓದುತ್ತೇನೆ. ನನ್ನ ಮನೆಯಲ್ಲಿ ದೊಡ್ಡ ಪುಸ್ತಕ ಬಂಡಾರವೇ ಇದೆ. ಅದೇ ನನ್ನ ಸಂಪತ್ತು. ಹಲವು ವಿಚಾರಗಳಲ್ಲಿ ಇಂದು ನಮ್ಮ ಕನ್ನಡ ಭಾಷೆಯ ಮೇಲೂ ದಾಳಿ ನಡೆಯುತ್ತಿದೆ. ಅದನ್ನು ಕಾಪಾಡಿಕೊಳ್ಳಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.

ಈ ಸಂದರ್ಭದಲ್ಲಿ ಪ್ರಾಂಶುಪಾಲ ಪ್ರೋ.ಬಿ.ಪಿ.ವಿಜಯಕುಮಾರ್, ಪ್ರೋ.ಡಾ.ಸೋಮಶೇಖರ್, ನಿವೃತ್ತ ಉಪಪ್ರಾಂಶುಪಾಲರಾದ ಪ್ರೋ.ಡಿ.ಶಿವಣ್ಣ, ಎ.ಕೆ.ನಿಂಗಪ್ಪ, ಉಪನ್ಯಾಸಕರಾದ ವಿ.ರಾಮಚಂದ್ರಾರೆಡ್ಡಿ, ವೆಂಕಟಶಿವಾರೆಡ್ಡಿ, ಎ.ಜಿ.ಪದ್ಮಾವತಿ, ರಾಜ್ಯ ಯುವ ಪ್ರಶಸ್ತಿ ವಿಜೇತ ರವಿ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News