ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಹುದ್ದೆಗೆ ನ್ಯಾ. ದಿನೇಶ್ ಮಹೇಶ್ವರಿ ಹೆಸರು ಶಿಫಾರಸು

Update: 2018-02-02 16:00 GMT

ಹೊಸದಿಲ್ಲಿ, ಫೆ.2: ಮೇಘಾಲಯ ಹೈಕೋರ್ಟ್‌ನ ಪ್ರಧಾನ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿಯವರನ್ನು ಕರ್ನಾಟಕ ಹೈಕೋರ್ಟ್‌ನ ನೂತನ ಮುಖ್ಯನ್ಯಾಯಾಧೀಶ ಹುದ್ದೆಗೆ ಸುಪ್ರೀಂಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದೆ.

 ಅಖಿಲ ಭಾರತ ಸೇವಾ ಜೇಷ್ಠತೆಯ ಪ್ರಕಾರ ದಿನೇಶ್ ಅವರು ಕರ್ನಾಟಕ ಹೈಕೋರ್ಟ್‌ನ ಹಾಲಿ ಪ್ರಭಾರ ಮುಖ್ಯನ್ಯಾಯಮೂರ್ತಿ ಎಚ್.ಜಿ ರಮೇಶ್ ಅವರಿಗಿಂತ ಕಿರಿಯರು. ನ್ಯಾಯಾಲಯದ ಉತ್ತಮ ಕಾರ್ಯಭಾರದ ದೃಷ್ಟಿಯಿಂದ ದಿನೇಶ್ ಮಹೇಶ್ವರಿಯವರನ್ನು ಕರ್ನಾಟಕ ಹೈಕೋರ್ಟ್‌ಗೆ ವರ್ಗಾಯಿಸಲಾಗಿದೆ ಎಂದು ಸುಪ್ರೀಂಕೋರ್ಟ್ ಕೊಲಿಜಿಯಂ ತಿಳಿಸಿದೆ.

ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಅವರು ಸೇವಾಜೇಷ್ಠತೆಯಲ್ಲಿ ನ್ಯಾ.ರಮೇಶ್ ಅವರಿಗಿಂತ ಕಿರಿಯರು. ಆದರೆ ನ್ಯಾ.ರಮೇಶ್ ಈ ಹಿಂದೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹುದ್ದೆ ಸ್ವೀಕರಿಸಲು ನಿರಾಕರಿಸಿದ ಕಾರಣ ದಿನೇಶ್ ಮಹೇಶ್ವರಿ ಹೆಸರನ್ನು ಶಿಫಾರಸು ಮಾಡಲಾಗಿದೆ ಎಂದು ಸುಪ್ರೀಂಕೋರ್ಟ್‌ನ ಪ್ರಧಾನ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐವರು ನ್ಯಾಯಾಧೀಶರ ಕೊಲಿಜಿಯಂ ಜನವರಿ 10ರಂದು ಅಂಗೀಕರಿಸಿದ ನಿರ್ಣಯದಲ್ಲಿ ತಿಳಿಸಿದೆ. ಅಲ್ಲದೆ ಉತ್ತರಾಖಂಡ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶ ಕೆ.ಎಂ.ಜೋಸೆಫ್ ಹಾಗೂ ಹಿರಿಯ ವಕೀಲೆ ಇಂದು ಮಲ್ಹೋತ್ರರನ್ನು ಸುಪ್ರೀಂಕೋರ್ಟ್‌ನ ನ್ಯಾಯಾಧೀಶರನ್ನಾಗಿ ಭಡ್ತಿ ನೀಡಬೇಕೆಂದೂ ಕೊಲಿಜಿಯಂ ಶಿಫಾರಸು ಮಾಡಿದೆ.

ನ್ಯಾ.ಎಸ್.ಕೆ.ಮುಖರ್ಜಿ 2017ರ ಅಕ್ಟೋಬರ್ 9ರಂದು ನಿವೃತ್ತರಾದಂದಿನಿಂದ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹುದ್ದೆ ಖಾಲಿಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News