ಮಡಿಕೇರಿ: 'ಬೆಂಕಿಯಿಂದ ಅರಣ್ಯವನ್ನು ರಕ್ಷಿಸಿ' ಜನಜಾಗೃತಿ ಜಾಥಾ

Update: 2018-02-02 16:46 GMT

ಮಡಿಕೇರಿ, ಫೆ.2: ಬೆಂಕಿಯಿಂದ ಅರಣ್ಯವನ್ನು ರಕ್ಷಿಸಿ ಎಂಬ ಘೋಷವಾಕ್ಯದೊಂದಿಗೆ ವೈಲ್ಡ್ ಲೈಫ್ ಫಸ್ಟ್ ಸಂಸ್ಥೆ ವತಿಯಿಂದ ಮಡಿಕೇರಿಯಲ್ಲಿ ಜನಜಾಗೃತಿ ಮೂಡಿಸಲಾಯಿತು. 

ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಜನಜಾಗೃತಿ ಜಾಥಾಕ್ಕೆ ಮಡಿಕೇರಿ ವಲಯ ಅರಣ್ಯಾಧಿಕಾರಿ ವಿಜಯ ಕುಮಾರ್ ಬ್ಯಾಂಡ್ ಬಾರಿಸುವ ಮೂಲಕ ಚಾಲನೆ ನೀಡಿದರು.

ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡು ಕಾಡ್ಗಿಚ್ಚು, ಅರಣ್ಯ ಬೆಂಕಿಗೆ ಆಹುತಿ, ಪರಸರ ನಾಶ, ವನ್ಯಜೀವಿಗಳ ಉಳಿವಿನ ಬಗ್ಗೆ ಕರಪತ್ರಗಳನ್ನು ಸಾರ್ವಜನಿಕರಿಗೆ ಹಂಚುವ ಮೂಲಕ ಜಾಗೃತಿ ಮೂಡಿಸಿದರು.

ನಗರದ ಮುಖ್ಯ ರಸ್ತೆಗಳ ಮೂಲಕ ಸಾಗಿದ ಕಾಡ್ಗಿಚ್ಚು ಜಾಗೃತಿ ಜಾಥಾ ನಗರದ ಖಾಸಗಿ ಬಸ್‍ನಿಲ್ದಾಣ, ಇಂದಿರಾಗಾಂಧಿ ವೃತ್ತದ ಮೂಲಕ ಸಾಗಿ ಕೊಡಗು ಏಕಿಕರಣ ರಂಗದ ಕಚೇರಿಯಲ್ಲಿ ಸಮಾಪನಗೊಂಡಿತು. ಈ ಸಂದರ್ಭ ಮಾತನಾಡಿದ ವೈಲ್ಡ್ ಲೈಫ್ ಫಸ್ಟ್ ಸಂಸ್ಥೆಯ ಸಂಚಾಲಕ ಕೆ.ಎಂ.ಚಿಣ್ಣಪ್ಪ, ಕಾಡ್ಗಿಚ್ಚು ಮಾನವ ನಿರ್ಮಿತವಾಗಿದೆ. ಅರಣ್ಯವೊಂದಕ್ಕೆ ಬೆಂಕಿ ತಗುಲಿದರೆ ಮನುಕುಲದ ವಿನಾಶವೆಂದೇ ತಿಳಿಯಬೇಕು. ಕಾಡ್ಗಿಚ್ಚಿನಿಂದಾಗಿ ಜಲಮೂಲ ನಾಶವಾಗುವುದಲ್ಲದೇ, ವನ್ಯಪ್ರಾಣಿಗಳು ಆಹಾರ ಅರಸಿ ನಾಡಿಗೆ ಲಗ್ಗೆ ಇಡುತ್ತವೆ ಎಂದರು.

ಪ್ರಸ್ತುತ ಜಿಲ್ಲೆಯಲ್ಲಿ ಕಾಡಾನೆ, ಹುಲಿ, ಚಿರತೆ ಹಾವಳಿ ಹೆಚ್ಚಾಗಲು ಅರಣ್ಯ ನಾಶವೇ ಕಾರಣವಾಗಿದ್ದು, ಅರಣ್ಯವನ್ನು ಬೆಂಕಿಯಿಂದ ರಕ್ಷಿಸದಿದ್ದಲ್ಲಿ ಮನುಕುಲದ ಉಳಿವು ಅಸಾಧ್ಯವೆಂದು ಎಚ್ಚರಿಸಿದರು. ಈ ಹಿನ್ನೆಲೆಯಲ್ಲಿ ಜನಜಾಗೃತಿ ಮೂಡಿಸಲು 1995ರಿಂದಲೇ ವೈಲ್ಡ್ ಲೈಫ್ ಫಸ್ಟ್ ಸಂಸ್ಥೆ ಜನಜಾಗೃತಿ ಅಭಿಯಾನ ನಡೆಸುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭ ಅರಣ್ಯ ರಕ್ಷಕರಾದ ಆರೋಗ್ಯ ಸ್ವಾಮಿ, ಕೊಡಗು ಏಕಿಕರಣ ರಂಗದ ತಮ್ಮುಪೂವಯ್ಯ, ಸ್ವಯಂ ಸೇವಕರಾದ ರಂಜನ್ ಬಿದ್ದಪ್ಪ, ಶ್ರೀಧರ್, ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News