ಹದಿಹರೆಯದವರು ಹರವಿಡುವ ವರ್ತನೆಗಳು
ಭಾಗ 3
ಕಿಶೋರಾವಸ್ಥೆಯ ದಾಟುವಾಗ
ಅಡಲೋಸೆನ್ಸ್ ಅಥವಾ ಕಿಶೋರಾವಸ್ಥೆಯಿಂದ ಯೌವನಾವಸ್ಥೆಗೆ ಬದಲಾಗುವ ಮಕ್ಕಳ ಹಂತ ಇಡೀ ಬದುಕಿನಲ್ಲೇ ಬಹಳ ಕ್ಲಿಷ್ಟಕರವಾದದ್ದು, ಹಾಗೆಯೇ ಮುಖ್ಯವಾದಂತಹ ಘಟ್ಟವೂ ಕೂಡ ಹೌದು. ಈ ಸಮಯದಲ್ಲಿ ತೋರುವಂತಹ ವರ್ತನೆಗಳ ಪ್ರದರ್ಶನಗಳು ಅಥವಾ ಪ್ರದರ್ಶನಾ ವರ್ತನೆಗಳು ಅನೇಕ ಬಗೆಯ ಸಂಘರ್ಷಗಳಿಗೆ, ಒಳದೋಟಿಗಳಿಗೆ ಕಾರಣವಾಗುತ್ತವೆ.
ಸಾಮಾನ್ಯವಾಗಿ ನೋಡುಗರನ್ನು ಆಕರ್ಷಿಸಲೆಂದು ಹೊರನೋಟಕ್ಕೆ ಕಾಣುವಂತಾದರೂ ಅದು ಅಷ್ಟೇ ಆಗಿರುವುದಿಲ್ಲ. ಕೆಲವೊಮ್ಮೆ ಆ ವಯಸ್ಸಿನ ಮಕ್ಕಳು ಪ್ರಬುದ್ಧರಂತೆ ಕಂಡರೂ ಪ್ರಬುದ್ಧರಾಗಿರುವುದಿಲ್ಲ, ಅಪ್ರಬುದ್ಧರಂತೆ ಕಂಡರೂ ಅಪ್ರಬುದ್ಧರಾಗಿರುವುದಿಲ್ಲ. ಅಂತಹ ವಯೋಮಾನದ ಆ ಸಮಯದಲ್ಲಿ ಅವರದ್ದೆಲ್ಲಾ ಆತ್ಮಕೇಂದ್ರಿತ ಆಲೋಚನೆಗಳು ಮತ್ತು ಅವುಗಳಿಂದ ಉಂಟಾಗುವ ಭಾವನೆಗಳು ಮತ್ತು ವಿಚಾರಗಳನ್ನು ಪ್ರದರ್ಶಿಸುವುದರಲ್ಲಿ ಅವರ ವರ್ತನೆಗಳು ಮಗ್ನವಾಗಿರುತ್ತವೆ. ಈ ಹದಿಹರೆಯದವರಲ್ಲಿ ಆಲೋಚನೆಗಳು ಮತ್ತು ಭಾವನೆಗಳು ಸಕಾರಾತ್ಮಕವಾಗಿರುತ್ತವೋ, ನಕಾರಾತ್ಮಕವಾಗಿರುತ್ತವೋ ಎಂಬುದು ಅವರ ಕಾಳಜಿಯೇ ಆಗಿರುವುದಿಲ್ಲ.
ಬದಲಾಗಿ ತಮ್ಮ ಆಶ್ಚರ್ಯ, ಪ್ರಶಂಸೆ, ಅನುಕಂಪ, ಶ್ರದ್ಧೆ, ಗೌರವ, ಅಭಿಮಾನ, ಪ್ರೀತಿ, ಕೋಪ, ದ್ವೇಷ ಇವುಗಳನ್ನು ಎಷ್ಟರಮಟ್ಟಿಗೆ ಪ್ರದರ್ಶಿಸುತ್ತೇವೆ ಎಂಬುದರ ಬಗ್ಗೆ ಆಸಕ್ತಿ ಹೊಂದಿರುತ್ತಾರೆಯೇ ಹೊರತು ಅವು ಎಷ್ಟರಮಟ್ಟಿಗೆ ಸಮರ್ಪಕ ಅಥವಾ ಸೂಕ್ತ ಗ್ರಹಿಕೆಯಿಂದ ಕೂಡಿರುತ್ತವೆ ಎಂಬುದನ್ನು ತಿಳಿದುಕೊಳ್ಳುವುದರ ಕುರಿತು ಅವರು ಆಸಕ್ತಿ ವಹಿಸುವುದಿಲ್ಲ. ಎಷ್ಟೋ ಬಾರಿ ಗಮನಿಸಿ ನೋಡಿ, ತಮಗೆ ಇಷ್ಟವಾದ ಸಂಗೀತವನ್ನೋ, ಚಲನಚಿತ್ರವನ್ನೋ ಅತ್ಯಂತ ಜೋರಾದ ಸದ್ದಿನಲ್ಲಿ ತಾವಿದನ್ನು ಕೇಳುತ್ತಿದ್ದೇವೆ ಎಂಬುದನ್ನು ಪ್ರದರ್ಶಿಸುತ್ತಾರೆ. ಆ ಸ್ಥಳದಲ್ಲಿ ಹಾದು ಹೋಗುವವರೆಲ್ಲಾ ಅದನ್ನು ಕೇಳಿ ಅವರತ್ತ ತಿರುಗಿ ನೋಡುವುದನ್ನು ಅವರು ಆನಂದಿಸುತ್ತಾರೆ. ಹಾಗೆಯೇ ಹದಿಹರೆಯದವರು ಒಟ್ಟಾಗಿ ಸೇರಿದಾಗ ಅವರಾಡುವ ಮಾತುಗಳಾಗಲಿ, ಹಾರಿಸುವ ಹಾಸ್ಯ ಚಟಾಕಿಗಳಾಗಲಿ ಅಷ್ಟೇನೂ ರಸಭರಿತವಾಗಿರದಿದ್ದರೂ, ಅಥವಾ ಹೊಸತೇನೂ ಅಲ್ಲದಿದ್ದರೂ ದೊಡ್ಡ ದನಿಯಲ್ಲಿ ನಗುತ್ತಾ, ಮಾತನಾಡುತ್ತಾ ಸುತ್ತಮುತ್ತಲಿನವರನ್ನು ಆಕರ್ಷಿಸುತ್ತಿರುತ್ತಾರೆ. ಅವರಿಗೆ ಅವರು ಏನು ಅಂದುಕೊಳ್ಳುತ್ತಾರೆ ಎಂಬುದರ ಬಗ್ಗೆ ನಿಗಾ ಇರುವುದಿಲ್ಲ. ಆದರೆ ಸುತ್ತಮುತ್ತಲಿನವರು ತಮ್ಮನ್ನು ನೋಡುತ್ತಿದ್ದಾರೆ, ತಾವೊಂದು ಆಕರ್ಷಕ ಕೇಂದ್ರ ಎಂಬುದನ್ನು ಮಾತ್ರವೇ ತಿಳಿದಿರುತ್ತಾರೆ. ನೋಡುವವರ ಸಂಖ್ಯೆ ಹೆಚ್ಚಾದಷ್ಟು ಅವರ ಚಟುವಟಿಕೆಗಳೂ ಹುರುಪುಗೊಳ್ಳುತ್ತವೆ. ಇವುಗಳನ್ನು ಪ್ರದರ್ಶನ ವರ್ತನೆಗಳ ಪರಮಾವಧಿ ಎಂದೇ ಹೇಳಬಹುದು.
ಹೆಮ್ಮೆಯ ಅವಿವೇಕತನ
ತಮ್ಮ ಚುರುಕುತನವನ್ನು, ಚಾತುರ್ಯವನ್ನು ಮತ್ತು ಸ್ಮಾರ್ಟ್‌ನೆಸ್‌ನ್ನು ಪ್ರದರ್ಶಿಸುವ ಧಾವಂತದಲ್ಲಿ ಬಹಳಷ್ಟು ಸಲ ಹದಿಹರೆಯದವರು ತಮ್ಮ ಅವಿವೇಕವನ್ನು ಮತ್ತು ಅಸೂಕ್ಷ್ಮತೆಯನ್ನು ಪ್ರದರ್ಶಿಸುತ್ತಿರುತ್ತಾರೆ. ಆದರೆ ಅವರು ಮಾತ್ರ ಆತ್ಮತೃಪ್ತಿಯುಳ್ಳವರಾಗಿರುತ್ತಾರೆ. ಇನ್ನೂ ದೊಡ್ಡ ದುರಂತದ ಸಂಗತಿಯೆಂದರೆ, ಬಹುಪಾಲು ಹದಿಹರೆಯದ ಮಕ್ಕಳಿಗೆ ಅರಿವಿನ ವಿಸ್ತಾರದ ಬಗ್ಗೆ ಅರಿವೂ ಇರುವುದಿಲ್ಲ, ಕಾಳಜಿಯೂ ಇರುವುದಿಲ್ಲ. ಯಾರೋ ದೊಡ್ಡವರ ಅರಿವಿನ ನುಡಿ ಅವರಿಗೆ ಬ್ಲೇಡ್ ಹಾಕುತ್ತಿದ್ದಾರೆ ಎಂಬ ಉಡಾಫೆಯದ್ದಾಗಿ ಕಾಣಬಹುದು ಮತ್ತೆ ಕೆಲವು ಸಲ ಅದನ್ನು ಕಟ್ಟಿಕೊಂಡು ನಮಗೇನಾಗಬೇಕಿದೆ ಎಂದೂ ಅನ್ನಿಸಬಹುದು. ಕೆಲವೊಮ್ಮೆ ಕೇಳುವಂತೆ ನಟಿಸಿದರೂ ಅದು ಆ ಹೊತ್ತಿಗೆ ಅರಿತಂತೆ ಮಾಡುವ ಅಭಿನಯ ಮಾತ್ರವೇ ಆಗಬಹುದು. ಮನೆಯಲ್ಲಿನ ದೊಡ್ಡವರ ಬಗ್ಗೆ, ತಮ್ಮ ಒಡಹುಟ್ಟುಗಳ ಬಗ್ಗೆ, ಸಮಾಜದಲ್ಲಿ ತಮ್ಮ ಸುತ್ತಮುತ್ತಲಿನವರ ಬಗ್ಗೆ ಇರುವ ಆಸಕ್ತಿಗಿಂತ ತಮ್ಮ ಬಗ್ಗೆಯೇ ಅತೀವ ಆಸಕ್ತಿಯುಳ್ಳವರಾಗಿದ್ದು, ಇದಕ್ಕೆ ಸರಿಯಾದ ಮಾರ್ಗದರ್ಶನ, ಅದರಲ್ಲೂ ಆಕರ್ಷಕ ಮತ್ತು ಅವರಿಗೆ ಬೆರಗಾಗಿಸುವಂತಹ ದೃಷ್ಟಿಕೋನದ ಪರಿಚಯವಾಗದೇ ಹೋದರೆ ಅದು ಯೌವನಾವಸ್ಥೆಗೂ ಮತ್ತು ವಯಸ್ಕ ಹಂತಕ್ಕೂ ಮುಂದುವರಿಯುವ ಎಲ್ಲಾ ಸಾಧ್ಯತೆಗಳು ಇರುತ್ತವೆ.
ಅವರ ವರ್ತನೆಗಳ ಪ್ರದರ್ಶನಗಳಲ್ಲಿ ವ್ಯಕ್ತವಾಗುವ ಕೆಲವು ವಿಷಯಗಳೆಂದರೆ:
1.ಕುಟುಂಬದಿಂದ ಉಚಿತವಾದ ಗಮನ ದೊರೆತಿದೆಯೇ ಅಥವಾ ಇಲ್ಲವೇ. ಅವರ ಮನೆಯವರ ಜೊತೆಗಿನ ಸಂಬಂಧಗಳು ಉತ್ತಮವಿದೆಯೇ ಇಲ್ಲವೇ ಎಂಬುದು ತಿಳಿಯುತ್ತದೆ. ಕುಟುಂಬದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆಯೇ ಇಲ್ಲವೇ.
2.ಅವರ ಶೈಕ್ಷಣಿಕ ಮಟ್ಟವು ಮತ್ತು ಕಲಿಕೆಯ ಪ್ರಕ್ರಿಯೆಯು ಉತ್ತಮವಾಗಿಯೇ ಇಲ್ಲವೇ.
3.ಸಮೂಹದಿಂದ ಅಥವಾ ಕುಟುಂಬದಿಂದ ಪ್ರತ್ಯೇಕವಾಗಿ ಕಾಣಿಸಿಕೊಳ್ಳಬೇಕೇ ಅಥವಾ ಬೇಡವೇ.
4.ಆತ್ಮರತಿ ಅಥವಾ ತನ್ನನ್ನು ತಾನು ಅಭಿಮಾನಿಸಿಕೊಳ್ಳುವುದು, ಅಥವಾ ಪ್ರೀತಿಸಿಕೊಳ್ಳುವ ಗುಣವಿದೆಯೇ, ಇಲ್ಲವೇ.
5.ಯಾವುದೇ ಒಂದರ ವಿರುದ್ಧವಾಗಿ ಪ್ರತಿಭಟನಾತ್ಮಕವಾದ ಅಥವಾ ಸ್ಪಂದಿಸುವ ಗುಣವನ್ನು ಹೊಂದಿದ್ದಾರೆಯೇ ಅಥವಾ ಇಲ್ಲವೇ.
6.ಸಮಾಜಕ್ಕೆ ವಿರುದ್ಧ ದಿಕ್ಕಿನಲ್ಲಿ ಅಥವಾ ನೈತಿಕ ಚೌಕಟ್ಟಿನ ಪರಿಮಿತಿಯಲ್ಲಿ ಹೋಗುತ್ತಿದ್ದಾರೆಯೇ ಅಥವಾ ಇಲ್ಲವೇ.
7.ವಿಜ್ಞಾನ, ವಿಚಾರ ಮತ್ತು ಸಂಪ್ರದಾಯ; ಇತ್ಯಾದಿಗಳಲ್ಲಿ ಅವರು ಆಸಕ್ತಿ ಹೊಂದಿದ್ದಾರೆಯೇ ಅಥವಾ ಇಲ್ಲವೇ.
8.ಭಯ, ಹಿಂಜರಿಕೆ, ಮುನ್ನುಗ್ಗುವ ಧೈರ್ಯ, ಮೊಂಡುತನ; ಇತ್ಯಾದಿ ವ್ಯಕ್ತಿಗತವಾದಂತಹ ಗುಣಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುವಂತಹ ಸ್ಥೈರ್ಯ ಮತ್ತು ಮುಕ್ತತೆ ಇದೆಯೇ ಇಲ್ಲವೇ.
9.ಪರೋಪಕಾರ ಬುದ್ಧಿ, ಸ್ವಾರ್ಥ, ಸ್ವಹಿತಾಸಕ್ತಿ, ಔದಾರ್ಯದಂತಹ ಗುಣಗಳನ್ನು ಹೊಂದಿದ್ದಾರೆಯೇ ಅಥವಾ ಇಲ್ಲವೇ. ಹೀಗೆ ಹಲವು ವಿಷಯಗಳನ್ನು ಅವರು ತಮ್ಮ ವರ್ತನೆಗಳ ಮೂಲಕ ಪ್ರದರ್ಶಿಸುತ್ತಿರುತ್ತಾರೆ.
ಯಾರೋ ಒಬ್ಬ ಸಿನೆಮಾನಟನನ್ನು ಕಾರಣವಿಲ್ಲದೇ ಪ್ರೀತಿಸುವ, ಆತನ ಪ್ರತಿಭೆಯನ್ನು ಒರೆಹಚ್ಚಿ ನೋಡುವ ಗುಣವಿರದಿದ್ದರೂ, ಅಥವಾ ಪರೀಕ್ಷಿಸುವಂತಹ ಮಾನದಂಡವೇನೂ ಇರದಿದ್ದರೂ ಅಭಿಮಾನಿಸುವುದು ಈ ಹಂತದಲ್ಲಿಯೇ ಪ್ರಾರಂಭವಾಗುತ್ತದೆ. ಅವರಲ್ಲಿ ತಮ್ಮದೇ ಆದಂತಹ ಯಾವುದೋ ಗುಣವನ್ನು ಕಂಡುಕೊಂಡಿದ್ದು, ಆ ಕಾರಣದಿಂದ ತಮ್ಮನ್ನು ಅವರಲ್ಲಿ ನೋಡುತ್ತಾ ತಮ್ಮ ಅಭಿಮಾನವನ್ನು ಇಮ್ಮಡಿಸಿಕೊಳ್ಳುತ್ತಿರುತ್ತಾರೆ. ತಮ್ಮಲ್ಲಿರುವ ಕೆಲವು ಅವ್ಯಕ್ತ ಆಸೆ ಮತ್ತು ಕಾಮನೆಗಳ ಸಾಕಾರ ಮೂರ್ತಿಯಾಗಿ ಆ ಸಿನೆಮಾನಟ ಕಾಣುತ್ತಾನೆ. ತಾನು ಮಾಡಬೇಕೆಂದು ಆಸೆಪಡುವ ಆದರೆ ಮಾಡಲಾಗದಂತಹ ಕೆಲವು ಸಾಹಸಗಳನ್ನು ಅವನು ಮಾಡುತ್ತಾನಾದ್ದರಿಂದ ಅವನ ಮೇಲೆ ಅಭಿಮಾನ ಇಮ್ಮಡಿಸುತ್ತದೆ. ಇದೊಂದು ಬಗೆಯ ಗುಪ್ತವಾದಂತಹ ತೃಪ್ತಿಯನ್ನು ಪಡೆಯುವ ವಿಧಾನವೇ ಆಗಿರುತ್ತದೆ. ಅತೀ ಕ್ರೌರ್ಯದಿಂದ, ಹಿಂಸೆಯಿಂದ, ಕಾಮುಕತೆಯ ಉನ್ಮತ್ತತೆಯಿಂದ ಇರುವಂತಹ ಅನೇಕ ಚಿತ್ರಗಳು ಯಶಸ್ಸಾಗುವುದೂ ಈ ಬಗೆಯ ಜನರಿಂದಲೇ. ಈ ಜನರು ತಾವು ಅಂತಹ ಚಿತ್ರಗಳನ್ನು ನೋಡುವ ಮೂಲಕ ತಮ್ಮ ಸುಪ್ತವಾದ ಆಸೆಗಳನ್ನು, ಅಡಕವಾಗಿರುವ ನಿರಾಸೆಗಳನ್ನು ಅಭಿವ್ಯಕ್ತಗೊಳಿಸುತ್ತಾರೆ. ಹಾಗೆಯೇ ಆಸೆ ಮತ್ತು ನಿರಾಸೆಗಳು ಅಡಗಿರುವಂತೆ ಅವರಲ್ಲಿ ಕ್ರೌರ್ಯ ಮತ್ತು ದಬ್ಬಾಳಿಕೆಗಳೂ ಕೂಡ ಬಚ್ಚಿಟ್ಟುಕೊಂಡಿರುತ್ತವೆ. ಇನ್ನು ಇದಂತೂ ನೇರವಾಗಿ ಪೋಷಕರ ಆಸಕ್ತಿ ಮತ್ತು ಅಭಿರುಚಿಗಳ ಮೇಲೆಯೇ ಮಕ್ಕಳ ಆಸಕ್ತಿ ಅಭಿರುಚಿಗಳು ರಚಿತವಾಗುತ್ತಾ ಹೋಗುತ್ತವೆ.
ಅಭಿರುಚಿ ಮತ್ತು ಅಭಿಪ್ರಾಯಗಳು
ಈ ಮಕ್ಕಳ ಯಾವುದೇ ಅಭಿರುಚಿಯಾದರೂ, ನೀಡುವ ಅಭಿಪ್ರಾಯವಾದರೂ ಅದಕ್ಕೆ ಗಮನಕೊಡುವ ಕೆಲಸವನ್ನು ಪೋಷಕರು ಮಾಡಬೇಕು. ಒಂದೋ ಅದು ಸಕಾರಾತ್ಮಕವಾಗಿದ್ದರೆ ಅದನ್ನು ನೆರವೇರಿಸುವ ಮೂಲಕ ತೃಪ್ತಿಭಾವವನ್ನು ಉಂಟು ಮಾಡಿದರೆ ಅಲ್ಲಿಗೆ ಅವರು ಆ ಆಸೆ ಅಥವಾ ಹಾತೊರೆಯುವಿಕೆಯನ್ನು ದಾಟಿ ಮುಂದಿನ ಆಲೋಚನೆಗಳನ್ನು ಮಾಡುತ್ತಾರೆ. ಹಾಗೆಯೇ ಒಂದು ವೇಳೆ ಅವರ ಒಲವು ಮತ್ತು ಧೋರಣೆಗಳು ನಕಾರಾತ್ಮಕವಾಗಿದ್ದ ಪಕ್ಷದಲ್ಲಿ ಅದಕ್ಕೆ ಪರ್ಯಾಯವಾಗಿ ಅಥವಾ ಅದು ನಿವಾರಣೆಯಾಗುವಂತಹ ಹಾಗೂ ಅದು ಅವರ ಮನಸ್ಸಿಗೆ ಮುದ ಕೊಡುವಂತಹ ಪರ್ಯಾಯವನ್ನೇ ನೀಡಬೇಕು. ಆಗ ಅವರು ಅದನ್ನು ದಾಟಿ ಹೋಗಲು ಅನುಕೂಲವಾಗುತ್ತದೆ. ಇಲ್ಲದೇ ಹೋದರೆ, ಒಳಗೆ ಕಾಮನೆಗಳು, ನಿರಾಸೆಗಳು, ಕ್ರೌರ್ಯಗಳು, ಅಸೂಯೆಗಳು ಕೊಳೆಯುತ್ತಿದ್ದಲ್ಲಿ, ಮಕ್ಕಳು ಎಂತಹುದ್ದೇ ದೊಡ್ಡದೊಡ್ಡ ಘನಂದಾರಿ ಕಾರ್ಯಕ್ರಮ, ಸಭೆೆ, ಕಾರ್ಯಾಗಾರ, ಶಾಲೆಗಳಿಗೆ ಹೋದರೂ ಗುಟ್ಟಾಗಿ ಅದನ್ನೇ ಆಲೋಚಿಸುತ್ತಿರುತ್ತಾರೆ ಮತ್ತು ಆ ಗುಪ್ತಗಾಮಿನಿಯೂ ಕೂಡ ತಾನು ಹರಿಯಲು ಎಲ್ಲಿ ದಾರಿಮಾಡಿಕೊಳ್ಳಬಹುದು ಎಂದು ಅವಕಾಶವನ್ನು ಕಾಯುತ್ತಿರುತ್ತದೆ. ಹದ್ದು ಆಕಾಶದಲ್ಲಿ ಹಾರಾಡುತ್ತಿದ್ದರೂ ಅದರ ಕಣ್ಣುಗಳು ನೆಲದ ಮೇಲೆ ಬಿದ್ದಿರುವ ಮಾಂಸದ ತುಂಡಿಗಾಗಿ ಎಂಬಂತೆ, ಮಕ್ಕಳಲ್ಲಾಗಲಿ, ದೊಡ್ಡವರಲ್ಲಾಗಲಿ, ಅವರಲ್ಲಿ ಅಡಕವಾಗಿರುವ ಗುಪ್ತ ಬಯಕೆ ಅಥವಾ ಪುಟಿದೇಳಲು ಕಾಯುತ್ತಿರುವ ಹಲವು ಗುಣಗಳು ಅವರಿಗೇ ಅರಿವಿಲ್ಲದಂತೆ ಪ್ರದರ್ಶಿತವಾಗುತ್ತಿರುತ್ತದೆ. ಹಾಗಾಗಿ, ಯಾರದೇ ಯಾವುದೇ ವರ್ತನೆಯು ಅಸಮಂಜಸವಾಗಿ, ಅಸ್ವಾಭಾವಿಕವಾಗಿ, ಅನುಚಿತವಾಗಿ ಪ್ರದರ್ಶಿತವಾದರೆ ಅದನ್ನು ಖಂಡಿಸುವುದೋ, ನಿರಾಕರಿಸುವುದೋ, ನಿಂದಿಸುವುದೋ ಮಾಡುವುದಕ್ಕಿಂತ ಅದನ್ನು ನಿವಾರಿಸುವ ಬಗೆಯ ಬಗ್ಗೆ ಹಿರಿಯರಾದವರು ಆಲೋಚಿಸಬೇಕು. ಯಾವುದೇ ಬಗೆಯ ಅಪರಾಧವನ್ನು ಮಾಡುವ ಅಥವಾ ಕ್ರೌರ್ಯವನ್ನು ಪ್ರದರ್ಶಿಸುವ ಮಗುವಿಗೆ ನೀಡುವ ಶಿಕ್ಷೆಯ ಬಗೆಗಿನ ಆಲೋಚನೆಗಳಿಗಿಂತ ಅದನ್ನು ನಿವಾರಿಸುವ ಬಗೆಯ ಕಡೆಗೆ, ಸಮಾಲೋಚನೆ ನೀಡಿ ಆ ಮಗುವನ್ನು ಅದರ ಕುಟುಂಬಕ್ಕೆ ಮತ್ತು ಸಮಾಜಕ್ಕೆ ಮತ್ತೆ ಕೊಡುಗೆಯನ್ನಾಗಿಸುವುದರ ಬಗ್ಗೆ ಪ್ರಜ್ಞಾವಂತರು ಆಲೋಚಿಸುವುದು ಒಳ್ಳೆಯದು.
ಉತ್ತಮ ಸಮಾಲೋಚನೆಗಳ ಲಕ್ಷಣಗಳು
ಹದಿಹರೆಯದ ಹುಡುಗರು ತಮ್ಮ ವರ್ತನೆಗಳ ಪ್ರದರ್ಶನದಲ್ಲಿ ಅದೆಷ್ಟೇ ಅಪ್ರಬುದ್ಧರಾಗಿದ್ದರೂ, ಬಾಲಿಶವಾಗಿದ್ದರೂ, ಅನುಚಿತವಾಗಿದ್ದರೂ ಹಿರಿಯರು ಅದನ್ನು ಸರಿಪಡಿಸುವಂತಹ ಕಾಳಜಿಯನ್ನು ಪ್ರಾಮಾಣಿಕವಾಗಿ ಹೊಂದಿದ್ದೇ ಆಗಿದ್ದಲ್ಲಿ, ಆ ಹುಡುಗರ ವರ್ತನೆಗಳಿಗೆ ಪ್ರಬುದ್ಧವಾಗಿ, ಉಚಿತವಾಗಿ, ಅನುಕಂಪ ಮತ್ತು ಕಾಳಜಿ ಹೊಂದಿಯೇ ವರ್ತಿಸಬೇಕು.
ಹದಿಹರೆಯದವರ ಅನುಚಿತ ವರ್ತನೆಗಳ ಪ್ರದರ್ಶನಗಳಾದಾಗ ಹಿರಿಯರು ಕೆಲವು ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
1.ಅವರ ಈ ವರ್ತನೆಯು ಯಾವುದೇ ಹಿಂದಿನ ಘಟನೆ ಅಥವಾ ಸನ್ನಿವೇಶಕ್ಕೆ ಪ್ರತಿಭಟನೆಯ ರೂಪವಾಗಿದ್ದಿರಬಹುದು.
2.ಸಾಮಾಜಿಕವಾಗಿ ಅವರಿಗೆ ಸಲ್ಲಬೇಕಾದ ಗೌರವವನ್ನು ಸಲ್ಲಿಸಬೇಕು.
3.ವ್ಯಕ್ತಿಗತವಾಗಿ ಆತ್ಮೀಯತೆ ಮತ್ತು ಕಾಳಜಿಯನ್ನು ಪ್ರದರ್ಶಿಸಬೇಕು.
4.ಅವರ ಉದ್ರಿಕ್ತ ಅಥವಾ ಆವೇಗದ ನಡವಳಿಕೆಗಳನ್ನು ಅನುದ್ವೇಗದಿಂದ ಮತ್ತು ಸರಳ ಮನಸ್ಥಿತಿಯಿಂದ ನಿಭಾಯಿಸಬೇಕು.
5.ನೀನು ನಮ್ಮ ಮುಂದುವರಿದ ಭಾಗ ಮತ್ತು ನೀವು ನಮ್ಮ ಮುಂದುವರಿಯುತ್ತಿರುವ ಪೀಳಿಗೆ ಎಂಬುದನ್ನು ಅವರಿಗೆ ನೆನಪಿಸಬೇಕು.
6.ಅವರು ಹಾತೊರೆಯುತ್ತಿರುವ ಅನುಕಂಪ, ಕಾಳಜಿ, ಪ್ರಶಂಸೆ; ಎಲ್ಲವನ್ನೂ ಧಾರಾಳವಾಗಿ ನೀಡಬೇಕು.
7.ಅವರೊಂದಿಗೆ ಸ್ಪರ್ಧೆ ಹೂಡುವಂತೆ, ನೀನಾ ಇಲ್ಲ ನಾನಾ ಎಂಬಂತಹ ಪೈಪೋಟಿಯ ಮಾತುಗಳನ್ನು ಆಡಬಾರದು.
8.ನಾನು ದೊಡ್ಡವನು, ನೀನು ನನ್ನೊಂದಿಗೆ ಗೌರವ ಪೂರ್ವಕವಾಗಿ ನಡೆದುಕೊಳ್ಳಬೇಕು, ನಾನು ನಿನ್ನನ್ನು ಖಂಡಿಸುವ, ದಂಡಿಸುವ ಹಕ್ಕನ್ನು ಹೊಂದಿದ್ದೇನೆ ಎಂದು ಎಂದೂ ನಡೆದುಕೊಳ್ಳಬಾರದು.
9.ನನಗೆ ನಿನ್ನ ಸಹಾಯ ಮತ್ತು ಸಹಕಾರ ಬೇಕು ಎಂದೇ ನಡೆದುಕೊಳ್ಳಬೇಕು.
10.ನೀನು ಸಂಭ್ರಮಿಸುವ ಪರಿಯನ್ನು ನಾನು ಗೌರವಿಸುತ್ತೇನೆ. ಅದನ್ನು ನಾನೂ ಹೊಂದುವ ಆಸೆ ಇದೆ. ಅದನ್ನು ನಾನು ನೆರವೇರಿಸಿಕೊಳ್ಳಲು ನಿನ್ನ ಸಹಕಾರ ಬೇಕು ಎಂಬ ಧೋರಣೆ.
11.ಹದಿಹರೆಯದವರ ಶಕ್ತಿಯನ್ನು ಪ್ರಶಂಸಿಸಿ ಮತ್ತು ನಿಜಕ್ಕೂ ವಿಶ್ವಾಸವಿಡಿ. ಅವರಿಗೆ ಬೇಕಾಗಿರುವುದು ಎತ್ತುವಿಕೆ ಅಲ್ಲ. ಅವರೇ ಏಳುವರು. ಅವರಿಗೆ ಬೇಕಾಗಿರುವುದು ಮಾರ್ಗದರ್ಶನ. ಅವರ ಗುರಿ ಅವರು ನಿಜಕ್ಕೂ ಯೋಗ್ಯವಾಗಿಯೇ ಸಾಧಿಸುವರು. ಅವರ ಗುರಿಯನ್ನು ತಿಳಿದುಕೊಂಡು ದಾರಿಯನ್ನು ಸುಗಮ ಮಾಡಿಕೊಡುವುದಷ್ಟೇ ನಮ್ಮ ಕೆಲಸವಾಗಬೇಕು. ಗುರಿಯನ್ನೇ ಕಟ್ಟಿಕೊಡುವುದಲ್ಲ. ಹದಿಹರೆಯದವರು ಈ ರೀತಿಯ ನಡವಳಿಕೆಗಳನ್ನು ಸಮ್ಮತಿಸುತ್ತಾರೆ. ನಂತರ ಅವರ ಕೊಡುಗೆಗಳು ಅವರ ಕುಟುಂಬಕ್ಕೆ ಮತ್ತು ಸಮಾಜಕ್ಕೆ ಹೇಗೆ ಸಲ್ಲುವಂತಾಗಬೇಕು ಎಂಬುದನ್ನು ಅವರೊಂದಿಗೇ ಯೋಜಿಸಬೇಕು. ತಾನು ವಾಸಿಸುವ ಕುಟುಂಬ ಮತ್ತು ಕುಟುಂಬವು ಇರುವಂತಹ ಸಮಾಜ; ಇದರೊಂದಿಗೆ ಆ ಹದಿಹರೆಯದವರ ಸ್ಪಷ್ಟ ಮತ್ತು ಸರಳವಾದ ಸಂಬಂಧ. ಇದರ ಅರಿವನ್ನುಂಟು ಮಾಡಬೇಕಾದರೆ ಹದಿಹರೆಯದವರು ಹಿರಿಯರ ಮುಂದೆ ಹರವಿಡುವ ವರ್ತನೆಗಳನ್ನು ಅಧ್ಯಯನ ಮಾಡಲೇಬೇಕು.
ಈ ಹದಿಹರೆಯದವರಲ್ಲಿ ಆಲೋಚನೆಗಳು ಮತ್ತು ಭಾವನೆಗಳು ಸಕಾರಾತ್ಮಕವಾಗಿರುತ್ತವೋ, ನಕಾರಾತ್ಮಕವಾಗಿರುತ್ತವೋ ಎಂಬುದು ಅವರ ಕಾಳಜಿಯೇ ಆಗಿರುವುದಿಲ್ಲ. ಬದಲಾಗಿ ತಮ್ಮ ಆಶ್ಚರ್ಯ, ಪ್ರಶಂಸೆ, ಅನುಕಂಪ, ಶ್ರದ್ಧೆ, ಗೌರವ, ಅಭಿಮಾನ, ಪ್ರೀತಿ, ಕೋಪ, ದ್ವೇಷ ಇವುಗಳನ್ನು ಎಷ್ಟರಮಟ್ಟಿಗೆ ಪ್ರದರ್ಶಿಸುತ್ತೇವೆ ಎಂಬುದರ ಬಗ್ಗೆ ಆಸಕ್ತಿ ಹೊಂದಿರುತ್ತಾರೆಯೇ ಹೊರತು ಅವು ಎಷ್ಟರಮಟ್ಟಿಗೆ ಸಮರ್ಪಕ ಅಥವಾ ಸೂಕ್ತ ಗ್ರಹಿಕೆಯಿಂದ ಕೂಡಿರುತ್ತವೆ ಎಂಬುದನ್ನು ತಿಳಿದುಕೊಳ್ಳುವುದರ ಕುರಿತು ಅವರು ಆಸಕ್ತಿ ವಹಿಸುವುದಿಲ್ಲ.