ಕನ್ನಡ ತಂತ್ರಾಂಶ ಸಮಸ್ಯೆಗಳ ಸರಮಾಲೆ

Update: 2018-02-04 07:47 GMT

ಕಂಪ್ಯೂಟರ್ ಬಳಕೆಗೆ ಬಂದ ಆರಂಭದಲ್ಲಿ ಅದರಲ್ಲಿ ಇಂಗ್ಲಿಷ್‌ನದ್ದೇ ಪಾರಮ್ಯ. ಅದರಲ್ಲಿ ಕನ್ನಡ ಲಿಪಿವ್ಯವಸ್ಥೆ ಅಸ್ತಿತ್ವದಲ್ಲೇ ಇರಲಿಲ್ಲ. ಅದೇ ಕನ್ನಡಕ್ಕೆ ಒಂದು ಸಮಸ್ಯೆಯಾಗಿತ್ತು. ಕಾಲಕ್ರಮೇಣ ಇಂಗ್ಲಿಷ್ ತಂತ್ರಾಂಶಗಳ ತಂತ್ರಜ್ಞಾನವನ್ನು ಅನುಕರಿಸುವ ಮೂಲಕ ಸಿದ್ಧವಾದ ಪದಸಂಸ್ಕರಣಾ ತಂತ್ರಾಂಶಗಳಲ್ಲಿ (ವರ್ಡ್ ಪ್ರೊಸೆಸಿಂಗ್ ಸಾಫ್ಟ್‌ವೇರ್) ಕನ್ನಡದ ಲಿಪಿವ್ಯವಸ್ಥೆಯ ಅಳವಡಿಕೆಯಿಂದಾಗಿ ಈ ಸಮಸ್ಯೆಗೆ ಪರಿಹಾರ ದೊರಕಿತು.

ಆರಂಭಿಕ ‘ಕಂಪ್ಯೂಟರ್ ತಂತ್ರಜ್ಞಾನ’ ಇಂಗ್ಲಿಷ್‌ಗೆ ಪೂರಕವಾಗಿತ್ತು ಮತ್ತು ಕನ್ನಡಕ್ಕೆ ಸವಾಲಿನದಾಗಿತ್ತು. ಕನ್ನಡ ತಂತ್ರಾಂಶಗಳ ಸಮಸ್ಯೆಗಳೆಲ್ಲವೂ, ಇಂಗ್ಲಿಷ್‌ಗೆ ಸಿದ್ಧಗೊಂಡಿದ್ದ ಕಂಪ್ಯೂಟರ್ ಲಿಪಿತಂತ್ರಜ್ಞಾನಗಳನ್ನು ಕನ್ನಡಕ್ಕೆ ಅಳವಡಿಸುವಲ್ಲಿ ಇರುವ ತಾಂತ್ರಿಕ ಸಮಸ್ಯೆಗಳಾಗಿದ್ದವು ಸ್ಥಳೀಯ ತಂತ್ರಾಂಶ ತಯಾರಕರಿಗೆ ಕನ್ನಡವನ್ನು ಸಮರ್ಥವಾಗಿ ಕಂಪ್ಯೂಟರ್‌ನಲ್ಲಿ ಅಳವಡಿಸುವಲ್ಲಿ ತಂತ್ರಜ್ಞಾನದ ಸಮಸ್ಯೆಗಳು ನಿಜಕ್ಕೂ ಬಹುದೊಡ್ಡ ತೊಡಕಾಗಿ ಪರಿಣಮಿಸಿದವು. ಕನ್ನಡವನ್ನು ತಂತ್ರಜ್ಞಾನಕ್ಕೆ ತಕ್ಕಂತೆ ಬದಲಿಸಲು ಸಾಧ್ಯವಿಲ್ಲ. ತಂತ್ರಜ್ಞಾನವನ್ನೇ ಕನ್ನಡಕ್ಕೆ ಬಗ್ಗಿಸಬೇಕು ಮತ್ತು ಒಗ್ಗಿಸಬೇಕಾದ ಸವಾಲು ತಂತ್ರಾಂಶ ತಯಾರಕರ ಮುಂದೆ ಇತ್ತು.

ಕಂಪ್ಯೂಟರ್ ತಂತ್ರಜ್ಞಾನದ ಸಮಸ್ಯೆಗಳು:

ಇಂಗ್ಲಿಷ್ ಆಧಾರಿತ ಕಂಪ್ಯೂಟರ್ ತಂತ್ರಜ್ಞಾನವನ್ನು ಆರಂಭದಲ್ಲಿ ಕನ್ನಡ ಭಾಷೆಗೆ ಒಗ್ಗಿಸುವುದೇ ಒಂದು ಸಮಸ್ಯೆಯಾಗಿತ್ತು. ಕ್ಲಿಷ್ಟ ಮತ್ತು ಸಂಕೀರ್ಣ ಕನ್ನಡದ ಲಿಪಿಯನ್ನು ಅಳವಡಿಸುವ ಸಮಸ್ಯೆ, ಕನ್ನಡ ಪಠ್ಯಊಡಿಕೆ (ಇನ್‌ಪುಟ್) ಸಮಸ್ಯೆ. ಡಾಸ್ ಪರಿಸರದ ಮಾನಿಟರ್‌ನಲ್ಲಿ ಕನ್ನಡ ಪಠಮೂಡಿಕೆ ಸಮಸ್ಯೆ, ಕನ್ನಡದ ಅಕ್ಷರಗಳಿಗೆ ಎನ್‌ಕೋಡಿಂಗ್ (ಸಂಕೇತ ಸಂಖ್ಯೆಗಳ ನಿಗದಿ) ಸ್ಥಾನ ಕಲ್ಪಿಸುವ ಸಮಸ್ಯೆ - ಇವುಗಳು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರಮುಖ ಸವಾಲುಗಳಾಗಿದ್ದವು. ಇಂಗ್ಲಿಷ್‌ನದು ಕಡಿಮೆ ಅಕ್ಷರಗಳಿರುವ, ಸರಳ ಮತ್ತು ನೇರಲಿಪಿ (ಲೀನಿಯರ್ ಸ್ಕ್ರಿಪ್ಟ್). ಕಂಪ್ಯೂಟರೀಕರಣದ ದೃಷ್ಟಿಯಿಂದ ಕನ್ನಡದ್ದು ಕ್ಲಿಷ್ಟ ಮತ್ತು ಸಂಕೀರ್ಣ (ಕಾಂಪ್ಲೆಕ್ಸ್ ಸ್ಕ್ರಿಪ್ಟ್) ಲಿಪಿಯಾಗಿದೆ. ಇಂಗ್ಲಿಷ್‌ನಲ್ಲಿ ಅಕ್ಷರಗಳು ಕಡಿಮೆ ಇವೆ. ಇರುವ ಇಂಗ್ಲಿಷ್ ಕೀಲಿಮಣೆಯನ್ನೇ ಕನ್ನಡಕ್ಕೂ ಬಳಸಬೇಕಾದರೆ, ಕೀಲಿಮಣೆಯಲ್ಲಿ ಇನ್ನೂ ಹೆಚ್ಚಿನ ಕೀಲಿಸ್ಥಾನಗಳ ಆವಶ್ಯಕತೆ ಕಂಡುಬಂತು. ವಿಶೇಷ ಚಿಹ್ನೆಗಳ ಸ್ಥಾನಗಳನ್ನೂ ಸಹ ಕನ್ನಡದ ಅಕ್ಷರಗಳಿಗೆ ಬಳಸಿಕೊಳ್ಳುವ ಅನಿವಾರ್ಯತೆ ಬಂತು. ಹಿಂದೆ ಬಳಕೆಯಲ್ಲಿದ್ದ, ಕಡಿಮೆ ಪಿಕ್ಸೆಲ್‌ಗಳ ಮೋನೋಕ್ರೋಮ್ (ಕಪ್ಪು-ಬಿಳಿಪು) ಮಾನಿಟರ್‌ಗಳಲ್ಲಿ, ಒತ್ತಕ್ಷರಗಳ ಸಹಿತ ಕನ್ನಡ ಲಿಪಿಯನ್ನು ಮೂಡಿಸುವುದು ಹರಸಾಹಸವಾಗಿತ್ತು. ಕನ್ನಡ ಲಿಪಿ ಮಾನಿಟರ್‌ನಲ್ಲಿ ಸುಂದರವಾಗಿ ಮೂಡುತ್ತಿರಲಿಲ್ಲ. ಒತ್ತಕ್ಷರಗಳಂತೂ ಕಣ್ಣಿಗೆ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಇವೆಲ್ಲ ಸಮಸ್ಯೆಗಳು ಕನ್ನಡ ಪಠ್ಯದ ಮುದ್ರಣದಲ್ಲಿಯೂ ಸಹ ಮುಂದುವರಿದವು.

ತಂತ್ರಾಂಶ ತಯಾರಕರ ಸಮಸ್ಯೆಗಳು:

ಬಳಕೆಗೆ ಸುಲಭವಾದ ಕೀಲಿಮಣೆ ವಿನ್ಯಾಸ ತಯಾರಿಕೆ ಸಮಸ್ಯೆ, ಕೀಲಿಮಣೆ ಡ್ರೈವರ್ (ಕೀಲಿಯೊತ್ತು ಆಧರಿಸಿ ಪೂರ್ಣಾಕ್ಷರ ರೂಪಿಸುವ ತಂತ್ರ) ತಯಾರಿಕೆಯ ಸಮಸ್ಯೆ, ಕಂಪ್ಯೂಟರ್‌ನ ಪರದೆಯಲ್ಲಿ ಕನ್ನಡ ಪಠ್ಯದ ಪ್ರದರ್ಶನದ ಸಮಸ್ಯೆ, ಟೈಪಿಂಗ್ ಮೂಲಕ ಸಿದ್ಧಗೊಳ್ಳುವ ಕನ್ನಡ ಪಠ್ಯದ ಮರುಬಳಕೆಗೆ ಅದನ್ನು ಸಂಗ್ರಹಿಸಿಟ್ಟುಕೊಳ್ಳಲು ಸಂಕೇತೀಕರಣದ (ಎನ್‌ಕೋಡಿಂಗ್) ಸಮಸ್ಯೆ - ಇವುಗಳು ಸ್ಥಳೀಯ ತಂತ್ರಾಂಶ ತಯಾರಕರ ಪ್ರಮುಖ ಸಮಸ್ಯೆಗಳಾಗಿದ್ದವು. ಹೆಚ್ಚಿನ ಸಂಖ್ಯೆಯಲ್ಲಿರುವ ಕನ್ನಡದ ಎಲ್ಲಾ ಅಕ್ಷರಗಳನ್ನು ಸಂಯೋಜಿಸಿ ಲಿಪಿರೂಪದಲ್ಲಿ ಕಂಪ್ಯೂಟರ್‌ಗೆ ಊಡಿಸಲು (ಇನ್‌ಪುಟ್), ಪಠ್ಯವನ್ನು ಪ್ರದರ್ಶಿಸಲು (ಡಿಸ್‌ಪ್ಲೇ) ಮತ್ತು ಪಠ್ಯವನ್ನು ಸಂಗ್ರಹಿಸಲು (ಸ್ಟೋರೇಜ್) ಕನ್ನಡ ಅಕ್ಷರಗಳಿಗೆ ಲಿಪಿಸಂಕೇತಗಳನ್ನು (ಎನ್‌ಕೋಡಿಂಗ್) ನಿಗದಿಪಡಿಸುವುದು ಸಹ ತಂತ್ರಾಂಶ ತಯಾರಕರಿಗೆ ತಂತ್ರಜ್ಞಾನದ ಸವಾಲಾಗಿತ್ತು. ಇಂಗ್ಲಿಷ್ ಲಿಪಿಯ ಎನ್‌ಕೋಡಿಂಗ್ ಪದ್ಧತಿಯಂತೆ, ಪ್ರತಿಯೊಂದೂ ಕನ್ನಡದ ಮೂಲಾಕ್ಷರ, ಸಂಯುಕ್ತಾಕ್ಷರ ಮತ್ತು ಒತ್ತಕ್ಷರಗಳಿಗೆ ಒಂದೊಂದು ಸಂಕೇತಗಳನ್ನು ನೀಡುವುದು ಅಸಾಧ್ಯವಾಗಿತ್ತು. ಏಕೆಂದರೆ, ಎನ್‌ಕೋಡಿಂಗ್‌ಗೆ ಇದ್ದದ್ದೇ 256 ಅಕ್ಷರಸ್ಥಾನಗಳು. ಕನ್ನಡಕ್ಕೆ 500ಕ್ಕೂ ಹೆಚ್ಚಿನ ಸ್ಥಾನಗಳ ಅಗತ್ಯವಿತ್ತು. ಕನ್ನಡದ ಒತ್ತಕ್ಷರಗಳ ಮೂಡಿಕೆಯಂತೂ ದೊಡ್ಡ ಸಮಸ್ಯೆಯಾಗಿತ್ತು. ಮೂಲಾಕ್ಷರಗಳು, ಸಂಯುಕ್ತಾಕ್ಷರಗಳು ಮತ್ತು ಒತ್ತಕ್ಷರಗಳಿಂದ ಕೂಡಿದ ಕನ್ನಡ ಲಿಪಿಯನ್ನು ಬೆರಳಚ್ಚಿಸಲು ಅವಕಾಶ ಕಲ್ಪಿಸುವ ಕೀಲಿಮಣೆ ವಿನ್ಯಾಸವನ್ನು ರಚಿಸುವುದು ಬಹುದೊಡ್ಡ ಸಮಸ್ಯೆಯಾಗಿತ್ತು. ನೇರಗೆರೆಗಳ ರೂಪದ ಇಂಗ್ಲಿಷ್ ಅಕ್ಷರಗಳನ್ನು ಸುಲಭವಾಗಿ ಕಂಪ್ಯೂಟರ್ ಪರದೆಯಲ್ಲಿ ಮೂಡಿಸಬಹುದಾಗಿತ್ತು. ಕನ್ನಡದ ಅಕ್ಷರಗಳಾದರೋ ದುಂಡನೆಯ ಮುದ್ದಾದ ಅಕ್ಷರಗಳು. ಅವುಗಳನ್ನು ಚುಕ್ಕೆರೂಪದ ಮಾತೃಕೆಗಳಲ್ಲಿ (ಮ್ಯಾಟ್ರಿಕ್ಸ್) ಇಂಗ್ಲಿಷ್‌ನಷ್ಟು ಸುಲಭವಾಗಿ ರೂಪಿಸುವುದು ಸಾಧ್ಯವಿರಲಿಲ್ಲ. ಕನ್ನಡದ ಲಿಪಿಸೌಂದರ್ಯಕ್ಕೆ ಪೂರಕವಾಗಿ ಅಕ್ಷರಗಳನ್ನು ಪರದೆಯಲ್ಲಿ ಮೂಡಿಸುವುದು ಒಂದು ಸವಾಲಿನ ಕೆಲಸವಾಗಿತ್ತು.

ಬಳಕೆದಾರರ ಸಮಸ್ಯೆಗಳು:

ಕಂಪ್ಯೂಟರ್‌ನಲ್ಲಿ ಕನ್ನಡವನ್ನು ಅಳವಡಿಸುವುದಕ್ಕೆ ಇದ್ದ ತಂತ್ರಜ್ಞಾನದ ಸಮಸ್ಯೆಗಳು, ತಂತ್ರಾಂಶ ತಯಾರಕರಿಗೆ ತಂತ್ರಾಂಶ ತಯಾರಿಕೆಯಲ್ಲಿ ತೊಡಕು ಉಂಟುಮಾಡಿದವು. ತಂತ್ರಾಂಶ ತಯಾರಕರು ಆ ಕಾಲದಲ್ಲಿ ಲಭ್ಯವಿದ್ದ ತಂತ್ರಜ್ಞಾನದ ಇತಿಮಿತಿಯಲ್ಲಿ ಕನ್ನಡ ತಂತ್ರಾಂಶಗಳನ್ನು ಸಿದ್ಧಪಡಿಸಿದ ಕಾರಣ, ಕಂಪ್ಯೂಟರ್‌ನಲ್ಲಿ ಕನ್ನಡ ಬಳಸುವವರಿಗೆ ಹಲವಾರು ಸೌಲಭ್ಯಗಳ ಕೊರತೆ ಕಂಡುಬಂದಿತ್ತು. ಇದರಿಂದಾಗಿ ಕಂಪ್ಯೂಟರ್‌ನಲ್ಲಿ ಕನ್ನಡದ ಬಳಕೆ ಸಮಸ್ಯಾತ್ಮಕವಾಗಿದೆ ಎಂಬುದು ಪ್ರಚಲಿತದಲ್ಲಿ ಬಂತು.

ಕ್ಲಿಷ್ಟಕರವಾದ ಕೀಲಿಮಣೆ ವಿನ್ಯಾಸ ಬಳಸಿ ಪಠ್ಯ ಬೆರಳಚ್ಚಿಸುವ ಸಮಸ್ಯೆ, ಹಲವು ಕೀಲಿಮಣೆ ವಿನ್ಯಾಸಗಳಲ್ಲಿ ಒಂದರ ಆಯ್ಕೆಯ ಸಮಸ್ಯೆ, ಲಿಪಿ ಸೌಂದರ್ಯದ ಸಮಸ್ಯೆ, ವೇಗದ ಮುದ್ರಣದ ಸಮಸ್ಯೆ, ಮಾಹಿತಿ ವಿನಿಮಯದ ಸಮಸ್ಯೆ - ಇವುಗಳು ಬಳಕೆದಾರರು ಎದುರಿಸಿದ ಪ್ರಮುಖ ಸಮಸ್ಯೆಗಳಾಗಿದ್ದವು. ತಂತ್ರಜ್ಞಾನದ ಕೊರತೆಯ ಕಾರಣ ಸೀಮಿತ ಸೌಲಭ್ಯಗಳನ್ನು ಉಳ್ಳ ಕನ್ನಡ ತಂತ್ರಾಂಶಗಳ ಬಳಕೆಯ ಸಮಸ್ಯೆಗಳು ಮುಂದುವರಿದವು. ಬಳಕೆದಾರರು ಹೆಚ್ಚಿನ ಕೀಲಿಗಳಿರುವ ಕೀಲಿಮಣೆಯನ್ನು ಕಲಿತು, ಬಳಸಬೇಕಾದ ಸಮಸ್ಯೆಯಿತ್ತು. ಇಂಗ್ಲಿಷ್ ಕೀಲಿಮಣೆ ವಿನ್ಯಾಸದಲ್ಲಿನ ಇತರೆ ಬರವಣಿಗೆ ಚಿಹ್ನೆಗಳನ್ನು ಕನ್ನಡದ ಅಕ್ಷರಗಳನ್ನು ಊಡಿಸಲು ಬಳಸಲಾಗಿತ್ತು. ಆಕಾರಣದಿಂದ, ಕನ್ನಡ ಪಠ್ಯವನ್ನು ಊಡಿಸುವಾಗ ಬರವಣಿಗೆ ಚಿಹ್ನೆಗಳನ್ನು ಬಳಸಬೇಕಾದರೆ ಸುತ್ತುಬಳಸು ಮಾರ್ಗಗಳು ಅನುಸರಿಸಬೇಕಾಗಿತ್ತು. ಇದರಿಂದ, ಕನ್ನಡದಲ್ಲಿ ವೇಗದ ಬೆರಳಚ್ಚು ಕಷ್ಟಸಾಧ್ಯವಾಗಿತ್ತು. ಇಂಗ್ಲಿಷ್ ಮತ್ತು ಕನ್ನಡ ಲಿಪಿಯ ಅಕ್ಷರಗಳು ಮಾನಿಟರ್‌ನಲ್ಲಿ ಒಂದೇ ಗಾತ್ರದಲ್ಲಿ ಪ್ರದರ್ಶನಗೊಳ್ಳುತ್ತಿದ್ದ ಕಾರಣ, ಕನ್ನಡದ ಒತ್ತಕ್ಷರಗಳು ಅತಿ ಚಿಕ್ಕದಾಗಿ ಇರುತ್ತಿದ್ದವು. ಪಠ್ಯವು ಮಾನಿಟರ್‌ನಲ್ಲಿ ಸ್ಪಷ್ಟವಾಗಿ ಕಾಣಿಸದ ಕಾರಣದಿಂದಾಗಿ, ಕನ್ನಡವನ್ನು ಓದಲು ಸಾಧ್ಯವಾಗುತ್ತಿರಲಿಲ್ಲ. ಈ ಸಮಸ್ಯೆ ಮುದ್ರಣದಲ್ಲಿಯೂ ಸಹ ಇತ್ತು. ಕೇವಲ 9 ಪಿನ್‌ಗಳಿದ್ದ ಡಾಟ್‌ಮ್ಯಾಟ್ರಿಕ್ಸ್ ಪ್ರಿಂಟರ್‌ಗಳಲ್ಲಿ ಮುದ್ರಿಸಿದ ಕನ್ನಡ ಪಠ್ಯದಲ್ಲಿ ಒತ್ತಕ್ಷರಗಳು ಸ್ಪಷ್ಟವಾಗಿ ಮೂಡದೆ, ಓದುವುದು ಕಷ್ಟಸಾಧ್ಯವಾಗಿತ್ತು. ಮಾನಿಟರ್ ಪರದೆಯ ಮೇಲೆ ಪ್ರದರ್ಶನಗೊಳ್ಳುತ್ತಿದ್ದ ಮತ್ತು ಹಾಳೆಯ ಮೇಲೆ ಮುದ್ರಣಗೊಳ್ಳುತ್ತಿದ್ದ ಕನ್ನಡದ ಲಿಪಿಗಳು ಇಂಗ್ಲಿಷ್‌ನಷ್ಟು ಸುಂದರವಾಗಿರಲಿಲ್ಲ. ಅಕ್ಷರಗಳ ಮುದ್ರಣವು ಇಂಗ್ಲಿಷ್‌ನಷ್ಟು ನಯವಾಗಿರದೆ ಬಿಡಿಬಿಡಿ ಚುಕ್ಕೆಗಳ ಕಾರಣ ಕನ್ನಡದ ಒತ್ತಕ್ಷರಗಳು ಸ್ಪಷ್ಟವಾಗಿ ಮುದ್ರಣಗೊಳ್ಳುತ್ತಿರಲಿಲ್ಲ. ಇಂಗ್ಲಿಷ್‌ಗಾದರೆ ಮುದ್ರಕವು (ಪ್ರಿಂಟರ್) ಸಂಕೇತಗಳನ್ನು ತಾನೇ ಗುರುತಿಸಿ ಸ್ಪಷ್ಟವಾಗಿ, ವೇಗವಾಗಿ ಇಂಗ್ಲಿಷ್ ಪಠ್ಯವನ್ನು ಮುದ್ರಿಸುತ್ತಿತ್ತು. ಆದರೆ, ಕನ್ನಡದ ಸಂಕೇತೀಕರಣವನ್ನು ಮುದ್ರಕಗಳು ಗುರುತಿಸುತ್ತಿರಲಿಲ್ಲ. ಮುದ್ರಕವು ಕನ್ನಡಲಿಪಿಯನ್ನು ಚಿತ್ರಗಳೆಂದು ತಿಳಿದು ಮುದ್ರಿಸುತ್ತಿದ್ದ ಕಾರಣ ಕನ್ನಡದ ಪಠ್ಯವು ವೇಗವಾಗಿ ಮುದ್ರಣಗೊಳ್ಳುತ್ತಿರಲಿಲ್ಲ.

ಇಂಗ್ಲಿಷ್‌ಗೆ ಹೋಲಿಸಿದರೆ ಕನ್ನಡದ ತಂತ್ರಜ್ಞಾನವು ಇಂದಿಗೂ ಹಲವು ಹೆಜ್ಜೆಗಳಷ್ಟು ಹಿಂದೆಯೇ ಉಳಿದಿದೆ. ಕಂಪ್ಯೂಟರಿನಲ್ಲಿ ಕನ್ನಡವು ಬಳಕೆಗೆ ಬಂದ ಇತಿಹಾಸದ ಹಾದಿಯನ್ನು ಗಮನಿಸಿದರೆ ಸಮಸ್ಯೆಗಳ ಸರಮಾಲೆಯೇ ಕಂಡುಬರುತ್ತದೆ. ತಂತ್ರಜ್ಞಾನದ, ತಂತ್ರಾಂಶ ತಯಾರಕರ ಮತ್ತು ಬಳಕೆದಾರರ ವಿವಿಧ ಸಮಸ್ಯೆಗಳು ‘ಪರಿಹಾರಗೊಂಡ ಬಗೆ’ ಆಸಕ್ತಿಕರವಾಗಿದೆ. ಕನ್ನಡದ ಹಲವು ಸಮಸ್ಯೆಗಳಿಗೆ ‘ಕಂಡುಕೊಂಡ ಪರಿಹಾರ’ಗಳೂ ಸಹ ಅಷ್ಟೇ ಕುತೂಹಲಕಾರಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News