ಸಾಹಿತ್ಯವಿಲ್ಲದೆ ಸಂಗೀತವಿರಲು ಸಾಧ್ಯವಿಲ್ಲ: ಎಚ್.ಆರ್ ಲೀಲಾವತಿ

Update: 2018-02-04 16:54 GMT

ಬೆಂಗಳೂರು, ಫೆ.4: ಅಕ್ಷರ ಸಂಪತ್ತಿಲ್ಲದೆ ಸಂಗೀತ ಬೆಳೆಯಲು ಸಾಧ್ಯವಿಲ್ಲ. ಭಾವಕ್ಕೆ ಸಾಹಿತ್ಯ ಅರ್ಥ ನೀಡುತ್ತದೆ. ಹೀಗಾಗಿ, ಸಾಹಿತ್ಯವಿಲ್ಲದೆ ಸಂಗೀತವಿರಲು ಸಾಧ್ಯವಿಲ್ಲ ಎಂದು ಹಿರಿಯ ಗಾಯಕಿ ಹಾಗೂ ಸಂಗೀತ ನಿರ್ದೇಶಕಿ ಎಚ್.ಆರ್.ಲೀಲಾವತಿ ತಿಳಿಸಿದ್ದಾರೆ.

ರವಿವಾರ ನಗರದ ನಯನ ಸಭಾಂಗಣದಲ್ಲಿ ಹೊಂಬಾಳೆ ಪ್ರತಿಭಾರಂಗದಿಂದ ಆಯೋಜಿಸಿದ್ದ ‘ಕವಿದನಿ’ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕವಿ ರಚಿಸುವ ಕವಿತೆಯನ್ನು ರಾಗ ಸಂಯೋಜನೆ ಮಾಡುವ ಮೂಲಕ ಕವಿಗೆ ಸಂಗೀತಗಾರರು ಧ್ವನಿಯಾಗುತ್ತಾರೆ. ಆದರೆ, ಕೆಲವರು ಸಂಗೀತಕ್ಕೆ ಸಾಹಿತ್ಯದ ಅವಶ್ಯಕತೆಯಿಲ್ಲ ಎಂದು ಹೇಳುವುದು ಸರಿಯಲ್ಲ ಎಂದರು.

ಒಂದೊಂದು ಕಾಲಘಟ್ಟದಲ್ಲಿ ಒಂದೊಂದು ರೀತಿಯ ಸಾಹಿತ್ಯ ಸಿಗುತ್ತದೆ. ಆದರೆ, ಎಲ್ಲವೂ ಅರ್ಥಪೂರ್ಣವಾಗಿರುತ್ತದೆ ಹಾಗೂ ಎಲ್ಲ ಕಾಲಕ್ಕೂ ಸಲ್ಲುತ್ತದೆ. ಆಕಾಶವಾಣಿಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಅನೇಕ ಕವಿಗಳಿಂದ ಕವಿತೆ ಬರೆಸಿದ್ದೆ ಹಾಗೂ ಕುವೆಂಪು ಸೇರಿದಂತೆ ಅನೇಕ ಕವಿಗಳ ಮನೆಗೆ ನಾನೇ ಸ್ವತಃ ಭೇಟಿ ಮಾಡಿದ್ದೆ ಎಂದು ಅವರು ನೆನೆಸಿಕೊಂಡರು.

ಸಾಹಿತ್ಯಕ್ಕೆ ಮಿತಿ ಸಲ್ಲ: ಇಂದಿನ ಸಂಗೀತಗಾರರು ಸುಲಭವಾಗಿ ಸಿಕ್ಕಿದ್ದನ್ನು ಕಲಿತುಕೊಂಡು ಹಾಡುತ್ತಿದ್ದಾರೆ. ಒಬ್ಬ ಸಾಹಿತಿ ಅನೇಕ ಕವಿತೆಗಳನ್ನು ರಚಿಸಿರುತ್ತಾರೆ. ಆದರೆ, ಕೇವಲ ಸೀಮಿತವಾದ 5-10 ಸಾಹಿತ್ಯವನ್ನು ಕಲಿತು ಅದನ್ನು ಮಾತ್ರ ಪದೇ ಪದೇ ಹಾಡುತ್ತಿರುತ್ತಾರೆಂದು ಬೇಸರ ವ್ಯಕ್ತಪಡಿಸಿದರು.

ಹೊಸ ಸಂಗೀತಗಾರರು ಪ್ರಸಿದ್ಧಿ ಪಡೆದ ಒಂದೆರಡು ಕವಿತೆಗಳನ್ನು ಮಾತ್ರ ಹಾಡುತ್ತಿರುತ್ತಾರೆಂದ ಅವರು, ಸಂಗೀತಗಾರರು ಒಂದು ಹಾಡಿಗೆ ಜೋತು ಬೀಳಬಾರದು. ಕವಿಗಳು ಬರೆದ ಎಲ್ಲ ಕವಿತೆಗಳನ್ನು ಹಾಡುವ ಮೂಲಕ ಕವಿಗಳಿಗೆ ನ್ಯಾಯ ದೊರಕಿಸಿಕೊಡಬೇಕು. ನಾವು ಹೊಸ ಕವಿತೆಯನ್ನು ಜನರಿಗೆ ಪರಿಚಯ ಮಾಡಬೇಕು ಎಂದು ನುಡಿದರು.

ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಮಾತನಾಡಿ, ಕವಿತೆ ಮತ್ತು ಗಾಯನ ಹೊಂದಿಕೊಂಡು ಸುಗಮ ಸಂಗೀತ ಎಂಬ ಸಂಗೀತದ ಪ್ರಕಾರ ಹುಟ್ಟಿಕೊಂಡಿದೆ. ಹಿಂದಿನ ದಿನಗಳಲ್ಲಿ ಕವಿತೆಗಳು ಗ್ರಂಥ ಭಂಡಾರ, ಸಮಾವೇಶ ಹಾಗೂ ಚರ್ಚೆ, ಸಭೆ, ಸಮಾರಂಭಗಳಲ್ಲಿ ಮಾತ್ರ ಚರ್ಚೆಯಾಗುತ್ತಿತ್ತು. ಆದರೆ, ಸಂಗೀತದಿಂದ ಇಂದು ಎಲ್ಲ ಕಡೆ ತಲುಪಲು ಸಾಧ್ಯವಾಗಿದೆ ಎಂದು ಹೇಳಿದರು.

ಹೊಸ ಪೀಳಿಗೆಯ ಗಾಯಕರು ಹಿಂದಿನ ಪೀಳಿಗೆಯ ಕವಿಗಳನ್ನು ಓದುವ ಮೂಲಕ ಅವರನ್ನು ಪರಿಚಯ ಮಾಡಿಕೊಳ್ಳಬೇಕು ಎಂದ ಅವರು, ಬೆಂಗಳೂರಿನಲ್ಲಿ 50-60 ಸಂಗೀತ ಕಲಿಸುವ ಶಾಲೆಗಳಿಗೆ. ಆ ಶಾಲೆಗಳು ಹೊಸ ಗೀತೆಗಳನ್ನು ಹಾಡುವುದನ್ನು ಕಲಿಸಬೇಕು ಎಂದು ಸಲಹೆ ನೀಡಿದರು.

ಇದೇ ವೇಳೆಯಲ್ಲಿ ಜಿ.ಪಿ.ರಾಮಣ್ಣ ಅವರ 25 ಕವಿಗಳ ಪರಿಚಯ ಲೇಖನಗಳ ‘ರಜತ ಕವಿ ದರ್ಶನ’ ಕೃತಿ ಮತ್ತು ಕವಿದನಿ ದರ್ಪಣ ನೆನಪಿನ ಸಂಚಿಕೆ ಲೋಕಾರ್ಪಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥ ಎಚ್.ಫಲ್ಗುಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News