ಪರಾರಿಯಾದ ಕಾರು ಬೆನ್ನಟ್ಟಿದ ಪೊಲೀಸರಿಗೆ ಸಿಕ್ಕಿದ್ದು ನಾಲ್ಕು ಸಾವಿರ ಕೆ.ಜಿ. ಕಿತ್ತಳೆ !
ಕದ್ದ ಹಣವನ್ನು ಸಾಗಾಟ ಮಾಡುವಾಗ ಕಳ್ಳರು ಸಿಕ್ಕಿ ಬಿದ್ದ ಹಲವಾರು ನಿದರ್ಶನಗಳಿವೆ. ಆದರೆ ಸ್ಪೇನ್‌ನ ಸೆವಿಲೆ ನಗರದಲ್ಲಿ ರಾತ್ರಿ ಅನು ಮಾನಾಸ್ಪದವಾಗಿ ಓಡುತ್ತಿದ್ದ ಕಾರನ್ನು ನಿಲ್ಲಿಸಿದ ಪೊಲೀಸರಿಗೆ ಭಾರೀ ಅಚ್ಚರಿಯೊಂದು ಕಾದಿತ್ತು. ಕಾರಿನ ಬಾಗಿಲನ್ನು ತೆರೆಯುತ್ತಿದ್ದಂತೆಯೇ ಕಿತ್ತಳೆಹಣ್ಣಿನ ರಾಶಿಯೇ ನೆಲಕ್ಕುರಳತೊಡಗಿದವು. ಬರೋಬ್ಬರಿ 4 ಸಾವಿರ ಕೆ.ಜಿ.ಯಷ್ಟಿದ್ದ ಈ ಕಿತ್ತಳೆಹಣ್ಣುಗಳನ್ನು ಕಳವು ಮಾಡಿ ಸಾಗಾಟ ಮಾಡಲಾಗುತ್ತಿದೆಯೆಂಬುದು ತನಿಖೆ ಮಾಡಿದಾಗ ಬಯಲಾಯಿತು. ಜನವರಿ 26ರಂದು ಸ್ಪೇನ್‌ನ ಸೆವಿಲ್ ಪಟ್ಟಣದಲ್ಲಿ ಈ ಘಟನೆ ನಡೆದಿದೆ.
ಅಂದು ರಾತ್ರಿ ಹೊತ್ತಿನಲ್ಲಿ ಒಂದರ ಹಿಂದೆ ಒಂದರಂತೆ ಸಾಗುತ್ತಿದ್ದ, ಮೂರು ಕಾರುಗಳು ಎದುರಿಗೆ ಪೊಲೀಸರ ಗಸ್ತುವಾಹನವನ್ನು ಕಂಡು ಇದ್ದಕ್ಕಿದ್ದಂತೆ ಬೇರೆ ಬೇರೆ ದಿಕ್ಕಿನಲ್ಲಿ ಚಲಿಸತೊಡಗಿದವು. ಇದರಿಂದ ಅನುಮಾನಗೊಂಡ ಪೊಲೀಸರು ವಾಹನಗಳನ್ನು ಬೆನ್ನಟ್ಟಿದರು. ಕೊನೆಗೂ ಕಡಿದಾದ ರಸ್ತೆಯೊಂದರಲ್ಲಿ ಅವರು ಎರಡು ವಾಹನಗಳನ್ನು ಹಿಡಿದು ನಿಲ್ಲಿಸುವಲ್ಲಿ ಯಶಸ್ವಿಯಾದರು.
ಈ ಎರಡು ಕಾರುಗಳ ಪೈಕಿ ಮೊದಲನೆಯದರಲ್ಲಿ ದಂಪತಿ ಹಾಗೂ ಅವರ ಪುತ್ರನಿದ್ದರೆ, ಪ್ರವಾಸೋದ್ಯಮ ಸಂಸ್ಥೆಗೆ ಸೇರಿದ ಇನ್ನೊಂದು ಕಾರನ್ನು ಇಬ್ಬರು ಸಹೋದರರು ಓಡಿಸುತ್ತಿದ್ದರು. ಒಂದು ವಾಹನದಲ್ಲಿ ಕಿತ್ತಳೆಹಣ್ಣನ್ನು ರಾಶಿರಾಶಿಯಾಗಿ ತುಂಬಿದ್ದರೆ, ಇನ್ನೊಂದರಲ್ಲಿ ಚೀಲಗಳಲ್ಲಿ ನೂರಾರು ಕಿತ್ತಳೆಹಣ್ಣುಗಳನ್ನಿರಿಸಲಾಗಿತ್ತು.