ಕಲ್ಲಡ್ಕ ಶ್ರೀರಾಮ ಶಾಲೆಗೆ ದೇವಸ್ಥಾನದ ವತಿಯಿಂದ ಬಿಸಿಯೂಟ ನೀಡಲು ಅವಕಾಶವಿಲ್ಲ: ರುದ್ರಪ್ಪ ಲಮಾಣಿ

Update: 2018-02-06 13:44 GMT

ಬೆಂಗಳೂರು, ಫೆ.6: ಕಲ್ಲಡ್ಕ ಶ್ರೀರಾಮ ಶಾಲೆಯ ವಿದ್ಯಾರ್ಥಿಗಳಿಗೆ ಕೊಲ್ಲೂರು ದೇವಸ್ಥಾನದ ವತಿಯಿಂದ ಬಿಸಿಯೂಟ ನೀಡಲು ಅವಕಾಶವಿಲ್ಲ. ಆದರೆ, ಸರಕಾರದ ಕಾರ್ಯಕ್ರಮವಾದ ಬಿಸಿಯೂಟದ ಯೋಜನೆಯಡಿಯಲ್ಲಿ ಬಿಸಿಯೂಟವನ್ನು ನೀಡಲು ಬರುತ್ತದೆಯೇ ಎಂಬುವುದರ ಬಗ್ಗೆ ಪರಿಶೀಲಿಸಲಾಗುವುದು ಎಂದು ಜವಳಿ ಹಾಗೂ ಮುಜರಾಯಿ ಸಚಿವ ರುದ್ರಪ್ಪ ಲಮಾಣಿ ಹೇಳಿದ್ದಾರೆ.

ಮಂಗಳವಾರ ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೊಲ್ಲೂರು ದೇವಸ್ಥಾನದ ಹುಂಡಿಯಿಂದ ಬರುವ ಹಣವನ್ನು ದೇವಸ್ಥಾನಗಳ ಉದ್ಧಾರಕ್ಕೆ ಮೀಸಲಿಡಲಾಗಿದೆಯೇ ವಿನಹ ಇತರೆ ಯಾವುದೇ ಉದ್ದೇಶಕ್ಕಾಗಿಯಲ್ಲ. ಹೀಗಾಗಿ, ಶ್ರೀರಾಮ ಶಾಲೆಯ ವಿದ್ಯಾರ್ಥಿಗಳಿಗೆ ಬಿಸಿಯೂಟದ ಯೋಜನೆಯಡಿಯಲ್ಲಿ ಬಿಸಿಯೂಟವನ್ನು ನೀಡಲು ಬರುತ್ತದೆಯೇ ಎಂಬುದರ ಬಗ್ಗೆ ಪರಿಶೀಲಿಸಲಾಗುವುದು ಎಂದು ಹೇಳಿದರು.

ಸಚಿವರ ಉತ್ತರಕ್ಕೆ ತೃಪ್ತರಾಗದ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ, ಕೋಟ ಶ್ರೀನಿವಾಸ ಪೂಜಾರಿ ಸೇರಿ ಎಲ್ಲ ಬಿಜೆಪಿ ಸದಸ್ಯರು ಸದನದ ಬಾವಿಗೆ ಇಳಿದು ಧರಣಿಗೆ ಮುಂದಾದರು. ಸಭಾಪತಿಗಳು ಬಿಜೆಪಿ ಸದಸ್ಯರುಗಳಿಗೆ ತಮ್ಮ ಆಸನದಲ್ಲಿ ಹೋಗಿ ಕುಳಿತುಕೊಳ್ಳಲು ಹೇಳಿದರೂ ಕೇಳಲಿಲ್ಲ. ಹೀಗಾಗಿ, ಸಭಾಪತಿಗಳು ಸದನವನ್ನು 30 ನಿಮಿಷಗಳ ಕಾಲ ಮುಂದೂಡಿದರು.

ನಂತರ ಸದನ ಪ್ರಾರಂಭವಾದ ಬಳಿಕ ಸಚಿವ ಎಂ.ಆರ್.ಸೀತಾರಾಮ್ ಅವರು ಮಾತನಾಡಿ, ಈ ಬಗ್ಗೆ ಸಿಎಂ ಅವರ ಜೊತೆಗೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News