ಆಕಾಶದ ಕೌತುಕ ಬಿಚ್ಚಿಡುವ ಕೃತಿ
ಆಕಾಶವೆನ್ನುವುದು ಹಲವು ನಿಗೂಢಗಳ ಆಗರ. ರಾತ್ರಿಯಲ್ಲಿ ತಣ್ಣಗೆ ಚಂದ್ರ ಮತ್ತು ನಕ್ಷತ್ರಗಳ ನಡುವೆ ಆಕಾಶ ಕಂಗೊಳಿಸುತ್ತಿರುತ್ತದೆ. ಆದರೆ ಅದರ ಆಳವನ್ನು ಶೋಧಿಸುತ್ತಾ ಹೋದಂತೆಯೇ ಅನಂತಾನಂತ ವಿಸ್ಮಯಗಳು ತೆರೆದುಕೊಳ್ಳುತ್ತಾ ಹೋಗುತ್ತದೆ. ಆದರೆ ತೆರೆದಷ್ಟೂ ಮುಗಿಯದ ವಿಸ್ಮಯಗಳವು. ಆಕಾಶದ ನಿಗೂಢತೆಯ ಕಾರಣದಿಂದಾಗಿಯೇ ಅದನ್ನು ಹಲವರು ದುರ್ಬಳಕೆ ಮಾಡುತ್ತಾ ಬಂದಿದ್ದಾರೆ. ಗ್ರಹಗಳನ್ನು ಮುಂದಿಟ್ಟುಕೊಂಡು ಜನರನ್ನು ಶೋಷಿಸುತ್ತಾ ಬಂದಿದ್ದಾರೆ. ರಾಹು-ಕೇತು ಎಂದೆಲ್ಲ ಕತೆಗಳು ಸೃಷ್ಟಿಯಾಗಿ ಜನರು ಮೂರ್ಖರಾಗುತ್ತಿದ್ದಾರೆ. ಇತ್ತೀಚೆಗೆ ಗ್ರಹಣ ಸಂಭವಿಸಿದಾಗ ಹೇಗೆ ಜ್ಯೋತಿಷಿಗಳು ಜನರನ್ನು ಶೋಷಿಸಿದರು ಎನ್ನುವುದನ್ನು ನಾವು ನೋಡಿದ್ದೇವೆ. ಈ ಹಿನ್ನೆಲೆಯಲ್ಲಿ ಜನರ ವೌಢ್ಯವನ್ನು ಅಳಿಸುವ ಹಾಗೆಯೇ ಆಕಾಶದ ನಿಗೂಢಗಳನ್ನು ಸರಳವಾಗಿ ತೆರೆದಿಡುವ ಕೃತಿಯಾಗಿ ಸರೋಜ ಪ್ರಕಾಶ ಬರೆದಿರುವ ‘ಬಾನಲ್ಲಿ ಗ್ರಹ ಗಣತಿ’ ಮುಖ್ಯವಾಗುತ್ತದೆ. ಇದೊಂದು ಬಿಡಿ ಲೇಖನಗಳ ಸಂಗ್ರಹ. ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಬಡಿ ಬಿಡಿಯಾಗಿ ಪ್ರಕಟಗೊಂಡ ಲೇಖನಗಳನ್ನು ಇಲ್ಲಿ ಒಟ್ಟು ಸೇರಿಸಲಾಗಿದೆ. ಮೂಲ ಲೇಖನಗಳಿಗೆ ಇನ್ನಷ್ಟು ವಿವರಗಳನ್ನು ಸೇರಿಸಿ ಪುಸ್ತಕ ಮಾಡಲಾಗಿದೆ. ಇಲ್ಲಿರುವ ಎಲ್ಲ ಬರಹಗಳೂ ಕಥನ ರೂಪದಲ್ಲಿವೆ. ಬರೇ ವಿವರಗಳನ್ನು ಹೇಳುವ ಒಣ ಲೇಖನವಾಗದೆ ಅದನ್ನು ಆಕರ್ಷಕವಾಗಿ ನಿರೂಪಿಸಿದ್ದಾರೆ. ಆದುದರಿಂದ ಖಗೋಳ ಶಾಸ್ತ್ರಕ್ಕೆ ಸಂಬಂಧಿಸಿದ್ದಾದರೂ ಕುತೂಹಲಕಾರಿ ಮಾಹಿತಿಗಳಿಂದ ನಮ್ಮನ್ನು ಸೆಳೆಯುತ್ತದೆ. ಧೂಮಕೇತುವಿನ ಕುರಿತಂತೆ ಇರುವ ವೌಢ್ಯ, ತಪ್ಪು ಕಲ್ಪನೆ ಇವುಗಳನ್ನು ಹೇಳುವ ‘ಧೂಮಕೇತುವಿನ ನೆತ್ತಿಗೆ ಸುತ್ತಿಗೆ’, ಮಂಗಳನ ಒಡಲನ್ನು ತೆರೆದಿಡುವ ‘ಮಂಗಳನ ಮಡಿಲಲ್ಲಿ ಅವಳಿ ರೊಬಾಟುಗಳು’, ಫ್ಲೂಟೋದ ರಹಸ್ಯಗಳನ್ನು ಹೊರತೆಗೆಯಲು ವಿಜ್ಞಾನಿಗಳು ನಡೆಸುತ್ತಿರುವ ಸಾಹಸಗಳು, ಹೊಸ ಅಂತರಿಕ್ಷಯುಗಕ್ಕೆ ನಾಂದಿ ಹಾಡಿದ ಪುಟಾಣಿ ಗಗನ ನೌಕೆ ಸ್ಮಾರ್ಟ್-1, ಮಂಗಳನೆಡೆಗೆ ಹಾರಿದ ಫೀನಿಕ್ಸ್‌ನ ವಿವರಗಳು, ಭೂಮಿಯನ್ನು ಚಂದ್ರ ಮಾತ್ರವಲ್ಲ ಇನ್ನೊಬ್ಬ ಕಳ್ಳ ಚಂದ್ರ ಗುಟ್ಟಾಗಿ ಸುತ್ತಿತ್ತಿರುವ ಬಗೆ, ಜನಗಣತಿಯಂತೆ ಬಾನಲ್ಲಿನ ಗ್ರಹಗಣತಿ, ಕ್ಷುದ್ರಗ್ರಹಗಳ ಅಧ್ಯಯನಕ್ಕೆ ಬಳಸುವ ಡಾನ್ ಶೋಧನೌಕೆ ಹೀಗೆ ಆಕಾಶದಲ್ಲಿ ನಡೆಯುತ್ತಿರುವ ಸಂಶೋಧನೆಗಳ ಬೇರೆ ಬೇರೆ ಆಯಾಮಗಳನ್ನು ಈ ಕೃತಿ ತೆರೆದಿಡುತ್ತದೆ. ಆಕಾಶದ ಕುರಿತಂತೆ ಇನ್ನಷ್ಟು ತಿಳಿದುಕೊಳ್ಳಲು ಈ ಕೃತಿ ನಿಮ್ಮನ್ನು ಸಜ್ಜುಗೊಳಿಸುವುದರಲ್ಲಿ ಅನುಮಾನವಿಲ್ಲ.
ನವಕರ್ನಾಟಕ ಪ್ರಕಾಶನ ಹೊರತಂದಿರುವ ಈ ಕೃತಿಯ ಮುಖಬೆಲೆ 130 ರೂಪಾಯಿ.