ತುಮಕೂರು: ಮತದಾರರ ಪಟ್ಟಿ ಪರಿಷ್ಕರಣೆ; ಫೆ.12ರೊಳಗಾಗಿ ಅರ್ಜಿಗಳ ವಿಲೇವಾರಿ

Update: 2018-02-07 11:36 GMT

ತುಮಕೂರು,07: ಚುನಾವಣಾ ಆಯೋಗದ ನಿರ್ದೇಶನದಂತೆ ಅಂತಿಮ ಮತದಾರರ ಪಟ್ಟಿಯನ್ನು ಫೆಬ್ರವರಿ 28ಕ್ಕೆ ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೆ.ಪಿ.ಮೋಹನ್‍ರಾಜ್ ತಿಳಿಸಿದ್ದಾರೆ.

ಮತದಾರರಿಗೆ ಸಂಬಂಧಿಸಿದಂತೆ ಸ್ವೀಕೃತವಾದ ಅರ್ಜಿಗಳನ್ನು ವಿಲೇವಾರಿ ಮಾಡುವ ಹಾಗೂ ಬೂತ್ ಏಜೆಂಟ್‍ಗಳ ನೇಮಕಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹಾಗೂ ರಾಜ್ಯ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಇದಕ್ಕೆ ಪೂರಕವಾಗಿ ಅರ್ಹ ಮತದಾರರ ಪರಿಷ್ಕೃತ ಪಟ್ಟಿ ತಯಾರಿಸಲು ಸ್ವೀಕರಿಸಿದ ಅರ್ಜಿ ಹಾಗೂ ಆಕ್ಷೇಪಣೆಗಳನ್ನು ಫೆಬ್ರವರಿ 12ರೊಳಗಾಗಿ ವಿಲೇವಾರಿ ಮಾಡಲಾಗುವುದು ಎಂದರು.

ಪರಿಷ್ಕೃತ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲ ವಿಧಾನ ಸಭಾ ಕ್ಷೇತ್ರಗಳಿಂದ ಹೊಸದಾಗಿ ಹೆಸರು ಸೇರಿಸಲು ನಮೂನೆ 6ರಲ್ಲಿ 72,619, ಪಟ್ಟಿಯಿಂದ ಹೆಸರನ್ನು ಕೈಬಿಡಲು ನಮೂನೆ 7ರಲ್ಲಿ 81,875, ತಿದ್ದುಪಡಿಗಾಗಿ ನಮೂನೆ 8ರಲ್ಲಿ 12,129 ಹಾಗೂ ಸ್ಥಳಾಂತರಗೊಂಡ ಮತದಾರರಿಂದ ನಮೂನೆ 8ಎನಲ್ಲಿ 2,616 ಅರ್ಜಿಗಳು ಸ್ವೀಕೃತವಾಗಿವೆ ಎಂದು ಅವರು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿರುವ ಮತಗಟ್ಟೆಗಳ ಸ್ಥಿತಿ-ಗತಿಯ ನಿಖರ ಮಾಹಿತಿ ಪಡೆದು ಅವಶ್ಯವಿರುವ ಕಡೆ ವಿದ್ಯುತ್ ಸಂಪರ್ಕ, ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ, ರ್ಯಾಂಪ್ ನಿರ್ಮಾಣ ಮತ್ತಿತರ ಮೂಲಭೂತ ಸೌಲಭ್ಯ ಒದಗಿಸಬೇಕೆಂದು ಚುನಾವಣಾ ಆಯೋಗ ಸೂಚನೆ ನೀಡಿದ್ದು, ಫೆಬ್ರವರಿ 28ರೊಳಗಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಮುಂಬರುವ ಚುನಾವಣೆಯಲ್ಲಿ ವಿವಿಪ್ಯಾಟ್ ಯಂತ್ರವನ್ನು ಪರಿಚಯಿಸಲಾಗುತ್ತಿದ್ದು, ಯಂತ್ರದ ಸಹಾಯದಿಂದ ಮತದಾರ ತಾನು ಮತ ಹಾಕಿದ ಅಭ್ಯರ್ಥಿಯ ವಿವರವನ್ನು ಪಡೆಯಬಹುದು. ಮತದಾನ ದಿನದಂದು ವಿವಿಪ್ಯಾಟ್ ಯಂತ್ರವನ್ನು ಹೇಗೆ ಬಳಸಬೇಕೆಂದು ಚುನಾವಣಾ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗುವುದು. ಚುನಾವಣಾ ಸಿಬ್ಬಂದಿಗಳಿಗೆ ಪ್ರಾಯೋಗಿಕವಾಗಿ ತರಬೇತಿ ನೀಡಲು ಹಾಗೂ ಜನರಿಗೆ ತಿಳುವಳಿಕೆ ಮೂಡಿಸಲು 300 ಯಂತ್ರಗಳನ್ನು ಎಪಿಎಂಸಿ ಪ್ರಾಂಗಣದ ಕೊಠಡಿಯೊಂದರಲ್ಲಿ ಸೂಕ್ತ ಭದ್ರತೆಯೊಂದಿಗೆ ಇರಿಸಲಾಗಿದೆ. ಇದಲ್ಲದೆ ಮತದಾನ ದಿನದಂದು ಉಪಯೋಗಿಸಲು 2000 ವಿವಿ ಪ್ಯಾಟ್ ಯಂತ್ರಗಳನ್ನು ಹಳೆ ಡಯಟ್ ಕಟ್ಟಡದಲ್ಲಿ ಪೊಲೀಸ್ ಸರ್ಪಗಾವಲಿನಲ್ಲಿಡಲಾಗಿದೆ ಹಾಗೂ ನಿಗಾವಹಿಸಲು ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಯಂತ್ರಗಳಿಗೆ ನೀರು ಹಾಗೂ ಧೂಳು ಹೋಗದಂತೆ ಸಿಲಿಕಾನ್ ಪ್ಯಾಚಿಂಗ್ ವ್ಯವಸ್ಥೆಯಲ್ಲಿ ಸುರಕ್ಷಿತವಾಗಿಡಲಾಗಿದೆ ಎಂದು ತಿಳಿಸಿದರು.

ಪಾರದರ್ಶಕವಾಗಿ ಚುನಾವಣೆ ನಡೆಸುವ ನಿಟ್ಟಿನಲ್ಲಿ ಚುನಾವಣಾ ಪ್ರಕ್ರಿಯೆಯ ಪ್ರತಿ ಹಂತಗಳ ಬಗ್ಗೆ ರಾಷ್ಟ್ರ ಹಾಗೂ ರಾಜ್ಯ ರಾಜಕೀಯ ಪಕ್ಷಗಳಿಗೆ ಮಾಹಿತಿ ನೀಡಬೇಕೆಂದು ಆಯೋಗವು ಕಟ್ಟುನಿಟ್ಟಾಗಿ ಸೂಚಿಸಿರುವುದರಿಂದ ರಾಜಕೀಯ ಪಕ್ಷಗಳು ಗುರುತಿನ ಚೀಟಿಯುಳ್ಳ ತಮ್ಮ ಅಧಿಕೃತ ಪ್ರತಿನಿಧಿಯೊಬ್ಬರ ಮಾಹಿತಿ ನೀಡಬೇಕು. ಮತದಾರರ ಪಟ್ಟಿಯಲ್ಲಿ ನಕಲಿ ಮತದಾರರ ಹೆಸರುಗಳಿವೆ ಎಂದು ರಾಜಕೀಯ ಪಕ್ಷದ ಮುಖಂಡರೊಬ್ಬರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದಾಗ ಪ್ರತಿಕ್ರಿಯಿಸಿದ ಅವರು, ಪಟ್ಟಿಯಲ್ಲಿ ನಕಲಿ ಮತದಾರರಿದ್ದಾರೆ ಎನ್ನುವುದು ಸತ್ಯಕ್ಕೆ ದೂರವಾದುದು. ಮರಣ ಹೊಂದಿರುವ, ಮನೆ ಬದಲಾವಣೆ ಮಾಡಿರುವ, ವಿದೇಶಕ್ಕೆ ತೆರಳಿದವರ ಹೆಸರುಗಳು ಪಟ್ಟಿಯಲ್ಲಿ ಮುಂದುವರೆದಿರಬಹುದಾದರೂ, ಈ ಬಾರಿ ಲೋಪಮುಕ್ತವಾಗಿ ಪರಿಷ್ಕೃತ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಗುವುದೆಂದು ಅವರು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಿ. ಅನಿತಾ, ಉಪ ವಿಭಾಗಾಧಿಕಾರಿ ತಿಪ್ಪೇಸ್ವಾಮಿ, ಪ್ರೊಬೇಷನರಿ ಐಎಎಸ್ ಅಧಿಕಾರಿ ಪ್ರೀತಿ ಗೆಲ್ಹೋಟ್, ಉಪ ವಿಭಾಗಾಧಿಕಾರಿ ಡಾ.ಆಕಾಶ್, ಪ್ರೊಬೇಷನರಿ ತಹಶೀಲ್ದಾರ್ ಮಂಜುಳಾ, ಶ್ರೀನಿವಾಸ್, ಚುನಾವಣಾ ತಹಶೀಲ್ದಾರ್ ಹನುಮಂತಪ್ಪ, ಮತ್ತಿತರ ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News