ಆಧಾರ್-ಸಂಬಂಧಿತ ಸಾವಿಗೆ ಕೊನೆಯಿಲ್ಲವೇ?

Update: 2018-02-08 05:16 GMT
ಫುಲಿನ್ ಮುರ್ಮು

ಕಳೆದ ಸೆಪ್ಟಂಬರ್ ತಿಂಗಳಲ್ಲಿ ಸಿಮ್‌ಡೆಗಾ ಜಿಲ್ಲೆಯಲ್ಲಿ 11ರ ಹರೆಯದ ಸಂತೋಷಿ ಕುಮಾರಿ ಅನ್ನಕ್ಕಾಗಿ ಕೂಗುತ್ತಾ ಸತ್ತ ಬಳಿಕ, ಮುರ್ಮುವಿನ ಸಾವು ಏಳನೆಯ ಹಸಿವು ಸಂಬಂಧಿ ಸಾವು. ‘‘ಆ ಏಳು ಸಾವುಗಳಲ್ಲಿ ಐದು ಸಾವುಗಳು ಆಹಾರ ವಿತರಣೆಯಲ್ಲಿ ಕಡ್ಡಾಯವಾಗಿ ಆಧಾರ್ ಕಾರ್ಡ್‌ನ್ನು ಅನುಷ್ಠಾನಗೊಳಿಸಿದ್ದರ ಪರಿಣಾಮ’’ವೆಂದು ಹೇಳಲಾಗಿದೆ.

ಜಾರ್ಖಂಡ್ ಕಾರ್ಯಕರ್ತರು ಹಸಿವಿನಿಂದಾಗಿ ಸಂಭವಿಸಿದ ಇನ್ನೊಂದು ಸಾವಿನ ಬಗ್ಗೆ ವರದಿ ಮಾಡಿದ್ದಾರೆ. ಈ ಸಾವಿಗೂ ಆಧಾರ್ ಆಧಾರಿತ ಸಾರ್ವಜನಿಕ ವಿತರಣಾ ವ್ಯವಸ್ಥೆಗೂ ಸಂಬಂಧವಿದೆ ಎಂದು ಹೇಳಲಾಗುತ್ತಿದೆ.

ಜಾರ್ಖಂಡ್‌ನ ಪಕೂರ್ ಜಿಲ್ಲೆಯ ಧವಾದಂಗಲ್ ಎಂಬ ಹಳ್ಳಿಯ 30ರ ಹರೆಯದ ಲುಖಿ ಮುರ್ಮು ಜನವರಿ 23ರಂದು ಆಹಾರದ ಕೊರತೆ ಮತ್ತು ಬಳಲಿಕೆಯಿಂದಾಗಿ ಮೃತಪಟ್ಟಳೆಂದು ವರದಿ ಮಾಡಲಾಗಿದೆ. ‘ರೈಟ್ ಟು ಫುಡ್’ ಸಂಘಟನೆಯ ಕಾರ್ಯಕರ್ತರು ಹೇಳುವಂತೆ, ಸ್ಥಳೀಯ ಪಡಿತರ ಅಂಗಡಿಯಲ್ಲಿ ಆಧಾರ್ ಗುರುತಿನ ಚೀಟಿ ದೃಢಪಡಲಿಲ್ಲವೆಂಬ ಕಾರಣಕ್ಕಾಗಿ ಮುರ್ಮುಗೆ ಕಳೆದ ಅಕ್ಟೋಬರ್ ತಿಂಗಳಿನಿಂದ ಪಡಿತರ ನಿರಾಕರಿಸಲಾಗಿತ್ತು.

ಈ ಸಂಘಟನೆಯ ವರದಿಯ ಪ್ರಕಾರ, ಮುರ್ಮುವಿನ ಪಡಿತರ ಚೀಟಿಯನ್ನು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಾಗಿರುವ ಅಂತ್ಯೋದಯ ವಿಭಾಗದಿಂದ ಆಕೆಗೆ ತಿಳಿಸದೆ ಜೂನ್ ತಿಂಗಳಲ್ಲಿ ಆದ್ಯತೆ ವಿಭಾಗಕ್ಕೆ ವರ್ಗಾಯಿಸಲಾಗಿತ್ತು. ಈ ಬದಲಾವಣೆಯಿಂದಾಗಿ ಅವಳ ಕುಟುಂಬಕ್ಕೆ ಸಿಗುತ್ತಿದ್ದ ತಿಂಗಳೊಂದರ 35 ಕಿಲೋ ಆಹಾರಧಾನ್ಯ ಕೇವಲ 20 ಕಿಲೋಗೆ ಇಳಿಯಿತು.

ಕಳೆದ ಸೆಪ್ಟಂಬರ್ ತಿಂಗಳಲ್ಲಿ ಸಿಮ್‌ಡೆಗಾ ಜಿಲ್ಲೆಯಲ್ಲಿ 11ರ ಹರೆಯದ ಸಂತೋಷಿ ಕುಮಾರಿ ಅನ್ನಕ್ಕಾಗಿ ಕೂಗುತ್ತಾ ಸತ್ತ ಬಳಿಕ, ಮುರ್ಮುವಿನ ಸಾವು ಏಳನೆಯ ಹಸಿವು ಸಂಬಂಧಿ ಸಾವು. ‘‘ಆ ಏಳು ಸಾವುಗಳಲ್ಲಿ ಐದು ಸಾವುಗಳು ಆಹಾರ ವಿತರಣೆಯಲ್ಲಿ ಕಡ್ಡಾಯವಾಗಿ ಆಧಾರ್ ಕಾರ್ಡ್‌ನ್ನು ಅನುಷ್ಠಾನಗೊಳಿಸಿದ್ದರ ಪರಿಣಾಮ’’ವೆಂದು ಹೇಳಲಾಗಿದೆ.

ಇಂತಹ ಸಾವುಗಳಲ್ಲಿ ಅತ್ಯಂತ ಇತ್ತೀಚಿನ ಪ್ರಕರಣ, ಅಕ್ಟೋಬರ್‌ನಿಂದ ಪಡಿತರ ನಿರಾಕರಿಸಲಾಗಿದ್ದ ಗರ್ವಾ ಜಿಲ್ಲೆಯ 67ರ ಹರೆಯದ ಈತ್ವರಿಯಾ ದೇವಿಯ ಜನವರಿ 2ರಂದು ಸಂಭವಿಸಿದ ಸಾವು. ಆದರೆ ಸ್ಥಳೀಯ ಅಧಿಕಾರಿಗಳು ಆಕೆ ವಯೋಸಂಬಂಧಿ ಸಹಜ ಕಾರಣಗಳಿಂದಾಗಿ ಸತ್ತಳೆಂದು ವಾದಿಸಿದರು. ಅದೇ ರೀತಿಯಾಗಿ ಮುರ್ಮು ಕೂಡ ಏನೋ ಒಂದು ಕಾಯಿಲೆಯಿಂದಾಗಿ ಸತ್ತಳೆಂದು ಪಕೂರ್ ಜಿಲ್ಲೆಯ ಅಧಿಕಾರಿಗಳು ಕೂಡ ವಾದಿಸಿದ್ದಾರೆ. ಆದರೆ ಆಕೆಗೆ ಯಾವುದೇ ನಿರ್ದಿಷ್ಟ ಕಾಯಿಲೆ ಇರಲಿಲ್ಲವೆಂದು ಆಕೆಯ ವೈದ್ಯಕೀಯ ಪರೀಕ್ಷೆ (ಡಯಾಗ್ನಸಿಸ್)ಯಿಂದ ತಿಳಿದು ಬಂದಿತ್ತೆಂದು ‘ರೈಟ್ ಟು ಫುಡ್’ ಸಂಘಟನೆಯ ವರದಿ ಹೇಳಿದೆ.

ಒಂದು ದಶಕದ ಹಿಂದೆ ಅವಳ ತಂದೆ ತಾಯಿ ತೀರಿಕೊಂಡಂದಿನಿಂದ ಲುಖಿ ಮುರ್ಮು ದಿನಗೂಲಿ ಮಾಡುತ್ತ ತನ್ನ ನಾಲ್ವರು ಕಿರಿಯ ಸಹೋದರಿಯರನ್ನು ನೋಡಿಕೊಂಡಿದ್ದಾಳೆ. ಇವರಲ್ಲಿ ಮೂವರಿಗೆ ವಿವಾಹವಾಗಿದ್ದು, ಅವರು ತಮ್ಮ ಗಂಡನ ಮನೆಯಲಿದ್ದಾರೆ. ಮುರ್ಮು 14ರ ಹರೆಯದ ತನ್ನ ಕಿರಿಯ ಸಹೋದರಿ ಫುಲಿನ್ ಮುರ್ಮ ಜತೆ ಇದ್ದಳು .

ಎರಡು ದಶಕಗಳ ಹಿಂದೆ ಹಣದ ಕೊರತೆಯಿಂದಾಗಿ ಫುಲಿನ್ ಮುರ್ಮು ಶಾಲೆ ತೊರೆದು ತನ್ನ ಅಕ್ಕನ ಜತೆ ದಿನಗೂಲಿ ಮಾಡತೊಡಗಿದಳು. ಬೇಸಾಯದ ಸಮಯದಲ್ಲಿ ಆಕೆಗೆ ವಾರದಲ್ಲಿ ಸುಮಾರು ಮೂರು ದಿನ ದಿನವೊಂದರ 100 ರೂ. ಕೂಲಿ ಸಿಗುತ್ತಿತ್ತು. ಒಮ್ಮಿಮ್ಮೆ ಆಹಾರಕ್ಕಾಗಿ ಕೈಸಾಲ ಪಡೆದು ಸಾಲ ನೀಡಿದವರ ಮನೆಯಲ್ಲಿ ಅವರು ಕೆಲಸ ಮಾಡುತ್ತಿದ್ದರು. ಆದರೆ ಡಿಸೆಂಬರ್‌ನಲ್ಲಿ ಅವರಿಗೆ ಯಾವುದೇ ಕೆಲಸ ಸಿಕ್ಕಿರಲಿಲ್ಲ.

                (ಲುಖಿ ಮುರ್ಮು)

ಪಡಿತರ ನಿರಾಕರಣೆ:

ಮುರ್ಮು ಕುಟುಂಬದ ಪಡಿತರ ಕಾರ್ಡ್‌ನಲ್ಲಿ ಐವರು ಸಹೋದರಿಯರ ಪೈಕಿ ನಾಲ್ವರ ಹೆಸರಿದೆ. ಆದರೆ ಲುಖಿ ಮುರ್ಮು ಮತ್ತು ಫುಲಿನ್ ಮುರ್ಮು ಇಬ್ಬರ ಆಧಾರ್ ಸಂಖ್ಯೆಗಳನ್ನು ಮಾತ್ರ ಆ ಕಾರ್ಡ್‌ಗೆ ಲಿಂಕ್ ಮಾಡ ಲಾಗಿದೆ. ಮಾರ್ಚ್ ತಿಂಗಳಲ್ಲಿ ಜಾರ್ಖಂಡ್‌ನ ಮುಖ್ಯ ಕಾರ್ಯದರ್ಶಿ ರಾಜ್ ಬಾಲ ವರ್ಮಾ, ಆಧಾರ್‌ಗೆ ಲಿಂಕ್ ಮಾಡದ ಪಡಿತರ ಚೀಟಿ(ಕಾರ್ಡ್)ಗಳು ಎಪ್ರಿಲ್‌ನ ಬಳಿಕ ‘ಅಸಿಂಧು’ವಾಗುತ್ತವೆಂಬ ಆದೇಶ ಹೊರಡಿಸಿದರು. ಪರಿಣಾಮವಾಗಿ ಮುಂದಿನ ಕೆಲವು ತಿಂಗಳುಗಳು ಜಾರ್ಖಂಡ್‌ನಲ್ಲಿ ಸುಮಾರು 11 ಲಕ್ಷ ಪಡಿತರ ಚೀಟಿಗಳನ್ನು ರದ್ದುಪಡಿಸಲಾಯಿತು.
 ಅಕ್ಟೋಬರ್‌ನಲ್ಲಿ, ಹಸಿವಿನಿಂದಾಗಿ ಸಂತೋಷಿ ಕುಮಾರಿ ಸತ್ತ ಸುದ್ದಿ ವ್ಯಾಪಕವಾಗಿ ವರದಿಯಾದಾಗ, ಕೇಂದ್ರ ಸರಕಾರ ಆಧಾರ್‌ಗೆ ಜೋಡಣೆಯಾಗದ ಪಡಿತರ ಚೀಟಿಗಳನ್ನು ಹೊಂದಿದವರಿಗೆ ಪಡಿತರ ನಿರಾಕರಿಸಕೂಡದೆಂದು ಆದೇಶ ನೀಡಿತು. ಆದರೂ, ಇಂದಿಗೂ ಕೂಡ ರಾಜ್ಯದ ಹಲವು ಭಾಗಗಳಲ್ಲಿ ಪಡಿತರ ವ್ಯಾಪಾರಿಗಳು ಇಂತಹ ಪಡಿತರ ಚೀಟಿ ಹೊಂದಿರುವವರಿಗೆ ಪಡಿತರ ನೀಡಲು ನಿರಾಕರಿಸುತ್ತಿದ್ದಾರೆಂದು ವರದಿಗಳು ಹೇಳುತ್ತವೆ.

ಲುಖಿ ಮುರ್ಮು ಪ್ರಕರಣದಲ್ಲಿ ಎಪ್ರಿಲ್ ತಿಂಗಳವರೆಗೆ ಅವಳ ಕುಟುಂಬ ಪ್ರತೀ ತಿಂಗಳು 35 ಕಿಲೊ ಆಹಾರ ಧಾನ್ಯ ಪಡೆಯುತ್ತಿತ್ತೆಂದೂ, ಜೂನ್ ತಿಂಗಳಿಂದ ಪಡಿತರ ವ್ಯಾಪಾರಿ ಆಕೆಗೆ 20 ಕಿಲೊ ಮಾತ್ರ ನೀಡತೊಡಗಿದನೆಂದೂ ಆಕೆಯ ಪಡಿತರ ಚೀಟಿಯಲ್ಲಿರುವ ಎಂಟ್ರಿಗಳು ಹೇಳುತ್ತವೆ. ಲುಖಿ ಮುರ್ಮು ಕೊನೆಯ ಬಾರಿಗೆ ಪಡಿತರ ಪಡೆದದ್ದು, ಸೆಪ್ಟಂಬರ್‌ನಲ್ಲಿ. ಆ ಬಳಿಕ ಅವಳ ಪಡಿತರ ಚೀಟಿಯಲ್ಲಿ ಯಾವುದೇ ಎಂಟ್ರಿ ಕಾಣಿಸುವುದಿಲ್ಲ. ಅಕ್ಟೋಬರ್‌ನಿಂದ ಫುಲಿನ್ ಮುರ್ಮು ಹಲವು ಬಾರಿ ಪಡಿತರ ಅಂಗಡಿಗೆ ಹೋದಳಾದರೂ ಅಂಗಡಿಯಲ್ಲಿರುವ ಯಂತ್ರದಲ್ಲಿ ಅವಳ ಆಧಾರ್ ಸಂಖ್ಯೆಯ ಬಯೋಮೆಟ್ರಿಕ್ ದೃಢೀಕರಣವಾಗದ್ದರಿಂದ ಅವಳಿಗೆ ಪಡಿತರವನ್ನು ನಿರಾಕರಿಸಲಾಯಿತು. ಜಿಲ್ಲೆಯ ಅಧಿಕಾರಿಗಳಿಗೆ ನೀಡಿದ ಹೇಳಿಕೆಯಲ್ಲಿ ಪಡಿತರ ವ್ಯಾಪಾರಿ ಚೇತನ್ ಮುರ್ಮು ಇಬ್ಬರು ಸಹೋದರಿಯರಲ್ಲಿ ಯಾರೊಬ್ಬರೂ ಕೆಲವು ತಿಂಗಳುಗಳಿಂದ ತನ್ನ ಅಂಗಡಿಗೆ ಬಂದಿಲ್ಲವೆಂದು ಹೇಳಿದ್ದಾನೆ. ಆದರೆ ಸತ್ಯ-ಶೋಧನಾ ತಂಡ ಆತನನ್ನು ಪ್ರಶ್ನಿಸಿದಾಗ, ಆತ ಆ ಸಹೋದರಿಯರಲ್ಲಿ ಫುಲಿನ್ ಮುರ್ಮು ತನ್ನ ಅಂಗಡಿಗೆ ಬಂದಿದ್ದಳು, ಆದರೆ ಆಕೆಯ ಬಯೋಮೆಟ್ರಿಕ್‌ನ್ನು ದೃಢೀಕರಿಸಲು ಆಕೆ ವಿಫಲಳಾದಳು ಎಂದು ಒಪ್ಪಿಕೊಂಡ.
ಅದೇ ವೇಳೆ ಫುಲಿನ್ ಮುರ್ಮು ಪಡಿತರ ಅಂಗಡಿಗೆ ಹೋಗಿದ್ದಳೋ, ಮತ್ತು ಹೋಗಿ ಪಡಿತರ ಪಡೆಯಲು ಪ್ರಯತ್ನಿಸಿದ್ದಳೋ ಎಂಬ ಬಗ್ಗೆ ತನಗೆ ಸ್ಪಷ್ಟವಾಗಿಲ್ಲ, ಎಂದಿದ್ದಾರೆ ಜಿಲ್ಲಾ ಪೂರೈಕೆ ಅಧಿಕಾರಿ ದಿಲೀಪ್ ಕುಮಾರ್ ತಿವಾರಿ: ‘‘ಈ ಬಗ್ಗೆ ಸ್ವಲ್ಪ ಗೊಂದಲ ಇದೆ, ಆದರೆ ಸ್ಥಳೀಯರು ಆಕೆ ಅಂಗಡಿಗೆ ಹೋಗಿರಲಿಲ್ಲ ಎನ್ನುತ್ತಿದ್ದಾರೆ.’’

ಆದರೆ ಸತ್ಯಶೋಧನಾ ತಂಡದ ವರದಿ ಬೇರೆಯೇ ಹೇಳುತ್ತದೆ.

‘‘ಅದೇನೇ ಇರಲಿ, ಕುಟುಂಬಕ್ಕೆ ಆಹಾರದ ಆವಶ್ಯಕತೆ ಅಷ್ಟೊಂದು ತೀವ್ರವಾಗಿರುವಾಗ, ಆಹಾರಕ್ಕಾಗಿ ಕುಟುಂಬ ತಹ ತಹಿಸುತ್ತಿರುವಾಗ, ಒಂದು ಕುಟುಂಬವು ಪಡಿತರ ವ್ಯಾಪಾರಿಯ ಬಳಿ ಹೋಗದೆ ಯಾಕಿರುತ್ತದೆ?’’ ಎಂದು ಸತ್ಯ-ಶೋಧನಾ ತಂಡದ ಓರ್ವ ಕಾರ್ಯಕರ್ತೆ ಅಂಕಿತಾ ಅಗರ್ವಾಲ್ ಪ್ರಶ್ನಿಸಿದ್ದಾರೆ.

ಕೃಪೆ: scroll.in
 

Writer - ಆರೀಫಾ ಜೊಹಾರಿ

contributor

Editor - ಆರೀಫಾ ಜೊಹಾರಿ

contributor

Similar News

ಜಗದಗಲ
ಜಗ ದಗಲ