ಮಡಿಕೇರಿ: ಮೂಲಭೂತ ಸೌಲಭ್ಯಕ್ಕೆ ಒತ್ತಾಯಿಸಿ ವಿದ್ಯಾರ್ಥಿಗಳಿಂದ ಧರಣಿ

Update: 2018-02-08 10:52 GMT

ಮಡಿಕೇರಿ, ಫೆ.8: ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜ್‍ಗೆ ಸ್ವಂತ ಕಟ್ಟಡ ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಕಾಲೇಜು ವಿದ್ಯಾರ್ಥಿಗಳು ನಗರದಲ್ಲಿ ಧರಣಿ ನಡೆಸಿದರು.

ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರಿಗೆ ನೀಡಿದರು.  
ಈ ಸಂದರ್ಭ ಮಾತನಾಡಿದ ವಿದ್ಯಾರ್ಥಿ ಸಂಘದ ಪ್ರಮುಖರಾದ ವಿನಿತ್, ಕಾಲೇಜ್ ಕಟ್ಟಡ ಸಂಪೂರ್ಣವಾಗಿ ಶಿಥಿಲಾವಸ್ಥೆಗೊಂಡಿದ್ದು, ವಿದ್ಯಾರ್ಥಿಗಳು ಅಪಾಯಕಾರಿ ಪರಿಸ್ಥಿತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಕಾಲೂರು, ಮಾದಾಪುರ, ಮಕ್ಕಂದೂರು, ಚೆಟ್ಟಳ್ಳಿ ಸಿದ್ದಾಪುರ, ಸುಂಟಿಕೊಪ್ಪ, ಮರಗೋಡು, ಹಾಕತ್ತೂರು, ಮೇಕೇರಿ, ಕಾಟಕೇರಿ ಮದೆನಾಡು, ಭಾಗಮಂಡಲ ಸೇರಿದಂತೆ ದೂರದ ಗ್ರಾಮಗಳಿಂದ ಬಡ ವಿದ್ಯಾರ್ಥಿಗಳು ಆಗಮಿಸಿ ಶೈಕ್ಷಣಿಕ ಜೀವನದ ಗುರಿ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಪ್ರತ್ಯೇಕ ಕಟ್ಟಡ, ಆಟದ ಮೈದಾನ, ಪ್ರತ್ಯೇಕ ಗ್ರಂಥಾಲಯ ಮುಂತಾದ ಮೂಲಭೂತ ಸೌಕರ್ಯಗಳಿಲ್ಲದೆ ಅತಂತ್ರ ಸ್ಥಿತಿಯಲ್ಲಿ ಶಿಕ್ಷಣ ಪಡೆಯುತ್ತಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸುಮಂತ್ ಮಾತನಾಡಿ, ಕಾಲೇಜಿನ ಕಟ್ಟಡ ನಿರ್ಮಾಣಕ್ಕಾಗಿ ರೂ.2 ಕೋಟಿ ಮಂಜೂರಾಗಿದ್ದು, ಕರ್ಣಂಗೇರಿ ಗ್ರಾಮದಲ್ಲಿ ಜಮೀನು ಒದಗಿಸಲಾಗಿದೆ. ಸುಮಾರು 8 ಕಿ.ಮೀ. ದೂರದಲ್ಲಿರುವ ಈ ಜಾಗದಲ್ಲಿ ಕಾಲೇಜು ಸ್ಥಾಪನೆಯಾದರೆ ಗ್ರಾಮೀಣ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ಕಾಲೇಜು ಶುಲ್ಕ ಪಾವತಿ ಸೇರಿದಂತೆ ಇನ್ನಿತರ ಸೌಲಭ್ಯಗಳಿಗಾಗಿ ವಿದ್ಯಾರ್ಥಿಗಳು 8 ಕಿ.ಮೀ ದೂರ ಕ್ರಮಿಸಬೇಕಾದ ಪರಿಸ್ಥಿತಿ ಎದುರಾಗಲಿದೆ. ಈ ವಿಚಾರವನ್ನು ಸಂಬಂಧಪಟ್ಟ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಸಾಧ್ಯವಾದಷ್ಟು ಮಡಿಕೇರಿ ನಗರಕ್ಕೆ ಹತ್ತಿರದಲ್ಲಿ ಕಟ್ಟಡ ನಿರ್ಮಾಣ ಮಾಡಲು ಜಾಗ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು. 

ವಿದ್ಯಾರ್ಥಿ ಸಂಘದ ಪ್ರಮುಖರಾದ ರೇಣು, ರಂಜನ್, ರಕ್ಷಿತ್, ಸ್ವಾತಿ ಹಾಗೂ ಇತರ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News