ನಿಮ್ಮ ಪೋಸ್ಟ್ ಗಳಿಗೆ ಫೇಸ್ಬುಕ್ ಕಡಿವಾಣ ಹಾಕುತ್ತಿದೆಯೇ?
ಹೊಸದಿಲ್ಲಿ, ಫೆ.8: ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಇತ್ತೀಚಿನ ದಿನಗಳಲ್ಲಿ ನಮ್ಮ ಪೋಸ್ಟ್ ಗಳನ್ನು ನಿಗದಿತ ಸಂಖ್ಯೆಯ ಗೆಳೆಯರಿಗೆ ಮಾತ್ರ ತಲುಪಿಸಲಾಗುತ್ತದೆ ಎನ್ನುವ ವದಂತಿಯೊಂದು ಹರಿದಾಡಿತ್ತು. ನಮ್ಮ ಖಾತೆಯ 26 ಗೆಳೆಯರಿಗೆ ಮಾತ್ರ ನಮ್ಮ ಪೋಸ್ಟ್ ಗಳು ತಲುಪುತ್ತದೆ. ಇದಕ್ಕಾಗಿ ನಮಗೆ ಬೇಕಾದ ಗೆಳೆಯರನ್ನು ನಾವೇ ಆಯ್ದುಕೊಳ್ಳಬೇಕು ಎನ್ನಲಾಗಿತ್ತು. ಆದರೆ ಈ ಸುದ್ದಿ ಸುಳ್ಳೆಂದು ಸಾಬೀತಾಗಿದೆ.
ಕೆಲ ನ್ಯೂಸ್ ಪಬ್ಲಿಶರ್ ಗಳ ಖಾತೆಯ ಪೋಸ್ಟ್ ಗಳು ಪುನರಾವರ್ತನೆಯಾಗುವುದನ್ನು ತಡೆಯಲಾಗುತ್ತದೆ ಎಂದು ಫೇಸ್ ಬುಕ್ ಘೋಷಿಸಿದ್ದ ನಂತರ ಈ ವದಂತಿಯೂ ಹರಡಿತ್ತು. ಇದರಿಂದಾಗಿ ತಮ್ಮ ಎಲ್ಲಾ ಗೆಳೆಯರ ಪೋಸ್ಟ್ ನೋಡಲು ಸಾಧ್ಯವಾಗುವುದಿಲ್ಲ ಎನ್ನುವ ಆತಂಕ ಕೋಟ್ಯಾಂತರ ಫೇಸ್ ಬುಕ್ ಬಳಕೆದಾರರಲ್ಲಿ ಮನೆ ಮಾಡಿತ್ತು.
ಆದರೆ ಈ ಬಗ್ಗೆ ಸತ್ಯಾಂಶವನ್ನು Snopes ವರದಿ ಮಾಡಿದ್ದು, ಪೋಸ್ಟ್ ಗಳಿಗೆ ಕಡಿವಾಣ ಹಾಕುವ ಸುದ್ದಿ ಸುಳ್ಳು ಎಂದಿದೆ.
“ನಿಮಗೆ ಎಷ್ಟು ಸಂಬಂಧಪಟ್ಟಿದೆ ಎಂಬುದನ್ನು ಗಮನಿಸಿ ನಾವು ಪ್ರತಿ ಪೋಸ್ಟ್ ಗಳಿಗೂ ಮಹತ್ವ ನೀಡುತ್ತೇವೆ. ಪೋಸ್ಟ್ ಗಳನ್ನು ಕೇವಲ 26 ಮಂದಿಗೆ ಮಾತ್ರ ತಲುಪಿಸುವ ಸುದ್ದಿ ಸುಳ್ಳಾಗಿದೆ” ಎಂದು ಫೇಸ್ ಬುಕ್ ನ ವಕ್ತಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ.