ಸಂವಿಧಾನದ ಮೇಲೆ ಭಾರೀ ಪ್ರಹಾರಕ್ಕೆ ಬಿಜೆಪಿ ಯೋಜನೆ: ಶಶಿ ತರೂರ್

Update: 2018-02-08 17:01 GMT

ಹೊಸದಿಲ್ಲಿ, ಫೆ.8: ಸಂಸತ್ತಿನ ಉಭಯ ಸದನಗಳಲ್ಲೂ ಬಹುಮತ ದೊರೆತರೆ ಸಂವಿಧಾನದ ಮೇಲೆ ಭಾರೀ ಪ್ರಹಾರ ನಡೆಸಲು ಬಿಜೆಪಿ ಯೋಜನೆ ಹಾಕಿಕೊಂಡಿದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.

 ಕಾಶ್ಮೀರದ 370ನೇ ಪರಿಚ್ಛೇದ, ಜಾತ್ಯಾತೀತತೆ ಮುಂತಾದ ಸಂವಿಧಾನದ ವಿಷಯಗಳ ಮೇಲೆ ಬಿಜೆಪಿ ನಡೆಸುತ್ತಿರುವ ಆಕ್ರಮಣ ಹಿಂದೂ ರಾಷ್ಟ್ರ ನಿರ್ಮಿಸುವ ಪ್ರಯತ್ನದ ಒಂದು ಅಂಗವಾಗಿದೆ ಎಂದು ತರೂರ್ ಅಭಿಪ್ರಾಯಪಟ್ಟಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ‘ಹಿಂದುತ್ವದ ಆಕ್ರಮಣ’ವನ್ನು ಎದುರಿಸಲು ಕಾಂಗ್ರೆಸ್ ಹಾಗೂ ಇತರ ಸಮಾನಮನಸ್ಕ ಪಕ್ಷಗಳು ಒಗ್ಗೂಡುವ ಅಗತ್ಯವಿದೆ. ಅಗತ್ಯಬಿದ್ದರೆ ಚುನಾವಣೋತ್ತರ ಮೈತ್ರಿಯಲ್ಲಿ ಎಡಪಕ್ಷಗಳೂ ಕೈಜೋಡಿಸಬೇಕು ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಕೇರಳದ ಸಂಸದ ತರೂರ್ ಹೇಳಿದರು.

   ಈ ಹಿಂದೆ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರದ ಅವಧಿಯಲ್ಲಿ ಸಂವಿಧಾನ ಪುನರ್ ಪರಿಶೀಲನಾ ಸಮಿತಿಯನ್ನು ಸುಪ್ರೀಂಕೋರ್ಟ್ ಮಾಜಿ ನ್ಯಾಯಾಧೀಶ ಎನ್.ವೆಂಕಟಾಚಲಪತಿ ನೇತೃತ್ವದಲ್ಲಿ ರಚಿಸಿರುವುದನ್ನು ನೆನಪಿಸಿದ ತರೂರ್, ಆದರೆ ಹಿಂದೂ ರಾಷ್ಟ್ರನಿರ್ಮಾಣದ ಯೋಜನೆಗೆ ಇದು ನೆರವಾಗಲಿಲ್ಲ ಎಂದರು. ಆದರೆ ಈಗ ಆರೆಸ್ಸೆಸ್ ಸಿದ್ಧಾಂತವಾದಿ ಕೆ.ಎನ್.ಗೋವಿಂದಾಚಾರ್ಯರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಸಮಾಜವಾದ, ಜಾತ್ಯಾತೀತವಾದ ಎಲ್ಲವೂ ಕೊನೆಗೊಳ್ಳಬೇಕು ಎಂದು ಗೋವಿಂದಾಚಾರ್ಯ ಹೇಳಿರುವುದಾಗಿಯೂ ವರದಿಯಾಗಿದೆ. ಆದರೆ ಸಂಸತ್ತಿನ ಎರಡೂ ಸದನದಲ್ಲಿ ಬಹುಮತದ ಕೊರತೆ ಇರುವ ಕಾರಣ ತಮ್ಮ ಪ್ರಥಮಾವಧಿಯಲ್ಲೇ ಇಂತಹ ಒಂದು ಗಂಡಾಂತರಕಾರಿ ಕ್ರಮಕ್ಕೆ ಸರಕಾರ ಮುಂದಾಗಲು ಬಯಸುತ್ತಿಲ್ಲ . ಬಹುತೇಕ ಎಲ್ಲಾ ಪಕ್ಷಗಳೂ ಬಿಜೆಪಿಯ ಧೋರಣೆಯನ್ನು ಒಪ್ಪದ ಕಾರಣ ಬಿಜೆಪಿಗೆ ಮೂರನೇ ಎರಡರಷ್ಟು ಬಹುಮತ ದೊರೆತಿಲ್ಲ ಎಂದು ತರೂರ್ ಹೇಳಿದ್ದಾರೆ.

 ಒಮ್ಮೆ ಮೂರನೇ ಎರಡರಷ್ಟು ಬಹುಮತ ದೊರೆತರೆ ಸಂವಿಧಾನದ ಮೇಲೆ ಭಾರೀ ಪ್ರಹಾರಕ್ಕೆ ಅವರು ಸಿದ್ಧರಾಗಿದ್ದಾರೆ . ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಥರೂರ್ ಹೇಳಿದ್ದಾರೆ. ಜನಸಂಘದ ಮುಖಂಡ ದೀನ್‌ದಯಾಳ್ ಉಪಾಧ್ಯಾಯರ ಸಿದ್ಧಾಂತವನ್ನು ಆಡಳಿತ ಪಕ್ಷ ಅನುಸರಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಇದೇ ದೀನದಯಾಳ್ ಉಪಾಧ್ಯಾಯರು ಸಂವಿಧಾನವು ಆಮದಾಗಿರುವ ಸಿದ್ಧಾಂತವನ್ನು ಹೊಂದಿರುವ ಕಾರಣ ಅದನ್ನು ಹರಿದು ಕಸದ ಬುಟ್ಟಿಗೆ ಎಸೆಯಬೇಕು ಎಂದು ಹೇಳಿಕೆ ನೀಡಿದ್ದರು ಎಂದೂ ತರೂರ್ ಹೇಳಿದರು.

  ಸಾರ್ವಜನಿಕವಾಗಿ ನಮ್ಮ ಧಾರ್ಮಿಕ ನಂಬಿಕೆಯನ್ನು ಪ್ರದರ್ಶಿಸದೆ, ಖಾಸಗಿಯಾಗಿ ಪ್ರಾರ್ಥನೆ ಸಲ್ಲಿಸಬಹುದು. ಆದರೆ ಬಿಜೆಪಿಯವರು ಹಾಗಲ್ಲ, ದೇವಸ್ಥಾನಕ್ಕೆ ಹೋಗುತ್ತಾರೆ. ಬಳಿಕ ನೋಡಿ ನಾವು ಕೂಡಾ ನಿಮ್ಮಂತೆಯೇ ಹಿಂದೂಗಳಾಗಿದ್ದು , ದೇವರಿಲ್ಲ ಎನ್ನುವ ಜಾತ್ಯಾತೀತವಾದಿಗಳ ಬದಲು ನಮಗೆ ಮತ ನೀಡಿ ಎಂದು ಮತದಾರರ ಮೇಲೆ ಪ್ರಭಾವ ಬೀರುತ್ತಾರೆ. ರಾಹುಲ್ ಗಾಂಧಿ ಗುಜರಾತ್‌ನಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ - ಅವರು (ಬಿಜೆಪಿಯವರು) ದೇವಸ್ಥಾನಕ್ಕೆ ಹೋಗಿದ್ದಾರೆ. ನಾವು ಕೂಡಾ ಹೋಗಿದ್ದೇವೆ. ಇದರಲ್ಲೇನೂ ವಿಶೇಷವಿಲ್ಲ ಎಂದಿದ್ದರು.

ಅಂತಿಮವಾಗಿ ಈಗ ಗೋಚರಕ್ಕೆ ಬಂದಿರುವ ವಿಷಯವೆಂದರೆ ಐದು ವರ್ಷದ ಹಿಂದೆ ಕೇಂದ್ರ ಸರಕಾರ ನೀಡಿದ್ದ ಭರವಸೆಗಳಲ್ಲಿ ಯಾವುದೂ ಈಡೇರಿಲ್ಲ ಎಂದು ತರೂರ್ ಹೇಳಿದರು.

ಚುನಾವಣೆಯ ಬಳಿಕ ಎಡಪಕ್ಷಗಳ ಜೊತೆ ಖಂಡಿತಾ ಮೈತ್ರಿ ಮಾಡಿಕೊಳ್ಳಲಾಗುವುದು. ಚುನಾವಣೆಗೂ ಮೊದಲು ಕಾಂಗ್ರೆಸ್ ಜೊತೆ ಮೈತ್ರಿಗೆ ಅವರು ಒಪ್ಪದ ಕಾರಣ ಚುನಾವಣೋತ್ತರ ಮೈತ್ರಿಗೆ ಅವಕಾಶವಿದೆ ಎಂದು ಥರೂರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News