ಕಪ್ಪು ಹಣ ಹೊಂದಿರುವ ಮಠಗಳ ನಿಯಂತ್ರಣಕ್ಕೆ ಕಾಯ್ದೆ ಜಾರಿಯಾಗಬೇಕು: ನಿಡುಮಾಮಿಡಿ ಸ್ವಾಮೀಜಿ

Update: 2018-02-09 16:56 GMT

ಮೈಸೂರು,ಫೆ.9: ರಾಜ್ಯದ ಶ್ರೀಮಂತ ಮಠಗಳಲ್ಲಿ ಕಪ್ಪು ಹಣ ಅಧಿಕವಾಗಿದ್ದು, ವೃತ್ತಿಪರ ಶಿಕ್ಷಣ ಹಾಗೂ ಆರೋಗ್ಯ ಸಂಸ್ಥೆ ನಡೆಸುವ ಮಠಗಳು ಡೊನೇಶನ್ ಹೆಸರಿನಲ್ಲಿ ಜನರಿಂದ ಹಣವನ್ನು ಲೂಟಿ ಹೊಡೆಯುತ್ತಿವೆ. ಅಂತಹ ಮಠಗಳ ನಿಯಂತ್ರಣಕ್ಕೆ ಕಾಯ್ದೆ ಜಾರಿಯಾಗಬೇಕಿದೆ ಎಂದು ಬೆಂಗಳೂರು ನಿಡುಮಾಮಿಡಿ ಮಠದ ಶ್ರೀವೀರಭದ್ರ ಚನ್ನಮಲ್ಲಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಪ್ರಗತಿಪರ ಮಠಾಧೀಶರ ವೇದಿಕೆ ವತಿಯಿಂದ ಆಯೋಜಿಸಿದ್ದ ಪತ್ರಿಕಾಗೊಷ್ಠಿಯಲ್ಲಿ ಅವರು ಮಾತನಾಡಿದರು.

ರಾಜಕಾರಣಿಗಳು ಯಾವ ಮಠದ ಜೊತೆ ಹೆಚ್ಚಿನ ಸ್ನೇಹ ಹೊಂದಿರುತ್ತಾರೋ ಅಂತಹ ಮಠಗಳಲ್ಲಿ ಕಪ್ಪು ಹಣ ಇದೆ. ಸಾಮಾನ್ಯವಾಗಿ ಇಂತಹ ಮಠಗಳಿಗೆ ಈ ಕಾಯ್ದೆಯ ಅನಿವಾರ್ಯತೆ ಇದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಜ್ಯ ಸರ್ಕಾರ ನ್ಯಾಯಾಲಯದ ಆದೇಶದಂತೆ ಧಾರ್ಮಿಕ ಮಠಗಳು ಹಾಗೂ ಸಂಸ್ಥೆಗಳನ್ನು ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡಿಸಬೇಕೋ ಅಥವಾ ಬೇಡವೋ ಎಂಬುದರ ಬಗ್ಗೆ ಸಲಹೆ, ಸೂಚನೆಗಳನ್ನು ಕೇಳಿದೆಯೇ ಹೊರತು, ಮಠಗಳನ್ನು ಸರಕಾರದ ವ್ಯಾಪ್ತಿಗೆ ಒಳಪಡಿಸಲಾಗುತ್ತದೆ ಎಂದು ಹೇಳಿಲ್ಲ. ಆದರೆ ಪ್ರತಿಪಕ್ಷಗಳು ಸಮಾಜಕ್ಕೆ ತಪ್ಪು ಸಂದೇಶ ರವಾನಿಸಿ ಸರಕಾರದ ಮೇಲೆ ಕೆಟ್ಟ ಹೆಸರು ತರಲು ಸಂಚು ರೂಪಿಸಿವೆ ಎಂದು ಹೇಳಿದರು.

ಸರಕಾರ ಹೊರಡಿಸಿರುವ ಸುತ್ತೋಲೆ ಬಗ್ಗೆ ತಪ್ಪು ಗ್ರಹಿಕೆ ಆಗಿದೆ. ವಿರೋಧ ಪಕ್ಷಗಳ ಅಪಪ್ರಚಾರದಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗಿದೆ. ನ್ಯಾಯಾಲಯ ಆದೇಶದ ಅನ್ವಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ಯಾವ ಸರ್ಕಾರ ಇದ್ದರೂ ಆ ಕೆಲಸ ಮಾಡಲೇಬೇಕಿತ್ತು. ಆ ಸುತ್ತೋಲೆಯಲ್ಲಿ ಮಠಗಳನ್ನ ಸ್ವಾಧೀನ ಪಡಿಸಿಕೊಳ್ಳಬೇಕು ಅಂತ ಇಲ್ಲ. ಮಠಗಳನ್ನ ಮುಜರಾಯಿ ಇಲಾಖೆಗೆ ವ್ಯಾಪ್ತಿಗೆ ತಂದು ಆಡಳಿತ ನಡೆಸಬೇಕೆಂದು ಮಾತ್ರ ಇದೆ. ಆದರೆ ಪ್ರಾಜ್ಞರಾದ ಉಡುಪಿಯ ಕಿರಿಯ ಶ್ರೀಗಳು, ಭಾವುಕರಾಗಿ ಮಾತನಾಡಿರುವುದು ಸರಿಯಲ್ಲ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ತಮ್ಮ ಕೋಪವನ್ನು ವ್ಯಕ್ತಪಡಿಸಿರುವುದು ಅರ್ಥಹೀನ. ಹಾಗೆಯೇ ಉಡುಪಿಯ ಪೇಜಾವರ ಶ್ರೀಗಳು ಮಠಬಿಟ್ಟು ಹೊರಬರುವ ಅಗತ್ಯವಿಲ್ಲ, ಯಾವುದೇ ಮಠಾಧೀಶರುಗಳು ಬೀದಿಗಿಳಿದು ಹೋರಾಡು ಅಗತ್ಯವಿಲ್ಲ ಎಂದು ಹೇಳಿದರು.

ಮಠಗಳ ಮೂಲ ಆಸ್ತಿ ದುರುಪಯೋಗವಾದರೆ ಉತ್ತರಾಧಿಕಾರಿ ನೇಮಕ ವಿಚಾರದಲ್ಲಿ ಗೊಂದಲ ಉಂಟಾದಾಗ ಸರ್ಕಾರ ಸುಮ್ಮನೆ ಕೂರಲು ಸಾಧ್ಯವಿಲ್ಲ. ಆ ಸಂದರ್ಭದಲ್ಲಿ ಆಡಳಿತಾಧಿಕಾರಿ ನೇಮಿಸಬೇಕಾಗುತ್ತದೆ. ಅದಮಾರು ಮಠದ ವಿಚಾರಕ್ಕೆ ಸಂಬಂಧಿಸಿದಂತೆ 2007ರಲ್ಲಿ ಕೋರ್ಟ್ ಆದೇಶ ನೀಡಿತ್ತು. ಆಗಿನ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ಕರಡು ಸಮಿತಿ ರಚಿಸಿ ಅದರ ಅಧ್ಯಕ್ಷರನ್ನಾಗಿ ನಿವೃತ್ತ ನ್ಯಾಯಾಧೀಶ ರಾಮಾಜೋಯಿಸ್ ರನ್ನು ನೇಮಕ ಮಾಡಿತ್ತು. ಆ ಸಮಿತಿ ವರದಿ ಆದಾರದ ಮೇಲೆಯೇ ಸರ್ಕಾರ ಈ ತೀರ್ಮಾನ ಕೈಗೊಂಡಿದೆ ಎಂದು ಸ್ಪಷ್ಟಪಡಿಸಿದರು.

ಸಾರ್ವಜನಿಕರ ಹಣ ಯಾವ ಚರ್ಚ್, ಮಠ, ಮಸೀದಿಯಲ್ಲಿರಿತ್ತೋ, ಆ ಎಲ್ಲ ಸ್ಥಳಗಳು ಕಾನೂನಿನ ವ್ಯಾಪ್ತಿಗೆ ಒಳಪಡಬೇಕಿದೆ. ಈ ಕಾಯ್ದೆ ಜಾರಿ ತಾತ್ಕಾಲಿಕವಾಗಿ ಸರ್ಕಾರ ಮುಂದೂಡಿದ್ದು, ಮುಂದೆ ಯಾವ ಸರ್ಕಾರ ಬಂದರೂ ಅದನ್ನು ಜಾರಿಗೊಳಿಸಿ ನ್ಯಾಯಾಲಯದ ಆದೇಶವನ್ನು ಪಾಲಿಸಲೇಬೇಕಾದ ಅನಿವಾರ್ಯವಿದೆ ಎಂದರು.

ಕಾನೂನಿಗೆ ಯಾರೂ ಅತೀಥರಲ್ಲ, ಸರ್ಕಾರ ನೀಡುವ ಜಾಗ ಬೇಕು, ಸೌಲಭ್ಯ ಬೇಕು ಎನ್ನುವ ಮಠಗಳು, ಸರ್ಕಾರ ರೂಪಿಸುವ ನಿಯಮವನ್ನು ಪಾಲಿಸದಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ನಿಡುಮಾಮಿಡಿ ಶ್ರೀಗಳು, ಕಾಯ್ದೆ ವಿರುದ್ಧ ಮಠಾಧೀಶರು ಬೀದಿಗಿಳಿದು ಹೋರಾಟ ಮಾಡುವ ಅಗತ್ಯವಿಲ್ಲ. ಪೇಜಾವರ ಶ್ರೀಗಳು ಮಠ ಬಿಟ್ಟು ಹೊರಬರುವ ಅಗತ್ಯ ಇಲ್ಲ. ಎಲ್ಲರು ಸುತ್ತೋಲೆಯನ್ನ ತಿಳಿದು ಮುಜರಾಯಿ ಇಲಾಖೆಗೆ ಅಭಿಪ್ರಾಯ ತಿಳಿಸಬೇಕಿದೆ ಎಂದರು.

ರಾಜ್ಯ ಸರ್ಕಾರ ದೇವಸ್ಥಾನಗಳ ಆದಾಯಗಳ ಮೂಲಕ ಹೇಗೆ ವರ್ಗೀಕರಣ ಮಾಡಿದೆಯೋ, ಅದೇ ರೀತಿ ಮಠಗಳ ಆದಾಯಗಳನ್ನು ನೋಡಿಕೊಂಡು ವರ್ಗೀಕರಣ ಮಾಡಬೇಕು. ಸಂಪತ್ತನ್ನು ಕೆಲವು ಮಠಗಳು ದುರುಪಯೋಗ ಮಾಡುತ್ತಿವೆ. ವಂಶಪಾರಂಪರ್ಯಕ್ಕೆ ಮನ್ನಣೆ ನೀಡುತ್ತಿವೆ. ರಕ್ತ ಸಂಬಂಧಿಕರನ್ನು ಉತ್ತರಾಧಿಕಾರಿಯಾಗಿ ನೇಮಕ ಮಾಡಿಕೊಳ್ಳುತ್ತಿವೆ. ಸಂವಿಧಾನದ ಅಡಿಯಲ್ಲಿ ಎಲ್ಲರೂ ಒಂದೇ. ಹೀಗಾಗಿ ಮಠಗಳು ಪಾರದರ್ಶಕತೆಯಿಂದ ಇರಬೇಕು ಎಂದು ಹೇಳಿದರು.

ಇದೇ ವೇಳೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಶ್ರೀವೀರಭದ್ರ ಚನ್ನಮಲ್ಲಸ್ವಾಮೀಜಿ, ಧರ್ಮ ಸಂಸತ್ ಎನ್ನುವುದೇ ತಪ್ಪು. ಒಂದು ಪಕ್ಷ ಒಂದು ಮತೀಯ ಗುಂಪಿಗ ಸೇರಿದ್ದು ಧರ್ಮ ಸಂಸತ್. ಆ ಹೆಸರು ಹೇಳುವ ಮೂಲಕ ಮೂಲ ಸಂಸತ್ತಿಗೆ ಅವಮಾನ ಮಾಡುತ್ತಿದ್ದೀರಿ. ಧರ್ಮ ಸಂಸತ್ ನಿರ್ಣಯಗಳು ದೇಶದ 130 ಕೋಟಿ ಜನರ ನಿರ್ಣಯ ಅಲ್ಲ. ಅದು ಆಯಾಕಾಲಕ್ಕೆ ತೆಗೆದುಕೊಳ್ಳುವ ನಿರ್ಣಯವಾಗಿದೆ. ಅದು ಒಂದು ಪಕ್ಷದ ಒಂದು ಮತೀಯ ಗುಂಪಿನ ನಿರ್ಣಯವಾಗಿದೆ. ಆ ಧರ್ಮ ಸಂಸತ್ ಅನ್ನೋದು ಇನ್ನು ದೇಶದಲ್ಲಿ ಹುಟ್ಟಿಯೇ ಇಲ್ಲ ಎಂದು ಧರ್ಮ ಸಂಸತ್ತಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ, ಭಾವೈಕ್ಯಪೀಠದ ಶ್ರೀಬಸವಲಿಂಗಮೂರ್ತಿ ಶರಣರು, ಚಿತ್ರದುರ್ಗ ಚಲುವಾದಿ ಮಠದ ನಾಗೀದೇವ ಸ್ವಾಮೀಜಿ ಉಪಸ್ಥಿತರಿದ್ದರು.

ಸರಕಾರಕ್ಕೆ ಕೆಟ್ಟ ಹೆಸರು ತರಲು ಪ್ರತಿಪಕ್ಷಗಳು ಇಂತಹ ಕೆಲಸಗಳನ್ನು ಹಿಂದಿನಿಂದಲೂ ಮಾಡುತ್ತಿವೆ. ದೇವರಾಜ ಅರಸು ಮುಖ್ಯಮಂತ್ರಿಗಳಾಗಿದ್ದಾಗ ಮಠಗಳನ್ನು ರಾಷ್ಟ್ರೀಕರಣ ಮಾಡಲಾಗುತ್ತದೆ ಎಂಬ ಅಪಪ್ರಚಾರ ನಡೆದಿತ್ತು. ಈಗಲೂ ಇಂತಹ ಕೆಲವನ್ನು ಪ್ರತಿಪಕ್ಷಗಳು ಮಾಡುತ್ತಿವೆ.
-ನಿಡುಮಾಮಿಡಿ ಶ್ರೀವೀರಭದ್ರ ಚನ್ನಮಲ್ಲಸ್ವಾಮೀಜಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News