ಮೈಸೂರು: ರಾಷ್ಟ್ರೀಕೃತ ಬ್ಯಾಂಕ್‍ನ ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಧರಣಿ

Update: 2018-02-09 17:00 GMT

ಮೈಸೂರು,ಫೆ.9: ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ರೈತರ ಸಾಲಮನ್ನಾ ಮಾಡಿ, ರೈತರಿಗೆ ಪೂರಕವಾಗಿ ರೈತರ ಕೃಷಿ ಬೆಳೆಗಳಿಗೆ ವೈಜ್ಞಾನಿಕ ಬೆಲೆಕೊಡಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ಗಾಂಧಿ ವೃತ್ತದ ಗಾಂಧಿ ಪ್ರತಿಮೆ ಬಳಿ ಶುಕ್ರವಾರ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ರಾಜ್ಯ ಸರ್ಕಾರ ಸಹಕಾರಿ ಸಂಘಗಳ 50 ಸಾವಿರ ರೂ. ಸಾಲಮನ್ನಾ ಮಾಡಿ ತುಪ್ಪ ಸವರುವ ಕೆಲಸ ಮಾಡಿದರೆ ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕುಗಳ ಮತ್ತು ಸಹಕಾರಿ ಸಂಘಗಳ ರೈತರ ಸಾಲಮನ್ನಾ ಮಾಡದೆ ಮಾತಿನಲ್ಲಿ ಮಂಡಿಗೆ ತಿನ್ನಿಸುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಇಂತಹ ರೈತ ವಿರೋಧಿ ನೀತಿಗಳಿಂದ ರೈತರು ಬೇಸತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಹಣಕಾಸುಕ ಸಚಿವರು ಈ ಬಾರಿ ಬಜೆಟ್ ನಲ್ಲಿ ಕೃಷಿ ಅಭಿವೃದ್ಧಿಗೆ ಕೋಟ್ಯಾಂತರ ರೂ. ಮೀಸಲಿಡಲಾಗಿದೆ ಎನ್ನುತ್ತಾರೆ. ಇದರಲ್ಲಿ ಬಹುಪಾಲು ಕೈಗಾರಿಕೆ ಮತ್ತು ರಸಗೊಬ್ಬರ ಕಂಪನಿಗಳ ಪಾಲಾಗಲಿದೆ. ರೈತರ ಪಾಲಿಗೆ ಸಾಲವಷ್ಟೇ ಉಳಿಯುವುದು. ಕೃಷಿಗೆ ಹಾಕಿದ ಬಂಡವಾಳಕ್ಕೆ ಲಾಭವೇ ಸಿಗುತ್ತಿಲ್ಲ. ಖರ್ಚು, ವೆಚ್ಚ ಕಳೆದು ಹಣ ಉಳಿದರೂ ಅದು ಸ್ವಲ್ಪವೇ ಮಾತ್ರ. ಇದನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅರ್ಥ ಮಾಡಿಕೊಳ್ಳುತ್ತಿಲ್ಲ. ಈಗಲಾದರೂ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿರುವ ರೈತರ ಸಾಲಮನ್ನಾ ಮಾಡಬೇಕು. ಇಲ್ಲವಾದರೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಎನ್.ಎಸ್.ವರ್ಮ, ಅಧ್ಯಕ್ಷ ಶಿವಾನಂದ ಗುರುಮಠ್, ಕಿರಂಗೂರು ಪಾಪು, ಮೇಲೇಗೌಡ, ಚಿಕ್ಕಗೌಡ, ಕನಕ ಶಿವಮೂರ್ತಿ, ಪಾಪೇಗೌಡ ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News