ಇನ್ನು ಮುಂದೆ ವಾಟ್ಸ್ಯಾಪ್ ಮೂಲಕವೇ ನಿಮ್ಮ ಗೆಳೆಯರಿಗೆ ಹಣ ಕಳುಹಿಸಿ, ಹಣ ಸ್ವೀಕರಿಸಿ
ಇತರ ವಾಟ್ಸ್ಯಾಪ್ ಬಳಕೆದಾರರಿಗೆ ಹಣ ವರ್ಗಾವಣೆ ಮಾಡುವ ಹೊಸ ಫೀಚರೊಂದನ್ನು ಭಾರತದಲ್ಲಿ ಪರೀಕ್ಷಿಸಲು ವಾಟ್ಸ್ಯಾಪ್ ಆರಂಭಿಸಿದೆ. ಇದೀಗ ಈ ಫೀಚರ್ ಪ್ರಾಯೋಗಿಕ ಹಂತದಲ್ಲಿದೆ. ಆದರೆ ಎಲ್ಲಾ ಕಡೆಗಳಲ್ಲೂ ಈ ಫೀಚರ್ ಲಭ್ಯವಿರದೇ ಇರುವುದರಿಂದ ಅಧಿಕೃತವಾಗಿ ಘೋಷಿಸಿಲ್ಲ ಎನ್ನಲಾಗುತ್ತಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಐಸಿಐಸಿಐ ಬ್ಯಾಂಕ್, ಎಚ್ ಡಿಎಫ್ ಸಿ ಬ್ಯಾಂಕ್ ಹಾಗು ಆ್ಯಕ್ಸಿಸ್ ಬ್ಯಾಂಕ್ ಗಳು ವಾಟ್ಸ್ಯಾಪ್ ನ ಈ ಹೊಸ ಫೀಚರ್ ಗೆ ಕೆಲ ಸಮಯದವರೆಗೆ ನೆರವಾಗಲಿದೆ.
ಈ ಫೀಚರ್ ಗೆ ಸಂಬಂಧಿಸಿದ ಕೆಲ ಸ್ಕ್ರೀನ್ ಶಾಟ್ ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ವಾಟ್ಸ್ಯಾಪ್ ನ ಸೆಟ್ಟಿಂಗ್ ಆಪ್ಶನ್ ನಲ್ಲಿ ಪೇಮೆಂಟ್ ಫೀಚರ್ ಲಭ್ಯವಿದೆ. ಐಒಎಸ್ ಹಾಗು ಆ್ಯಂಡ್ರಾಯ್ಡ್ ಗಳಲ್ಲಿ ಈ ಫೀಚರ್ ಕೆಲಸ ಮಾಡಲಿದೆ ಎನ್ನಲಾಗಿದೆ.
ಈ ಆಪ್ಶನನ್ನು ಎಲ್ಲಾ ಬಳಕೆದಾರರೂ ನೋಡಲು ಸಾಧ್ಯವಿಲ್ಲ. ಪೇಮೆಂಟ್ ಫೀಚರ್ ಇರುವ ಬಳಕೆದಾರರು ಸಂದೇಶಗಳನ್ನು ಕಳುಹಿಸಿದ ನಂತರ ನಿಮ್ಮ ಮೊಬೈಲ್ ನಲ್ಲೂ ಪೇಮೆಂಟ್ ಫೀಚರ್ ಲಭ್ಯವಾಗುತ್ತದೆ. ಸಂದೇಶ ಸಿಕ್ಕ ನಂತರ ವಾಟ್ಸ್ಯಾಪನ್ನು ರಿಲಾಂಚ್ ಮಾಡಿದರೆ ವಾಟ್ಸ್ಯಾಪ್ ಸೆಟ್ಟಿಂಗ್ ನಲ್ಲಿ ಪೇಮೆಂಟ್ ಫೀಚರ್ ಲಭ್ಯವಾಗಲಿದೆ.
ವಾಟ್ಸ್ಯಾಪ್ ಪೇಮೆಂಟ್ ಗೆ ಯುಪಿಐ ( Unified Payments Interface ) ಅವಶ್ಯಕವಾಗಿದೆ. ವಾಟ್ಸ್ಯಾಪ್ ನಲ್ಲಿ ಯುಪಿಐ ಆ್ಯಕ್ಟಿವೇಟ್ ಮಾಡುವ ವಿಧಾನ ಇಲ್ಲಿದೆ.
ವಾಟ್ಸ್ಯಾಪ್ ಸೆಟ್ಟಿಂಗ್ಸ್ ನಲ್ಲಿ ಪೇಮೆಂಟ್ಸ್ ಗೆ ಕ್ಲಿಕ್ ಮಾಡಬೇಕು. ಇಲ್ಲಿ ಬ್ಯಾಂಕ್ ಖಾತೆಯನ್ನು ನಮೂದಿಸುವ ಆಯ್ಕೆ ಇರುತ್ತದೆ. ‘ಆ್ಯಡ್ ನ್ಯೂ ಬ್ಯಾಂಕ್ ಅಕೌಂಟ್’ಗೆ ಟ್ಯಾಪ್ ಮಾಡಿದ ತಕ್ಷಣ ಶರತ್ತು ಹಾಗು ನಿಯಮಗಳನ್ನು ಒಪ್ಪಬೇಕಾಗುತ್ತದೆ. ಆನಂತರ ನಮ್ಮ ನಂಬರನ್ನು ವೆರಿಫೈ ಮಾಡಬೇಕು.
ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಆದ ಮೊಬೈಲ್ ಸಂಖ್ಯೆಯ ಆಧಾರದಲ್ಲಿ ಯುಪಿಐ ಕೆಲಸ ಮಾಡಲಿದೆ. ಆದ್ದರಿಂದ ನಾವು ಬಳಸುತ್ತಿರುವ ವಾಟ್ಸ್ಯಾಪ್ ಸಂಖ್ಯೆ ಹಾಗು ಬ್ಯಾಂಕ್ ಗೆ ನೀಡಿರುವ ಮೊಬೈಲ್ ಸಂಖ್ಯೆ ಒಂದೇ ಆಗಿರಬೇಕು. ಒಮ್ಮೆ ಮೊಬೈಲ್ ಸಂಖ್ಯೆ ವೆರಿಫೈ ಆದರೆ ಬ್ಯಾಂಕ್ ಗಳ ಪಟ್ಟಿ ಕಾಣಿಸುತ್ತದೆ. ನಿಮ್ಮ ಬ್ಯಾಂಕನ್ನು ಆಯ್ಕೆ ಮಾಡಿಕೊಳ್ಳಬೇಕು. ನೀವು ಬಯಸಿದ ಖಾತೆಯನ್ನು ವಾಟ್ಸ್ಯಾಪ್ ಪೇಮೆಂಟ್ ನೊಂದಿಗೆ ಲಿಂಕ್ ಮಾಡಬೇಕು.
ವಿರ್ಚ್ಯುವಲ್ ಪೇಯಿ ಅಡ್ರಸ್ ಗಾಗಿ ಬಳಕೆದಾರರು ಡೆಬಿಟ್ ಕಾರ್ಡ್ ನ ಕೊನೆಯ 6 ಸಂಖ್ಯೆಗಳನ್ನು ನಮೂದಿಸಬೇಕು. ಯಾರಿಗೆ ಹಣ ಕಳುಹಿಸಬೇಕೋ ಅವರೊಂದಿಗೆ ಚಾಟ್ ಮಾಡುತ್ತಾ ಅಥವಾ ಗ್ರೂಪ್ ಚಾಟ್ ಮಾಡುತ್ತಾ ಹಣ ಕಳುಹಿಸಬಹುದು. + ಚಿಹ್ನೆಗೆ ಕ್ಲಿಕ್ ಮಾಡಿ ಪೇಮೆಂಟ್ ನ್ನು ಆಯ್ಕೆ ಮಾಡಬೇಕು. ನೀವು ಯಾರಿಗೆ ಹಣ ಕಳುಹಿಸಲು ಉದ್ದೇಶಿಸಿದ್ದೀರೋ ಅವರಲ್ಲೂ ಪೇಮೆಂಟ್ ಫೀಚರ್ ಇರಬೇಕು. ಪೇಮೆಂಟನ್ನು ಅವರು ಕೂಡ ನಿಮ್ಮಂತೆಯೇ ಆ್ಯಕ್ಟಿವೇಟ್ ಮಾಡಿರಬೇಕು.