ಮೂಢನಂಬಿಕೆಯ ಇನ್ನೊಂದು ಮಗ್ಗುಲು...

Update: 2018-02-10 18:57 GMT

ಭಾಗ-32

‘‘ನನ್ನ ಭವಿಷ್ಯವನ್ನು ಮಿಲಿಯಾಂತರ ಮೈಲು ದೂರವಿರುವ ಯಾವುದೋ ನಕ್ಷತ್ರ ನಿರ್ಧರಿಸುವುದೆಂದಾದರೆ ಅದಕ್ಕೆ ಒಂದು ಚಿಕ್ಕಾಸಿನ ಬೆಲೆಯೂ ಇರದು’’. ಹಾಗಾಗಿ ಮನಸ್ಸಿನಲ್ಲಿ ಫಲ ಜ್ಯೋತಿಷ್ಯದ ಬಗ್ಗೆ ಭಾವನೆಗಳು ಬಂದಲ್ಲಿ ನಾವು ಉತ್ತಮ ಆಹಾರ, ವಿಶ್ರಾಂತಿ, ಪಡೆದು ಧ್ಯಾನ ಮಾಡುವುದು ಅಗತ್ಯ’’ - ಸ್ವಾಮಿ ವಿವೇಕಾನಂದ

ಮೂಢನಂಬಿಕೆಗಳಲ್ಲಿ ಮತ್ತೊಂದು ಪ್ರಮುಖವಾದುದು ಫಲಜ್ಯೋತಿಷ್ಯ. ಈ ಫಲ ಜ್ಯೋತಿಷ್ಯದಲ್ಲೂ ವಿಭಿನ್ನ ವಿಧಗಳಿವೆ. ಅದರಲ್ಲೊಂದು ಅಷ್ಟಮಂಗಳ ಮತ್ತು ಪ್ರಶ್ನೆ ಕೇಳುವುದು. ಈ ಅಷ್ಟಮಂಗಳ ಪ್ರಶ್ನೆ ಇಡುವವರು ಅಷ್ಟು ಸುಲಭದಲ್ಲಿ ಸಿಗುವುದಿಲ್ಲ. ಅವರನ್ನು ಮುಂಗಡವಾಗಿ ಕಾದಿರಿಸಿಕೊಳ್ಳಲಾಗುತ್ತದೆ. ಇಂತಹ ಅಷ್ಟ ಮಂಗಳ ಪ್ರಶ್ನೆ ನಮ್ಮ ಮನೆಯ ಹಿರಿಯರ ಮನೆಯಲ್ಲಿಯೂ ನಡೆದಿತ್ತು!

ಮೊದಲ ಬಾರಿ ಪ್ರಶ್ನೆ ನಡೆಸಿದಾಗ ಅದು ಕೆಲ ದಿನಗಳ ಕಾಲ ನಡೆಯಿತು. ಇದರ ಕೊನೆಯಲ್ಲಿ ಹಿರಿಯರ ಕಾಲದಲ್ಲಿ ನಡೆಯುತ್ತಿದ್ದ ಚೌತಿ ಆಚರಣೆಯನ್ನು ನಿಲ್ಲಿಸಿದ್ದರಿಂದ ದೋಷವೆಂಬುದು ಕಂಡು ಬಂತು. ನಂತರ, ಕುಟುಂಬದ ಕೆಲವು ಮಂದಿಗೆ ಮಕ್ಕಳಾಗದಿರಲು ನಾಗದೋಷ ಎನ್ನಲಾಯಿತು. ಇದಕ್ಕಾಗಿ ಪರಿಹಾರೋಪಾಯಗಳು ನಡೆದವು. ಎರಡನೆಯ ಅಷ್ಟಮಂಗಳ ಪ್ರಶ್ನೆ ಕೆಲ ಸಮಯದ ಹಿಂದೆ ನಡೆಯಿತು. ಇದಕ್ಕೆ ಕಾರಣವಂತೂ ಅತ್ಯಂತ ಸ್ವಾರಸ್ಯಕರವಾಗಿತ್ತು! 1995ರಲ್ಲಿ ದಿವಂಗತರಾದ ನಮ್ಮ ಅಮ್ಮನಿಗೆ ನಾನಾಗಲಿ, ನನ್ನ ತಮ್ಮಂದಿರಾಗಲಿ ವೈಕುಂಠ ಸಮಾರಾಧನೆ, ಶ್ರಾದ್ಧ ಇತ್ಯಾದಿಗಳನ್ನು ಮಾಡದ ಕಾರಣ, ಅವರ ಆತ್ಮ ಸ್ವರ್ಗಕ್ಕೆ ತಲುಪಿಲ್ಲ ಎಂದು ಹೇಳಲಾಯಿತು! ಅದರಿಂದ ನಮ್ಮ ಅಮ್ಮನ ಆತ್ಮ ಭೂಲೋಕದಲ್ಲೇ ಸಂಚರಿಸುತ್ತಾ ಹಿರಿಯರ ಮನೆಗಳಿಗೆ ಭೇಟಿ ನೀಡಿ ತೊಂದರೆ ನೀಡಲಾರಂಭಿಸಿತು. ಅದೂ ಆ ಆತ್ಮ ಒಬ್ಬರಾಗಿ ಹೋಗುತ್ತಿರಲಿಲ್ಲ. ತನ್ನ ಜತೆ ಇನ್ನಿಬ್ಬರನ್ನು ಕರೆದೊಯ್ಯುತ್ತಿತ್ತಂತೆ! ಈ ಹಾಸ್ಯಾಸ್ಪದ ಕಥೆ ಹೆಣೆಯಲ್ಪಟ್ಟಿದ್ದು ಅಷ್ಟಮಂಗಳ ಪ್ರಶ್ನೆಯಲ್ಲಿ. ಕೊನೆಗೆ ಪರಿಹಾರವೂ ನೀಡಲಾಯಿತು. ತೀರಿಕೊಂಡವರ ಆತ್ಮವನ್ನು ಸ್ವರ್ಗಕ್ಕೆ ಕಳುಹಿಸಲು ಅವರ ಪುತ್ರರಿಗೆ ಮಾತ್ರ ಸಾಧ್ಯ. ಆದರೆ ಮಂತ್ರವಾದಿಯ ಸಹಾಯ ದಿಂದ ಸತ್ತವರ ಆತ್ಮಗಳನ್ನು ಆ ಸ್ಥಳದಿಂದ ದೂರಮಾಡಿ ಸ್ವರ್ಗಕ್ಕೆ ಕಳುಹಿಸಲಾಯಿತು! ಜಗತ್ತು 21ನೆ ಶತಮಾನದಲ್ಲಿದ್ದರೂ ಈ ವಿಷಯಗಳನ್ನು ಮಾತ್ರ ನಂಬುವವರು ಇಂದೂ ಇದ್ದಾರೆ. ಜಾತಕ ಫಲಜ್ಯೋತಿಷ್ಯಗಳ ಗುಂಪಿಗೆ ಸೇರಿದ್ದು. ಇಷ್ಟ ದೈವದ ಬಳಿಗೆ ಹೋಗಿ ಪ್ರಶ್ನೆ ಕೇಳಿದಾಗ ಅದಕ್ಕೆ ಉತ್ತರವಾಗಿ ಹೂ ಬೀಳು ತ್ತದೆ. ಪ್ರಶ್ನೆ ಕೇಳುವ ಬಗ್ಗೆ ಸ್ವಾರಸ್ಯಕರ ಘಟನೆಯೊಂದನ್ನು ನಾನು ನಿಮ್ಮ ಮುಂದಿಡುತ್ತಿದ್ದೇನೆ. ಮುಂಬೈಯಿಂದ ಸುಶಿಕ್ಷಿತ, ಉತ್ತಮ ಆದಾಯವಿದ್ದ ಒಬ್ಬ ಪುರುಷ, ಬಡ ಕುಟುಂಬದ ಗುಣವಂತೆ, ಸುಂದರಿ ಹುಡುಗಿಯನ್ನು ಮದುವೆಯಾಗಲು ಬಯಸಿದ್ದ. ಆತನ ಇಚ್ಛೆಗೆ ಅನುರೂಪವಾದ ಕನ್ಯೆಯೂ ಸಿಕ್ಕಿದಳು. ಆಕೆ ಓರ್ವ ಬಡ ಶಾಲಾ ಶಿಕ್ಷಕನ ಹಿರಿಯ ಮಗಳು. ಮದುವೆಯಾಗುವ ಯುವಕನಿಗೆ ಜಾತಕ, ಫಲ ಜ್ಯೋತಿಷ್ಯಗಳಲ್ಲಿ ನಂಬಿಕೆ ಇಲ್ಲದ ಕಾರಣ ಆತ ನೇರವಾಗಿ ಮದುವೆಗೆ ಒಪ್ಪಿಕೊಂಡಿದ್ದ. ಆದರೆ ಹೆಣ್ಣಿನ ಕಡೆಯವರಿಗೆ ಇದು ಒಪ್ಪಿಗೆ ಇರಲಿಲ್ಲ. ಕೊನೆ ಪಕ್ಷ ತಮ್ಮ ಕುಲದೇವರದಲ್ಲಿಯಾದರೂ ಮದುವೆ ಬಗ್ಗೆ ಪ್ರಶ್ನೆ ಕೇಳಲು ಅವರು ಪಟ್ಟು ಹಿಡಿದರು. ಅವರ ಇಡೀ ಕುಟುಂಬ ಕುಲದೇವರಲ್ಲಿ ಪ್ರಶ್ನೆ ಕೇಳಲು ಮುಂದಾಯಿತು. ಆದರೆ ಕುಲದೇವರಿಂದ ಉತ್ತರ ಮಾತ್ರ ನಕಾರಾತ್ಮಕವಾದ್ದರಿಂದ ವರನ ಸಂಬಂಧ ಕೈ ಬಿಡಲಾಯಿತು. ಮೂಢನಂಬಿಕೆಯಿಂದಾಗಿ ತಿಂಗಳಿಗೆ ಸುಮಾರು ಆರಂಕಿ ಆದಾಯವಿದ್ದ, ಮುಂಬೈಯಲ್ಲಿ ಮನೆ, ವಾಹನ ಹೊಂದಿದ್ದ ಉತ್ತಮ ಗುಣ ನಡತೆಯ ರೂಪದಲ್ಲಿಯೂ ಸುಂದರನಾಗಿದ್ದ ಸುಶಿಕ್ಷಿತ ವರನನ್ನು ಕೈಬಿಡಲಾಯಿತು. ಈ ಘಟನೆಯನ್ನು ಗಮನಿಸಿದಾಗ ನಮ್ಮ ಬದುಕಿನ ಬಗ್ಗೆ ನಿರ್ಧಾರಗಳನ್ನು ಯಾರು ತೆಗೆದುಕೊಳ್ಳುವುದು? ವಿಷಯವೇ ತಿಳಿಯದ ಫಲ ಜೋತಿಷಿಗಳೇ? ನನ್ನ ಪ್ರಕಾರ ಜಗತ್ತಿನ ಅತ್ಯಂತ ಮುರ್ಖ ವಿಷಯಗಳಲ್ಲಿ ಒಂದು ಫಲ ಜ್ಯೋತಿಷ್ಯ. ಇದಕ್ಕೆ ನಾವು ಪದೇ ಪದೇ ಬಲಿಯಾಗಬೇಕೇ? ಫಲ ಜ್ಯೋತಿಷ್ಯದ ಬಗ್ಗೆ ಸ್ವಾಮಿ ವಿವೇಕಾನಂದರು ಏನೆನ್ನುತ್ತಾರೆ ಗೊತ್ತೇ?

‘‘ನನ್ನ ಭವಿಷ್ಯವನ್ನು ಮಿಲಿಯಾಂತರ ಮೈಲು ದೂರವಿರುವ ಯಾವುದೋ ನಕ್ಷತ್ರ ನಿರ್ಧರಿಸುವುದೆಂದಾದರೆ ಅದಕ್ಕೆ ಒಂದು ಚಿಕ್ಕಾಸಿನ ಬೆಲೆಯೂ ಇರದು’’. ಹಾಗಾಗಿ ಮನಸ್ಸಿನಲ್ಲಿ ಫಲ ಜ್ಯೋತಿಷ್ಯದ ಬಗ್ಗೆ ಭಾವನೆಗಳು ಬಂದಲ್ಲಿ ನಾವು ಉತ್ತಮ ಆಹಾರ, ವಿಶ್ರಾಂತಿ, ಪಡೆದು ಧ್ಯಾನ ಮಾಡುವುದು ಅಗತ್ಯ’’. ದೇವರನ್ನು ಹುಡುಕಿ ಕಾಯಿಲೆ ಗಿಟ್ಟಿಸಿಕೊಂಡವ!

ಸುಮಾರು ಎರಡು ದಶಕಗಳ ಹಿಂದೆ ನನ್ನ ಕಾರ್ಯಕ್ರಮಕ್ಕೊಬ್ಬ ವ್ಯಕ್ತಿ ಬಂದಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಅವರು ಬಂದು ನನ್ನನ್ನು ಮಾತನಾಡಿಸಿದರು. ತಾನು ಮೂಢನಂಬಿಕೆಯಿಂದ ಹೊರಬರಲು ನಮ್ಮ ಕಾರ್ಯಕ್ರಮಗಳು ಹೇಗೆ ಕಾರಣವಾಯಿತು ಎಂಬುದನ್ನು ವಿವರಿಸಿದರು. ಆ ವ್ಯಕ್ತಿ ಹಿಂದೆ ದೇವರ ಹುಡುಕಾಟದಲ್ಲಿದ್ದರಂತೆ! ಹಲವು ಆಧ್ಯಾತ್ಮಿಕ ಸಂಸ್ಥೆಗಳಿಂದ ಆರಂಭಿಸಿ ಬೀದಿ ಬದಿಯಲ್ಲಿನ ಸನ್ಯಾಸಿಗಳನ್ನೂ ಅವರು ಮಾತನಾಡಿಸಿದ್ದರು. ಕೊನೆಗೊಬ್ಬ ಇವರಿಗೆ ಗುರು ಸಿಕ್ಕಿದ. ದೇವರನ್ನು ಪ್ರತ್ಯಕ್ಷ ಮಾಡಿ ತೋರಿಸುವುದಾಗಿ ಆತ ಭರವಸೆ ನೀಡಿದ. ಆಗಾಗ ಈ ವ್ಯಕ್ತಿಯನ್ನು ಪ್ರತ್ಯೇಕ ಸ್ಥಳಗಳಿಗೆ ಬರ ಹೇಳಿದ. ಪ್ರತೀ ಬಾರಿ ಹೋದಾಗಲೂ ಗುರುದಕ್ಷಿಣೆಯಾಗಿ ಕೆಲವು ಸಾವಿರಗಳನ್ನು ಈ ವ್ಯಕ್ತಿಯಿಂದ ಆ ಗುರು ಪಡೆಯುತ್ತಿದ್ದ. ಈತನಿಂದ ತಪಸ್ಸು, ಉಪವಾಸವನ್ನೂ ಮಾಡಿಸಲಾಯಿತು. ಆದರೆ ದೇವರು ಮಾತ್ರ ಪ್ರತ್ಯಕ್ಷವಾಗಲೇ ಇಲ್ಲ. ಈತ ಕೊನೆಗೆ ಬಲವಂತ ಪಡಿಸಿದಾಗ, ಈ ಬಾರಿ ನಿಜವಾಗಿಯೂ ದೇವರನ್ನು ತೋರಿಸುತ್ತೇನೆಂದು ಆ ಗುರು ಈ ವ್ಯಕ್ತಿಯನ್ನು ನಂಬಿಸಿದ. ಈತನನ್ನು ಬೆಟ್ಟ ಹತ್ತಿಸಿ ನೇತ್ರಾವತಿ ನದಿ ಮೂಲಕ್ಕೆ ಕರೆದೊಯ್ದ. ಅಲ್ಲಿ ಈತನನ್ನು ಕಂಠ ಮಟ್ಟದಲ್ಲಿ ನೀರಿನಲ್ಲಿ ನಿಲ್ಲಿಸಿ ಮಂತ್ರವೊಂದನ್ನು ಬೆಳಗಿನವರೆಗೆ ಪಠಿಸಲು ಆಜ್ಞಾಪಿಸಿದ. ಈತ ಹಾಗೆಯೇ ಬೆಳಗ್ಗಿನವರೆಗೆ ಚಳಿಯಲ್ಲಿ ನಡುಗುತ್ತಾ ಮಂತ್ರ ಪಠಿಸಿದನಂತೆ. ಆದರೆ ಮರುದಿನ ಸೂರ್ಯ ನೆತ್ತಿ ಮೇಲೆ ಬಂದರೂ ಈತನಿಗೆ ದೇವರು ಮಾತ್ರ ಪ್ರತ್ಯಕ್ಷವಾಗಲಿಲ್ಲ. ಕೊನೆಗೆ ನದಿ ನೀರಿನಿಂದ ಹೊರಬಂದ. ಚಳಿಯಲ್ಲಿ ನೀರಿನಲ್ಲಿ ನಿಂತ ಕಾರಣ ನ್ಯುಮೋನಿಯಾ ಕಾಯಿಲೆಯನ್ನು ಬಳುವಳಿಯಾಗಿ ಈತ ಪಡೆದಿದ್ದ!

ನಂತರ ಹಿಂದಿರುಗಿ ತಾನು ಮೋಸ ಹೋಗಿರುವುದು ತಿಳಿದು ಊರಿಗೆ ಹೋದಾಗ ಈತನಿಗೆ ಕಾಯಿಲೆ ಉಲ್ಬಣಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾಯಿತು. ಅಲ್ಲಿ ಬೇರೆ ಮತಕ್ಕೆ ಸೇರಿದ ದಾದಿಯ ಪರಿಚಯವಾಗಿ ಪ್ರೇಮವಾಗಿ ಮದುವೆ ಮಾಡಿಕೊಂಡ. ಬಳಿಕ ದೇವರನ್ನು ಪ್ರತ್ಯಕ್ಷವಾಗಿ ನೋಡುವ ಹುಚ್ಚು ಈತನನ್ನು ಬಿಟ್ಟರೂ ಮೂಢನಂಬಿಕೆಗಳನ್ನು ಈತ ಬಿಟ್ಟಿರಲಿಲ್ಲ. ಕೊನೆಗೆ ನಮ್ಮ ಪವಾಡ ರಹಸ್ಯ ಬಯಲು ಕಾರ್ಯಕ್ರಮ ನೋಡಿ ತಾನು ಹೋದ ಮೋಸ, ಮೂರ್ಖತನವನ್ನು ನನಗೆ ವಿವರಿಸಿದ್ದ. ಮಾತ್ರವಲ್ಲದೆ, ತನ್ನಂತೆ ತೊಂದರೆಗೀಡಾದ ಇತರರ ಕಣ್ಣು ತೆರೆಸಲು ಈತ ತಾನು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ನಮ್ಮ ಪವಾಡ ರಹಸ್ಯ ಬಯಲು ಕಾರ್ಯಕ್ರಮಗಳನ್ನೂ ಮಾಡಿಸಿದ.

Writer - ನಿರೂಪಣೆ: ಸತ್ಯಾ ಕೆ.

contributor

Editor - ನಿರೂಪಣೆ: ಸತ್ಯಾ ಕೆ.

contributor

Similar News