ಮಂಡ್ಯ; ಮಕ್ಕಳ ಸಾವಿನ ಪ್ರಕರಣ : ತಲಾ 1 ಲಕ್ಷ ರೂ. ಪರಿಹಾರ ಘೋಷಣೆ

Update: 2018-02-11 15:24 GMT

ಮಂಡ್ಯ, ಫೆ.11: ಆರೋಗ್ಯ ಇಲಾಖೆ ನೀಡಿದ ಲಸಿಕೆಯಿಂದ ಸಾವನ್ನಪ್ಪಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಶವಸಂಸ್ಕಾರ ನಡೆಸಿದ್ದ ಮಗುವನ್ನು ರವಿವಾರ ಹೊರತೆಗೆದು ಶವಪರೀಕ್ಷೆ ನಡೆಸಲಾಯಿತು.

ತಾಲೂಕಿನ ಗೋಪಾಲಪುರ ಉಪ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಫೆ.8 ರಂದು ನೀಡಲಾದ ಲಸಿಕೆಯಿಂದ ಎರಡು ತಿಂಗಳ ಭುವನ್ ಮತ್ತು ಪ್ರೀತಂ ಮೃತಪಟ್ಟು, 7 ಮಕ್ಕಳು ಅಸ್ವಸ್ಥರಾಗಿದ್ದರು.

ಲಸಿಕೆಯಿಂದಾಗಿಯೇ ತಮ್ಮ ಮಕ್ಕಳು ಸಾವನ್ನಪ್ಪಿದ್ದು, ಅಸ್ವಸ್ಥಗೊಂಡಿವೆ ಎಂದು ಆರೋಪಿಸಿ ಗ್ರಾಮಸ್ಥರು ಮತ್ತು ವಿವಿಧ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಶನಿವಾರ ತಡರಾತ್ರಿವರೆಗೂ ಮಂಡ್ಯ ಜಿಲ್ಲಾಸ್ಪತ್ರೆ ಎದುರು ಧರಣಿ ನಡೆಸಿದ್ದರು.

ಸ್ಥಳಕ್ಕಾಗಮಿಸಿದ ಆರೋಗ್ಯ ಇಲಾಖೆ ನಿರ್ದೇಶಕರು ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ, ಮಕ್ಕಳ ಮರೋಣತ್ತರ ಪರೀಕ್ಷೆ ಹಾಗೂ ಲಸಿಕೆಯನ್ನು ಪರೀಕ್ಷೆಗಾಗಿ ಕಸೋಲಿಯ ಸಿಡಿಆರ್ ಲ್ ಪ್ರಯೋಗಾಲಯಕ್ಕೆ ಕಳುಹಿಸುವುದಾಗಿ ಭರವಸೆ ನೀಡಿದ್ದರು.

ಮೃತಪಟ್ಟಿದ್ದ ಪ್ರೀತಂ ಶವಪರೀಕ್ಷೆಯನ್ನು ಶನಿವಾರ ಸಂಜೆಯೇ ನಡೆಸಲಾಗಿತ್ತು. ಅದರೆ, ಗ್ರಾಮದಲ್ಲೇ ಶವಸಂಸ್ಕಾರ ನಡೆಸಿದ್ದ ಭುವನ್ ಶವವನ್ನು ರವಿವಾರ ಹೊರತೆಗೆದು ಅಲ್ಲಿಯೇ ಶವಪರೀಕ್ಷೆ  ನಡೆಸಿ ಹೂಳಲಾಯಿತು.

ಮೇಲಾಧಿಕಾರಿಗಳ ಆದೇಶದಂತೆ ಮಗುವಿನ ಶವಪರೀಕ್ಷೆ  ನಡೆಸಿ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ. ಎರಡು ವಾರದಲ್ಲಿ ವರದಿ ಬರಲಿದೆ. ತಹಶೀಲ್ದಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸೇರಿದಂತೆ ಇತರೆ ಅಧಿಕಾರಿಗಳು ಹಾಜರಿದ್ದರು ಎಂದು ಶವ ಪರೀಕ್ಷೆ ನಡೆಸಿದ ಡಾ.ಅಶ್ವಿನ್ ಸುದ್ದಿಗಾರರಿಗೆ ತಿಳಿಸಿದರು.

ಈ ನಡುವೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ರಾಜ್ಯ ಆರೋಗ್ಯ ಇಲಾಖೆಯ ನಿರ್ದೇಶನಾಲಯ, ಫೆ.8 ರಂದು ಚಂದಗಿರಿದೊಡ್ಡಿಯ 9 ಮಕ್ಕಳಿಗೆ ಪೆಂಟಾವಲೆಂಟ್ ಮತ್ತು ಪೋಲಿಯೋ ಲಸಿಕೆಯನ್ನು ನೀಡಲಾಗಿತ್ತು. ನಂತರ, ಅಸ್ವಸ್ಥಗೊಂಡ ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಭುವನ್ ಮತ್ತು ಪ್ರೀತಂ ಮೃತಪಟ್ಟಿದ್ದಾರೆ ಎಂದಿದೆ.

ಲಸಿಕೆಯಿಂದ ಮಕ್ಕಳು ಸಾವನ್ನಪ್ಪಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಇಲಾಖೆ ನಿರ್ದೇಶಕರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮಕ್ಕಳ ಮರಣೋತ್ತರ ಪರೀಕ್ಷೆ ಹಾಗೂ ಲಸಿಕೆಯನ್ನು ಹೆಚ್ಚಿನ ಪರೀಕ್ಷೆಗಾಗಿ ಕಸೋಲಿಯ ಸಿ.ಡಿ.ಆರ್.ಎಲ್ ಪ್ರಯೋಗಶಾಲೆಗೆ ಕಲುಹಿಸಲು ತೀರ್ಮಾನಿಲಾಗಿದೆ. ಮುಂಜಾಗ್ರತ ಕ್ರಮವಾಗಿ ಈ ಬ್ಯಾಚನ್ ಲಸಿಕೆಯನ್ನು ಮುಂದಿನ ಆದೇಶದವರೆಗೆ ಉಪಯೋಗಿಸದಿರಲು ತೀರ್ಮಾನಿಸಲಾಗಿದೆ. ರಾಜ್ಯದ ಬೇರೆಡೆ ಈ ರೀತಿಯ ಅಡ್ಡಪರಿಣಾಮ ಬೀರಿಲ್ಲ. ಆದ್ದರಿಂದ ಪೋಷಕರು ಆತಂಕಪಡಬೇಕಾಗಿಲ್ಲ ಎಂದು ಪ್ರಕಟಣೆ ತಿಳಿಸಿದೆ.

1 ಲಕ್ಷ ರೂ. ಪರಿಹಾರ: ಚಿಂದಗಿರಿದೊಡ್ಡಿಯ ಗ್ರಾಮದ ಮಕ್ಕಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣಹೊಂದಿರುವ ಮಕ್ಕಳ ಕುಟುಂಬದವರಿಗೆ ರಾಜ್ಯ ಸರಕಾರ ತಲಾ 1 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ ಎಂದು ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ ಪತ್ರಿಆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶನಿವಾರ ತಡರಾತ್ರಿಯೇ ಪರಿಹಾರ ಘೋಷಣೆ ಹೊರಬೀಳುತ್ತದ್ದಂತೆ ಈ ಸಂಬಂಧದ ನಡೆಯುತ್ತಿದ್ದ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News