ಇನ್ನು ಮುಂದೆ ಈ ಪರೀಕ್ಷೆ ಪಾಸಾದರೆ ಮಾತ್ರ ವಿದೇಶದಲ್ಲಿ ಎಂಬಿಬಿಎಸ್‌ಗೆ ಅವಕಾಶ

Update: 2018-02-11 16:24 GMT

ಹೊಸದಿಲ್ಲಿ, ಫೆ.11: ವಿದೇಶದ ವಿವಿಗಳಲ್ಲಿ ಎಂಬಿಬಿಎಸ್ ಅಧ್ಯಯನ ನಡೆಸಬಯಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ‘ನೀಟ್’ ತೇರ್ಗಡೆಯಾಗಬೇಕು ಎಂಬ ನಿಯಮವನ್ನು ಜಾರಿಗೆ ತರಲು ಸರಕಾರ ನಿರ್ಧರಿಸಿದೆ.

  ಈ ಮೂಲಕ ಸಮರ್ಥ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡುವ ಉದ್ದೇಶವಿದೆ ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ. ಇದುವರೆಗೆ ದೇಶದ ಖಾಸಗಿ ಅಥವಾ ಸರಕಾರಿ ಮೆಡಿಕಲ್ ಕಾಲೇಜುಗಳಲ್ಲಿ ವೈದ್ಯಕೀಯ ಅಧ್ಯಯನ ನಡೆಸುವ ವಿದ್ಯಾರ್ಥಿಗಳಿಗೆ ಮಾತ್ರ ‘ನೀಟ್’ (ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ)ಅನ್ವಯವಾಗುತ್ತಿತ್ತು. ಇನ್ನು ಮುಂದೆ ‘ನೀಟ್’ ತೇರ್ಗಡೆಯಾದವರಿಗೆ ಮಾತ್ರ ನಿರಾಕ್ಷೇಪಣ ಪತ್ರ ನೀಡಲಾಗುವುದು ಎಂದು ಸರಕಾರ ತಿಳಿಸಿದೆ.

 ವೈದ್ಯಕೀಯ ಅಧ್ಯಯನಕ್ಕೆ ವಿದೇಶಗಳಿಗೆ ತೆರಳಿ, ಅಲ್ಲಿಯ ವಿವಿಯಿಂದ ಪದವಿ ಪಡೆದು ಮರಳುವ ವಿದ್ಯಾರ್ಥಿಗಳಲ್ಲಿ ಕೇವಲ ಶೇ.12ರಿಂದ 15ರಷ್ಟು ಪದವೀಧರರು ಮಾತ್ರ ‘ವಿದೇಶಿ ವೈದ್ಯಕೀಯ ಪದವೀಧರರ ಪರೀಕ್ಷೆ’ (ಎಫ್‌ಎಂಜಿಇ) ತೇರ್ಗಡೆಯಾಗುತ್ತಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ವಿದೇಶದಲ್ಲಿ ವೈದ್ಯಕೀಯ ಪದವಿ ಪಡೆಯುವ ವಿದ್ಯಾರ್ಥಿಗಳು ಭಾರತದಲ್ಲಿ ವೈದ್ಯಕೀಯ ವೃತ್ತಿ ನಡೆಸಬೇಕಿದ್ದರೆ ಎಫ್‌ಎಂಜಿಇ ಪಾಸಾಗಬೇಕಿದೆ.

  ತೇರ್ಗಡೆಯಾಗದ ವಿದ್ಯಾರ್ಥಿಗಳು ಕಾನೂನುಬಾಹಿರವಾಗಿ ವೈದ್ಯಕೀಯ ವೃತ್ತಿ ನಡೆಸುತ್ತಿದ್ದು ಇದು ಅಪಾಯಕಾರಿಯಾಗಿದೆ. ಆದ್ದರಿಂದ ಸಮರ್ಥ ವಿದ್ಯಾರ್ಥಿಗಳು ಮಾತ್ರ ವಿದೇಶಕ್ಕೆ ವೈದ್ಯಕೀಯ ಅಧ್ಯಯನಕ್ಕೆ ತೆರಳಬೇಕು ಎಂಬುದು ಸರಕಾರದ ಉದ್ದೇಶವಾಗಿದೆ ಎಂದವರು ತಿಳಿಸಿದ್ದಾರೆ.

ಹಾಲಿ ಸಂದರ್ಭದಲ್ಲಿ, ವಿದೇಶಗಳಲ್ಲಿ ವೈದ್ಯಕೀಯ ಅಭ್ಯಾಸ ನಡೆಸುವ ವಿದ್ಯಾರ್ಥಿಗಳು, ಎಂಸಿಐ(ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ)ದಿಂದ ಅಗತ್ಯತೆಯ ಪ್ರಮಾಣಪತ್ರ ಪಡೆಯಬೇಕಾಗಿದೆ. ಪ್ರತೀ ವರ್ಷ ಸುಮಾರು 7,000 ಮಂದಿ ವಿದೇಶದ ವಿವಿಗಳಲ್ಲಿ ವೈದ್ಯಕೀಯ ಅಧ್ಯಯನ ನಡೆಸುತ್ತಿದ್ದು ಇವರಲ್ಲಿ ಬಹುತೇಕ ವಿದ್ಯಾರ್ಥಿಗಳು ಚೀನಾ ಮತ್ತು ರಶ್ಯಕ್ಕೆ ತೆರಳುತ್ತಾರೆ. ಕಳೆದ ಐದು ವರ್ಷದಲ್ಲಿ ವಿದೇಶದಲ್ಲಿ ವೈದ್ಯಕೀಯ ಪದವಿ ಪಡೆದು ಎಫ್‌ಎಂಜಿಇ ಪರೀಕ್ಷೆ ಪಾಸಾಗುವವರ ಪ್ರಮಾಣ ಶೇ.13ರಿಂದ ಶೇ.26ರಷ್ಟಾಗಿದೆ. ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಪೋಷಕರು ಅಪಾರ ಹಣ ವೆಚ್ಚ ಮಾಡಿದ್ದರೂ ಈ ವಿದ್ಯಾರ್ಥಿಗಳು ಭಾರತದಲ್ಲಿ ವೈದ್ಯಕೀಯ ಸೇವೆ ಸಲ್ಲಿಸಲು ಸಾಧ್ಯವಾಗದಿರುವುದು ಕಳವಳದ ವಿಷಯವಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News