ಮಡಿಕೇರಿ; ವೈಯಕ್ತಿಕ ವಿಚಾರಗಳಿಗೆ ನಗರಸಭೆ ಸೀಮಿತವಾಗುತ್ತಿರುವುದು ವಿಷಾದನೀಯ : ಚುಮ್ಮಿ ದೇವಯ್ಯ ಬೇಸರ

Update: 2018-02-11 17:51 GMT

ಮಡಿಕೇರಿ,ಫೆ.11 :ನಗರಸಭೆಯ ಇತ್ತೀಚಿನ ಬೆಳವಣಿಗೆಗಳು ಅತ್ಯಂತ ವಿಷಾದನೀಯವಾಗಿದ್ದು, ಕೇವಲ ವೈಯಕ್ತಿಕ ವಿಚಾರ, ಟೀಕೆಗಳಿಗಷ್ಟೆ ಸಭೆ ಸೀಮಿತವಾಗುತ್ತಿರುವುದು ಬೇಸರ ಮೂಡಿಸಿದೆ ಎಂದು ಮೂಡಾ ಅಧ್ಯಕ್ಷರು ಹಾಗೂ ಹಿರಿಯ ನಗರಸಭಾ ಸದಸ್ಯರಾದ ಎ.ಸಿ.ಚುಮ್ಮಿ ದೇವಯ್ಯ ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ಇತ್ತೀಚೆಗೆ ಬಿಜೆಪಿ ನಡೆಸಿದ ಧರಣಿ ಸತ್ಯಾಗ್ರಹ ಹಾಸ್ಯಾಸ್ಪದವಾಗಿದೆ ಎಂದು ಟೀಕಿಸಿದ್ದಾರೆ. ನಗರಸಭೆಯ ಆಡಳಿತದಲ್ಲಿ ಸಮನಾಂತರ ಹಕ್ಕನ್ನು ಹೊಂದಿರುವ ಬಿಜೆಪಿ ಉಪಾಧ್ಯಕ್ಷ ಸ್ಥಾನ, ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನವನ್ನು ಹೊಂದಿದ್ದರೂ ಧರಣಿಯನ್ನು ನಡೆಸಿದೆ. ಕೆಲವರು ನೀಡುತ್ತಿರುವ ಪತ್ರಿಕಾ ಹೇಳಿಕೆಗಳು ವೈಯಕ್ತಿಕ ವಿಚಾರಕ್ಕಷ್ಟೇ ಸೀಮಿತವಾಗಿದೆ. ಈ ಗೊಂದಲಗಳು ಅತಿರೇಕವನ್ನು ಪಡೆದುಕೊಳ್ಳುತ್ತಿರುವುದರಿಂದ ನಗರಸಭಾ ಅಧ್ಯಕ್ಷರು ತುರ್ತಾಗಿ ಪತ್ರಿಕಾ ಹೇಳಿಕೆ ನೀಡಿ ವಾದ, ವಿವಾದಗಳಿಗೆ ಇತಿಶ್ರೀ ಹಾಡಬೇಕೆಂದು ಚುಮ್ಮಿ ದೇವಯ್ಯ ಒತ್ತಾಯಿಸಿದ್ದಾರೆ. 

ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯರ ನೆರವಿನಿಂದ ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣ ಅಭಿವೃದ್ಧಿ ಯೋಜನೆಯ ಮೂರನೇ ಹಂತದ ಕಾಮಗಾರಿಗೆ ರೂ.27 ಕೋಟಿ ಬಿಡುಗಡೆಯಾಗಿದ್ದು, ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದೆ. ಇಂದಿರಾ ಕ್ಯಾಂಟೀನ್, ನೂತನ ಖಾಸಗಿ ಬಸ್ ನಿಲ್ದಾಣ, ಹೈಟೆಕ್ ಮಾರುಕಟ್ಟೆ ಕಾಮಗಾರಿ ತ್ವರಿತಗತಿಯಲ್ಲಿ ಸಾಗುತ್ತಿದ್ದು, ಅತಿ ಶೀಘ್ರ ಜನರ ಸೇವೆಗೆ ಲಭ್ಯವಾಗಲಿದೆ ಎಂದು ಚುಮ್ಮಿ ದೇವಯ್ಯ ತಿಳಿಸಿದ್ದಾರೆ. 

ಇನ್ನು ಮುಂದೆಯಾದರೂ ಪತ್ರಿಕಾ ಹೇಳಿಕೆಯನ್ನು ನೀಡುವ ನಗರಸಭಾ ಸದಸ್ಯರುಗಳು ವೈಯಕ್ತಿಕ ವಿಚಾರಗಳನ್ನು ಬದಿಗೊತ್ತಿ ಜನಪರವಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಕಾಳಜಿ ವಹಿಸಲಿ ಎಂದು ಒತ್ತಾಯಿಸಿದ್ದಾರೆ.

ಮೌನಕ್ಕೆ ಶರಣಾಗಿರುವ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರು ನಗರಸಭೆಯ ಆಗುಹೋಗುಗಳ ಬಗ್ಗೆ ಸ್ಪಷ್ಟೀಕರಣ ನೀಡದಿದ್ದಲ್ಲಿ ಅಧ್ಯಕ್ಷರ ಕಾರ್ಯವೈಖರಿ ಬಗ್ಗೆ ಜನರು ಸಂಶಯದಿಂದ ನೋಡುವ ಸಾಧ್ಯತೆಗಳಿದೆ ಎಂದು ಚುಮ್ಮಿದೇವಯ್ಯ ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News