ಗಲ್ಫ್ ನಿರ್ವಸಿತರಿಗೆ ಬೇಕಿದೆ ಪುನರ್ವಸತಿ
ಬಂಟ್ವಾಳ ತಾಲೂಕಿನ ಅಬ್ದುಲ್ ಖಾದರ್ ಎಂಬವರು ಬಾಲ್ಯದಿಂದಲೂ ಬಗೆ ಬಗೆಯ ವೃತ್ತಿ ಮಾಡಿ ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದರು. ದಶಕಗಳ ಕಾಲ ದುಡಿದರೂ ಊರಲ್ಲಿ ದಿನವಿಡೀ ಸಂಪಾದಿಸಿದ ಹಣ ಸಂಸಾರದ ಹಸಿವು-ಬಟ್ಟೆಬರೆ-ಶಿಕ್ಷಣಕ್ಕಾಗಿ ಖರ್ಚಾಗಿ ಏನೂ ಉಳಿಯದೇ ಇದ್ದಾಗ ಅವರಿಗೆ ಭರವಸೆ ಮೂಡಿದ್ದು ಗಲ್ಫ್ ಉದ್ಯೋಗದ ಮೇಲೆ. ಹೇಗಾದರೂ ಸರಿ ಗಲ್ಫ್‌ಗೆ ಹೋಗಿ ಬರುವ, ಒಂದಷ್ಟು ವರ್ಷಗಳ ಕಾಲ ಇದ್ದು ಮರಳಿ ಊರಲ್ಲೇ ಏನಾದರೂ ಸ್ವಂತ ದುಡಿಮೆ ಮಾಡುವ ಕನಸು ಹೊತ್ತು ಸಾಲ ಮಾಡಿ ಗಲ್ಫ್‌ಗೆ ಹಾರಿದರು ಅಬ್ದುಲ್ ಖಾದರ್. ಅಷ್ಟೇನೂ ಶಿಕ್ಷಣ ಪಡೆಯದ ಅವರಿಗೆ, ಅಲ್ಲಿ ಸಿಕ್ಕಿದ ಸಣ್ಣ ಉದ್ಯೋಗದಲ್ಲಿ ದೊಡ್ಡದೇನೂ ಸಾಧಿಸಲಾಗಲಿಲ್ಲ. ಆಗಾಗ್ಗೆ ಊರಿಗೆ ಹಣ ಕಳುಹಿಸುವುದು ಸಂಸಾರದ ತಾಪತ್ರಯಗಳಿಗೆ ಅಲ್ಲಿಂದಲೇ ಹೆಗಲು ಕೊಡುವುದು ಅರೆ ಹೊಟ್ಟೆಯಲ್ಲೇ ಜೀವನ ಸಾಗಿಸುವುದು ಇದುವೇ ಅವರ ಬದುಕಾಯ್ತು. ಊರಿಗೆ ಬರುವಾಗ ಅಲ್ಪ ಸ್ವಲ್ಪ ಉಳಿತಾಯದ ಹಣ ತಂದು ಇಲ್ಲಿ ಒಂದೆರಡು ತಿಂಗಳಿದ್ದು ಕೈ ಬರಿದಾದಾಗ ಮತ್ತೆ ಮುಖ ಮಾಡುವುದು ಅದೇ ಗಲ್ಫ್‌ಗೆ.
ಈ ಬಾರಿ ಬಂದವರು ಊರಲ್ಲಿ ನಿಲ್ಲುವ ಮನಸ್ಸಿದ್ದರೂ ದುಡಿಮೆಯ ದಾರಿ ಕಾಣದೆ ಒಲ್ಲದ ಮನಸ್ಸಿನಿಂದಲೇ ಮತ್ತೆ ಅದೇ ಗಲ್ಫ್‌ಗೆ ಮರಳುವ ತೀರ್ಮಾನ ಮಾಡಿ ಬಟ್ಟೆ-ಬರೆ ಅಗತ್ಯ ಸಾಮಗ್ರಿಗಳನ್ನು ಪ್ಯಾಕ್ ಮಾಡಿ ಹೊರಟಿದ್ದರು. ಪತ್ನಿ, ಮಕ್ಕಳು ಅನಿವಾರ್ಯವಾಗಿ ಬೀಳ್ಕೊಡಲು ಸಿದ್ಧರಿರುವಾಗಲೇ ಕುಸಿದು ಬಿದ್ದ ಅಬ್ದುಲ್ ಖಾದರ್ ಕ್ಷಣ ಹೊತ್ತಿನಲ್ಲೇ ಹೃದಯಾಘಾತದಿಂದ ಪ್ರಾಣಬಿಟ್ಟರು. ಪ್ಯಾಕ್ ಮಾಡಿದ ಪೆಟ್ಟಿಗೆಗಳು ಇನ್ನು ಬಿಚ್ಚಿಲ್ಲ. ಪತ್ನಿಗೆ ದಿಕ್ಕು ತೋಚುತ್ತಿಲ್ಲ. ಗಲ್ಫ್‌ಗೆ ಹೋಗಿಯೂ ಕನಸು ಈಡೇರಿಲ್ಲ. ಉಳಿತಾಯದ ಹಣ ಖಾಲಿಯಾಗಿದೆ. ಇದೀಗ ಕುಟುಂಬದ ಏಕೈಕ ಆಧಾರ ಸ್ತಂಭ ಕುಸಿದು ಹೋಗಿದೆ. ಕಾಣದ, ಬರಲಾಗದ ಲೋಕಕ್ಕೆ ತೆರಳಿದ್ದಾರೆ. ಗಲ್ಫ್‌ನಲ್ಲಿ ಒಂದಷ್ಟು ವರ್ಷಗಳ ಕಾಲ ದುಡಿದ ಅಬ್ದುಲ್ ಖಾದರ್ ಕುಟುಂಬಕ್ಕೆ ಯಾವ ಪರಿಹಾರವೂ ಅನ್ವಯವಾಗುವುದಿಲ್ಲ. ಯಾವ ವಿಮೆಯೂ ಇಲ್ಲ.
ಪಾಣೆಮಂಗಳೂರು ಸಮೀಪದ ರಿಯಾಝ್ ಎಂಬ ಯುವಕನ ಕಥೆ ಬೇರೆಯೇ ಇದೆ. ಶಾಲಾ ಶಿಕ್ಷಣವನ್ನು ಅರ್ಧದಲ್ಲೇ ಮೊಟಕುಗೊಳಿಸಿ ಊರಲ್ಲಿ ಕೆಲವು ಸಮಯ ಕೂಲಿ ಮಾಡಿ, ಕನಸಿನ ಮೂಟೆ ಹೊತ್ತು ನೇರ ಹಾರಿದ್ದು ಸೌದಿ ಅರೇಬಿಯಾದ ರಿಯಾದ್‌ಗೆ. ಎಸೆಸೆಲ್ಸಿ ಪೂರ್ತಿಗೊಳಿಸದ ಇವರಿಗೆ ಲಭಿಸಿದ್ದು ಹೊಟೇಲ್ ಕಾರ್ಮಿಕನ ಕೆಲಸ. ನಿರಂತರ ಹತ್ತು ವರ್ಷಗಳ ಕಾಲ ದುಡಿದು ನಡುವೆ ನಾಲ್ಕು ಬಾರಿ ಊರಿಗೆ ಬಂದು ಹೋದರೂ ಪ್ರತೀ ಬಾರಿಯೂ ಸಾಲ ಮಾಡಿಯೇ ವಿಮಾನ ಹತ್ತಬೇಕಾದ ದುಸ್ಥಿತಿ. ಅಲ್ಲಿಂದ ಪ್ರತೀ ತಿಂಗಳು ಕಳುಹಿಸಿದ ಹಣ ಊರಲ್ಲಿ ಔಷಧಿಗೆ, ಸಂಸಾರದ ಖರ್ಚಿಗೆ ಭರ್ತಿಯಾಗುತ್ತಿತ್ತು. ಹತ್ತು ವರ್ಷಗಳ ಕಾಲ ದುಡಿದರೂ ಸಾಲಮುಕ್ತನಾಗಿಲ್ಲ. ತಂಗಿಯಂದಿರ ಮದುವೆಗೆ ನೆರವಾದದ್ದೇ ದೊಡ್ಡ ಸಾಧನೆ. ಆದರೆ ಅದಕ್ಕಾಗಿ ಮಾರಾಟ ಮಾಡಿದ ಸ್ವಂತ ಮನೆಯ ಬದಲಿಗೆ ಇದೀಗ ದಕ್ಕಿರುವುದು ಬಾಡಿಗೆ ಮನೆ ಮಾತ್ರ. ತಂದೆ-ತಾಯಿ, ಪತ್ನಿ, ಇಬ್ಬರು ಮಕ್ಕಳನ್ನು ಹೊಂದಿರುವ ರಿಯಾಝ್ ದಶಕದವರೆಗೆ ಗಲ್ಫ್ ಉದ್ಯೋಗಿಯಾಗಿದ್ದರೂ ಇದೀಗ ಗಲ್ಫ್‌ಗೆ ವಿದಾಯ ಹೇಳಿ ಬ್ಯಾಂಕು ಸಾಲದೊಂದಿಗೆ ಟೆಂಪೋರಿಕ್ಷಾವೊಂದನ್ನು ಖರೀದಿಸಿ ರಸ್ತೆ ಬದಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದಾರೆ. ಹಣ್ಣಿನ ವ್ಯಾಪಾರಕ್ಕಾಗಿ ಪ್ರತೀ ದಿನ ಮೂರು ಸ್ಥಳ ಬದಲಾವಣೆ ಮಾಡುವ ಇವರು ಸಾಯಂಕಾಲದ ಹೊತ್ತು ರಾಷ್ಟ್ರೀಯ ಹೆದ್ದಾರಿ ಸಮೀಪ ಗ್ರಾಹಕರನ್ನು ಎದುರು ನೋಡುತ್ತಾರೆ. ವ್ಯಾಪಾರವನ್ನು ಕೊರತೆ ಬಜೆಟ್‌ನಿಂದಲೇ ಆರಂಭಿಸಿದ ಇವರಿಗೆ ಮೂರು-ನಾಲ್ಕು ತಿಂಗಳು ಕಳೆದರೂ ಅಸಲನ್ನು ಪಡೆಯಲು ಸಾಧ್ಯವಾಗಿಲ್ಲ. ಜೊತೆಗೆ ವಾಹನದ ಕಂತನ್ನು ಭರಿಸುವ ಹೊರೆ. ಅತಂತ್ರ ಸ್ಥಿತಿಯಲ್ಲಿಯೇ ವ್ಯಾಪಾರ ಮುಂದುವರಿಸುತ್ತಿರುವ ರಿಯಾಝ್ ಸರಕಾರದಿಂದ ನಮ್ಮಂತಹವರಿಗೆ ಏನಾದರೂ ವಿಶೇಷ ಯೋಜನೆಯಿದ್ದರೆ ಒಳ್ಳೆಯದಿತ್ತು ಎಂಬುದಾಗಿ ಅಭಿಪ್ರಾಯ ಪಡುತ್ತಾರೆ.
ಕಂಪ್ಯೂಟರ್ ಡಿಟಿಪಿಯಲ್ಲಿ ತರಬೇತಿ ಪಡೆದ ಹರೀಶ್ ಅವರು ಬಂಟ್ವಾಳ- ಬೆಳ್ತಂಗಡಿ ತಾಲೂಕಿನ ಗಡಿ ಗ್ರಾಮದ ನಿವಾಸಿ. ಒಂದಷ್ಟು ವರ್ಷಗಳ ಕಾಲ ಊರಲ್ಲೇ ದುಡಿದು ಪರಿಚಿತರ ಸಲಹೆಯ ಮೇರೆಗೆ ಹಾರಿದ್ದು ದುಬೈ ಎಂಬ ಕನಸಿನ ನಗರಿಗೆ. ಪ್ರಿಂಟಿಂಗ್ ಘಟಕದಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ದುಡಿದು ಒಂದಷ್ಟು ಹಣವನ್ನು ಸಂಪಾದಿಸಿ ಊರಿಗೆ ಬಂದು ಮದುವೆಯಾದರು. ಸಂಪಾದಿಸಿದ ಹಣವನ್ನು ಮದುವೆಗೆ ಖರ್ಚು ಮಾಡಿ ಮತ್ತೆ ದುಬೈಗೆ ಹಾರಿದ ಹರೀಶ್ ಸುಮಾರು 8 ವರ್ಷಗಳ ಕಾಲ ವಿದೇಶದಲ್ಲಿ ದುಡಿದರೂ ಗಳಿಸಿದ್ದನ್ನು ಕಳೆದುಕೊಂಡದ್ದೇ ಹೆಚ್ಚು. ಒಂದು ಮಗುವಿನ ತಂದೆಯಾಗಿರುವ ಹರೀಶ್ ಇದೀಗ ದುಬೈಗೆ ಹೋಗಲಾರದೆ ಊರಲ್ಲಿಯೂ ಇರಲಾರದೆ ಪರದಾಡುತ್ತಿದ್ದಾರೆ. ಊರಲ್ಲೇ ಸ್ಥಳೀಯ ಪ್ರೆಸ್‌ವೊಂದರಲ್ಲಿ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿರುವ ಇವರು ಮತ್ತೆ ದುಬೈಗೆ ಹೋಗುವ ಯೋಚನೆಯಲ್ಲಿದ್ದಾರೆ ಊರಲ್ಲಿ ನಿಂತು ಏನೂ ಮಾಡಲಾಗದೆ ದುಬೈಗೆ ತೆರಳಿದರೂ ಏನೂ ಉಳಿತಾಯ ಮಾಡಲಾಗದೆ ಅತಂತ್ರ ಸ್ಥಿತಿಯಲ್ಲಿರುವ ಹರೀಶ್ ಇವರಿಗೂ ಸ್ವ ಉದ್ಯೋಗಕ್ಕಾಗಿ ವಿಶೇಷ ಯೋಜನೆಯಿದ್ದರೆ ಉತ್ತಮವಿತ್ತು ಎಂದು ಅಭಿಪ್ರಾಯ ವ್ಯಕ್ತ ಪಡಿಸುತ್ತಾರೆ.
ಸುಮಾರು 55 ವರ್ಷ ಪ್ರಾಯದ ಅಹ್ಮದ್ ಹುಸೈನ್ ಅವರು ಮಂಗಳೂರು ತಾಲೂಕಿನ ಗುರುಪುರ ಹೋಬಳಿಯ ನಿವಾಸಿ. ಬರೋಬ್ಬರಿ 28 ವರ್ಷಗಳ ಕಾಲ ಸೌದಿ ಅರೇಬಿಯಾದ ಜೆದ್ದಾದಲ್ಲಿ ಕಾರ್ಮಿಕರಾಗಿ ದುಡಿದ ಇವರು ಮದುವೆಯಾಗಿ ನಾಲ್ಕು ಮಕ್ಕಳನ್ನು ಹೊಂದಿದ್ದರು. ಮದುವೆಗೆ ಮೊದಲು ಕೂಡು ಕುಟುಂಬವನ್ನು ನೋಡಿಕೊಂಡ ಇವರು ಮದುವೆಯ ನಂತರ ಪತ್ನಿ ಮಕ್ಕಳ ಜೊತೆ ಕೂಡು ಕುಟುಂಬದ ಸದಸ್ಯರ ಬೇಡಿಕೆಗಳಿಗೂ ಧಾರಾಳವಾಗಿ ಸ್ಪಂದಿಸುತ್ತಿದ್ದರು. ಕುಟುಂಬದ ಹೆಣ್ಣು ಮಕ್ಕಳ ಮದುವೆಗೆ ಕೈಲಾದಷ್ಟು ಸಹಾಯ ಮಾಡುತ್ತಿದ್ದ ಇವರಿಗೆ ತನ್ನ ಇಬ್ಬರು ಹೆಣ್ಣು ಮಕ್ಕಳು ಬೆಳೆದು ದೊಡ್ಡವರಾದದ್ದು ಅರಿವಿಗೆ ಬಂದದ್ದೇ ತಡ ಮತ್ತಷ್ಟು ವರ್ಷ ಅಲ್ಲಿ ದುಡಿದು ಮಕ್ಕಳ ಮದುವೆ ಮಾಡಿದರು. ಮದುವೆಯ ಸಾಲ ಮುಗಿಯುವವರೆಗೂ ದುಡಿದ ಇವರು ತನ್ನ ಆಯುಷ್ಯದ ಬಹುಪಾಲು ಸಮಯವನ್ನು ವಿದೇಶದಲ್ಲಿ ಕಳೆದಿದ್ದಾರೆ. ಅಂತಿಮವಾಗಿ ಎರಡು ವರ್ಷಗಳ ಹಿಂದೆ ಅಲ್ಲಿನ ಕೆಲಸಕ್ಕೆ ತಿಲಾಂಜಲಿ ನೀಡಿ ಊರಿಗೆ ಬಂದು ಒಂದು ವರ್ಷ ಕಳೆದರೂ ನೆಲೆ ಕಂಡುಕೊಳ್ಳಲಾಗಲಿಲ್ಲ. ಇದೀಗ ಬಾಡಿಗೆ ಕೊಠಡಿಯೊಂದರಲ್ಲಿ ಸಣ್ಣ ಹೊಟೇಲ್ ನಡೆಸುತ್ತಿರುವ ಇವರು ಹೊಸ ಬದುಕು ಕಟ್ಟುತ್ತಿದ್ದಾರೆ. ಸಣ್ಣ ಮನೆ ಮಾಡಿದ್ದು ಮಕ್ಕಳ ಮದುವೆ ಮಾಡಿದ್ದು ದೊಡ್ಡ ಸಾಧನೆ ಎನ್ನುವ ಇವರು ದಿನವಿಡೀ ಸಂಸಾರದ ಖರ್ಚನ್ನು ಭರಿಸಲು ಹೆಣಗಾಡುತ್ತಿದ್ದಾರೆ. ಈ ದೇಶದಿಂದ ಗಲ್ಫ್‌ಗೆ ಹಾರಿದ ನಾನು ಸಾವಿರಾರು ರೂಪಾಯಿಯನ್ನು ಊರಿಗೆ ಕಳುಹಿಸಿದೆ, ಖರ್ಚು ಮಾಡಿದೆ, ಆದರೆ ಇದೀಗ ಬರಿಗೈಲಿ ಗ್ರಾಹಕರನ್ನು ಎದುರು ನೋಡುತ್ತಿದ್ದೇನೆ. ನಮಗೊಂದು ವಿಮಾಯೋಜನೆಯಿದ್ದಿದ್ದರೂ ಒಳ್ಳೆಯದಿತ್ತು. ನನ್ನ ಸಮಾನ ವಯಸ್ಕರು ಊರಲ್ಲೇ ಇದ್ದು ಬೀಡಿಯನ್ನು ಕಟ್ಟಿ ಇದೀಗ ನಿವೃತ್ತರಾಗಿ ತಿಂಗಳಿಗೆ ಅಲ್ಪ ಸ್ವಲ್ಪ ಪಿಂಚಣಿಯನ್ನಾದರೂ ಪಡೆಯುತ್ತಿದ್ದಾರೆ. ಆದರೆ ನನಗೆ ಅದೂ ಇಲ್ಲ ಎಂದು ಮರುಗುತ್ತಿದ್ದಾರೆ.
ಹೌದು! ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ, ಮಡಿಕೇರಿ, ಹಾಸನ , ಚಿಕ್ಕಮಗಳೂರು, ಉತ್ತರ ಕನ್ನಡ ಮೊದಲಾದೆಡೆಯಿಂದ ಲಕ್ಷಾಂತದ ಮಂದಿ ವಿದೇಶಿ ಉದ್ಯೋಗದ ಕನಸನ್ನು ಬೆನ್ನತ್ತಿ ಸಾಗರದಾಚೆ ಊರಿನ ಕನವರಿಕೆಯಲ್ಲೇ ಕಳೆಯುತ್ತಿದ್ದಾರೆ. ಹತ್ತು-ಇಪ್ಪತ್ತು ವರ್ಷಗಳು ದುಡಿದರೂ ಊರಲ್ಲಿ ಏನೂ ಮಾಡಲಾಗದ ಸ್ಥಿತಿ ಇವರದ್ದು. ಗಲ್ಫ್‌ನಲ್ಲಿ ಉದ್ಯೋಗಿಗಳಾಗಿ ದೇಶಕ್ಕೆ ಅಪಾರ ಪ್ರಮಾಣದ ವಿದೇಶಿವಿನಿಮಯ ತಂದು ಕೊಟ್ಟ ಇವರು ಇದೀಗ ತನ್ನ ಸ್ವಂತ ಕಾಲ ಮೇಲೆ ನಿಲ್ಲಲಾಗದೆ ಅತಂತ್ರ ಸ್ಥಿತಿಯಲ್ಲಿದ್ದಾರೆ.
ಬಹುತೇಕ ಮುಸಲ್ಮಾನರು ಹಾಗೂ, ಕ್ರೈಸ್ತರು ಇನ್ನುಳಿದಂತೆ ಹಿಂದೂ ಸಮುದಾಯದ ಯುವಕ-ಮಧ್ಯ ವಯಸ್ಕರು ಗಲ್ಫ್‌ಗೆ ಹಾರುವ ಕನಸನ್ನು ನನಸು ಮಾಡಿಕೊಂಡರು. ವಿಮಾನದಲ್ಲಿ ಮೊದಲ ಬಾರಿಗೆ ಹಾರುವಾಗ ಗರಿಗೆದರಿದ ಆಸೆಗಳು ಒಂದೆರಡಲ್ಲ. ವಿದೇಶಿ ನೆಲದಲ್ಲಿ ಇಳಿದಾಗಲೇ ಅಲ್ಲಿನ ಹೆಜ್ಜೆಗಳು ಭಾರ ಎಂದು ಅರಿವಾದದ್ದು. ಗಲ್ಫ್ ಉದ್ಯೋಗಿಗಳ ಪೈಕಿ ಮುಸ್ಲಿಂ ಸಮುದಾಯದವರ ಪಾಲು ಬಹು ದೊಡ್ಡದು.
ಶಿಕ್ಷಣದ ಕೊರತೆ:
ಗಲ್ಫ್‌ಗೆ ಉದ್ಯೋಗಕ್ಕೆ ತೆರಳಿದ ಕರ್ನಾಟಕದವರ ಪೈಕಿ ಶೇಕಡ 80 ರಷ್ಟು ಶಾಲಾ ಶಿಕ್ಷಣ ವನ್ನು ಪೂರ್ಣಗೊಳಿಸದವರು 20 ರಷ್ಟು ಮಂದಿ ಉತ್ತಮ ಶಿಕ್ಷಣದ ಜೊತೆಗೆ ವೃತ್ತಿಪರ ಕೋರ್ಸನ್ನು ಮಾಡಿಕೊಂಡು ಕೊಲ್ಲಿ ರಾಷ್ಟ್ರಗಳ ಕಂಪೆನಿಗಳಲ್ಲಿ ಸುಸ್ಥಿತಿಯಲ್ಲಿದ್ದಾರೆ. ಅವರು ಉತ್ತಮ ಆದಾಯದ ಜೊತೆಗೆ ಊರಲ್ಲೂ ಭವಿಷ್ಯದ ನೆಲೆಯನ್ನು ಕಂಡುಕೊಂಡಿದ್ದಾರೆ. ಆದರೆ ಎಸೆಸೆಲ್ಸಿಯನ್ನು ಪೂರ್ಣಗೊಳಿಸದೆ ಕೊಲ್ಲಿ ರಾಷ್ಟ್ರಗಳಿಗೆ ಹಾರಿದ ಬಹುಪಾಲು ಮಂದಿ ಇಂದು ಅತಂತ್ರ ಸ್ಥಿತಿಯಲ್ಲಿದ್ದಾರೆ.
ಎಸೆಸೆಲ್ಸಿಗೆ ಮೊದಲೇ ಮೊಟಕಾದ ಶಿಕ್ಷಣ:
ಮೂರು-ನಾಲ್ಕು ದಶಕಗಳ ಹಿಂದೆ ಕೊಲ್ಲಿ ರಾಷ್ಟ್ರಗಳಿಗೆ ಸಾಮಾನ್ಯ ಉದ್ಯೋಗಕ್ಕೆ ತೆರಳಿದ ಕರಾವಳಿ ಮತ್ತಿತರ ಭಾಗದ ಮುಸ್ಲಿಂ ಪುರುಷರು ಒಂದೆರಡು ವರ್ಷ ಉದ್ಯೋಗ ಮಾಡಿ ಊರಿಗೆ ಬರುವಾಗ ಹೊಸ ಗೆಟಪ್‌ನಲ್ಲಿಯೇ ಬರುತ್ತಿದ್ದರು. ಚೀಲ ತುಂಬಾ ಬಟ್ಟೆ-ಬರೆ, ಆಟಿಕೆ ಟೇಪ್ ರೆಕಾರ್ಡರ್, ಟಾರ್ಚು ಇತ್ಯಾದಿ ಖರೀದಿ ಮಾಡಿ ಊರಿಗೆ ತಂದು ಮನೆಯವರಿಗೂ ಹತ್ತಿರದ ಸಂಬಂಧಿಕರಿಗೂ ಉಡುಗೊರೆ ರೂಪದಲ್ಲಿ ನೀಡುತ್ತಿದ್ದರು. ದುಡಿದ ಹಣವನ್ನು ಇಂತಹ ಖರೀದಿಗೆ ವ್ಯಯ ಮಾಡಿ ಕೈ ಖಾಲಿಯಾದಾಗ ಮತ್ತೆ ಗಲ್ಫ್‌ಗೆ ಮುಖ ಮಾಡುತ್ತಿದ್ದರು. ಇತ್ತ ಇವರ ಪೋಷಾಕು ಕೈಯಲ್ಲಿನ ವಾಚು , ಬೂಟು ನೋಡಿದ ಮನೆಯ ಮತ್ತು ನೆರೆಯ ಮಕ್ಕಳಲ್ಲಿ ಗಲ್ಫ್ ಬಗ್ಗೆ ವರ್ಣರಂಜಿತ ಕನಸುಗಳೂ ಮೂಡತೊಡಗಿತು. ಓದು ಬರಹದಲ್ಲಿ ಆಸಕ್ತಿ ಕಳೆದುಕೊಂಡು ಪ್ರಾಥಮಿಕ-ಪ್ರೌಢ ಹಂತದಲ್ಲಿ ಅರ್ಧದಲ್ಲೇ ಓದಿಗೆ ಗುಡ್‌ಬೈ ಹೇಳಿ ಪಾಸ್‌ಪೋರ್ಟ್ ಮಾಡಿಸಿಕೊಂಡು ತಂದೆ-ಮಾವ-ಭಾವನ ಹಾದಿಯಲ್ಲಿ ಹಾರಿದರು. ಅಲ್ಲಿ ಹೋದ ಮೇಲೆಯೇ ಅರಿವಿಗೆ ಬಂದದ್ದು ಗಲ್ಫ್‌ನ ಜೀವನ ಸುಗಂಧ ದ್ರವ್ಯದ ಪರಿಮಳದಷ್ಟೇ ಆಹ್ಲಾದಕರವಾಗಿಲ್ಲ, ಅಲ್ಲಿಯೂ ಕಷ್ಟವಿದೆ, ನೋವಿದೆ, ಉರಿಬಿಸಿಲಿದೆ ಎಂದು.
ಗಲ್ಫ್‌ಗೆ ಹಾರಿದ ಎರಡನೇ ತಲೆಮಾರಿಗೆ ಯಾವಾಗ ವಾಸ್ತವಿಕತೆ ಅರಿವಾಯಿತೋ ಆಗ ಅವರು ತಮ್ಮ ಹಾಗೂ ಸಂಬಂಧಿಕರ ಮಕ್ಕಳಿಗೆ ಹೇಳಿದರು. ಊರಿನ ಗಂಜಿಯಾದರೂ ಸರಿ, ಅಲ್ಲಿನ ಮೃಷ್ಟಾನ್ನ ಭೋಜನ ಬೇಡವೆಂದು, ಆದರೆ ಇವರ ಮಕ್ಕಳು ಕೇಳಬೇಕಲ್ಲ.
ತಂದೆ ಅಲ್ಲಿನ ಉರಿಬಿಸಿಲಿನ ನಡುವೆಯೂ ದುಡಿದು ಕಳುಹಿಸಿದ ಹಣದಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡುವುದರ ಬದಲು ಇತರ ಸೌಲಭ್ಯಗಳಿಗೆ ಒತ್ತು ನೀಡಿದರು. ಬೈಕ್ ಇಲ್ಲದ ಮನೆಗೆ ಬೈಕು ಬಂತು, ಮೊಬೈಲ್ ಕೈಗೆ ಒಂದರಂತೆ ಬಂತು, ಮತ್ತೆ ಇದೇ ಗುಂಗಿನಲ್ಲಿ ಕಳೆದ ಮೂರನೇ ತಲೆಮಾರು ಕೂಡಾ ಕನಿಷ್ಠ, ಎಸೆಸೆಲ್ಸಿ- ಪಿಯುಸಿ ಪಾಸ್ ಮಾಡಲಾಗದೆ ಎಡಬಿಡಂಗಿಗಳಾಗಿದ್ದಾರೆ. ಕಲಿತವನ ಮುಂದೆ ಕಲಿಯದವನೇ ಹೀರೋ ಆಗಿಬಿಟ್ಟಿದ್ದಾನೆ. ಶಾಲೆಯಿಂದ ಹೊರಗುಳಿದು ಅಲ್ಪ ಸಮಯದ ನಂತರ ಗಲ್ಫ್‌ಗೆ ಹಾರಿ ಒಂದಷ್ಟೇ ಹಣ ಸಂಪಾದಿಸಿ, ಅದನ್ನು ತೀರಿಸಲು ಮತ್ತೆ ಸಾಲ ಮಾಡಿ ಅದನ್ನು ತೀರಿಸಲು ಮತ್ತೆ ಮತ್ತೆ ಗಲ್ಫ್‌ಗೆ ಹಾರುವುದು ವಾಡಿಕೆಯಾಗಿದೆ. ಇಲ್ಲಿಯೂ ನಿಲ್ಲಲಾರದೆ ಅಲ್ಲಿಯೂ ಸಲ್ಲದೆ ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಬಹುತೇಕ ಗಲ್ಫ್ ನಿರ್ವಸಿತರು.
ಗಲ್ಫ್ ನಿರ್ವಸಿತರಿಗೂ - ಉದ್ಯೋಗಿಗಳಿಗೂ ಬೇಕಿದೆ ನೋರ್ಕಾ (ಕೇರಳ) ಮಾದರಿ ಯೋಜನೆ :
ವಿದೇಶದಲ್ಲಿ ಉದ್ಯೋಗಕ್ಕಾಗಿ ನೆಲೆಸುವವರ ಸಂಖ್ಯೆ ಅಂದಾಜು ಒಂದು ಕೋಟಿಗೂ ಮಿಕ್ಕಿದೆ. ಅಮೆರಿಕ ಸಂಯುಕ್ತ ಸಂಸ್ಥಾನ ಕೆನಡಾ, ಆಸ್ಟ್ರೇಲಿಯ ಮೊದಲಾದೆಡೆ ನೆಲೆಸಿರುವವರು ಬಹುಪಾಲು ಸುಶಿಕ್ಷಿತರು ಹಾಗೂ ಉತ್ತಮ ಆದಾಯವನ್ನು ಗಳಿಸುತ್ತಿರುವವರು. ಕೊಲ್ಲಿ ದೇಶಗಳಿಗೆ ತೆರಳಿರುವವರ ಪೈಕಿ ದಕ್ಷಿಣ ಭಾರತೀಯರು ಅಧಿಕ. ಅದರಲ್ಲೂ ಕೇರಳ ಮತ್ತು ಕರ್ನಾಟಕದವರ ಪಾಲು ಹೆಚ್ಚು. ಮಧ್ಯ ಪ್ರಾಚ್ಯ ದೇಶಗಳಾದ ಸೌದಿ ಅರೇಬಿಯಾ, ಯು.ಎ.ಇ, ಬಹರೈನ್, ಕತರ್, ಒಮನ್, ಮಸ್ಕತ್, ಕುವೈಟ್ ಇಸ್ರೇಲ್ ಮೊದಲಾದ ದೇಶಗಳಲ್ಲಿ ದೊಡ್ಡ ಸಂಖ್ಯೆಯ ದಕ್ಷಿಣ ಭಾರತೀಯರು ಉದ್ಯೋಗಿಗಳಾಗಿದ್ದಾರೆ.
1975 ರಲ್ಲಿ ಸೌದಿ ಅರೇಬಿಯಾ ಒಂದರಲ್ಲೇ ಸುಮಾರು 34,500 ಭಾರತೀಯರು ಇದ್ದರೆ, 1979 ರಲ್ಲಿ ಈ ಸಂಖ್ಯೆ ಒಂದು ಲಕ್ಷಕ್ಕೆ ಏರಿತು. 1987 ರಲ್ಲಿ 3,80,000 ಕ್ಕೆ ಏರಿದರೆ ಕೊಲ್ಲಿ ಯುದ್ಧದ ಕಾರಣದಿಂದ 1991 ರಲ್ಲಿ ಈ ಸಂಖ್ಯೆ ಅಂದಾಜು 3,50,000 ಕ್ಕೆ ಇಳಿಯಿತು. 2000 ದಲ್ಲಿ ಹತ್ತು ಲಕ್ಷದಷ್ಟು ಇದ್ದ ಭಾರತೀಯರ ಸಂಖ್ಯೆ 2017 ರಲ್ಲಿ ಸುಮಾರು 41 ಲಕ್ಷಕ್ಕೆ ಏರಿಕೆಯಾಗಿದೆ. ಇವರಲ್ಲಿ ಅಧಿಕ ಮಂದಿ ಕೇರಳ ಮತ್ತು ಕರ್ನಾಟಕದವರೇ ಇದ್ದಾರೆ. ಇದು ಸೌದಿ ಅರೇಬಿಯ ದೇಶದ ಸಂಖ್ಯೆಯಾದರೆ ಇನ್ನುಳಿದ ಕೊಲ್ಲಿ ದೇಶದಲ್ಲೂ ಅಪಾರ ಸಂಖ್ಯೆಯ ಭಾರತೀಯರು ವಿಶೇಷವಾಗಿ ಕನ್ನಡಿಗರಿದ್ದಾರೆ.
ಕೊಲ್ಲಿ ದೇಶದಲ್ಲಿ ಸುರಿಸಿದ ಬೆವರಿನ ಹನಿಯ ಪ್ರತಿಫಲವನ್ನು ತನ್ನ ತಾಯ್ನಡಿನ, ಹುಟ್ಟಿದೂರಿನ ಆಗುಹೋಗುಗಳಿಗೆ ಸ್ಪಂದಿಸಿ ಇಲ್ಲಿನ ಆರ್ಥಿಕ ಚಟುವಟಿಕೆಗಳಿಗೆ ವೇಗ ವರ್ಧಕಗಳಂತಿರುವ ಅನಿವಾಸಿ ಭಾರತೀಯರಿಗೆ ಸರಕಾರ ಏನಾದರೂ ವಿಸ್ತೃತ ಯೋಜನೆ ಮಾಡಬೇಡವೇ?
ಹೌದು ! ಮಾಡಲೇ ಬೇಕು. ಕೇರಳ ರಾಜ್ಯ ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಿಟ್ಟಿದೆ. NORKA ಎಂಬ ವೇದಿಕೆಯನ್ನು ಆರಂಭಿಸಿರುವ ಕೇರಳ ರಾಜ್ಯ ಸರಕಾರ ಅಲ್ಲಿನ NRI ಗಳಿಗೆ ಒಂದು ಉತ್ತಮ ಕೊಡುಗೆಯನ್ನು ನೀಡಿದೆ.
ಕರ್ನಾಟಕದಲ್ಲೂ ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗಗಳ ಕಲ್ಯಾಣದ ಸದನ ಸಮಿತಿಯ ಅಧ್ಯಕ್ಷ ಜೆ.ಆರ್ ಲೋಬೋ ನೇತೃತ್ವದ ಸಮಿತಿಯು ಕೇರಳ ಮಾದರಿಯ ಯೋಜನೆ ರೂಪಿಸಲು ರಾಜ್ಯ ಸರಕಾರಕ್ಕೆ ಶಿಫಾರಸ್ಸು ಮಾಡಿದೆ. ಕೇರಳದ NORKA ROOTS ಮಾದರಿಯ ಸಂಸ್ಥೆ ಅನಿವಾಸಿ ಭಾರತೀಯರಿಗೆ ಗುರುತಿನ ಚೀಟಿ ದೃಢೀಕರಣ ಕೇಂದ್ರ, ಅಂಕಿ-ಅಂಶ ಸಂಗ್ರಹ NRI ಭವನ ಸ್ಥಾಪನೆ ಮೊದಲಾದ ಉತ್ತಮ ಶಿಫಾರಸುಗಳನ್ನು ಈ ಸಮಿತಿಯು ವರದಿಯಲ್ಲಿ ಉಲ್ಲೇಖಿಸಿದೆ.
ಕರ್ನಾಟಕದಲ್ಲಿ ಜಾರಿಯಾಗಬೇಕಾದುದು:
1. ಕೇರಳ ಮಾದರಿಗಿಂತಲೂ ಉತ್ತಮವಾದ ಶಾಸನ ಬದ್ಧವಾದ ಒಂದು NRI ಸಂಸ್ಥೆಯ ಸ್ಥಾಪನೆ ಅಥವಾ ಇಲಾಖೆಯ ರಚನೆ.
2. ಅನಿವಾಸಿ ಕನ್ನಡಿಗರ ಅಂಕಿ ಅಂಶಗಳನ್ನು ಕೇಂದ್ರೀಕೃತ ಘಟಕದ ಮೂಲಕ ಸಂಗ್ರಹಿಸಲು SOFTWARE ತಯಾರಿ ಹಾಗೂ ವೆಬ್‌ಸೈಟ್ ಗೆ ಚಾಲನೆ.
3. ವಿಸಾ ಹಾಗೂ ಪ್ರಮಾಣ ಪತ್ರಗಳ ನಿಖರತೆ ಹಾಗೂ ದೃಢೀಕರಣಕ್ಕಾಗಿ ಏಕಗವಾಕ್ಷಿ ಯೋಜನೆ.
4. ನಕಲಿ ವಿಸಾ ಏಜೆನ್ಸಿಗಳ ಹಾವಳಿ ತಡೆದು ವಿದೇಶಿ ಉದ್ಯೋಗದಾತರ ನಿಖರತೆ ತಿಳಿಯಲು ಕ್ರಮ.
5. ಅನಿವಾಸಿ ಕನ್ನಡಿಗರಿಗೆ ಬಾರ್‌ಕೋಡ್ ಆಧಾರಿತ ಗುರುತಿನ ಚೀಟಿ.
6. ವಿದೇಶಕ್ಕೆ ತೆರಳುವ ಮೊದಲು 3-6 ತಿಂಗಳು ಕೌಶಲ್ಯ ತರಬೇತಿ.
7. ಗಲ್ಫ್ ಸೇರಿದಂತೆ ಇತರ ದೇಶಗಳಲ್ಲಿ ಅನಿವಾಸಿಗರು ಅನುಸರಿಸಬೇಕಾದ ನಿಯಮಗಳ ಮಾಹಿತಿ.
8. ಕನಿಷ್ಠ 2 ವರ್ಷದಿಂದ ಮೇಲ್ಪಟ್ಟು ವಿದೇಶದಲ್ಲಿ ಉದ್ಯೋಗ ಮಾಡುವವರಿಗೆ ಶ್ರೇಣಿ ಆಧಾರಿತ ವಿಮಾ ಯೋಜನೆ ಜಾರಿ.
9. ಅನಿವಾಸಿ ಕನ್ನಡಿಗರು ವಿದೇಶದಲ್ಲಿ ಉದ್ಯೋಗ ನಿರತರಾಗಿದ್ದಾಗ ಸಹಜ/ಅಸಹಜ ಅಪಘಾತದಿಂದ ಮೃತಪಟ್ಟರೆ ಕುಟುಂಬ ವರ್ಗದವರಿಗೆ ಪರಿಹಾರ ವಿತರಣೆಗೆ ಕ್ರಮ.
10 .ಕನಿಷ್ಠ ವರ್ಷಕ್ಕಿಂತ ಮೇಲ್ಪಟ್ಟು ವಿದೇಶದಲ್ಲಿ ಕಾರ್ಯ ನಿರ್ವಹಿಸಿ ಮರಳಿದವರಿಗೆ ಸ್ವ ಉದ್ಯೋಗ ಮಾಡಲು ವಿಶೇಷ ಸಬ್ಸಿಡಿ ಸಹಿತ ಸಾಲ ಯೋಜನೆ.
ಈ ಯೋಜನೆಗಳನ್ನು ಕರ್ನಾಟಕದಲ್ಲಿ ಒಂದು ವ್ಯವಸ್ಥಿತ ಇಲಾಖೆ ಅಥವಾ ಶಾಸನ ಬದ್ಧ ಸಂಸ್ಥೆಯ ಮೂಲಕ ಜಾರಿ ಮಾಡಿದಲ್ಲಿ ಅನಿವಾಸಿ ಕನ್ನಡಿಗರ ಬವಣೆಯನ್ನು ನೀಗಿಸಿದ ಘನ ಕಾರ್ಯ ಸರಕಾರದ್ದಾಗುತ್ತದೆ. ಅಲ್ಲದೆ ಈ ನಿಟ್ಟಿನಲ್ಲಿ ಹೊಸ ಭಾಷ್ಯ ಬರೆದ ರಾಜ್ಯವೆಂಬ ಹೆಗ್ಗಳಿಕೆಗೂ ಕರ್ನಾಟಕ ಪಾತ್ರವಾಗಲಿದೆ..
ಕೊಲ್ಲಿ ರಾಷ್ಟ್ರಗಳು ಈವರೆಗೆ ಆರ್ಥಿಕ ಧಾರಾಳತನ ತೋರಿಸಿವೆ. ವಿದೇಶಿಯರಿಗೆ ಧಾರಾಳವಾಗಿ ಉದ್ಯೋಗಗಳನ್ನು ನೀಡಿದೆ. ಇದೀಗ ಗಲ್ಫ್ ರಾಷ್ಟ್ರಗಳು ತಮ್ಮನ್ನು ತಾವು ಗಟ್ಟಿ ಮಾಡಲು ತೊಡಗಿವೆ. ವಿಶೇಷವಾಗಿ ಸೌದಿ ಅರೇಬಿಯಾದಲ್ಲಿ ಅಲ್ಲಿನ ದೊರೆ ಅನೇಕ ಕ್ರಾಂತಿಕಾರಕ ಬದಲಾವಣೆ ತರುತ್ತಿದ್ದಾರೆ. ಸ್ವದೇಶಿಯರಿಗೆ ನೌಕರಿ, ವಿದೇಶಿಯರ ಮೇಲೆ ವ್ಯಾಟ್ ಅವಲಂಬಿತರ ಮೇಲೆ ತಲೆ ಕಂದಾಯ, ಕಾರ್ಮಿಕ ಲೈಸೆನ್ಸ್ ಕರದಲ್ಲಿ ಹೆಚ್ಚಳ ಮೊದಲಾದ ಉಪಕ್ರಮಗಳನ್ನು ಜಾರಿ ಮಾಡಿದ್ದಾರೆ. ಸೌದಿ ಅರೇಬಿಯಾದಲ್ಲಿನ ಓರ್ವ ವಿದೇಶಿ ಉದ್ಯೋಗಿ ಈವರೆಗೆ ಇದ್ದ ವ್ಯಾಟ್ ಬದಲಿಗೆ ಇನ್ನು ಮುಂದೆ 2018 ರಲ್ಲಿ 200 ರಿಯಾಲ್ 2019 ರಲ್ಲಿ 300 ರಿಯಾಲ್ 2020 ರಲ್ಲಿ ವಾರ್ಷಿಕ 400 ರಿಯಾಲ್‌ನ್ನು ಪ್ರತೀ ವ್ಯಕ್ತಿ ಪಾವತಿಸಬೇಕಾಗಿದೆ, ಈ ಹೊರೆ ಹೊರಲಾಗದ ಅನಿವಾಸಿ ಭಾರತೀಯರು ತಾಯ್ನಿಡಿನ ಕಡೆಗೆ ಮುಖ ಮಾಡಿದ್ದಾರೆ.