ಮೈಸೂರು: ಮತದಾರರ ಅಂತಿಮ ಪಟ್ಟಿ ಫೆ.28 ರಂದು ಪ್ರಕಟ: ಜಿಲ್ಲಾಧಿಕಾರಿ ಡಿ.ರಂದೀಪ್

Update: 2018-02-12 16:34 GMT

ಮೈಸೂರು,ಫೆ.12: ಜಿಲ್ಲೆಯಲ್ಲಿ ಕೈಗೊಂಡಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಯ ಅಂತಿಮ ಪಟ್ಟಿಯನ್ನು ಫೆಬ್ರವರಿ 28 ಕ್ಕೆ ಪ್ರಕಟಿಸಲಾಗುವುದು. ಮಾರ್ಚ್ 2 ರೊಳಗೆ ಅಂತಿಮ ಪಟ್ಟಿಯ ಪ್ರತಿಯನ್ನು ರಾಜಕೀಯ ಪಕ್ಷಗಳಿಗೆ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ರಂದೀಪ್ ಡಿ. ಅವರು ತಿಳಿಸಿದರು. 

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷದ ಮುಖಂಡರ ಜೊತೆ ಸಭೆ ನಡೆಸಿ ಮಾತನಾಡಿದರು. ಜಿಲ್ಲೆಯಲ್ಲಿ 2687 ಮತಗಟ್ಟೆಗಳಿಗೆ ಬೇಡಿಕೆ ಇರುವ ಕಡೆ 12 ಮತಗಟ್ಟೆಗಳನ್ನು ಹೊಸದಾಗಿ ಸೇರ್ಪಡೆ ಮಾಡುವಂತೆ ಚುನಾವಣಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಒಟ್ಟು 2699 ಮತಗಟ್ಟೆಗಳು ಸಿದ್ದಗೊಳ್ಳಲಿದೆ ಎಂದರು.

ಕರಡು ಮತದಾರರ ಪಟ್ಟಿಯಂತೆ ಜಿಲ್ಲೆಯಲ್ಲಿ 23,69,987 ಮತದಾರರಿದ್ದು, ಹೊಸದಾಗಿ ಮತದಾರರ ಗುರುತಿನ ಚೀಟಿ ಪಡೆಯಲು 7,8,403 ಅರ್ಜಿ ಸಲ್ಲಿಸಿರುತ್ತಾರೆ. ಮತದಾರರ ಪಟ್ಟಿಯಿಂದ ಹೆಸರು ತೆಗೆಯಲು 1,6,664 ಅರ್ಜಿ ಬಂದಿರುತ್ತದೆ. ತಿದ್ದುಪಡಿಗಾಗಿ 9,976 ಅರ್ಜಿಗಳು ಹಾಗೂ ಒಂದೇ ಮತಗಟ್ಟೆಯಲ್ಲಿ ವಿಳಾಸ ಸ್ಥಳಾಂತರ ಕೋರಿ 3,326 ಅರ್ಜಿ ವಿಶೇಷ ಮತದಾರರ ಪರಿಷ್ಕರಣೆ ಅವಧಿಯಲ್ಲಿ ಬಂದಿರುತ್ತದೆ ಎಂದರು.
  
ಮೈಸೂರು ಜಿಲ್ಲೆಯಲ್ಲಿ ಒಟ್ಟು 2,687 ಮತಗಟ್ಟೆಗಳಿದ್ದು, ಬೇಡಿಕೆಯ ಮೇರೆಗೆ 12 ಮತಗಟ್ಟೆಗಳನ್ನು ಹೆಚ್ಚಿನದಾಗಿ ಸೇರ್ಪಡಿಸಲಾಗಿದೆ. ಮೂಲಭೂತ ವ್ಯವಸ್ಥೆ ಇರದ ಜಿಲ್ಲೆಯಲ್ಲಿ 43 ಮತಗಟ್ಟೆಗಳನ್ನು ಸ್ಥಳಾಂತರಿಸುವಂತೆ ಕೋರಿ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದೆ. ಇದರ ಪಟ್ಟಿಯನ್ನು ಎಲ್ಲಾ ರಾಜಕೀಯ ಪಕ್ಷಗಳು ಪಡೆದು ಪರಿಶೀಲಿಸಿಕೊಳ್ಳಬಹುದಾಗಿದೆ ಎಂದರು.

ರಾಜಕೀಯ ಪಕ್ಷಗಳು ತಮ್ಮ ಪಕ್ಷದಿಂದ ಬೂತ್ ಲೆವಲ್ ಅಸಿಸ್‍ಟೆಂಟ್‍ಗಳನ್ನು ನೇಮಕ ಮಾಡಿ ಪಟ್ಟಿಯನ್ನು ಆಯಾ ತಾಲೂಕಿನ ತಹಶೀಲ್ದಾರ್ ಕಚೇರಿಗೆ ಸಲ್ಲಿಸುವುದು, ಬೂತ್ ಲೆವಲ್ ಅಸಿಸ್‍ಟೆಂಟ್ ನೇಮಕ ಮಾಡುವುದರಿಂದ ಬೂತ್ ಮಟ್ಟದಲ್ಲಿ ಯಾವುದಾದರೂ ತೊಂದರೆಗಳಿದ್ದಲ್ಲಿ ಅವುಗಳನ್ನು ಪರಿಹರಿಸಿಕೊಳ್ಳಬಹುದು. ತಾಲೂಕು ಮಟ್ಟದಲ್ಲೂ ಸಹ ಸಭೆ ನಡೆಸಿ ರಾಜಕೀಯ ಪಕ್ಷಗಳಿಗೆ ಮಾಹಿತಿ ನೀಡುವಂತೆ ಈಗಾಗಲೇ ತಿಳಿಸಲಾಗಿದೆ.

ಜಿಲ್ಲೆಯಲ್ಲಿ ಮತಗಟ್ಟೆಗಳಿಗೆ ಅನುಗುಣವಾಗಿ ಬ್ಯಾಲೆಟ್, ಯೂನಿಟ್, ಕಂಟ್ರೋಲ್ ಯೂನಿಟ್ ಮತ್ತು ವಿ.ವಿ.ಪ್ಯಾಟ್‍ಗಳನ್ನು ಸರಬರಾಜು ಮಾಡಲಾಗುವುದು. 3,560 ಬ್ಯಾಲೆಟ್ ಯೂನಿಟ್  ಮತ್ತು 3,000 ಕಂಟ್ರೋಲ್ ಯೂನಿಟ್‍ಗಳನ್ನು ತಮಿಳುನಾಡಿನಿಂದ ಮೈಸೂರು ಜಿಲ್ಲೆಗೆ ಬರಲಿದೆ. ಇವುಗಳ ಪರಿಶೀಲನೆಯನ್ನು ರಾಜಕೀಯ ಪಕ್ಷಗಳ ಸಮ್ಮುಖದಲ್ಲಿ ನಡೆಸಲಾಗುವುದು. ಅವುಗಳು ಬರುವ ವೇಳೆ ಹಾಗೂ ದಿನಾಂಕವನ್ನು ತಿಳಿಸಲಾಗುವುದು ಎಂದರು.  ಚುನಾವಣೆಗೆ ಸ್ಪರ್ಧಿಸುವ ಪ್ರತಿಯೊಬ್ಬ ಅಭ್ಯರ್ಥಿಗಳು ಚುನಾವಣೆ ವೆಚ್ಚದ ವಿವರಗಳನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಬೇಕಾಗಿರುತ್ತದೆ. ಅವುಗಳ ದರ ನಿಗಧಿ ಕುರಿತು ಈಗಾಗಲೇ ಕರಡು ಸಿದ್ಧಪಡಿಸಿದ್ದು, ರಾಜಕೀಯ ಪಕ್ಷದವರಿಗೆ ನೀಡಲಾಗುವುದು. ರಾಜಕೀಯ ಪಕ್ಷದವರು ಈ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಮುಂದಿನ ಸಭೆಯಲ್ಲಿ ತಿಳಿಸಬೇಕು ಎಂದರು. 

ಸಭೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣಾ ವಿಭಾಗದ ಅಧೀಕ್ಷಕ ರಾಮಪ್ರಸಾದ್, ರಾಜಕೀಯ ಪಕ್ಷಗಳ ಮುಖಂಡರುಗಳಾದ ಎಂ.ಸತೀಶ್, ಮಹೇಶ್ ಎಸ್.ಎಸ್ ಹಾಗೂ ಆರ್.ಎಸ್.ರಾಜಶೇಖರಮೂರ್ತಿ ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News