ದಾವಣಗೆರೆ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಧರಣಿ

Update: 2018-02-12 17:01 GMT

ದಾವಣಗೆರೆ,ಫೆ.12: ರಾಜ್ಯಾದ್ಯಂತ ದೇವದಾಸಿ ಮಹಿಳೆಯರು, ಕುಟುಂಬ ಸದಸ್ಯರ ಗಣತಿ ಸೇರಿದಂತೆ 2018ರ ಬಜೆಟ್‍ನಲ್ಲಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಜಿಲ್ಲಾ ಘಟಕ ಹಾಗೂ ದಲಿತ ಹಕ್ಕುಗಳ ಸಮಿತಿ, ರಾಜ್ಯ ದೇವದಾಸಿ ಮಹಿಳೆಯರ ಮಕ್ಕಳ ಹೋರಾಟ ಸಮಿತಿ, ರಾಜ್ಯ ಮಸಣ ಕಾರ್ಮಿಕರ ಸಂಘದ ಜಿಲ್ಲಾ ಘಟಕಗಳ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ಪ್ರತ್ಯೇಕ ಪ್ರತಿಭಟನೆ ನಡೆಸಿದರು. 

ಪಿ.ಬಿ. ರಸ್ತೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ತಮ್ಮ ವಿವಿಧ ಘೋಷಣೆ ಕೂಗುತ್ತಾ ಸಾಗಿದ ಪ್ರತಿಭಟನಾಕಾರರು, ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ, ಜಿಲ್ಲಾಡಳಿತದ ಮುಖಾಂತರ ಮುಖ್ಯಮಂತ್ರಿಗೆ ಮನವಿ ಅರ್ಪಿಸಿದರು. 

ಈ ಸಂದರ್ಭ ಮಾತನಾಡಿದ ಸಂಘಟನೆ ಮುಖಂಡ ಕೆ. ಲಕ್ಷ್ಮೀನಾರಾಯಣ ಭಟ್, ದೇವದಾಸಿ ಮಹಿಳೆಯರ ಮತ್ತವರ ಕುಟುಂಬ ಸದಸ್ಯರ ಗಣತಿ ರಾಜ್ಯಾದ್ಯಂತ ಕೈಗೊಳ್ಳಬೇಕು. ಹಿಂದೆ ಗಣತಿಯಲ್ಲಿ ಬಿಟ್ಟು ಹೋದ ದೇವದಾಸಿ ಮಹಿಳೆಯರನ್ನು ಸೇರಿಸಬೇಕು. ದೇವದಾಸಿಯರ ಜೊತೆಗೆ ಕುಟುಂಬ ಸದಸ್ಯರ ಗಣತಿ ಆಗಬೇಕು. ಮಾಸಿಕ ಸಹಾಯಧನ 3 ಸಾವಿರ ರು.ಗೆ ಹೆಚ್ಚಿಸುವ ಜೊತೆಗೆ ದೇವದಾಸಿ ಮಹಿಳೆಯರು, ಕುಟುಂಬಗಳ ಪರಿತ್ಯಕ್ತ ಮಹಿಳೆಯರಿಗೂ ವಿಸ್ತರಿಸಬೇಕು ಎಂದು ಒತ್ತಾಯಿಸಿದರು. 

ದೇವದಾಸಿ ಮಹಿಳೆ, ಕುಟುಂಬಗಳ ಪುನರ್ವಸತಿಗಾಗಿ ಭೂಮಿ ಒದಗಿಸಲು ಬಜೆಟ್‍ನಲ್ಲಿ ಪ್ರತಿ ವರ್ಷ 5 ಸಾವಿರ ಕೋಟಿ ಮೀಸಲಿಡಬೇಕು. 10 ಸೆಂಟ್ಸ್ ಸ್ಥಳದಲ್ಲಿ 5 ಲಕ್ಷ ಮೌಲ್ಯದ ಮನೆ ಕಟ್ಟಿ ಕೊಡಬೇಕು. ದೇವದಾಸಿಯರು, ಕುಟುಂಬ ಸದಸ್ಯರ ಎಲ್ಲಾ ಸಾಲ ಮನ್ನಾ ಮಾಡಬೇಕು. ಉದ್ಯೋಗ ನಷ್ಟ ಪರಿಹಾರವಾಗಿ 25 ಸಾವಿರ ಪರಿಹಾರ ನೀಡಬೇಕು. ದೇವದಾಸಿಯರ ಮಕ್ಕಳಿಗೆ ವಿದ್ಯಾಭ್ಯಾಸ, ಉದ್ಯೋಗಕ್ಕಾಗಿ ನೆರವಾಗಬೇಕು. ದೇವದಾಸಿ ಪದ್ಧತಿ ನಿಷೇಧ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಆಗ್ರಹಿಸಿದ ಅವರು, ಪುನರ್ವಸತಿ ಯೋಜನಾಧಿಕಾರಿಗಳ ಭ್ರಷ್ಟಾಚಾರ ತಡೆಯುವ ಮೂಲಕ ದೇವದಾಸಿ ಮಹಿಳೆಯರು, ಕುಟುಂಬ ಸದಸ್ಯರಿಗೆ ಆಗುವ ಅನ್ಯಾಯ ತಪ್ಪಿಸಬೇಕು. ಉದ್ಯೋಗ ಖಾತರಿ ಕೆಲಸವನ್ನು ಕನಿಷ್ಟ 200 ದಿನಗಳ ಕಾಲ ಕಡ್ಡಾಯ ಒದಗಿಸಬೇಕು. ನಗರ ಪ್ರದೇಶಕ್ಕೂ ಖಾತರಿ ವಿಸ್ತರಿಸಬೇಕು. ಕನಿಷ್ಟ ಕೂಲಿ 600 ರು.ಗೆ ಹೆಚ್ಚಿಸಬೇಕು. ದಲಿತರ ಕೇರಿಯಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪಿಸಲು ಸಿಎಂ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದರು. 

ಡಿಎಚ್‍ಎಸ್ ಸಂಚಾಲಕ ಭರಮಪ್ಪ ಮಾತನಾಡಿ, ದೇವದಾಸಿ ಮಹಿಳೆಯರು, ಕುಟುಂಬಕ್ಕೆ ಮನೆ, ನಿವೇಶನ, ವ್ಯವಸಾಯಕ್ಕೆ ಭೂಮಿ ನೀಡಬೇಕು. ಮಾಸಿಹ 3 ಸಾವಿರ ರು. ಮಾಸಿಕ ಪಿಂಚಣಿ ನೀಡಬೇಕು. ಮಸಣ ಕಾರ್ಮಿಕರಿಗೂ 3 ಸಾವಿರ ರು. ಪಿಂಚಣಿ ಘೋಷಿಸಬೇಕು. ಪರಿತ್ಯಕ್ತ ಮಹಿಳೆಯರು, ವಿಧವೆಯರಿಗೂ ಮಾಸಿಕ 3 ಸಾವಿರ ನೀಡಬೇಕು. ದೇವದಾಸಿ ಮಹಿಳೆಯರು, ದಲಿತರ ಮಕ್ಕಳ ವಿದ್ಯಾಭ್ಯಾಸಕ್ಕೆ, ಉದ್ಯೋಗಕ್ಕೆ ನೆರವಾಗಬೇಕು ಎಂದರು. ಈ ಎಲ್ಲಾ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಉಭಯ ಸಂಘಟನೆಗಳ ನೇತೃತ್ವದಲ್ಲಿ ಜಿಲ್ಲಾಡಳಿತಕ್ಕೆ ಮನವಿ ಪತ್ರ ಅರ್ಪಿಸಲಾಯಿತು. 

ಪ್ರತಿಭಟನೆಯಲ್ಲಿ ಸಂಘಟನೆ ಮುಖಂಡರಾದ ಟಿ.ವಿ. ರೇಣುಕಮ್ಮ, ಈ. ಶ್ರೀನಿವಾಸ, ಎಚ್. ಅಣ್ಣಪ್ಪ ಸ್ವಾಮಿ, ಭರಮಪ್ಪ, ಎನ್. ಹಾಲೇಶ್, ಗಜೇಂದ್ರ, ರೇಣುಕಮ್ಮ, ಮುತ್ತಮ್ಮ, ಗಂಗಮ್ಮ ಮಲೆಬೆನ್ನೂರು, ರತ್ನಮ್ಮ, ಮಲ್ಲಮ್ಮ, ಹಾಲಮ್ಮ, ಸವಿತಾ, ಪರಶುರಾಮ, ನಾಗರಾಜ, ಡಿ.ರವಿ, ಜಗದೀಶ, ನಂದೀಶ, ಅಶೋಕ, ಚಂದ್ರಪ್ಪ, ಉಮೇಶ, ಚನ್ನಮ್ಮ, ಮೈಲಮ್ಮ, ಎಸ್. ಕೆಂಚಮ್ಮ, ಎಸ್.ರೇಣುಕಾ, ನಾಗವೇಣಿ, ಕೆಂಚಮ್ಮ, ಅಂಜಿನಮ್ಮ, ಶಾಂತಮ್ಮ ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News