ತಿರುಮಲೇಶ್ ಬರಹ ಲೋಕಕ್ಕೊಂದು ಬಾಗಿಲು
ಡಾ. ಕೆ. ವಿ. ತಿರುಮಲೇಶ್ ಕನ್ನಡ ನಾಡು ಕಂಡಿರುವ ಅಪರೂಪದ ಸಾಹಿತ್ಯಕ ಮತ್ತು ವಿದ್ವತ್ ಪೂರ್ಣ ಪ್ರತಿಭೆ. ಕಾವ್ಯವನ್ನು ಗಂಭೀರವಾಗಿ ಸ್ವೀಕರಿಸಿ ಬರೆದ ಕೆಲವೇ ಕೆಲವು ಕವಿಗಳಲ್ಲಿ ತಿರುಮಲೇಶ್ ಒಬ್ಬರು. ಹೊಸ ತಲೆಮಾರಿನ ಬರಹಗಾರರು ತಿರುಮಲೇಶ್‌ನ್ನು ಓದುತ್ತಾ ಬರೆಯುವ ಅಗತ್ಯ ಖಂಡಿತಾ ಇದೆ. ಕವಿಯಾಗಿ, ಲೇಖಕರಾಗಿ, ಅಂಕಣಕಾರರಾಗಿ ಪರಿಚಿತರಾಗಿರುವ ತಿರುಮಲೇಶ್ ತಾತ್ವಿಕ ನೆಲೆಯನ್ನಿಟ್ಟುಕೊಂಡು ವರ್ತಮಾನವನ್ನು ಚರ್ಚಿಸುತ್ತಾ ಬಂದವರು. ಹೈದರಾಬಾದಿನ ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾ ಪಕರಾಗಿರುವ ಇವರು ಕಾವ್ಯ, ಕತೆ, ಕಾದಂಬರಿಗಳಲ್ಲದೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಕೃಷಿ ಮಾಡಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತ ಕನ್ನಡ ಲೇಖಕರನ್ನು ಪರಿಚಯಿಸುವ ಭಾಗವಾಗಿ ನವಕರ್ನಾಟಕ ಸಾಹಿತ್ಯ ಸಂಪದ ಮಾಲೆಯು ಕೆ. ವಿ. ತಿರುಮಲೇಶ್ ಕುರಿತಂತೆ ಕೃತಿಯನ್ನು ಹೊರತಂದಿದೆ. ಎಸ್. ಆರ್. ವಿಜಯಶಂಕರ್ ಅವರು ತಿರುಮಲೇಶ್ ಅವರ ಬದುಕುಬರಹಗಳನ್ನು ಅತ್ಯಂತ ನವಿರು ಭಾಷೆಯಲ್ಲಿ ಕುತೂಹಲಕರವಾಗಿ ನಿರೂಪಿಸಿದ್ದಾರೆ.
ಕೃತಿಯ ಮೊದಲ ಅಧ್ಯಾಯದಲ್ಲಿ ತಿರುಮಲೇಶರ ಬದುಕನ್ನು ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ. ಅವರ ಬದುಕು ಹೇಗೆ ಅವರ ಬರಹಗಳ ಮೇಲೆ ಪರಿಣಾಮವನ್ನು ಬೀರಿದೆ ಎನ್ನುವುದನ್ನು ಲೇಖಕರು ಹೇಳು ತ್ತಾರೆ. ಬೇರೆ ಬೇರೆ ಲೇಖಕರು, ಚಿಂತಕರು ತಿರುಮಲೇಶರ ಕುರಿತಂತೆ ಹೇಳಿದ ಮಾತು ಗಳನ್ನು ಈ ಭಾಗದಲ್ಲಿ ದಾಖಲಿಸುತ್ತಾರೆ. ಕಾಸರಗೋಡಿನ ಸರಕಾರಿ ಕಾಲೇಜಿನಲ್ಲಿ ಆರ್ಥಿಕ ಭದ್ರತೆಯ ಉದ್ಯೋಗದಲ್ಲಿದ್ದ ತಿರುಮಲೇಶ್ ವೇತನ ರಹಿತರಾಗಿ ಉನ್ನತ ವಿದ್ಯಾಭ್ಯಾಸಕ್ಕೆ ಹೈದರಾಬಾದಿಗೆ ತೆರಳಿದರು ಎಂಬುದು ಅವರ ಕಲಿಯುವ ತಹತಹವನ್ನು ಸೂಚಿಸುತ್ತದೆ.
ತಿರುಮಲೇಶರ ಕಾವ್ಯದ ಕುರಿತಂತೆ ವಿಜಯ ಶಂಕರ್ ಆದ್ಯತೆಯ ಮೇಲೆ ಪರಿಚಯಿಸುತ್ತಾರೆ. ಕಾವ್ಯ ಮತ್ತು ಕತೆಗಳಲ್ಲಿ ಅವರು ನಡೆಸಿದ ಪ್ರಯೋಗಗಳು, ಅದು ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ನೀಡಿದ ಕೊಡುಗೆಗಳಲ್ಲಿ ವಿಮರ್ಶಾತ್ಮಕವಾಗಿ ಚರ್ಚಿಸುತ್ತಾರೆ. ತಿರುಮಲೇಶ್ ಅವರು ತಮ್ಮ ಸೃಜನಲೋಕದಲ್ಲಿ ಸದಾ ಜ್ಞಾನ ಸಂಚಾರಿ ಎಂದು ಕರೆಯುತ್ತಾರೆ. ವಿವಿಧ ಭಾಷೆ ಮತ್ತು ಸಂಸ್ಕೃತಿಗಳ ನಡುವಿನ ಸೇತುವೆಯಾಗಿ ಹೇಗೆ ಅವರ ಕತೆ, ಕಾವ್ಯಗಳು ಕೆಲಸ ಮಾಡಿವೆ ಎನ್ನುವ ಅಂಶದ ಕಡೆಗೆ ಅವರು ಬೊಟ್ಟು ಮಾಡುತ್ತಾರೆ. ಪುರಾಣಗಳು ಹೇಗೆ ಅವರು ಬರಹಗಳಲ್ಲಿ ಮತ್ತೆ ಹೊಸದಾಗಿ ಜೀವ ತಳೆದಿವೆ ಎನ್ನುವುದನ್ನು ಉದಾಹರಣೆ ಸಹಿತ ವಿವರಿಸುತ್ತಾರೆ. ಇಲ್ಲಿ ಪುರಾಣವೆಂದರೆ ಭಾರತೀಯ ಕಾವ್ಯಗಳಷ್ಟೇ ಅಲ್ಲ, ಜಗತ್ತಿನ ಶ್ರೇಷ್ಠ ಕಾವ್ಯಗಳೆಲ್ಲ ತಿರುಮಲೇಶ್ ಬರಹಗಳಲ್ಲಿ ಮರು ರೂಪ ಪಡೆದಿವೆ. ತಿರುಮಲೇಶರ ಬರಹ ಜಗತ್ತಿಗೆ ಪ್ರವೇಶಿಸುವ ಮೊದಲು ಈ ಕೃತಿಯನ್ನು ಓದಿದರೆ ಅವರ ಕಾವ್ಯ, ಕತೆಗಳು ನಮಗೆ ಇನ್ನಷ್ಟು ಹತಿ್ತರವಾಗುವುದರಲ್ಲಿ ಅನುಮಾನವಿಲ್ಲ.
ಈ ಕೃತಿ ಮಾಲೆಯ ಪ್ರಧಾನ ಸಂಪಾದಕರು ಡಾ. ಪ್ರಧಾನ್ ಗುರುದತ್. ನವಕರ್ನಾಟಕ ಪ್ರಕಾಶನ ಕೃತಿಯನ್ನು ಹೊರತಂದಿದೆ. 130 ಪುಟಗಳ ಈ ಕೃತಿಯ ಮುಖಬೆಲೆ 90 ರೂಪಾಯಿ.