ಆರೋಗ್ಯ ಕ್ಷೇತ್ರದಲ್ಲಿ ಲಾಭಕೋರ-ಖಾಸಗಿ ವಲಯಕ್ಕೆ ಉತ್ತೇಜನ ನೀಡುತ್ತಿರುವುದೇಕೆ?
ಒಂದು ಬಲವಾದ ನಿಯಂತ್ರಣಾ ವ್ಯವಸ್ಥೆಯಿಲ್ಲದ ಮತ್ತು ಸಮಗ್ರವಾದ ಸಾರ್ವಜನಿಕ ಆರೋಗ್ಯ ಸೇವೆಗಳಿಲ್ಲದ ಪರಿಸರದಲ್ಲಿ ಜನರ ಆರೋಗ್ಯ ಸೇವೆಯ ಅಗತ್ಯಗಳನ್ನು ಖಾಸಗಿಯವರ ಮೂಲಕ ಪೂರೈಸುವ ನೀತಿಗಳು ಆರೋಗ್ಯ ಸೇವೆಯನ್ನು ಪಡೆಯುವಲ್ಲಿ ಎಲ್ಲರಿಗೂ ಸಮಾನವಾದ ಅವಕಾಶವನ್ನು ಯಾವತ್ತಿಗೂ ಕಲ್ಪಿಸಿಕೊಡಲಾರದೆಂಬುದನ್ನು ಜಗತ್ತಿನ ಅನುಭವಗಳು ಸಾರಿ ಹೇಳುತ್ತವೆ. ಇಂತಹ ಸನ್ನಿವೇಶದಲ್ಲಿ ಭಾರತವು ಉತ್ತಮ ಮೂಲಭೂತ ಸೌಕರ್ಯಗಳನ್ನೂ ಮತ್ತು ಸಿಬ್ಬಂದಿಯನ್ನೂ ಒದಗಿಸುವ ಮೂಲಕ ಆರೋಗ್ಯ ಸೇವೆಯ ಎಲ್ಲಾ ಹಂತಗಳಲ್ಲೂ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಗಟ್ಟಿಗೊಳಿಸುವುದು ಅತ್ಯಗತ್ಯವಾಗಿದೆ.
ಭಾರತೀಯರ ಆರೋಗ್ಯದ ಹಕ್ಕನ್ನು ಆರೋಗ್ಯ ವಿಮೆಯ ಮೂಲಕ ನಿಭಾಯಿಸಲಾಗುತ್ತಿದೆ. ಜನರು ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾದರೆ ಆಗುವ ವೆಚ್ಚಕ್ಕೆ ಮಾತ್ರ ವಿಮೆಯನ್ನು ಒದಗಿಸುವ ಮೂಲಕ ಸಾರ್ವತ್ರಿಕ ಆರೋಗ್ಯ ರಕ್ಷಣೆಯ ಗುರಿಗಳನ್ನು ಸಾಧಿಸಬಹುದೆಂದು ದೇಶದ ಅಧಿಕಾರಿ ವಲಯವು ನಂಬಿಕೊಂಡಿದೆ. ಆದರೆ ಅದೇ ಸಮಯದಲ್ಲಿ ಈ ದೇಶದ ಬಹುಪಾಲು ಬಡಜನತೆಗೆ ಆರೋಗ್ಯವನ್ನು ಖಾತರಿಗೊಳಿಸಬಲ್ಲ ಕಾರ್ಯಶೀಲ ಸರಕಾರಿ ಆರೋಗ್ಯ ಸೇವೆಗಳಿಗೆ ಕೊಡುತ್ತಿದ್ದ ಸಂಪನ್ಮೂಲಗಳನ್ನು ಮಾತ್ರ ಕಡಿತಗೊಳಿಸಲಾಗುತ್ತಿದೆ ಮತ್ತು ವ್ಯವಸ್ಥಿತವಾಗಿ ದುರ್ಬಲಗೊಳಿಸಲಾಗುತ್ತಿದೆ. ಹಾಲಿ ಸರಕಾರದ ಹಣಕಾಸು ಮಂತ್ರಿಗಳು ತಮ್ಮ ಕೊನೆಯ ಪೂರ್ಣಾವಧಿ ಬಜೆಟ್‌ನಲ್ಲಿ ಆರೋಗ್ಯದ ಬಗ್ಗೆ ಸ್ವಲ್ಪಹೆಚ್ಚಿನ ಸದ್ದನ್ನು ಮಾಡಿದ್ದಾರೆ. ಅವರು ತಮ ಬಜೆಟ್ ಭಾಷಣದಲ್ಲಿ ‘ಆಯುಷ್ಮಾನ್ ಭಾರತ್’ ಬಗ್ಗೆ ಬಹಳಷ್ಟು ಮಾತನಾಡಿದರೂ ಅದಕ್ಕೆ ಸರಿದೂಗುವಷ್ಟು ಹಣವನ್ನು ಮಾತ್ರ ಆರೋಗ್ಯ ಕ್ಷೇತ್ರಕ್ಕೆ ಒದಗಿಸಲಿಲ್ಲ. ಈ ಸಾಲಿನ ಬಜೆಟ್‌ನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 54,600 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಕಳೆದ ವರ್ಷ ಇಲಾಖೆಯು 53,294 ಕೋಟಿ ರೂ.ಗಳಷ್ಟು ವೆಚ್ಚವನ್ನು ಮಾಡಿತ್ತು. ಹೀಗಾಗಿ ಹಣದುಬ್ಬರವನ್ನು ಲೆಕ್ಕ ಹಾಕಿ ನೋಡಿದರೆ ಈ ಬಾರಿ ಆರೋಗ್ಯ ಕ್ಷೇತ್ರಕ್ಕೆ ಹಿಂದಿನ ವರ್ಷಕ್ಕಿಂತ ನೈಜ ದರದಲ್ಲಿ ಕಡಿಮೆ ಹಣವನ್ನು ಒದಗಿಸಲಾಗಿದೆ. ಆದರೆ ಈ ಹಂಚಿಕೆಯು ಸಹ ಆರೋಗ್ಯ ಇಲಾಖೆಗೆ ಒಟ್ಟಾರೆ ರಾಷ್ಟ್ರೀಯ ಉತ್ಪನ್ನದ (ಜಿಡಿಪಿ) ಶೇ. 1ರಷ್ಟನ್ನು ಕೇಂದ್ರ ಸರಕಾರವೂ ಶೇ.1.5ರಷ್ಟು ಆಯಾ ರಾಜ್ಯ ಸರಕಾರಗಳೂ ವೆಚ್ಚ ಮಾಡಬೇಕೆಂಬ ನಿಗದಿತ ಗುರಿಗಳಿಗಿಂತ ತುಂಬಾ ಕಡಿಮೆಯೇ ಆಗಿದೆ. ಸರಕಾರದ ಹಲವಾರು ಸಮಿತಿಗಳು ಮತ್ತು 2017ರ ರಾಷ್ಟ್ರೀಯ ಆರೋಗ್ಯ ನೀತಿಯೂ ಸ್ಪಷ್ಟಪಡಿಸಿರುವಂತೆ ಈ ದೇಶದ ಜನತೆಗೆ ಅತ್ಯಗತ್ಯವಾದ ಆರೋಗ್ಯ ಸೇವೆಗಳನ್ನೂ ಒದಗಿಸಬೇಕೆಂದರೂ ಕನಿಷ್ಠ ಇಷ್ಟು ಸಂಪನ್ಮೂಲವನ್ನು ಒದಗಿಸುವುದು ಕಡ್ಡಾಯವಾಗಿದೆ.
ತನ್ನ ಉದ್ದುದ್ದನೇ ಮಾತುಗಳ ಲಹರಿಯಲ್ಲೇ ಹಣಕಾಸು ಮಂತ್ರಿಗಳು ದೇಶದ 10 ಕೋಟಿ ಬಡ ಕುಟುಂಬಗಳಿಗೆ ವಿಶ್ವದಲ್ಲೇ ಅತಿ ದೊಡ್ಡ ಸರಕಾರಿ ಅನುದಾನಿತ ಆರೋಗ್ಯ ರಕ್ಷಣೆ ಯೋಜನೆಯೆಂಬ ಹೆಗ್ಗಳಿಕೆಯ ರಾಷ್ಟ್ರೀಯ ಆರೋಗ್ಯ ರಕ್ಷಣೆ ಯೋಜನೆ (ಎನ್‌ಎಚ್‌ಪಿಎಸ್)ಯೊಂದನ್ನು ಘೋಷಿಸಿದ್ದಾರೆ. ಈ ಯೋಜನೆಯು ಒಳರೋಗಿಯಾಗಿ ಆಸ್ಪತ್ರೆಯಲ್ಲಿ ದಾಖಲಾಗುವ ಬಡರೋಗಿಗೆ ಸರಕಾರದಿಂದ 5 ಲಕ್ಷ ರೂ.ಗಳವರೆಗೆ ಉಚಿತ ವಿಮೆಯನ್ನು ಒದಗಿಸುತ್ತದೆ. ಇದಕ್ಕೆ ಅಗತ್ಯವಿರುವಷ್ಟು ಸಂಪನ್ಮೂಲಗಳನ್ನು ಸರಕಾರವು ಒದಗಿಸುವುದೆಂದು ಭಾಷಣದಲ್ಲಿ ಹೇಳಲಾದರೂ ಬಜೆಟ್‌ನಲ್ಲಿ ಮಾತ್ರ ಅದಕ್ಕೆ ಬೇಕಿರುವಷ್ಟು ಸಂಪನ್ಮೂಲವನ್ನು ಒದಗಿಸಿಲ್ಲ. 5 ಲಕ್ಷ ರೂಪಾಯಿಯ ವಿಮೆ ಪಡೆಯಲು ಒಂದು ಕುಟುಂಬವು ವಾರ್ಷಿಕ ರೂ.3000ದಷ್ಟು ಕನಿಷ್ಠ ಪ್ರೀಮಿಯಂ ಕಟ್ಟಬೇಕೆಂದಿಟ್ಟುಕೊಂಡರೂ ಬಜೆಟ್‌ನಲ್ಲಿ ಇದಕ್ಕಾಗಿ ರೂ.30,000 ಕೋಟಿ ರೂ. ಗಳನ್ನು ಎತ್ತಿಡಬೇಕಿತ್ತು. ಹಾಲಿ ಬಡ ಕುಟುಂಬಗಳಿಗೆ 30,000 ರೂ.ನಷ್ಟು ವಿಮೆಯನ್ನು ಒದಗಿಸುವ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ (ಆರ್‌ಬಿಎಸ್‌ವೈ) ಯೋಜನೆಗೆ 2018-19ರ ಸಾಲಿನಲ್ಲಿ ಕೇವಲ 2,000 ಕೋಟಿ ರೂ.ಗಳನ್ನು ಎತ್ತಿಡಲಾಗಿದೆ. ಬಜೆಟ್‌ನ ನಂತರದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು, ಹಣಕಾಸು ಇಲಾಖೆಯ ಅಧಿಕಾರಿಗಳು ಮತ್ತು ನೀತಿ ಅಯೋಗದ ಸದಸ್ಯರು ನೀಡುತ್ತಿರುವ ಹೇಳಿಕೆಗಳನ್ನು ಗಮನಿಸಿದರೆ ಈ ಸಾಲಿನಲ್ಲಿ ಈ ಎನ್‌ಎಚ್‌ಪಿಎಸ್ ಯೋಜನೆ ಜಾರಿಯಾಗುವ ಯಾವ ಸೂಚನೆಗಳೂ ಕಾಣುತ್ತಿಲ್ಲ.
ಇದಲ್ಲದೆ ಸಾಂಕ್ರಾಮಿಕವಲ್ಲದ ರೋಗಗಳ ಇಲಾಜು, ಗರ್ಭಿಣಿ ಮತ್ತು ಶಿಶು ಆರೋಗ್ಯ ಸೇವೆ ಮತ್ತು ಉಚಿತವಾಗಿ ಅತ್ಯಗತ್ಯವಾದ ಔಷಧಿ ಮತ್ತು ರೋಗಪತ್ತೆ ಸೇವೆಗಳನ್ನು ನೀಡುತ್ತ ಸಮಗ್ರ ಆರೋಗ್ಯ ಸೇವೆಗಳನ್ನು ಒದಗಿಸಬೇಕಿರುವ 1.5 ಲಕ್ಷ ಪ್ರಾಥಮಿಕ ಆರೋಗ್ಯ ಮತ್ತು ಸಂಕ್ಷೇಮ ಕೇಂದ್ರಗಳಿಗೆ ಬಜೆಟ್‌ನಲ್ಲಿ ಕೇವಲ 1,200 ಕೋಟಿಗಳನ್ನು ಎತ್ತಿಡಲಾಗಿದೆ. ಆ ಲೆಕ್ಕದಲ್ಲಿ ಪ್ರತೀ ಕೇಂದ್ರಗಳಿಗೆ ಕೇವಲ 80,000 ರೂ. ಮಾತ್ರವೇ ದೊರಕಲಿದೆ. ಇದರಿಂದಲೇ ಈ ಕೇಂದ್ರಗಳು ಹಣದ ಕೊರತೆಯಿಂದ ಹೇಗೆ ಸೊರಗುತ್ತಿವೆ ಎಂಬುದೂ ಸಹ ಅರ್ಥವಾಗುತ್ತದೆ. ಮೇಲಾಗಿ ಈ ಆರೋಗ್ಯ ಕೇಂದ್ರಗಳನ್ನೂ ಒಳಗೊಂಡು ನಡೆಯಬೇಕಿರುವ ರಾಷ್ಟ್ರೀಯ ಆರೋಗ್ಯ ಅಭಿಯಾನಕ್ಕೆ 30,634 ಕೋಟಿಗಳನ್ನು ಎತ್ತಿಡಲಾಗಿದೆ. ಇದು ಕಳೆದ ವರ್ಷ ಮಾಡಿದ ವೆಚ್ಚಕ್ಕಿಂತ 658 ಕೋಟಿ ಕಡಿಮೆ.
ಈ ರಾಷ್ಟ್ರೀಯ ಆರೋಗ್ಯ ಅಭಿಯಾನದ ಮೂಲಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸೌಕರ್ಯಗಳನ್ನು ಒದಗಿಸಿ ಸಶಕ್ತಗೊಳಿಸಲಾಗುತ್ತಿತ್ತು. ಅದಕ್ಕೆ ನೇರವಾಗಿ ಕೇಂದ್ರ ಸರಕಾರವೇ ನಿಧಿಯನ್ನು ಒದಗಿಸುತ್ತಿತ್ತು. ಇದಕ್ಕೆ ಹಣದ ಕೊರತೆ ಮಾಡಿರುವುದರಿಂದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದ ಮೂಲಕ ಏನನ್ನು ಸಾಧಿಸಲಾಗುತ್ತಿತ್ತೋ ಅದರಿಂದ ಹತ್ತು ವರ್ಷ ಹಿಂದಕ್ಕೆ ಹೋದಂತೆ ಆಗಿದೆ.
ದೇಶದಲ್ಲಿನ ಐದು ವರ್ಷದೊಳಗಿನ ಮಕ್ಕಳಲ್ಲಿ ಮೂರನೇ ಒಂದು ಭಾಗಕ್ಕಿಂತ ಹೆಚ್ಚಿನ ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಸಾಂಕ್ರಾಮಿಕವಲ್ಲದ ಮತ್ತು ಸಾಂಕ್ರಾಮಿಕ ರೋಗಗಳ ಹೊರೆಯು ದಿನೇದಿನೇ ಹೆಚ್ಚುತ್ತಲೇ ಇದೆ. ಈ ಪರಿಸ್ಥಿತಿಯು ದೇಶವು ಹೊರಬೇಕಿರುವ ಆರೋಗ್ಯ ರಕ್ಷಣೆಯ ಭಾರವು ಎಂಥದೆಂಬುದನ್ನು ಮನವರಿಕೆ ಮಾಡಿಕೊಡುತ್ತಿದ್ದರೂ ಆರೋಗ್ಯ ಕ್ಷೇತ್ರವನ್ನು ನಿರಂತರವಾಗಿ ಕಡೆಗಣಿಸುತ್ತಲೇ ಬರಲಾಗಿದೆ. ರೋಗಿಗಳು ಮತ್ತು ಅವರ ಕುಟುಂಬದವರು ತಮ್ಮ ಕಿಸೆಯಿಂದ ಮಾಡಬೇಕಾದ ಆರೋಗ್ಯ ವೆಚ್ಚಗಳು ಹೆಚ್ಚುತ್ತಿರುವುದರಿಂದ ಆ ಕುಟುಂಬಗಳು ಹೇಗೆ ಹಣಕಾಸು ಬಿಕ್ಕಟ್ಟಿಗೆ ತುತ್ತಾಗಿ ದಿವಾಳಿಯಂಚಿಗೆ ಬಂದು ನಿಲ್ಲುತ್ತಿವೆ ಎಂಬುದನ್ನು ಹಲವಾರು ಸರಕಾರಿ ದಾಖಲೆಗಳು ಸಾದಾರವಾಗಿ ನಿರೂಪಿಸಿವೆ. ಹಲವಾರು ಅಧ್ಯಯನಗಳು ಸಾಬೀತುಪಡಿಸಿರುವಂತೆ ಆರೋಗ್ಯ ವಿಮೆಗಳು ರೋಗಿಗಳ ಕುಟುಂಬದವರು ಕಿಸೆಯಿಂದ ಮಾಡುವ ವೆಚ್ಚಗಳನ್ನೂ ಕಮ್ಮಿ ಮಾಡುವುದಿಲ್ಲ ಮತ್ತು ಸಮರ್ಪಕವಾದ ಆರೋಗ್ಯ ಸೇವೆಗಳನ್ನೂ ಒದಗಿಸುವುದಿಲ್ಲ. ಭಾರತದಲ್ಲಿ ಶೇ.67ರಷ್ಟು ಆರೋಗ್ಯ ಸಂಬಂಧೀ ವೆಚ್ಚಗಳು ಕಿಸೆಯಿಂದ ಮಾಡುವ ವೆಚ್ಚವೇ ಆಗಿದ್ದು ಅದರಲ್ಲಿ ಶೇ.63ರಷ್ಟು ವೆಚ್ಚಗಳು ಹೊರ ರೋಗಿಯಾಗಿ ಪಡೆದುಕೊಳ್ಳುವ ಚಿಕಿತ್ಸೆಗೆ ವ್ಯಯವಾಗುತ್ತದೆ ಹಾಗೂ ಅಸ್ತಿತ್ವದಲ್ಲಿರುವ ಆರ್‌ಬಿಎಸ್‌ವೈ ಯೋಜನೆಯಡಿ ಆಸ್ಪತ್ರೆಗೆ ದಾಖಲಾದ ರೋಗಿಗಳ ವೆಚ್ಚವನ್ನು ಪೂರ್ತಿಯಾಗಿ ಅಥವಾ ಪಾಕ್ಷಿಕವಾಗಿ ಭರಿಸಲಾದ ಪ್ರಮಾಣವೂ ಅತ್ಯಂತ ಕಡಿಮೆಯೇ ಆಗಿದೆ. ಮೇಲಾಗಿ ಸರಕಾರದಿಂದ ಪರಿಗಣಿತವಾದ ಆಸ್ಪತ್ರೆಗಳು ನಗರ ಪ್ರದೇಶದಲ್ಲಿ ಕೇಂದ್ರೀಕರಣಗೊಂಡಿದ್ದು ಅವುಗಳಲ್ಲಿ ಸರಕಾರಿ ಆಸ್ಪತ್ರೆಗಿಂತ ಖಾಸಗಿ ಆಸ್ಪತ್ರೆಗಳ ಸಂಖ್ಯೆಯೇ ಹೆಚ್ಚಾಗಿದೆ.
ಇದೀಗ ಸರಕಾರದ ನೀತಿಗಳು ಮತ್ತು ವೆಚ್ಚಗಳು ವಿಮೆ ಆಧಾರಿತ ಮಧ್ಯಪ್ರವೇಶಗಳೆಡೆಗೆ ಬದಲಾಗುತ್ತಿರುವುದರಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೇಲೆ ಮತ್ತು ಸರಕಾರಿ ಅನುದಾನಿತ ಆರೋಗ್ಯ ಸೌಲಭ್ಯಗಳಿಗೆ ನೀಡಲಾಗುತ್ತಿದ್ದ ಗಮನ ಮತ್ತು ಸಂಪನ್ಮೂಲಗಳೆರಡೂ ಕಡಿಮೆಯಾಗಲಿದೆ. ಈ ಯೋಜನೆಯು ವಿಮೆ ಮಾರುಕಟ್ಟೆಯಲ್ಲಿರುವ ಖಾಸಗಿ ಕಂಪೆನಿಗಳಿಗೆ ಹೆಚ್ಚು ಪ್ರಯೋಜನ ಮಾಡಲಿದೆಯೆಂಬುದು ಬಜೆಟ್ ಘೋಷಣೆಯಾದ ಕೂಡಲೇ ವಿಮಾ ಕಂಪೆನಿಗಳ ಶೇರು ಬೆಲೆಗಳು ಹೆಚ್ಚಾಗುವುದರಲ್ಲಿ ಅಭಿವ್ಯಕ್ತಗೊಂಡಿದೆ. 2017ರ ರಾಷ್ಟ್ರೀಯ ಆರೋಗ್ಯ ನೀತಿಯು ಸಹ ಒಂದು ಬಲಿಷ್ಠ ಆರೋಗ್ಯ ಮಾರುಕಟ್ಟೆಯು ಬೆಳೆಯುತ್ತಿದ್ದು ಅದರ ಅಭಿವೃದ್ಧಿ ದರವು ಎರಡಂಕಿಯನ್ನು ತಲುಪುವ ನಿರೀಕ್ಷೆಯಿದೆ ಎಂದು ಹೇಳುತ್ತದೆ. ಸಾರ್ವಜನಿಕ ವಲಯದ ಆರೋಗ್ಯ ಕ್ಷೇತ್ರವನ್ನು ಕಡೆಗಣಿಸಿದ್ದರಿಂದಲೇ ಖಾಸಗಿ ಸೇವೆಯನ್ನು ಕೊಂಡುಕೊಳ್ಳುವ ಸಾಮರ್ಥ್ಯವಿಲ್ಲದವರೂ ಸಹ ಅನಿವಾರ್ಯವಾಗಿ ಖಾಸಗಿ ವೈದ್ಯಕೀಯ ಸೇವೆಗಳ ಮೊರೆಹೋಗುವಂತಾಗಿದೆ. ಸಾರ್ವಜನಿಕ ಆಸ್ಪತ್ರೆಗಳಲ್ಲಿನ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ, ಸಿಬ್ಬಂದಿಯ ಕೊರತೆಯಿಂದಾಗಿ, ಸಲಕರಣೆ ಮತ್ತು ಔಷಧಿಗಳ ಕೊರತೆಯಿಂದಾಗಿ ಬಡವರೂ ಸಹ ಅನಿವಾರ್ಯವಾಗಿ ಖಾಸಗಿ ಆರೋಗ್ಯಸೇವೆಗಳತ್ತ ಮುಖ ಮಾಡುವಂತಾಗಿದೆ. ಈಗಿರುವ ಬಹುಪಾಲು ಆರೋಗ್ಯ ಸೇವಾ ಯೋಜನೆಗಳು ಲಾಭೋದ್ದೇಶ ಹೊಂದಿರುವ ಖಾಸಗಿ ಕ್ಷೇತ್ರವನ್ನೇ ಅಧರಿಸಿವೆೆ. ಅವು ದೇಶದ ಜನತೆಯ ಆರೋಗ್ಯಕ್ಕಿಂತ ತಮ್ಮ ಲಾಭದ ಆಸಕ್ತಿಯಿಂದಲೇ ಕೆಲಸ ಮಾಡುತ್ತವೆ ಮತ್ತು ಪ್ರಸ್ತಾವಿತ ವಿಮಾ ಜನೆಯೂ ಸಹ ಇದನ್ನೇ ಮಾಡಲಿದೆ.
ಒಂದು ಬಲವಾದ ನಿಯಂತ್ರಣಾ ವ್ಯವಸ್ಥೆಯಿಲ್ಲದ ಮತ್ತು ಸಮಗ್ರವಾದ ಸಾರ್ವಜನಿಕ ಆರೋಗ್ಯ ಸೇವೆಗಳಿಲ್ಲದ ಪರಿಸರದಲ್ಲಿ ಜನರ ಆರೋಗ್ಯ ಸೇವೆಯ ಅಗತ್ಯಗಳನ್ನು ಖಾಸಗಿಯವರ ಮೂಲಕ ಪೂರೈಸುವ ನೀತಿಗಳು ಆರೋಗ್ಯ ಸೇವೆಯನ್ನು ಪಡೆಯುವಲ್ಲಿ ಎಲ್ಲರಿಗೂ ಸಮಾನವಾದ ಅವಕಾಶವನ್ನು ಯಾವತ್ತಿಗೂ ಕಲ್ಪಿಸಿಕೊಡಲಾರದೆಂಬುದನ್ನು ಜಗತ್ತಿನ ಅನುಭವಗಳು ಸಾರಿ ಹೇಳುತ್ತವೆ. ಇಂತಹ ಸನ್ನಿವೇಶದಲ್ಲಿ ಭಾರತವು ಉತ್ತಮ ಮೂಲಭೂತ ಸೌಕರ್ಯಗಳನ್ನು ಮತ್ತು ಸಿಬ್ಬಂದಿಗಳನ್ನು ಒದಗಿಸುವ ಮೂಲಕ ಆರೋಗ್ಯ ಸೇವೆಯ ಎಲ್ಲಾ ಹಂತಗಳಲ್ಲೂ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಗಟ್ಟಿಗೊಳಿಸುವುದು ಅತ್ಯಗತ್ಯವಾಗಿದೆ. ಅದೇ ಸಮಯದಲ್ಲಿ ಹೆಚ್ಚುತ್ತಲೇ ಇರುವ ಖಾಸಗಿ ಆರೋಗ್ಯ ಸೇವೆಯನ್ನು ನಿಯಂತ್ರಿಸುವುದರಲ್ಲೂ ಸಾಕಷ್ಟು ಮುನ್ನಡೆಯನ್ನು ಸಾಧಿಸಬೇಕಿದೆ.
ಕೃಪೆ: Economic and Political Weekly