ಲೇಖಕ-ಓದುಗನ ನಡುವಿನ ಸೇತುವೆ
ಇಂದು ಸಾಮಾಜಿಕ ತಾಣಗಳ ಕಾರಣದಿಂದ ಬರೆಯುವವರ ಸಂಖ್ಯೆ ಹೆಚ್ಚಾಗಿದೆ. ಯಾವುದು ಉತ್ತಮ ಬರಹ, ಯಾವುದು ಕೆಟ್ಟ ಬರಹ ಎನ್ನುವುದನ್ನು ಈ ಹಿಂದೆಲ್ಲ ಪತ್ರಿಕೆಯೊಳಗಿನ ಸಂಪಾದಕ ನಿರ್ಧರಿಸುತ್ತಿದ್ದ. ಆತ ಪ್ರಬುದ್ಧನಲ್ಲದೇ ಇದ್ದರೆ ಕೆಟ್ಟ ಬರಹಗಳು ಆದ್ಯತೆಯನ್ನು ಪಡೆದು, ಒಳ್ಳೆಯ ಬರಹಗಳು ಮೂಲೆಗುಂಪಾಗುತ್ತಿತ್ತು. ಬರಹಗಾರರಿಗೆ ಸಂಪಾದಕನೆಂಬ ದೊಣ್ಣೆನಾಯಕ ಅನಿವಾರ್ಯವಾಗಿತ್ತು. ಇಂದು ಹಾಗಲ್ಲ. ಎಲ್ಲ ಬರಹಗಾರರಿಗೂ ಸಾಮಾಜಿಕ ತಾಣಗಳು ಮುಕ್ತವಾಗಿ ತೆರೆದುಕೊಂಡಿದೆ. ಯಾವ ಬರಹ ಉತ್ತಮ ಎನ್ನುವುದನ್ನು ನೇರವಾಗಿ ಓದುಗನೇ ನಿರ್ಣಯಿಸುತ್ತಿದ್ದಾನೆ. ಇದರಿಂದ ಹೊಸ ಪ್ರತಿಭಾವಂತ ಬರಹಗಾರರು ಹೊರಹೊಮ್ಮುತ್ತಿದ್ದಾರೆ ಮತ್ತು ಓದುಗರಿಗೆ ನೇರವಾಗಿ ಲಭ್ಯವಾಗುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಸಾಮಾಜಿಕ ತಾಣದಲ್ಲಿ ಬರೆದದ್ದೆಲ್ಲ ಕತೆ, ಕವಿತೆಗಳಾಗುತ್ತಿವೆ. ಕವಿ, ಕತೆಗಾರರ ಸಂಖ್ಯೆ ಹೆಚ್ಚುತ್ತಿದೆ. ಆದರೆ ವಿಮರ್ಶೆಗಳು ಮೂಲೆಗುಂಪಾಗುತ್ತಿವೆ. ಲೈಕ್‌ಗಳು, ಅನ್‌ಲೈಕ್‌ಗಳು ವಿಮರ್ಶೆಯ ಸ್ಥಾನವನ್ನು ತುಂಬಿಕೊಂಡಿದೆ. ಇಂತಹ ಹೊತ್ತಿನಲ್ಲಿ ಕನ್ನಡದಲ್ಲಿ ಆಗಿ ಹೋಗಿರುವ ಉತ್ತಮ ವಿಮರ್ಶಕರ ಬಗ್ಗೆ ಹೊಸ ತಲೆಮಾರಿನ ಬರಹಗಾರರು ತಿಳಿದುಕೊಳ್ಳುವುದು ಅತ್ಯಗತ್ಯ. ಈ ಹಿನ್ನೆಲೆಯಲ್ಲಿ ನವಕರ್ನಾಟಕ ಪ್ರಕಾಶನ ಹೊರತಂದಿರುವ, ಹಿರಿಯ ವಿಮರ್ಶಕ ಜಿ. ಎಚ್. ನಾಯಕ ಅವರ ಕುರಿತ ಕೃತಿ ಮುಖ್ಯವಾಗುತ್ತದೆ. ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸುವ ಭಾಗವಾಗಿ ಈ ಕೃತಿ ಹೊರಬಂದಿದೆ. ಡಾ. ಪ್ರಧಾನ್ ಗುರುದತ್ತ ಈ ಮಾಲೆಯ ಸಂಪಾದಕರಾಗಿದ್ದು, ವಿಷ್ಣು ನಾಯ್ಕ ಅವರು ಜಿ. ಎಚ್. ನಾಯಕ ಅವರ ಬದುಕು, ಬರಹಗಳನ್ನು ಕಟ್ಟಿಕೊಟ್ಟಿದ್ದಾರೆ.
ತಮ್ಮ ‘ಉತ್ತರಾರ್ಧ’ ಕೃತಿಗೆ ಜಿ. ಎಚ್. ನಾಯಕ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಇವರಿಂದಾಗಿಯೇ ವಿಮರ್ಶಾ ಕ್ಷೇತ್ರಕ್ಕೆ ಸಾಕಷ್ಟು ಲೇಖಕರು ಅಣಿಯಾದರು. ಹಲವು ಮಹತ್ವದ ಲೇಖಕರು ಇವರ ನಿಕಷದಿಂದಾಗಿ ಇನ್ನಷ್ಟು ಉಜ್ವಲಗೊಂಡಿದ್ದಾರೆ. ಪ್ರಬಂಧ ಕವಿತೆ ಸೇರಿದಂತೆ ಇತರ ವಿಷಯಗಳಲ್ಲೂ ಕೈಯಾಡಿಸಿದ್ದಾರಾದರೂ, ನಾಯಕ ಅವರನ್ನು ಇಂದು ಕನ್ನಡ ಸಾಹಿತ್ಯ ಲೋಕ ಗುರುತಿಸುವುದು ವಿಮರ್ಶಾ ಲೋಕಕ್ಕೆ ಅವರು ನೀಡಿರುವ ಕೊಡುಗೆಯ ಕಾರಣಕ್ಕೆ. ನವ್ಯ ವಿಮರ್ಶಕರು ಎಂದೇ ಕರೆಯಲ್ಪಡುತ್ತಿದ್ದ ನಾಯಕ, ನವ್ಯ ಸಾಹಿತ್ಯ ಜನರಿಂದ ದೂರವಿದೆ ಎಂಬ ಆರೋಪವನ್ನು ತಿಳಿಗೊಳಿಸಿದವರು. ನವ್ಯದ ಸಂಕೀರ್ಣತೆಯನ್ನು ಬಿಡಿಸಿ ಓದುಗರು ಮತ್ತು ಲೇಖಕರ ಹೃದಯಕ್ಕೆ ಸೇತುವೆಯಾಗಿ ತಮ್ಮ ವಿಮರ್ಶೆಯಲ್ಲಿ ಕೆಲಸ ಮಾಡಿದರು. ಪಂಪನ ಕುರಿತಂತೆ ಇವರ ಬರಹಗಳೂ ಜನಪ್ರಿಯವಾಗಿವೆ. ತಮ್ಮ ಮೂರು ವಿಮರ್ಶೆಗಳ ಮೂಲಕವೇ ಪಂಪ ಹೇಗೆ ಶ್ರೇಷ್ಠ ಕವಿ ಎನ್ನುವುದನ್ನು ಕಟ್ಟಿಕೊಟ್ಟವರು ನಾಯಕ. ಇಲ್ಲಿ ಇವರ ಉತ್ತರಾರ್ಧ ಕೃತಿಯ ಕುರಿತಂತೆ ವಿಶೇಷ ಪರಿಚಯವನ್ನು ನೀಡಲಾಗಿದೆ. ಹಾಗೆಯೇ ವಿಮರ್ಶಾ ಲೋಕಕ್ಕೆ ಅವರು ಕಾಲಿಡಲು ಕಾರಣವಾದ ಸಂಗತಿಗಳನ್ನೂ ಕೃತಿಯಲ್ಲಿ ಚರ್ಚಿಸಲಾಗಿದೆ. ವಿಮರ್ಶೆ ಹೇಗೆ ಸಾಹಿತ್ಯವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಓದುಗರ ಕಡೆಗೆ ತಲುಪಿಸಿದೆ ಎನ್ನುವುದನ್ನು ಈ ಕೃತಿ ಹೇಳುತ್ತದೆ. 80 ಪುಟಗಳ ಈ ಕೃತಿಯ ಮುಖಬೆಲೆ 80 ರೂಪಾಯಿ.