ಬಿಜೆಪಿಯಿಂದ ಕ್ರೈಸ್ತರಿಗೆ ಉಚಿತ ಜೆರುಸಲೇಮ್‌ ಪ್ರಯಾಣದ ಭರವಸೆ

Update: 2018-02-14 10:22 GMT

ಹೊಸದಿಲ್ಲಿ,ಫೆ.14  : ಹಜ್ ಸಬ್ಸಿಡಿಯನ್ನು ರದ್ದುಗೊಳಿಸಿ ಒಂದು ತಿಂಗಳಾಗುವಷ್ಟರಲ್ಲಿಯೇ ಬಿಜೆಪಿ ತಾನು ನಾಗಾಲ್ಯಾಂಡ್ ನಲ್ಲಿ ಅಧಿಕಾರಕ್ಕೆ ಬಂದರೆ ಕ್ರೈಸ್ತರಿಗೆ ಜೆರುಸಲೇಮ್‌ಗೆ ಉಚಿತ ಪ್ರಯಾಣ ಒದಗಿಸುವ ಭರವಸೆ ನೀಡಿದೆ.

ಈ ತಿಂಗಳಲ್ಲಿ ಮೇಘಾಲಯ, ನಾಗಾಲ್ಯಾಂಡ್, ತ್ರಿಪುರಾ ರಾಜ್ಯಗಳಲ್ಲಿ ಚುನಾವಣೆ ನಡೆಯಲಿದ್ದು ಮೇಘಾಲಯದ ಶೇ. 75ರಷ್ಟು ಜನಸಂಖ್ಯೆ ಕ್ರೈಸ್ತರಾಗಿದ್ದರೆ, ನಾಗಾಲ್ಯಾಂಡ್ ನ ಶೇ. 88ರಷ್ಟು ಜನರು ಕ್ರೈಸ್ತರಾಗಿದ್ದಾರೆ.

ಬಿಜೆಪಿ ಉಚಿತ ಜೆರುಸಲೇಮ್‌ ಟ್ರಿಪ್ ನ ಆಫರ್ ಅನ್ನು ನಾಗಾಲ್ಯಾಂಡ್ ಜನತೆಗೆ ಮಾಡಿದೆ ಎಂದು 'ವಿ ದಿ ನಾಗಾಸ್' ಸುದ್ದಿ ಸಂಸ್ಥೆ ತಿಳಿಸಿದ್ದರೆ ಯುಎನ್‍ಐ ವರದಿಯೊಂದರ ಪ್ರಕಾರ ನಾಗಾಲ್ಯಾಂಡ್ ಹೊರತುಪಡಿಸಿ ಈ ತಿಂಗಳು ಚುನಾವಣೆ ನಡೆಯಲಿರುವ ಇತರ ಈಶಾನ್ಯ ರಾಜ್ಯಗಳಿಗೆ ಈ ಆಫರ್ ನೀಡಲಾಗಿಲ್ಲ.

ಬಿಜೆಪಿಯ ಈ ನಡೆ ಅವಕಾಶವಾದಿ ರಾಜಕಾರಣವಲ್ಲದೆ ಮತ್ತಿನೇನ್ನಲ್ಲ ಎಂದು ಹಲವರು ಹೇಳಿಕೊಂಡಿದ್ದಾರೆ. ಎಐಎಂಐಎಂ ಅಧ್ಯಕ್ಷ ಹಾಗೂ ಸಂಸದ ಅಸಾಸುದ್ದೀನ್ ಉವೈಸಿ ಟ್ವೀಟ್ ಮಾಡಿ "ಬಿಜೆಪಿ ಕ್ರೈಸ್ತರಿಗೆ ಉಚಿತ ಪ್ರವಾಸದ ಭರವಸೆ ನೀಡಿದೆ. ನಾನು ಸರಿಯಾಗಿಯೇ ಹೇಳಿದ್ದೆ. ತನ್ನ ಚುನಾವಣಾ ಅಗತ್ಯಗಳಿಗೆ ಸರಿ ಹೊಂದುವಂತಿದ್ದರೆ ಬಿಜೆಪಿ ಸಬ್ಸಿಡಿ ನೀತಿಯನ್ನು ಮುಂದುವರಿಸುತ್ತದೆ. ಇದು (ಬಿಜೆಪಿಯ ಅರ್ಥದಲ್ಲಿ) ಇಂಡಿಯಾ ಫಸ್ಟ್,'' ಎಂದಿದ್ದಾರೆ.

ಇಸ್ರೇಲ್ ಮಾಧ್ಯಮ ಕೂಡ ಬಿಜೆಪಿ ಕ್ರೈಸ್ತರಿಗೆ ಆಫರ್ ಮಾಡಿರುವ ಈ ಉಚಿತ ಜೆರುಸಲೇಮ್‌ ಪ್ರವಾಸದ ಬಗ್ಗೆ ಪ್ರತಿಕ್ರಿಯಿಸಿದ್ದು ಇದೊಂದು ಪ್ರಚಾರ ಭರವಸೆಯಷ್ಟೆ ಎಂದಿದೆಯಲ್ಲದೆ ಇಂತಹ ಆಶ್ವಾಸನೆಗಳನ್ನು ಉತ್ಪ್ರೇಕ್ಷಿಸಲಾಗುತ್ತದೆ ಎಂದು ಅಭಿಪ್ರಾಯ ಪಟ್ಟಿದೆ.

ಉಚಿತ ಜೆರುಸಲೇಮ್‌ ಪ್ರವಾಸವನ್ನು  ಈ ಹಿಂದೆ ನೈಜೀರಿಯಾ ತನ್ನ  ಕ್ರೈಸ್ತ ನಾಗರಿಕರಿಗೆ ಒದಗಿಸುತ್ತಿತ್ತು. ಅದು ಮುಸ್ಲಿಮರ ಮಕ್ಕಾ ಪ್ರವಾಸದ ವೆಚ್ಚವನ್ನೂ ಭರಿಸುತ್ತಿತ್ತು. 2011ರಲ್ಲಿ ಈ ಯೋಜನೆಯಂಗವಾಗಿ ಸುಮಾರು 42,000 ನೈಜೀರಿಯನ್ನರು ಜೆರುಸಲೆಂಗೆ ಭೇಟಿ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News