ತ್ರಿಪುರದಲ್ಲಿ ಸಿಪಿಎಂ ಮತ್ತು ಬುಡಕಟ್ಟು ಪ್ರತ್ಯೇಕತಾವಾದಿಗಳ ಸಂಘರ್ಷ!

Update: 2018-02-14 18:52 GMT

ಈ ಬಾರಿ ಐಪಿಎಫ್‌ಟಿ ಪಕ್ಷದ ಮೂಲಕ ತ್ರಿಪುರಾದ ಕಾಡಿನ ಗ್ರಾಮಗಳಿಗೆ ಬಿಜೆಪಿ ಪ್ರವೇಶ ಮಾಡಿದೆ. ತ್ರಿಪುರಾದ ಬುಡಕಟ್ಟು ಮಕ್ಕಳು ಮೋದಿ ಮುಖವಾಡ ಧರಿಸಿ ಆಟವಾಡುವ ದೃಶ್ಯಗಳು ಗುಡ್ಡಗಾಡು ಬುಡಕಟ್ಟು ಕಾಲನಿಯಲ್ಲಿ ಕಾಣಸಿಗುತ್ತಿವೆೆ. ಇದು ಭವಿಷ್ಯದ ತ್ರಿಪುರಾದ ಸೂಚನೆಯೇ ಎಂಬ ಪ್ರಶ್ನೆಗಳೂ ಮೂಡುತ್ತವೆ.


ತಕರ್ಜಾಲಕ್ಕೆ ದಾರಿ ಎಂಬ ಬೋರ್ಡ್ ಕಾಣಿಸುತ್ತಿದ್ದಂತೆ ಮಿಲಿಟರಿ ಪಡೆ ಮರಳು ಮೂಟೆಯ ಹಿಂದೆ ಶಸ್ತ್ರಸಜ್ಜಿತರಾಗಿ ನಿಂತ ದೃಶ್ಯ ಕಾಣಿಸುತ್ತದೆ. ಯಾವುದೋ ದೇಶದ ಗಡಿ ಭಾಗಕ್ಕೆ ಬಂದಿದ್ದೇವೆಯೇನೊ ಅನ್ನಿಸುವಷ್ಟರ ಮಟ್ಟಿಗೆ ಇಲ್ಲಿ ಮಿಲಿಟರಿ ಆಡಳಿತವಿದೆ. AFSPA  ಸಶಸ್ತ್ರಕಾಯ್ದೆಯನ್ನು ತ್ರಿಪುರ ಸರಕಾರ ಹಿಂಪಡೆದ ಬಳಿಕವೂ ತಕರ್ಜಾಲಕ್ಕೆ ಮಿಲಿಟರಿ ಭದ್ರತೆ ಒದಗಿಸಲಾಗಿದೆ. ನಾವು ತ್ರಿಪುರಕ್ಕೆ ಬಂದಿಳಿದ ಮರುದಿನವೇ ತಕರ್ಜಾಲದ ಅಮರೇಂದ್ರ ನಗರದಲ್ಲಿ ಗಲಭೆಯಾಗಿ ಸಿಪಿಐಎಂ ಕಚೇರಿ ಧ್ವಂಸ ಮಾಡಲಾಗಿದೆ ಎಂಬ ಸುದ್ದಿ ದೊರಕಿತು. ನೇರ ತಕರ್ಜಾಲಕ್ಕೆ ತೆರಳಿದೆವು. ಕೃಷಿ ಮತ್ತು ಕಾಡನ್ನು ನಂಬಿಕೊಂಡ ಬುಡಕಟ್ಟುಗಳೇ ಇರುವ ಪ್ರದೇಶ ತಕರ್ಜಾಲ. ಇಲ್ಲಿ 41 ಸಾವಿರ ಮತದಾರರಿದ್ದಾರೆ. ಅದರಲ್ಲಿ ಶೇ. 95ರಷ್ಟು ಬುಡಕಟ್ಟು ಸಮುದಾಯ. ಉಳಿದಂತೆ ಶೇ. 5 ಮುಸ್ಲಿಮರು ಮತ್ತು ಬೆಂಗಾಲಿಗಳು.

ತ್ರಿಪುರ ಭಾರತದಿಂದ ಪ್ರತ್ಯೇಕವಾಗಬೇಕು ಎಂಬ ಬೇಡಿಕೆಯನ್ನು ಇಟ್ಟುಕೊಂಡು ಬಾಂಗ್ಲಾದೇಶದಿಂದ ನಿರ್ವಹಣೆ ಮಾಡಲಾಗುತ್ತಿರುವ ಭಯೋತ್ಪಾದಕ ಸಂಘಟನೆಗಳಾದ ನ್ಯಾಷನಲ್ ಲಿಬರೇಶನ್ ಫ್ರಂಟ್ ಆಫ್ ತ್ರಿಪುರ (ಎನ್‌ಎಲ್‌ಎಫ್ಟಿ) ಮತ್ತು ಆಲ್ ತ್ರಿಪುರ ಟೈಗರ್ ಫೋರ್ಸ್ (ಎಟಿಟಿಎಫ್) ತಕರ್ಜಾಲದಲ್ಲಿ ಪ್ರಾಬಲ್ಯವನ್ನು ಹೊಂದಿದೆ. ಇದೇ ಕಾರಣದಿಂದ ಪ್ರತ್ಯೇಕ ತ್ರಿಪರ್ಲ್ಯಾಂಡ್ ರಾಜ್ಯಕ್ಕಾಗಿ ಹೋರಾಟ ನಡೆಸುತ್ತಿರುವ ಐಪಿಎಫ್‌ಟಿ (ಇಂಡಿಜಿನಿಯಸ್‌ಪೀಪಲ್ಸ್ ಫ್ರಂಟ್ ಆಫ್ ತ್ರಿಪುರ) ಕೂಡಾ ಬಲವಾಗಿ ನೆಲೆಯೂರಿದೆ. ಇದಲ್ಲದೆ ಐಎನ್‌ಪಿಟಿ (ಇಂಡಿಜಿನಿಯಸ್‌ನ್ಯಾಶನಲಿಸ್ಟ್ ಪಾರ್ಟಿ ಆಫ್ ತ್ರಿಪುರ), ಟಿಎಸ್‌ಪಿ (ತ್ರಿಪರ್ಲ್ಯಾಂಡ್ ಸ್ಟೇಟ್ ಪಾರ್ಟಿ) ಕೂಡಾ ಅಸ್ತಿತ್ವದಲ್ಲಿದೆ. ಈ ರೀತಿ ಬುಡಕಟ್ಟು ಪ್ರದೇಶವೊಂದರಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಪ್ರತ್ಯೇಕತಾವಾದಿಗಳು ನೆಲೆಯೂರಲು ಸಿಪಿಐಎಂ ಪಾತ್ರ ಇಲ್ಲವೇ ಇಲ್ಲ ಎಂದರೆ ಸುಳ್ಳಾಗುತ್ತದೆ.

ತ್ರಿಪುರದಲ್ಲಿರುವ ಬಹುತೇಕ ಬುಡಕಟ್ಟು ಸಮುದಾಯಗಳು ತಕರ್ಜಾಲದಲ್ಲಿ ಕಾಣಸಿಗುತ್ತಾರೆ. ದೆಬ್ಬರ್ಮಾ, ಜೊಮಾಟಿಯಾ, ಮಲ್ಸಾಮ್, ಕೈಪಂಗ್, ಮೊರಾಂಕಲ್, ರೂಪಾನಿ, ರಿಯಾಂಗ್, ಗಾರೋ, ಮುಂಡಾ, ಕೊಲಾಯ್, ರುವಾಟಿಯಾ ಬುಡಕಟ್ಟು ಸಮುದಾಯಗಳು ಇವೆ. ಈ ಎಲ್ಲಾ ಬುಡಕಟ್ಟು ಸಮುದಾಯದ ಮಧ್ಯೆ ಕೇಡರ್ ಬೇಸ್ಡ್ ಪೊಲಿಟಿಕ್ಸ್ ಮಾಡಿಕೊಂಡಿದ್ದ ಸಿಪಿಐಎಂ ಇತ್ತೀಚಿನ ವರ್ಷಗಳಲ್ಲಿ ಈ ಬುಡಕಟ್ಟು ಗ್ರಾಮಗಳನ್ನು ನಿರ್ಲಕ್ಷ್ಯ ಮಾಡಿದೆ ಎಂಬ ಆರೋಪಗಳು ಇವೆ. ಹೆಚ್ಚಿನ ಬುಡಕಟ್ಟು ಹಾಡಿಗಳನ್ನು ನೋಡಿದಾಗ ಅದು ಢಾಳಾಗಿ ಕಾಣಿಸುತ್ತದೆ. ಶೌಚಾಲಯವೂ ಇಲ್ಲದ, ರಸ್ತೆಯೂ ಇಲ್ಲದ, ನೀರಿನ ಸಂಪರ್ಕವೂ ಇಲ್ಲದ ಬುಡಕಟ್ಟು ಕಾಲನಿಗಳೇ ಬಹುತೇಕ ಇವೆ. ನಮ್ಮನ್ನು ಸರಕಾರಗಳು ನಿರ್ಲಕ್ಷ್ಯ ಮಾಡುತ್ತಿವೆ ಎಂಬ ಧೋರಣೆ ಬರಲು ಇದು ಕಾರಣವಾಗಿದೆ. ‘‘ನಾನೂ ಹಿಂದೆ ಸಿಪಿಐಎಂ ಜೊತೆ ಇದ್ದೆ. ಮೂವತ್ತು ವರ್ಷಗಳಿಂದ ಸರಕಾರ ನಮಗಾಗಿ ಏನೇನೂ ಮಾಡಿಲ್ಲ. ನಮಗೆ ಸಿಪಿಐಎಂ ಕಲಿಸಿಕೊಟ್ಟ ಸಂಘರ್ಷದ ಮಾರ್ಗವನ್ನು ಸಿಪಿಐಎಂ ವಿರುದ್ಧವೇ ಮಾಡಬೇಕಿದೆ’’ ಎನ್ನುತ್ತಾನೆ ಪ್ರಮೀಸ್ ದೆಬ್ಬರ್ಮಾ.

ತಕರ್ಜಾಲ ವಿಧಾನಸಭಾ ಕ್ಷೇತ್ರದಲ್ಲಿ ಪ್ರತ್ಯೇಕತಾವಾದಿ ಐಪಿಎಫ್‌ಟಿಯ ರಾಜ್ಯಾಧ್ಯಕ್ಷ ನರೇಂದ್ರ ಚಂದ್ರ ದೆಬ್ಬರ್ಮಾ ಸ್ಪರ್ಧೆ ಮಾಡುತ್ತಿದ್ದಾರೆ. ಆದ್ದರಿಂದ ಇದು ತ್ರಿಪುರ ಪ್ರತ್ಯೇಕತಾವಾದಿಗಳಿಗೆ ಪ್ರತಿಷ್ಠೆ ಮತ್ತು ಅಸ್ತಿತ್ವದ ಪ್ರಶ್ನೆ. ಇಲ್ಲಿ ನಿರಂತರವಾಗಿ ಗೆದ್ದು ಬರುತ್ತಿದ್ದ ಸಿಪಿಐಎಂನ ಹಾಲಿ ಶಾಸಕ ನಿರಂಜನ ದೆಬ್ಬರ್ಮಾಗೆ ಈ ಬಾರಿ ಸಿಪಿಐಎಂ ಟಿಕೆಟ್ ನೀಡಿಲ್ಲ. ನಿರಂಜನ್ ದೆಬ್ಬರ್ಮಾರ ಕಳಪೆ ಸಾಧನೆ, ಬುಡಕಟ್ಟುಗಳ ಮಧ್ಯೆ ಸಂಘಟನೆ ಮಾಡದಿರುವುದು, ಬುಡಕಟ್ಟುಗಳ ಅಭಿವೃದ್ಧಿಗೆ ಒತ್ತು ನೀಡದಿರುವುದು ನಿರಂಜನ್ ದೆಬ್ಬರ್ಮಾಗೆ ಟಿಕೆಟ್ ನಿರಾಕರಿಸಲು ಕಾರಣಗಳು. ಈ ಬಾರಿ ಸಿಪಿಐಎಂನಿಂದ ರಮೀಂದ್ರ ದೆಬ್ಬರ್ಮಾ ಸ್ಪರ್ಧೆ ನಡೆಸುತ್ತಿದ್ದಾರೆ. ಆಟಕ್ಕುಂಟು ಲೆಕ್ಕಕ್ಕಿಲ್ಲದ ಕಾಂಗ್ರೆಸ್‌ನಿಂದ ಸ್ಯಾಮ್ಸಂಗ್ ದೆಬ್ಬರ್ಮಾ, ಐಎನ್‌ಪಿಟಿಯಿಂದ ಓಮಿಯಾ ಕುಮಾರ್ ದೆಬ್ಬರ್ಮಾ, ಟಿಎಸ್‌ಪಿಯಿಂದ ಚಿತ್ತರಂಜನ್ ದೆಬ್ಬರ್ಮಾ ಕಣದಲ್ಲಿದ್ದಾರೆ. ಪ್ರತ್ಯೇಕತಾವಾದಿಗಳೇ ಆಗಿರುವ ಐಎನ್‌ಪಿಟಿ ಮತ್ತು ಟಿಎಸ್‌ಪಿ ಬುಡಕಟ್ಟುಗಳ ಮತ ಸೆಳೆದಷ್ಟೂ ಆಡಳಿತಾರೂಢ ಸಿಪಿಐಎಂಗೆ ಲಾಭವಾಗಲಿದೆ. ಇಲ್ಲದೇ ಇದ್ದಲ್ಲಿ ತಕರ್ಜಾಲದಲ್ಲಿ ಐಪಿಎಫ್‌ಟಿ ರಾಜ್ಯಾಧ್ಯಕ್ಷ ನರೇಂದ್ರ ಚಂದ್ರ ದೆಬ್ಬರ್ಮಾ ಸುಲಭದಲ್ಲಿ ಗೆಲುವು ಸಾಧಿಸಲಿದ್ದಾರೆ.

ತಿಪುರಾದಲ್ಲಿ ತಕರ್ಜಾಲವೇ ಪ್ರತಿಷ್ಠೆಯ ಕಣವಾಗಿದೆ. ಇಡೀ ತ್ರಿಪುರದ ರಾಜಕೀಯ ಚಿತ್ರಣವನ್ನು ತಕರ್ಜಾಲ ನೀಡುತ್ತದೆ. ತ್ರಿಪುರದಲ್ಲಿ ಎದ್ದ ಪ್ರತ್ಯೇಕತಾವಾದಿಗಳ ಕೂಗು, ಸರಕಾರದ ಸ್ಪಂದನೆ, AFSPA  ಕಾಯ್ದೆ, ಅಟಾನಮಸ್‌ಡಿಸ್ಟ್ರಿಕ್ಟ್ ಕೌನ್ಸಿಲ್‌ನ ಕಾರ್ಯವೈಖರಿ ಮತ್ತು ಇವೆಲ್ಲದರ ಪರಿಣಾಮದ ಇಂದಿನ ತ್ರಿಪುರದ ಬದಲಾದ ರಾಜಕಾರಣವನ್ನು ಇದೊಂದೇ ಕ್ಷೇತ್ರದಲ್ಲಿ ನೋಡಿಬಿಡಬಹುದು. ನಾವು ತಕರ್ಜಾಲ ವಿಧಾನಸಭಾ ಕ್ಷೇತ್ರದ ನಬಚಂದ್ರಪರ ಬುಡಕಟ್ಟು ಗ್ರಾಮಕ್ಕೆ ತೆರಳಿದೆವು. ಅಲ್ಲಿ ಫೆಬ್ರವರಿ 11ರ ರವಿವಾರ ಸಿಪಿಐಎಂ ರ್ಯಾಲಿ ಆಯೋಜಿಸಿತ್ತು. ಬೂತ್ ಕಚೇರಿಯಿಂದ ಇನ್ನೇನು ರ್ಯಾಲಿ ಹೊರಡಬೇಕು ಅನ್ನುವಷ್ಟರಲ್ಲಿ ಕಲ್ಲು, ದೊಣ್ಣೆಗಳಿಂದ ಸಿಪಿಐಎಂ ಕಚೇರಿ ಮೇಲೆ ಐಪಿಎಫ್‌ಟಿ ಕಾರ್ಯಕರ್ತರು ದಾಳಿ ನಡೆಸಿದರು. ನಾಲ್ಕು ಜನ ಸಿಪಿಐಎಂ ಕಾರ್ಯಕರ್ತರಿಗೆ ಗಾಯಗಳಾದವು. ಇಬ್ಬರು ಪೊಲೀಸ್ ಅಧಿಕಾರಿಗಳು ಮತ್ತು ಇಬ್ಬರು ಐಪಿಎಫ್ಟಿ ಕಾರ್ಯಕರ್ತರಿಗೂ ಗಾಯಗಳಾದವು.

ಸಿಪಿಐಎಂ ಕಚೇರಿಯ ಮೇಲೆ ದಾಳಿ ನಡೆಸಿದ ಐಪಿಎಫ್‌ಟಿ ತಂಡದ ಪ್ರಮುಖನಾಗಿದ್ದ ಅರಬಿಂದೋ ದೆಬ್ಬರ್ಮಾರನ್ನು ಮಾತನಾಡಿಸಿದೆವು. ‘‘ಇನ್ನೂ ಎಷ್ಟು ದಿನ ಅಂತ ನೋಡುವುದು? ದಾಳಿ ಮಾಡಿದ್ದೇವೆ. ಇನ್ನೂ ಮಾಡ್ತೀವಿ. ಇನು್ನ ಸುಮ್ಮನಿರಲು ಆಗಲ್ಲ’’ ಎಂದರು.

‘‘ಸಿಪಿಐಎಂ ಅಭ್ಯರ್ಥಿಯೇ ನೇರವಾಗಿ ನಮ್ಮ ಐಪಿಎಫ್‌ಟಿ ಕಚೇರಿ ಎದುರು ಬಂದು ಕಾರು ನಿಲ್ಲಿಸಿದ್ರು. ಕಾರಿನಿಂದ ಇಳಿದ ಸಿಪಿಐಎಂ ಕಾರ್ಯಕರ್ತರು ನೇರ ಕಚೇರಿಗೆ ನುಗ್ಗಿದ್ರು. ಕಚೇರಿಯಿಂದ ನಾವು ಹೊರಬರಲೂ ಸಾಧ್ಯವಾಗಲಿಲ್ಲ. ಇನ್ನಷ್ಟೂ ಜನ ಬಂದು ಐಪಿಎಫ್‌ಟಿ ಕಚೇರಿ ಧ್ವಂಸ ಮಾಡಿದ್ರು. ನಮ್ಮ ಕಚೇರಿ ಧ್ವಂಸವಾದ ಬಳಿಕವಷ್ಟೇ ನಾವು ಸಿಪಿಐಎಂ ಕಚೇರಿಗೆ ದಾಳಿ ಮಾಡಿದ್ದೇವೆ’’ ಎನ್ನುತ್ತಾರೆ ಶೊಮಂತೊ ದೆಬ್ಬರ್ಮಾ.

 ‘‘ಪ್ರತ್ಯೇಕತಾವಾದಿ ಐಪಿಎಫ್‌ಟಿ ಯಾವ ಪ್ರಚೋದನೆಯೂ ಇಲ್ಲದೆ ನಮ್ಮ ಮೇಲೆ ದಾಳಿ ನಡೆಸಿತು. ಈ ಹಿಂದಿನಿಂದಲೂ ಉಗ್ರವಾದಿ ಚಟುವಟಿಕೆ ನಡೆಸುತ್ತಿರುವ ಐಪಿಎಫ್‌ಟಿಗೆ ಈ ಬಾರಿ ಸಿಪಿಐಎಂ ಮೇಲೆ ದಾಳಿ ನಡೆಸಲೆಂದೇ ಬಿಜೆಪಿಯಿಂದ ಹಣ ಹರಿದು ಬಂದಿದೆ’’ ಎನ್ನುತ್ತಾರೆ ಸ್ಥಳೀಯ ಸಿಪಿಐಎಂನ ಧೀರೆಂದ್ರ ದೆಬ್ಬಾರ್ಮಾ.

ಐಪಿಎಫ್‌ಟಿ ಪಕ್ಷವು ಬಿಜೆಪಿಯ ಮೈತ್ರಿಯೊಂದಿಗೆ 9 ಎಸ್‌ಟಿ ಮೀಸಲು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಐಎನ್‌ಪಿಟಿ ಪಕ್ಷವು ಕಾಂಗ್ರೆಸ್ ಮೈತ್ರಿಯಲ್ಲಿ ಸ್ಪರ್ಧೆ ನಡೆಸಿತ್ತು. ಈ ಬಾರಿ ಐಪಿಎಫ್‌ಟಿ ಪಕ್ಷದ ಮೂಲಕ ತ್ರಿಪುರದ ಕಾಡಿನ ಗ್ರಾಮಗಳಿಗೆ ಬಿಜೆಪಿ ಪ್ರವೇಶ ಮಾಡಿದೆ. ತ್ರಿಪುರದ ಬುಡಕಟ್ಟು ಮಕ್ಕಳು ಮೋದಿ ಮುಖವಾಡ ಧರಿಸಿ ಆಟವಾಡುವ ದೃಶ್ಯಗಳು ಗುಡ್ಡಗಾಡು ಬುಡಕಟ್ಟು ಕಾಲನಿಯಲ್ಲಿ ಕಾಣಸಿಗುತ್ತಿದೆ. ಇದು ಭವಿಷ್ಯದ ತ್ರಿಪುರದ ಸೂಚನೆಯೇ ಎಂಬ ಪ್ರಶ್ನೆಗಳೂ ಮೂಡುತ್ತವೆ.

(ಲೇಖಕರು ಬಿಟಿವಿಯ ರಾಜಕೀಯ ವರದಿಗಾರರು)
 

Writer - ನವೀನ್ ಸೂರಿಂಜೆ

contributor

Editor - ನವೀನ್ ಸೂರಿಂಜೆ

contributor

Similar News

ಜಗದಗಲ
ಜಗ ದಗಲ