ಹನೂರು: ಸಮುದಾಯ ಭವನಗಳು ಶೈಕ್ಷಣಿಕ ಚಟುವಟಿಕೆಗಳ ಕೇಂದ್ರಗಳಾಗಬೇಕು; ಆರ್. ಧ್ರುವನಾರಾಯಣ್
ಹನೂರು,ಫೆ.15 : ಸಮುದಾಯ ಭವನಗಳು ಮದುವೆ, ಶುಭ ಸಮಾರಂಭಗಳಿಗೆ ಮಾತ್ರ ಸೀಮಿತವಾಗದೇ ಶೈಕ್ಷಣಿಕ ಚಟುವಟಿಕೆಗಳ ಕೇಂದ್ರಗಳಾಗಬೇಕು ಎಂದು ಸಂಸದ ಆರ್. ಧ್ರುವನಾರಾಯಣ್ ತಿಳಿಸಿದರು.
ಹನೂರು ಕ್ಷೇತ್ರ ವ್ಯಾಪ್ತಿಯ ದೊಡ್ಡಿಂದುವಾಡಿ ಗ್ರಾಮದಲ್ಲಿ ಶಾಸಕ ಹಾಗೂ ಸಂಸದರ 45 ಲಕ್ಷ ರೂ ಅನುದಾನದಲ್ಲಿ ಮತ್ತು ದಿನ್ನಳ್ಳಿಯ ಪಂಚಾಯತ್ ವ್ಯಾಪ್ತಿಯ ಕೆ ಕೆ ಬೋರೆದೂಡ್ಡಿ ಗ್ರಾಮದಲ್ಲಿ ಸೇವಲಾಲ್ ಸಮುದಾಯ ಭವನವನ್ನು ಉದ್ಘಾಟಿಸಿ ಮಾತನಾಡಿದರ ಅವರು, ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಎಸ್‍ಇಪಿ, ಟಿಎಸ್‍ಪಿ ಯೋಜನೆಯಡಿ ಇಡೀ ರಾಜ್ಯದಲ್ಲಿಯೇ ಹನೂರು ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ದೊರೆತಿದೆ. ಇದರಿಂದ ಕ್ಷೇತ್ರದ ಬಹುತೇಕ ಗ್ರಾಮಗಳಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣ, ಸಮುದಾಯ ಭವನ ನಿರ್ಮಾಣ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾಮಗಾರಿಗಳು ನಡೆದಿದೆ. ಕಳೆದ ನಾಲ್ಕೂವರೆ ವರ್ಷ ಅವಧಿಯಲ್ಲಿ ಹನೂರು ಕ್ಷೇತ್ರದ ವಿವಿಧ ಸಮುದಾಯಕ್ಕೆ ಸರ್ಕಾರದಿಂದ 140ಕ್ಕೂ ಹೆಚ್ಚು ಸಮುದಾಯ ಭವನಗಳು ಮಂಜೂರಾಗಿದ್ದು, ಅದರಲ್ಲಿ ಈಗಾಗಲೇ 25ಕ್ಕೂ ಹೆಚ್ಚು ಸಮುದಾಯ ಭವನಗಳನ್ನು ಉದ್ಘಾಟಿಸಲಾಗಿದೆ. ಆದುದರಿಂದ ಸಮುದಾಯ ಜನತೆ ಕೇವಲ ಮದುವೆ ಕಾರ್ಯಗಳಿಗೆ ಬಳಸದೇ ಶೈಕ್ಷಣಿಕ ಚಟುವಟಿಕೆಗಳಿಗೆ ಹೆಚ್ಚು ಬಳಸಬೇಕು ಎಂದು ತಿಳಿಸಿದರು.
ಮಕ್ಕಳಿಗೆ ಹೆಚ್ಚಿನ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ: ಬಹುತೇಕ ಪಾಲಕರು ಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಸಮಾಜದಲ್ಲಿ ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಮುಂದುವರೆಯಲು ಶಿಕ್ಷಣ ಕೂಡಿಸುವುದು ಬಹಳ ಮುಖ್ಯ. ಆದ್ದರಿಂದ ಸರ್ಕಾರ ಪ್ರತಿ ಮಗುವು ಶಿಕ್ಷಣ ಪಡೆಯುವ ಸಲುವಾಗಿ ಕಡ್ಡಾಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದೆ. ಪ್ರತಿಯೊಬ್ಬರೂ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಕೊಡಿಸುವುದರ ಮೂಲಕ ಸಮುದಾಯದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.
ಶಾಸಕ ಆರ್. ನರೇಂದ್ರ ಮಾತನಾಡಿ, ಹಿಂದೆ ಬಿಜೆಪಿ ಸರ್ಕಾರದ ಸಮಯದಲ್ಲಿ ಒಂದೇ ಒಂದು ಸಮುದಾಯ ಭವನವನ್ನು ಹನೂರು ಕ್ಷೇತ್ರದಲ್ಲಿ ಮಾಡವುದಕ್ಕೆ ಆಗಿರಲಿಲ್ಲ ,ಆದರೆ ಇಂದು ರಾಜ್ಯದಲ್ಲಿ ಸಿದ್ದರಾಮಯ್ಯನವರು ಆಡಳಿತಕ್ಕೆ ಬಂದ ನಂತರ ಕ್ಷೇತ್ರ ವ್ಯಾಪ್ತಿಯಲ್ಲಿ 145 ಸಮುದಾಯ ಭವನಗಳಿಗೆ ಮಂಜೂರಾತಿ ದೊರಕಿದೆ ಮತ್ತು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿಗಳಾಗಿವೆ. ಹಿಂದೆ ಬಿಜೆಪಿ ಸರ್ಕಾರದ ಸಮಯದಲ್ಲಿ ಸಮರ್ಪಕ ಅನುದಾನ ನೀಡಲಿಲ್ಲ. ಇದರಿಂದ ಅಭಿವೃದ್ಧಿ ಕಾರ್ಯ ಸಾಧ್ಯವಾಗಿರಲಿಲ್ಲ ಎಂದರು.
ಈ ಸಂದರ್ಭದಲ್ಲಿ ಚಾಮುಲ್ ಅದ್ಯಕ್ಷ ಗುರುಮಲ್ಲಪ್ಪ, ಜಿಪಂ ಉಪಾಧ್ಯಕ್ಷ ಯೋಗೇಶ್, ಸದಸ್ಯರಾದ ಬಸವರಾಜು, ಮರಗದಮಣಿ, ತಾಪಂ ಅಧ್ಯಕ್ಷ ಆರ್. ರಾಜು, ಉಪಾಧ್ಯಕ್ಷೆ ಲತಾ, ಸದಸ್ಯೆ ಶಿವಮ್ಮ, ಮಾಜಿ ಶಾಸಕ ಬಾಲರಾಜು, ಗ್ರಾಪಂ ಅಧ್ಯಕ್ಷ ಲೋಕೇಶ್, ಉಪಾಧ್ಯಕ್ಷೆ ಮಾದೇವಿ, ಮುಖಂಡರಾದ ಪುಟ್ಟರಾಜು, ಷಾಹುಲ್‍ಅಹಮದ್, ಇನ್ನಿತರರು ಹಾಜರಿದ್ದರು.