ಪ್ರಧಾನಿ ಮೋದಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದ ನೀರವ್ ಮೋದಿ

Update: 2018-02-16 04:48 GMT

ಹೊಸದಿಲ್ಲಿ, ಫೆ.15: ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ನಡೆದ ಅವ್ಯವಹಾರಗಳ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಾಗುವ ಮುನ್ನವೇ ಪ್ರಮುಖ ಆರೋಪಿ, ಖ್ಯಾತ ಉದ್ಯಮಿ ಮತ್ತು ಆಭರಣ ವ್ಯಾಪಾರಿ ನೀರವ್ ಮೋದಿ ತಲೆ ತಪ್ಪಿಸಿಕೊಂಡಿದ್ದು ಅವರು ವಿದೇಶಕ್ಕೆ ಪರಾರಿಯಾಗಿರಬೇಕೆಂದು ಶಂಕಿಸಲಾಗಿದೆ. ಈ ಮಧ್ಯೆ ನೀರವ್ ಮೋದಿ ವಿದೇಶಕ್ಕೆ ಪರಾರಿಯಾಗಿರುವ ಬಗ್ಗೆ ಕೇಂದ್ರ ಸರಕಾರವನ್ನು ಟೀಕಿಸಿರುವ ಕಾಂಗ್ರೆಸ್, ಛೋಟಾ ಮೋದಿ(ನೀರವ್ ಮೋದಿ)ಯನ್ನು ರಕ್ಷಿಸಿದವರು ಯಾರು ಎಂದು ಪ್ರಶ್ನಿಸಿದೆ.

ಇತ್ತೀಚೆಗೆ ಸ್ವಿಝರ್ಲಾಂಡಿನ ದಾವೋಸ್‌ನಲ್ಲಿ ನಡೆದಿದ್ದ ವಿಶ್ವ ಆರ್ಥಿಕ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಭಾರತದ ಪ್ರಮುಖ ಉದ್ಯಮಿಗಳು ಅಲ್ಲಿ ಪ್ರಧಾನಿ ಮೋದಿಯವರ ಜೊತೆ ಕ್ಲಿಕ್ಕಿಸಿರುವ ಫೋಟೋವನ್ನು ಕಾಂಗ್ರೆಸ್ ಪ್ರದರ್ಶಿಸಿದೆ. ಈ ಫೋಟೋದಲ್ಲಿ ಮೋದಿಯವರ ಹಿಂದುಗಡೆಯ ಸಾಲಿನಲ್ಲಿ ನೀರವ್ ಮೋದಿ ನಿಂತುಕೊಂಡಿದ್ದಾರೆ. ‘ಛೋಟಾ ಮೋದಿ’ (ನೀರವ್ ಮೋದಿ) ತನಗೆ ಕೇಂದ್ರ ಸರಕಾರದೊಂದಿಗಿರುವ ಪ್ರಭಾವವನ್ನು ದೇಶದಿಂದ ತಲೆತಪ್ಪಿಸಿಕೊಳ್ಳಲು ಬಳಸಿಕೊಂಡಿದ್ದಾರೆ. ಈತನ ವಿರುದ್ಧ ಎಫ್‌ಐಆರ್ ದಾಖಲಾಗುವ ಒಂದು ದಿನದ ಮೊದಲೇ ಈತ ಪರಾರಿಯಾಗಲು ಅವಕಾಶ ಮಾಡಿಕೊಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಭಾರತವನ್ನು ಲೂಟಿ ಮಾಡಲು ನೀರವ್ ಮೋದಿ ರೂಪಿಸಿರುವ ಮಾರ್ಗದರ್ಶಿ ಸೂತ್ರ ಹೀಗಿದೆ: 1. ಪ್ರಧಾನಿ ಮೋದಿಯನ್ನು ಆಲಂಗಿಸಿಕೊಳ್ಳಿ.2. ದಾವೋಸ್‌ನಲ್ಲಿ ಪ್ರಧಾನಿಯವರೊಂದಿಗೆ ಕಾಣಿಸಿಕೊಳ್ಳಿ ಮತ್ತು ಈ ಪ್ರಭಾವವನ್ನು - (1) 12,000 ಕೋಟಿ ರೂ. ಮೊತ್ತವನ್ನು ಕದಿಯಲು, (2) ಮಲ್ಯರು ಮಾಡಿದಂತೆ, ಸರಕಾರ ಮತ್ತೆಲ್ಲೋ ನೋಡುತ್ತಿರುವಾಗ ದೇಶದಿಂದ ಮೆಲ್ಲಗೆ ಜಾರಿಕೊಳ್ಳಲು - ಬಳಸಿಕೊಳ್ಳಿ ಎಂಬುದಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ನೀರವ್ ಮೋದಿ ಯಾರು, ಇದು ಹೊಸ ಮೋದಿ ಹಗರಣವೇ, ಲಲಿತ್ ಮೋದಿ ಮತ್ತು ವಿಜಯ್ ಮಲ್ಯರಂತೆ ಮೋದಿಗೂ ಸರಕಾರದೊಳಗಿನವರೇ ದೇಶದಿಂದ ಪರಾರಿಯಾಗಲು ಸೂಚನೆ ನೀಡಿದ್ದಾರೆಯೇ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಪ್ರಶ್ನಿಸಿದ್ದಾರೆ. ಈ ಕುರಿತು ಕೇಂದ್ರ ಸರಕಾರ ಸ್ಪಷ್ಟನೆ ನೀಡಬೇಕೆಂದು ಎಡಪಕ್ಷಗಳ ಮುಖಂಡ ಸೀತಾರಾಂ ಯೆಚೂರಿ ಆಗ್ರಹಿಸಿದ್ದಾರೆ.

ಜನವರಿ 31ರಂದು ನೀರವ್ ಮೋದಿ ದೇಶದಿಂದ ಪಲಾಯನ ಮಾಡಿದ್ದಾರೆ. ಬಳಿಕ ತನ್ನ ವಿರುದ್ಧ ಎಫ್‌ಐಆರ್ ದಾಖಲಾಗುವುದಕ್ಕಿಂತ ಒಂದು ವಾರದ ಮೊದಲು ದಾವೊಸ್‌ನಲ್ಲಿ ಪ್ರಧಾನಿ ಮೋದಿಯೊಂದಿಗೆ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕುರಿತು ಮೋದಿ ಸರಕಾರ ಸ್ಪಷ್ಟನೆ ನೀಡಬೇಕು ಎಂದು ಯೆಚೂರಿ ಆಗ್ರಹಿಸಿದರು. ಭಾರತದಲ್ಲಿ ಬ್ಯಾಂಕ್‌ಗಳಿಗೆ ವಂಚನೆ ಮಾಡಿದ ಬಳಿಕ ವಿದೇಶಕ್ಕೆ ಪಲಾಯನ ಮಾಡುವುದು ಹೇಗೆ ಎಂಬ ಬಗ್ಗೆ ಮೋದಿ ಸರಕಾರ ಒಂದು ಮಾದರಿಯನ್ನು ರೂಪಿಸಿದೆ ಎಂದವರು ಆರೋಪಿಸಿದರು. ನೀರವ್ ಮೋದಿ ಅಥವಾ ವಿಜಯ್ ಮಲ್ಯ ಬಿಜೆಪಿ ಸರಕಾರದ ಮೌನ ಸಮ್ಮತಿಯಿಲ್ಲದೆ ಭಾರತದಿಂದ ಪಲಾಯನ ಮಾಡಿದ್ದಾರೆ ಎಂಬುದನ್ನು ನಂಬಲು ಸಾಧ್ಯವೇ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಪ್ರಶ್ನಿಸಿದ್ದಾರೆ.

ಹೊಸ ಸಾಲಕ್ಕೆ ಅರ್ಜಿ ಸಲ್ಲಿಸಿದ್ದ ನೀರವ್ ಮೋದಿ

ಫೋರ್ಬ್ಸ್ ಸಿದ್ಧಪಡಿಸಿರುವ ‘ಅತೀ ಶ್ರೀಮಂತ ಭಾರತೀಯರ’ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ನೀರವ್ ಮೋದಿ, ತಮ್ಮ ಸಂಸ್ಥೆಗಳ ಹೆಸರಿನಲ್ಲಿ ಹೊಸ ಸಾಲಕ್ಕಾಗಿ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ಅರ್ಜಿ ಸಲ್ಲಿಸಿದ್ದು ಅರ್ಜಿಯ ಪರಿಶೀಲನೆ ಸಂದರ್ಭ ಈ ಬೃಹತ್ ಮೊತ್ತದ ಅವ್ಯವಹಾರ ಪ್ರಕರಣ ಬೆಳಕಿಗೆ ಬಂದಿದೆ ಎಂದು ಬ್ಯಾಂಕ್ ತಿಳಿಸಿದೆ. ನೀರವ್ ಮೋದಿಯವರ ಸಂಸ್ಥೆ ಸುಮಾರು 11,300 ಕೋಟಿ ರೂ. ಅಕ್ರಮ ವ್ಯವಹಾರ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿದ್ದು ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನೀರವ್ ಮೋದಿ, ಅವರ ಪತ್ನಿ, ಸೋದರ ಹಾಗೂ ಉದ್ಯಮ ಸಹೋದ್ಯೋಗಿ ಮೆಹುಲ್ ಚಿನ್ನುಭಾಯ್ ಚೋಕ್ಸಿ ಅವರ ಮನೆ ಹಾಗೂ ಕಚೇರಿಯ ಮೇಲೆ ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News